ಗೋಕರ್ಣ ದೇವಾಲಯವನ್ನು ಮಠಕ್ಕೆ ಸರ್ಕಾರ ಶೀಘ್ರವಾಗಿ ಹಸ್ತಾಂತರಿಸಲಿ
ಬೆಂಗಳೂರು, ಅ 5: ಗೋಕರ್ಣದ ಶ್ರೀಮಹಾಬಲೇಶ್ವರ ದೇವಾಲಯದ ಆಡಳಿತವನ್ನು ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರಿಸುವಂತೆ ಸರ್ವೋಚ್ಚ ನ್ಯಾಯಾಲಯ ಮಧ್ಯಂತರ ಆದೇಶ ನೀಡಿರುವುದನ್ನು ಹವ್ಯಕ ಮಹಾಸಭೆ ಸ್ವಾಗತಿಸಿದೆ ಮತ್ತು ಈ ಆದೇಶವನ್ನು ಶೀಘ್ರವಾಗಿ ಜಾರಿಗೊಳಿಸುವಂತೆ ಸರ್ಕಾರವನ್ನು ಮಹಾಸಭೆಯಲ್ಲಿ ಆಗ್ರಹಿಸಲಾಗಿದೆ.
ಸೆ. 7 ರಂದು ಮುಂದಿನ ಆದೇಶದವರೆಗೆ ದೇವಾಲಯದ ನಿರ್ವಹಣೆಯನ್ನು ಶ್ರೀಮಠವೇ ನಿರ್ವಹಿಸಲಿ ಎಂದು ಘನ ಸರ್ವೋಚ್ಚ ನ್ಯಾಯಾಲಯ ಆದೇಶಿಸಿತ್ತಾದರೂ, ಅದನ್ನು ಅಪವ್ಯಾಖ್ಯಾನಗೊಳಿಸಿ, ಅಕ್ರಮವಾಗಿ ದೇವಾಲಯವನ್ನು ವಶಪಡಿಸಿಕೊಂಡಿತ್ತು.
ಅ. 03 ರಂದು ಸೆ. 07ರ ತನ್ನ ತೀರ್ಪಿಗೆ ಸರ್ವೋಚ್ಚ ನ್ಯಾಯಾಲಯ ಸಮರ್ಪಕ ವ್ಯಾಖ್ಯಾನ ನೀಡಿ, ಅದರಂತೆ ದೇವಾಲಯದ ಆಡಳಿತ ನಿರ್ವಹಣೆಯನ್ನು ಮುಂದಿನ ಆದೇಶದವರೆಗೂ ಶ್ರೀಮಠವೇ ನಿರ್ವಹಿಸಲಿ ಎಂದು ತೆರೆದ ನ್ಯಾಯಾಲಯದಲ್ಲಿ ಸೂಚಿಸಿರುವುದಾಗಿ ತಿಳಿದು ಬಂದಿದ್ದು, ಅದನ್ನೇ ತನ್ನ ಮಧ್ಯಂತರ ಆದೇಶದಲ್ಲಿ ಸರ್ವೋಚ್ಚ ನ್ಯಾಯಾಲಯ ಉಲ್ಲೇಖಿಸಿದೆ.

ಸೆ. 07 ರಂದು ಇದ್ದ ಯಥಾ ಸ್ಥಿತಿಯನ್ನು ಮುಂದಿನ ಆದೇಶವರೆಗೂ ಕಾಯ್ದುಕೊಳ್ಳುವಂತೆ ಮಾನ್ಯ ಸರ್ವೋಚ್ಚ ನ್ಯಾಯಾಲಯ ಸ್ಪಷ್ಟವಾಗಿ ಆದೇಶಿಸಿದ್ದು, ಸೆ. 19ರ ವರೆಗೂ ದೇವಾಲಯದ ಆಡಳಿತ ರಾಮಚಂದ್ರಾಪುರ ಮಠದ ನಿರ್ವಹಣೆಯಲ್ಲೇ ಇತ್ತು ಎಂಬುದು ಇಲ್ಲಿ ಗಮನಾರ್ಹವಾಗಿದೆ. ಆದರೂ ಕೆಲವು ವಿವೇಕ ಶೂನ್ಯರು ಅದನ್ನು ಅಪವ್ಯಾಖ್ಯಾನ ಗೊಳಿಸುತ್ತಿರುವುದನ್ನು ಹವ್ಯಕ ಮಹಾಸಭೆ ತೀರ್ವವಾಗಿ ಖಂಡಿಸಿದೆ.
ದೇಶದ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಯಥಾವತ್ತಾಗಿ ಪಾಲಿಸುವುದು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದ್ದು, ಕಳೆದ ಬಾರಿಯಂತೆ ನ್ಯಾಯಪೀಠದ ಆದೇಶಕ್ಕೆ ಅಗೌರವ ಸಲ್ಲಿಸುವ ಕಾರ್ಯ ಘನ ಸರ್ಕಾರದಿಂದಾಗಬಾರದು.
ಹಾಗೂ ಈ ಕೂಡಲೇ ಮಾನ್ಯ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ದೇವಾಲಯದ ಆಡಳಿತವನ್ನು ರಾಮಚಂದ್ರಾಪುರ ಮಠಕ್ಕೆ ಯಥೋಚಿತವಾಗಿ ಹಸ್ತಾಂತರಿಸಬೇಕು ಎಂದು ಸಮಾಜದ ಪ್ರಾತಿನಿಧಿಕ ಸಂಸ್ಥೆಯಾದ ಹವ್ಯಕ ಮಹಾಸಭೆ ಪತ್ರಿಕಾ ಹೇಳಿಕೆಯ ಮೂಲಕ ಸರಕಾರವನ್ನು ಆಗ್ರಹಿಸಿದೆ.












Click it and Unblock the Notifications