ಅರ್ಬನ್ ನಕ್ಸಲರಿಗೆ ಥ್ಯಾಂಕ್ಸ್ ಹೇಳಿದ ಅನಂತ್ ಕುಮಾರ್ ಹೆಗಡೆ
ಶಿರಸಿ, ಫೆ 5: ಕೇಂದ್ರ ಕೌಶಾಲ್ಯಾಭಿವೃದ್ದಿ ಸಚಿವ ಅನಂತ್ ಕುಮಾರ್ ಹೆಗಡೆ ಮತ್ತೆ ಕಾಂಗ್ರೆಸ್ ಮತ್ತು ಎಡಪಂಥೀಯರ ಕಾಲೆಳೆದಿದ್ದಾರೆ. ಅರ್ಬನ್ ನಕ್ಸಲ್ ಎಂದು ಕರೆಯಲ್ಪಡುವರಿಂದಲೇ ನಾನು ಜನಪ್ರಿಯಗೊಳ್ಳುತ್ತಿರುವುದು ಎಂದಿದ್ದಾರೆ.
ತಾಲೂಕಿನಲ್ಲಿ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿದ್ದ ಹೆಗಡೆ, ಕಾಂಗ್ರೆಸ್ ಈ ದೇಶದ ಅತಿದೊಡ್ಡ ಶತ್ರು. ಈಗ ಪ್ರಿಯಾಂಕ ಗಾಂಧಿಯೊಂದಿಗೆ, ಕಾಂಗ್ರೆಸ್ ಮಹಾಭಾರತ ಅಂತ್ಯಗೊಳ್ಳುವ ಸಮಯ ಬಂದಿದೆ ಎಂದು ಹೇಳಿದ್ದಾರೆ.
ಎಲ್ಲೂ ಇಲ್ಲದ ನನ್ನನ್ನು ಈ ಮಟ್ಟಕ್ಕೆ ಜನಪ್ರಿಯಗೊಳಿಸಿದ್ದು ಅರ್ಬನ್ ನಕ್ಸಲರು. ನನ್ನೆಲ್ಲಾ ಹೇಳಿಕೆಗಳು 'ವಿವಾದಕಾರಿ' ಎಂದು ಹೇಳಿದ್ದಕ್ಕೆ ಮಾಧ್ಯಮಗಳೂ ನನಗೆ ಮೈಲೇಜ್ ಕೊಟ್ಟವು. ಹಾಗಾಗಿ, ನಾನು ಅರ್ಬನ್ ನಕ್ಸಲರು ಮತ್ತು ಕೆಲವೊಂದು ಮಾಧ್ಯಮಗಳಿಗೂ ಧನ್ಯವಾದ ಅರ್ಪಿಸುತ್ತೇನೆಂದು ಅನಂತ್ ಕುಮಾರ್ ಹೆಗಡೆ ಹೇಳಿದ್ದಾರೆ.

ಶತಮಾನಗಳ ಇತಿಹಾಸವಿರುವ ಕಾಂಗ್ರೆಸ್ ಪಕ್ಷದ ಮುಖಂಡರೆಲ್ಲಾ ಒಂದು ವಿಷಯವನ್ನು ಅರ್ಥಮಾಡಿಕೊಳ್ಳಬೇಕು. ಅಲ್ಲಿ, ನೆಹರೂ-ಗಾಂಧಿ ಕುಟುಂಬ ಬಿಟ್ಟರೆ ಬೇರೆ ಯಾರಿಗಾದರೂ ಅವಕಾಶವಿದೆಯಾ ಎಂದು ಅನಂತ್ ಕುಮಾರ್ ಹೆಗಡೆ ಲೇವಡಿ ಮಾಡಿದ್ದಾರೆ.
ಪ್ರಿಯಾಂಕ ಗಾಂಧಿಯವರನ್ನು ಇಂದಿರಾ ಗಾಂಧಿಯ ಅವತಾರವೆಂದು ವರ್ಣಿಸುತ್ತಾರೆ. ಅವರ ಬಂಡವಾಳವೂ ಇನ್ನೇನು, ಲೋಕಸಭಾ ಚುನಾವಣೆ ನಡೆದ ಮೇಲೆ ಬಯಲಾಗಲಿದೆ ಎಂದು ಹೆಗಡೆ ಭವಿಷ್ಯ ನುಡಿದಿದ್ದಾರೆ.
'ಕೇಂದ್ರ ಸಚಿವರಾಗಿ ನಿಮ್ಮ ಸಾಧನೆ ಏನು' ಎಂದು ಟ್ವೀಟ್ ಮಾಡಿದ್ದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೆ ಟ್ವಿಟ್ಟರ್ ಮೂಲಕವೇ ಉತ್ತರಿಸಿದ್ದ ಅನಂತ್ ಕುಮಾರ್ ಹೆಗಡೆ, ಮುಸ್ಲಿಂ ಮಹಿಳೆಯ ಹಿಂದೆ ಓಡಿ ಹೋದ ವ್ಯಕ್ತಿ ಎಂದು ತಿರುಗೇಟು ನೀಡಿ ಭಾರೀ ವಿವಾದಕ್ಕೆ ಒಳಗಾಗಿದ್ದರು.












Click it and Unblock the Notifications