ಜೀವದ ಹಂಗು ತೊರೆದು ಜಲಸಮಾಧಿಯಾಗುವವರಿಗೆ ಮರುಜೀವ ನೀಡುವ ಲೈಫ್ ಗಾರ್ಡ್
ಕಾರವಾರ, ಜನವರಿ 17: ಜಿಲ್ಲೆಯ ಕಡಲತೀರಗಳತ್ತ ಆಕರ್ಷಿತರಾಗುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಹೀಗೆ ಬಂದವರು ಸಮುದ್ರದ ಆಳ-ಅಗಲ ತಿಳಿಯದೆ ಕಡಲತೀರಗಳಲ್ಲಿ ಮೋಜು ಮಸ್ತಿಯಲ್ಲಿ ತೊಡಗಿಕೊಂಡು ಆಪತ್ತು ತಂದುಕೊಳ್ಳುತ್ತಿದ್ದಾರೆ. ಆದರೆ ಕಳೆದ ಒಂದು ವರ್ಷದಲ್ಲಿ ಹೀಗೆ ಸಂಕಷ್ಟಕ್ಕೆ ಸಿಲುಕಿದ ನೂರಕ್ಕೂ ಹೆಚ್ಚು ಮಂದಿಯನ್ನು ಲೈಫ್‌ಗಾರ್ಡ್ ಸಿಬ್ಬಂದಿ ರಕ್ಷಣೆ ಮಾಡುವ ಮೂಲಕ ಪ್ರವಾಸಿಗರ ಪಾಲಿಗೆ ಆಪತ್ಬಾಂಧವರಾಗಿದ್ದಾರೆ.
ಪ್ರವಾಸಿಗರ ಪಾಲಿಗೆ ಸ್ವರ್ಗದಂತಿರುವ ಉತ್ತರಕನ್ನಡ ಜಿಲ್ಲೆಯ ಪ್ರವಾಸಿತಾಣಗಳನ್ನು ಕಣ್ತುಂಬಿಕೊಳ್ಳಲು ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಕೋವಿಡ್ ಬಳಿಕ 2022ರಲ್ಲಿ ಜಿಲ್ಲೆಗೆ 1.03 ಕೋಟಿಗೂ ಹೆಚ್ಚು ಪ್ರವಾಸಿಗರು ಆಗಮಿಸಿದ್ದಾರೆ. ಹೀಗೆ ಜಿಲ್ಲೆಯತ್ತ ಆಕರ್ಷಿತರಾಗುವ ಪ್ರವಾಸಿಗರ ಪೈಕಿ ಹೆಚ್ಚಿನ ಜನರು ಇಲ್ಲಿನ ಮುರುಡೇಶ್ವರ, ಗೋಕರ್ಣ, ಹೊನ್ನಾವರ ಇಕೋ ಬೀಚ್, ಕಾರವಾರದ ಟ್ಯಾಗೋರ್ ಕಡಲತೀರಗಳಿಗೆ ಭೇಟಿ ನೀಡುತ್ತಿದ್ದಾರೆ.

ಆಳ ಸಮುದ್ರಕ್ಕೆ ಇಳಿಯುವ ಪ್ರವಾಸಿಗರು
ವಿಶಾಲವಾದ ಕಡಲತೀರಗಳತ್ತ ಆಕರ್ಷಿತರಾಗುವ ಪ್ರವಾಸಿಗರು ಅಲೆಗಳಿಗೆ ಮನಸೋತು ಅಲ್ಲಿನ ಆಳ-ಅಗಲ ಅಪಾಯಗಳ ಬಗ್ಗೆ ತಿಳಿಯದೆ ಮೋಜು ಮಸ್ತಿಯಲ್ಲಿ ತೊಡಗಿಕೊಂಡು ಆಪತ್ತು ತಂದುಕೊಳ್ಳುತ್ತಿದ್ದಾರೆ. ಅದರಲ್ಲಿಯೂ ಮಕ್ಕಳು ಅಪಾಯದ ಅರಿವೆ ಇಲ್ಲದೆ ಅಲೆ ಹಾಗೂ ಸಮುದ್ರದ ಕಡೆಗೆ ತೆರಳಿ ಕೊನೆಗೆ ಅಲೆಯ ಸುಳಿಗೆ ಸಿಲುಕಿ ಕೊಚ್ಚಿ ಹೋಗುತ್ತಿದ್ದಾರೆ. ಆದರೆ ಇಂತವರ ಪಾಲಿಗೆ ಜಿಲ್ಲಾಡಳಿತ ನೇಮಕ ಮಾಡಿರುವ ಲೈಫ್ ಗಾರ್ಡ್ ಆಪತ್ ಬಾಂಧವರಾಗಿದ್ದು, ಕಳೆದ ಒಂದು ವರ್ಷದ ಅವಧಿಯಲ್ಲಿ ನೂರಕ್ಕೂ ಹೆಚ್ಚು ಮಂದಿಯನ್ನು ಈ ಲೈಫ್ ಗಾರ್ಡ್ ಸಿಬ್ಬಂದಿ ರಕ್ಷಣೆ ಮಾಡುವ ಮೂಲಕ ಮರು ಜೀವ ಕಲ್ಪಿಸಿದ್ದಾರೆ.

ಪ್ರವಾಸಿಗರಿಂದ ದುರ್ವರ್ತನೆ
ಜಿಲ್ಲೆಯ ಕಡಲತೀರ ಹಾಗೂ ಜಲಪಾತ ಸೇರಿ ಒಟ್ಟು 12 ಪ್ರದೇಶಗಲ್ಲಿ 27 ಲೈಫ್‌ಗಾರ್ಡ್ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲೆಗಗಳಿಗೆ ಇಲ್ಲವೆ ಜಲಪಾತಗಳಲ್ಲಿ ದುಸ್ಸಾಹಸಕ್ಕೆ ಮುಂದಾಗುವ ಪ್ರವಾಸಿಗರು ಆಪತ್ತಿಗೊಳಗಾಗಿ ಸಾವು ಬದುಕಿನ ಮಧ್ಯೆ ಒದ್ದಾಡುತ್ತಿದ್ದಾಗ ಇದೇ ಲೈಫ್ ಗಾರ್ಡ್ ಎಳೆದು ತಂದು ಮರುಜೀವ ಕಲ್ಪಿಸಿದ್ದಾರೆ. ಇದರಿಂದ ಜಿಲ್ಲೆಯ ಪ್ರವಾಸಿತಾಣಗಳಲ್ಲಿ ಈ ರೀತಿ ಸಾವನ್ನಪ್ಪುತ್ತಿರುವ ಪ್ರವಾಸಿಗರ ಸಂಖ್ಯೆ ಇದೀಗ ಗಣನೀಯವಾಗಿ ಕಡಿಮೆಯಾದಂತಾಗಿದೆ.
ಪ್ರವಾಸಕ್ಕೆ ಆಗಮಿಸುವ ಪ್ರವಾಸಿಗರು ಕಡಲತೀರಗಳಲ್ಲಿ ಅಳವಡಿಸಿರುವ ಸೂಚನಾ ಫಲಕ ಬಾವುಟ ಇದ್ಯಾವುದನ್ನು ಗಮನಕ್ಕೆ ತೆಗೆದುಕೊಳ್ಳದೆ ನೇರವಾಗಿ ನೀರಿಗೆ ಇಳಿದು ಆಟ ಆಡುತ್ತಾರೆ. ಈ ಬಗ್ಗೆ ನಾವು ಹೇಳಿದರು ಗಮನಕ್ಕೆ ತೆಗೆದುಕೊಳ್ಳುವುದಿಲ್ಲ. ಅಲ್ಲದೆ ನಮಗೆ ಕೆಟ್ಟದಾಗಿ ನಿಂದಿಸುತ್ತಾರೆ. ತಮಗೆ ಈಜು ಬರುವುದಾಗಿ ಹೇಳಿ ಆಳ ಸಮುದ್ರದ ಕಡೆಗೆ ತೆರಳುತ್ತಾರೆ. ಎಷ್ಟೇ ಈಜು ಬಂದರು ಕೂಡ ಸಮುದ್ರದಲ್ಲಿ ಮಸ್ತಿ ಮಾಡಲು ಮುಂದಾದರೆ ಅಲೆಗಳಿಗೆ ಕೊಚ್ಚಿ ಹೋಗುತ್ತಾರೆ. ಪ್ರವಾಸಿಗರು ಆದಷ್ಟು ಎಚ್ಚರಿಕೆ ವಹಿಸಬೇಕು ಎನ್ನುತ್ತಾರೆ ಗೋಕರ್ಣದ ರವಿ ನಾಯ್ಕ.

ಕುಡಿದ ಅಮಲಿನಲ್ಲಿ ಲೈಫ್‌ಗಾರ್ಡ್ ಮೇಲೆ ಹಲ್ಲೆ
ಇನ್ನು ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಗೋಕರ್ಣ ಹಾಗೂ ಮುರುಡೇಶ್ವರದಲ್ಲಿ ಹೆಚ್ಚು ಲೈಫ್‌ಗಾರ್ಡ್ ಕೂಡ ನೇಮಕ ಮಾಡಲಾಗಿದೆ. ಆದರೆ ಇಲ್ಲಿಗೆ ಆಗಮಿಸುವ ಪ್ರವಾಸಿಗರು ಲೈಫ್‌ಗಾರ್ಡ್ಗಳು ಸುರಕ್ಷತತೆ ಬಗ್ಗೆ ಸೂಚಿಸಿದರೇ ಅವರೊಂದಿಗೆ ವಾಗ್ವಾದ ನಡೆಸುತ್ತಿದ್ದಾರೆ. ತಮಗೆ ಈಜು ಬರುವುದಾಗಿ ಆಳ ಸಮುದ್ರದ ಕಡೆಗೆ ತೆರಳುತ್ತಿದ್ದಾರೆ. ಕಳೆದ ಎರಡು ದಿನದ ಹಿಂದೆ ಮುರುಡೇಶ್ವರದಲ್ಲಿ ಕುಡಿದ ಅಮಲಿನಲ್ಲಿ ರಕ್ಷಣೆ ಮಾಡಿದ ಲೈಫ್‌ಗಾರ್ಡ್ ಮೇಲೆಯೇ ಪ್ರವಶಿಗರ ಗುಂಪು ಹಲ್ಲೆ ನಡೆಸಿದೆ. ಇದರಿಂದ ರಕ್ಷಣೆಗೆ ಇರುವ ಲೈಫ್‌ಗಾರ್ಡ್ಗಳಿಗೆ ಇದೀಗ ಭದ್ರತೆ ಕಾಡುವಂತಾಗಿದೆ.

ಲೈಫ್ ಗಾರ್ಡ್ ಮೇಲೆ ಹಲ್ಲೆ: ದೂರು ದಾಖಲು
ಇನ್ನು ಈ ಬಗ್ಗೆ ಪ್ರವಾಸೋದ್ಯಮ ಪ್ರಬಾರ ಉಪನಿರ್ದೇಶಕ ಜಯಂತ ಅವರನ್ನು ಕೇಳಿದಾಗ ಪ್ರವಾಸಿಗರು ಲೈಫ್‌ಗಾರ್ಡ್ ಮೇಲೆ ಹಲ್ಲೆ ಮಾಡಿದ್ದು ಗಮನಕ್ಕೆ ಬಂದಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಎಸ್ಪಿ ಅವರಿಗೂ ದೂರು ನೀಡಲಾಗಿದೆ. ಪ್ರವಾಸಿಗರು ಈ ರೀತಿ ವರ್ತನೆ ಮಾಡುವುದು ತಪ್ಪು. ಲೈಫ್‌ಗಾರ್ಡ್ ಪ್ರವಾಸಿಗರ ರಕ್ಷಣೆ ಇದ್ದು ಕಡಲತೀರದಲ್ಲಿನ ಸುರಕ್ಷತೆ ಬಗೆಗಿನ ಅವರ ಸೂಚನೆ ಪಾಲಿಸಬೇಕು. ಇಂತಹ ಪ್ರಕರಣಗಳು ಮರುಳಿಸಿದರೆ ಅಂತವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಸೂಚಿಸಲಾಗಿದೆ. ಲೈಫ್ ಗಾರ್ಡ್ ಪ್ರವಾಸಿಗರ ರಕ್ಷಣೆಗೆ ಇದ್ದು ಇದನ್ನು ಪ್ರವಾಸಿಗರು ಅರ್ಥಮಾಡಿಕೊಳ್ಳಬೇಕಿದೆ ಎಂದು ಹೇಳಿದರು.












Click it and Unblock the Notifications