'ಚಿನ್ನದ ವೀರ' ಚೋಪ್ರಾಗೆ ತರಬೇತಿ ನೀಡಿದ್ದ ಕಾಶಿನಾಥರಿಗೂ 10 ಲಕ್ಷ ಬಹುಮಾನ
ಕಾರವಾರ, ಆಗಸ್ಟ್ 08: ಒಲಂಪಿಕ್ ಇತಿಹಾಸದಲ್ಲೇ ಭಾರತಕ್ಕೆ ಅಥ್ಲೆಟಿಕ್ಸ್ ವಿಭಾಗದಲ್ಲಿ ಚೊಚ್ಚಲ ಚಿನ್ನದ ಪದಕ ತಂದುಕೊಟ್ಟ ಜಾವೆಲಿನ್ ಪಟು ನೀರಜ್ ಚೋಪ್ರಾಗೆ ತರಬೇತಿ ನೀಡಿದ್ದ ಉತ್ತರಕನ್ನಡದ ಕಾಶಿನಾಥ ನಾಯ್ಕಗೆ ಕರ್ನಾಟಕ ಸರ್ಕಾರ 10 ಲಕ್ಷ ರೂ. ನಗದು ಬಹುಮಾನ ಘೋಷಿಸಿದೆ.
Recommended Video
ಭಾರತೀಯ ಸೇನೆಯಲ್ಲಿ ಸುಬೇದಾರ್ ಹುದ್ದೆಯಲ್ಲಿರುವ, ಪ್ರಸ್ತುತ ಪುಣೆಯ ಸೇನಾ ಕ್ರೀಡಾ ಇನ್‌ಸ್ಟಿಟ್ಯೂಟ್‌ನಲ್ಲಿ ತರಬೇತುದಾರರಾಗಿರುವ ಕಾಶಿನಾಥ ನಾಯ್ಕ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬೆಂಗಳೆ ಗ್ರಾಮದವರು.
ಜಾವೆಲಿನ್‌ನಲ್ಲಿ ಚಿನ್ನದ ಪದಕ ಪಡೆದ ನೀರಜ್ ಚೋಪ್ರಾಗೆ ಮೂರು ವರ್ಷಗಳ ಕಾಲ ಕಾಶಿನಾಥ ನಾಯ್ಕ ತರಬೇತಿ ನೀಡಿದ್ದರು. 23 ವರ್ಷದಿಂದ ಸೇನೆಯಲ್ಲಿರುವ ಕಾಶಿನಾಥ ನಾಯ್ಕ 2010ರ ನವದೆಹಲಿಯ ಕಾಮನ್‌ವೆಲ್ತ್ ಗೇಮ್ಸ್ ನ ಜಾವೆಲಿನ್ ಎಸೆತದಲ್ಲಿ ಕಂಚಿನ ಪದಕ ಗಳಿಸಿದ್ದರು.
2013ರಿಂದ 2019ರವರೆಗೆ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾರತವನ್ನು ಪ್ರತಿನಿಧಿಸುವ ಕ್ರೀಡಾಪಟುಗಳಿಗೆ ತರಬೇತಿ ನೀಡುತ್ತಿದ್ದ ಕಾಶಿನಾಥ ನಾಯ್ಕರ ಬಳಿ ನೀರಜ್ ಚೋಪ್ರಾ 2015ರಲ್ಲಿ ತರಬೇತಿಗೆ ಸೇರಿದ್ದರು.

2017ರವರೆಗೆ ನೀರಜ್ ಚೋಪ್ರಾಗೆ ಕಾಶಿನಾಥ ನಾಯ್ಕ ತರಬೇತಿ ನೀಡಿದ್ದರು. ಕಾಶಿನಾಥ ಅವರ ತರಬೇತಿಯಿಂದಾಗಿ 2016ರಲ್ಲೇ ನೀರಜ್ ಜೂನಿಯರ್ ವಿಭಾಗದಲ್ಲಿ 86.48 ಮೀಟರ್ ದೂರಕ್ಕೆ ಜಾವೆಲಿನ್ ಎಸೆದು ವಿಶ್ವ ದಾಖಲೆ ಮಾಡಿದ್ದರು.
ಒಲಿಂಪಿಕ್ಸ್ 'ಚಿನ್ನದ ವೀರ' ನೀರಜ್ ಚೋಪ್ರಾ ಹಿಂದಿನ ಶಕ್ತಿ ಉತ್ತರ'ಕನ್ನಡಿಗ' ಎಂಬ ಶೀರ್ಷಿಕೆಯಡಿ 'ಒನ್ ಇಂಡಿಯಾ ಕನ್ನಡ' ಕೂಡ ನೀರಜ್ ಚೋಪ್ರಾ ಅವರಿಗೆ ಕಾಶಿನಾಥ ನಾಯ್ಕ ತರಬೇತಿ ನೀಡಿದ್ದ ಬಗ್ಗೆ ವರದಿ ಪ್ರಕಟಿಸಿತ್ತು. ವರದಿ ಗಮನಿಸಿದ ರಾಜ್ಯದ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಸಚಿವ ಡಾ. ಕೆ. ಸಿ. ನಾರಾಯಣ ಗೌಡ ಕಾಶಿನಾಥ ನಾಯ್ಕಗೆ ನಗದು ಬಹುಮಾನ ಘೋಷಿಸಿದ್ದಾರೆ.
ಟೋಕಿಯೊ ಒಲಿಂಪಿಕ್ ನಲ್ಲಿ ಈಟಿ ಎಸೆತದಲ್ಲಿ ಚಿನ್ನಕ್ಕೆ ಕೊರಳೊಡ್ಡಿದ ನೀರಜ್ ಛೋಪ್ರಾ ಅವರ ಸಾಧನೆ ಹಿಂದಿನ ಶಕ್ತಿಯಾಗಿರುವ ತರಬೇತುದಾರರಾದ ಶಿರಸಿಯ ಕಾಶಿನಾಥ್ ನಾಯ್ಕ್ ಅವರಿಗೆ ಇಲಾಖೆಯಿಂದ ರೂ. 10 ಲಕ್ಷ ನಗದು ಬಹುಮಾನ ಘೋಷಿಸಿದ್ದೇನೆ.@CMofKarnataka#Olympics
— Dr.Narayana Gowda / ಡಾ.ನಾರಾಯಣ ಗೌಡ (@narayanagowdakc) August 8, 2021
1/2 pic.twitter.com/HhUjopZNOH
'ಟೋಕಿಯೋ ಒಲಿಂಪಿಕ್‌ನ ಜಾವಲಿನ್ ವಿಭಾಗದಲ್ಲಿ ಭಾರತಕ್ಕೆ ಚಿನ್ನ ತಂದುಕೊಟ್ಟ ನೀರಜ್ ಚೋಪ್ರಾಗೆ ತರಬೇತುದಾರರಾಗಿರುವ ಉತ್ತರಕನ್ನಡ ಜಿಲ್ಲೆಯ ಕಾಶಿನಾಥ ನಾಯ್ಕ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಕಾಶಿನಾಥ ನಾಯ್ಕ ಅವರು 2010ರ ಕಾಮನ್‍ವೆಲ್ತ್ ಗೇಮ್ ನಲ್ಲಿ ಕಂಚು ಪದಕ ಗೆಲ್ಲುವ ಮೂಲಕ ದೇಶಕ್ಕೆ ಹೆಮ್ಮೆಯನ್ನು ತಂದಿದ್ದನ್ನು ಸಹ ಸ್ಮರಿಸುತ್ತೇವೆ ಎಂದು ಟ್ವೀಟ್ ಡಾ.ನಾರಾಯಣ ಗೌಡ ಟ್ವೀಟ್ ಮಾಡಿದ್ದಾರೆ.
ಮುಂದುವರಿದು, 'ಟೋಕಿಯೊ ಒಲಿಂಪಿಕ್ ನಲ್ಲಿ ಈಟಿ ಎಸೆತದಲ್ಲಿ ಚಿನ್ನಕ್ಕೆ ಕೊರಳೊಡ್ಡಿದ ನೀರಜ್ ಛೋಪ್ರಾ ಅವರ ಸಾಧನೆ ಹಿಂದಿನ ಶಕ್ತಿಯಾಗಿರುವ ತರಬೇತುದಾರರಾದ ಶಿರಸಿಯ ಕಾಶಿನಾಥ ನಾಯ್ಕ ಅವರಿಗೆ ಇಲಾಖೆಯಿಂದ ರೂ.10 ಲಕ್ಷ ನಗದು ಬಹುಮಾನ ಘೋಷಿಸಿದ್ದೇನೆ. ಟೋಕಿಯೋ ಒಲಿಂಪಿಕ್ ನಲ್ಲಿ ಅಮೋಘ ಸಾಧನೆಗೈದ ಭಾರತದ 7 ಕ್ರೀಡಾಪಟುಗಳನ್ನು ರಾಜ್ಯ ಸರ್ಕಾರದ ವತಿಯಿಂದ ಸನ್ಮಾನಿಸಲಾಗುವುದು. ಮುಖ್ಯಮಂತ್ರಿಗಳ ಜೊತೆಗೂ ಚರ್ಚಿಸಿದ್ದೇನೆ. ಈ ವೇಳೆ ತರಬೇತುದಾರರಾದ ಕಾಶಿನಾಥ ನಾಯ್ಕ ಅವರನ್ನೂ ಸನ್ಮಾನಿಸಲಾಗುವುದು ಎಂದು ತಿಳಿಸಿದ್ದಾರೆ.
ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲುವ ಮೂಲಕ ನೀರಜ್ ಛೋಚ್ರಾ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಹರ್ಯಾಣದ ಪಾಣಿಪತ್ ಬಳಿಯ ಖಂಡ್ರಾ ಹಳ್ಳಿಯ ಹುಡುಗ ನೀರಜ್ ಸಾಧನೆಯನ್ನು ದೇಶವೇ ಕೊಂಡಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ದೂರವಾಣಿ ಕರೆ ಮಾಡಿ ನೀರಜ್ ಅಭಿನಂದಿಸಿದ್ದಾರೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಸಹ ನೀರಜ್ ಸಾಧನೆಗೆ ಅಭಿನಂದನೆ ಸಲ್ಲಿಸಿತ್ತು. ಚಿನ್ನದ ಹುಡುಗ ಶ್ರೀ. ನೀರಜ್ ಛೋಪ್ರಾರವರ ಅತ್ಯುನ್ನತ ಸಾಧನೆಯನ್ನು ಸಂಭ್ರಮಿಸಿ ಹಾರೈಸುತ್ತಾ, ಕೆ ಎಸ್ ಆರ್ ಟಿ ಸಿ ಯು 60 ವಸಂತಗಳನ್ನು ಪೂರೈಸಿರುವ ಸವಿನೆನಪಿನಲ್ಲಿ ಶ್ರೀ. ನೀರಜ್ ಛೋಪ್ರಾ ವರಿಗೆ ಕೆ ಎಸ್ ಆರ್ ಟಿ ಸಿ ಗೋಲ್ಡನ್ ಪಾಸ್ ನೀಡಲಾಗುತ್ತದೆ ಎಂದು ಘೋಷಣೆ ಮಾಡಿದೆ. ಗೋಲ್ಡನ್ ಪಾಸು ಪಡೆದ ವ್ಯಕ್ತಿ ಜೀವಿತಾವಧಿ ತನಕ ಕೆಎಸ್ಆರ್‌ಟಿಸಿ ಬಸ್‌ನಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ.












Click it and Unblock the Notifications