ಮೋದಿ ಹೆಸರಿನಲ್ಲಿ ಸತ್ಯನಾರಾಯಣ ವ್ರತ ಮಾಡಿಸಲು ಮುಂದಾದ ಅಭಿಮಾನಿ
ಕಾರವಾರ ಮೇ 29 : ಪ್ರಧಾನಿ ನರೇಂದ್ರ ಮೋದಿ ಅವರ ಅಭಿಮಾನಿಯೊಬ್ಬ ಮೋದಿ ಅವರ ಹೆಸರಿನಲ್ಲಿ ಸತ್ಯನಾರಾಯಣ ಪೂಜೆ ಮಾಡಿಸಲು ದೇವಸ್ಥಾನದಲ್ಲಿ ರಸೀದಿ ತೆಗೆದಿರುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕುಮಟಾ ತಾಲೂಕಿನ ವೆಂಕಟ್ರಮಣ ದೇವಸ್ಥಾನದಲ್ಲಿ ಜೂನ್ 3ರಂದು ಮಧ್ಯಾಹ್ನ ಲೋಕಕಲ್ಯಾಣಾರ್ಥವಾಗಿ ಸಾಮೂಹಿಕ ಶ್ರೀಸತ್ಯನಾರಾಯಣ ಪೂಜೆಯನ್ನು ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಯುವ ವಾಹಿನಿ ಹಮ್ಮಿಕೊಂಡಿದೆ. ತನ್ನಿಮಿತ್ತ ಸೇವಾ ರಸೀದಿಗಳನ್ನು ಮಾಡಿದ್ದು, ವ್ರತ ಮಾಡಿಸುವವರು ಹೆಸರು ನಮೂದಿಸಿ ರಸೀದಿ ಚೀಟಿ ಪಡೆದುಕೊಳ್ಳುತ್ತಿದ್ದಾರೆ.
ಈ ನಡುವೆ ಸ್ಥಳೀಯರೊಬ್ಬರು ನರೇಂದ್ರ ದಾಮೋದರ ಮೋದಿ ಹೆಸರಿನಲ್ಲಿ ಸೇವಾ ರಸೀದಿ ತೆಗೆದಿದ್ದಾರೆ. ಮೇ 27ರಂದು ರಸೀದಿ ತೆಗೆದಿರುವ ವ್ಯಕ್ತಿ, ರಸೀದಿಯಲ್ಲಿ ಮೋದಿಯವ ನಕ್ಷತ್ರ, ರಾಶಿಯನ್ನು ನಮೂದಿಸಿದ್ದಾರೆ. ಜತೆಗೆ, ಮೋದಿಯವರ ಹೆಸರಿನ ಪಕ್ಕದಲ್ಲಿ ಪ್ರಧಾನ ಸೇವಕ ಎಂದೂ ಬರೆಸಿದ್ದಾರೆ.

105 ರೂ. ರಸೀದಿ ಪಾವತಿ ಮಾಡಿದ್ದು, ದೇವಸ್ಥಾನದ ಕಾರ್ಯಕಾರಿ ಮಂಡಳಿಯ ಪರವಾಗಿ ಕೃಷ್ಣ ನಾಯಕ ಎನ್ನುವವರು ಸ್ವೀಕೃತಿ ರಸೀದಿಯನ್ನು ಸೇವೆ ಮಾಡಿಸಿದವರಿಗೆ ಹಿಂದಿರುಗಿಸಿದ್ದಾರೆ.
ಮೋದಿಯವರ ಹೆಸರಿನಲ್ಲಿ ಸೇವೆಗೆ ಹೆಸರು ನೋಂದಾಯಿಸಿಕೊಂಡಿರುವ ಸೇವಾ ಸ್ವೀಕೃತಿ ರಸೀದಿಯು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ, ಸೇವೆ ಮಾಡಿಸಿದವರು ಯಾರು ಎನ್ನುವುದು ಇನ್ನೂ ತಿಳಿದು ಬಂದಿಲ್ಲ.












Click it and Unblock the Notifications