ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆ; ಸ್ಥಳೀಯರಿಂದ ಲಿಖಿತ ಅಭಿಪ್ರಾಯ ಸಂಗ್ರಹ

By ಕಾರವಾರ ಪ್ರತಿನಿಧಿ
|
Google Oneindia Kannada News

ಕಾರವಾರ, ಸೆಪ್ಟೆಂಬರ್‌, 29: ಹುಬ್ಬಳ್ಳಿ-ಅಂಕೋಲಾ ರೈಲು ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸ್ಥಳ ಪರಿಶೀಲನೆ ನಡೆಸಿದ್ದಾರೆ. ವನ್ಯಜೀವಿ ಮಂಡಳಿ ರಚಿಸಿದ ಕೇಂದ್ರ ಉನ್ನತ ಅಧಿಕಾರಿಗಳ ತಂಡ ಬುಧವಾರ ನಗರದ ಜಿಲ್ಲಾಧಿಕಾರಿ ಕಾರ್ಯಾಲಯದಲ್ಲಿ ಈ ಕುರಿತು ಅಭಿಪ್ರಾಯವನ್ನು ಸಂಗ್ರಹಿಸಿದೆ. ಈ ವೇಳೆ ಯೋಜನೆಯ ಪರವಾಗಿ ಹಲವರು ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದು, ಇನ್ನು ಕೆಲವರು ಲಿಖಿತ ರೂಪದಲ್ಲಿ ಅಭಿಪ್ರಾಯವನ್ನು ಸಲ್ಲಿಸಿದ್ದಾರೆ.

ಜಿಲ್ಲೆಯ ಹಲವು ದಶಕಗಳ ಹಿಂದಿನ ಬೇಡಿಕೆ ಆಗಿರುವ ಹುಬ್ಬಳ್ಳಿ -ಅಂಕೋಲಾ ರೈಲ್ವೆ ಯೋಜನೆ ಸಂಬಂಧ ಹೈಕೋರ್ಟ್ ಆದೇಶದಂತೆ 7 ಜನ ಸದಸ್ಯರ ಸಮಿತಿ ರಚಿಸಲಾಗಿತ್ತು.‌ ಅದರಂತೆಯೇ ಮಂಗಳವಾರ ಜಿಲ್ಲೆಗೆ ಆಗಮಿಸಿದ್ದ ತಂಡ ಜಿಲ್ಲಾಡಳಿತ ನೈರುತ್ಯ ರೈಲ್ವೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಿತ್ತು. ಬಳಿಕ ಅಂಕೋಲಾ, ಯಲ್ಲಾಪುರ ಭಾಗದಲ್ಲಿ ರೈಲು ಹಾದು ಹೋಗುವ ಮಾರ್ಗದ ಸ್ಥಳ ಪರಿಶೀಲನೆ ನಡೆಸಿದ ತಂಡ ಎರಡು ದಿನಗಳಿಂದ ಸ್ಥಳ ಪರಿಶೀಲನೆ ನಡೆಸಿದೆ. ಇಂದು ಈ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಹವಾಲು ಸಭೆ ನಡೆಸಲಾಯಿತು.

ಹುಬ್ಬಳ್ಳಿ- ಅಂಕೋಲಾ ರೈಲ್ವೆ ಯೋಜನೆ ಸಭೆ: ಶಾಸಕಿ ರೂಪಾಲಿ-ಮಾಜಿ ಶಾಸಕ ಸತೀಶ್ ಸೈಲ್‌ ವಾಕ್ಸಮರಹುಬ್ಬಳ್ಳಿ- ಅಂಕೋಲಾ ರೈಲ್ವೆ ಯೋಜನೆ ಸಭೆ: ಶಾಸಕಿ ರೂಪಾಲಿ-ಮಾಜಿ ಶಾಸಕ ಸತೀಶ್ ಸೈಲ್‌ ವಾಕ್ಸಮರ

ಈ ಬಗ್ಗೆ ವನ್ಯಜೀವಿ ವಿಭಾಗದ ಡಿ.ಐ.ಜಿ. ರಾಕೇಶ್‌ ಜಗಾನಿಯಾ ಮಾತನಾಡಿದ್ದು, "ಕಾಳಿ ಹುಲಿ ಸಂರಕ್ಷಿತ ಅರಣ್ಯಕ್ಕೆ ಹುಬ್ಬಳ್ಳಿ-ಅಂಕೋಲಾ ರೈಲು ಯೋಜನೆಯಿಂದ ತೊಂದರೆ ಉಂಟಾಗುತ್ತದೆ ಎಂದು ತಕರಾರು ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಹೈ ಕೋರ್ಟ್ ಆದೇಶದಂತೆ ಕಳೆದ ಮೇ 2ರಂದು ಸಭೆ ನಡೆಸಲಾಗಿತ್ತು. ಈ ಸಂದರ್ಭದಲ್ಲಿ 7 ಸದಸ್ಯರ ಸಮಿತಿ ರಚಿಸಲು ತೀರ್ಮಾನಿಸಿ ಈ ತಂಡವು ಸ್ಥಳ ಪರಿಶೀಲನೆ ಹಾಗೂ ಅಭಿಪ್ರಾಯ ಸಂಗ್ರಹಿಸಿ ವರದಿ ನೀಡುವಂತೆ ಹೈಕೋರ್ಟ್ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಇದೀಗ ತಾವು ಜನರ ಅಭಿಪ್ರಾಯ ಕೇಳಲು ಬಂದಿದ್ದು, ತಮ್ಮ ಅಭಿಪ್ರಾಯಗಳನ್ನು ಲಿಖಿತವಾಗಿ ಸಲ್ಲಿಸಿ ಸಂಕ್ಷಿಪ್ತವಾಗಿ ವಿವರಿಸಬೇಕು," ಎಂದು ಕೋರಿದರು.

 ಸಭೆಯಲ್ಲಿ ಮಾಜಿ ಶಾಸಕ ಸತೀಶ್ ಆಕ್ರೋಶ

ಸಭೆಯಲ್ಲಿ ಮಾಜಿ ಶಾಸಕ ಸತೀಶ್ ಆಕ್ರೋಶ

ಅಹವಾಲು ಸಭೆಯನ್ನು ಜಿಲ್ಲಾಧಿಕಾರಿ ಕಚೇರಿಯ ಇಕ್ಕಟ್ಟಾದ ಹಾಲ್‌ನಲ್ಲಿ ಆಯೋಜಿಸಿದ್ದಕ್ಕೆ ಮಾಜಿ ಶಾಸಕ ಸತೀಶ್ ಸೈಲ್‌ರಿಂದ ಆಕ್ರೋಶ ವ್ಯಕ್ತಪಡಿಸಿದರು. ಬೆಂಬಲಿಗರೊಂದಿಗೆ ಸಭಾಂಗಣಕ್ಕೆ ಆಗಮಿಸಿ ಸಾರ್ವಜನಿಕ ಅಹವಾಲು ಸಭೆಯನ್ನು ತೆರೆದ ಸ್ಥಳದಲ್ಲಿ ಆಯೋಜಿಸುವಂತೆ ಆಗ್ರಹಿಸಿದರು. ಸಾರ್ವಜನಿಕರನ್ನು ಹೊರಗೆ ಕೂರಿಸಿ ಕೆಲವೇ ಜನರ ಸಮ್ಮುಖದಲ್ಲಿ ಸಭೆ ನಡೆಸುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಒಂದಾದ ಬಳಿಕ ಮತ್ತೊಂದು ತಂಡವನ್ನು ಕರೆದು ಅಹವಾಲು ಪಡೆಯುವುದಾಗಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದರು. ಆದರೂ ಸೈಲ್ ಹಾಗೂ ಬೆಂಬಲಿಗರು ಆಕ್ಷೇಪ ವ್ಯಕ್ತಪಡಿಸುತ್ತಿದ್ದರು. ಆದ್ದರಿಂದ ಶಾಸಕಿ ರೂಪಾಲಿ ನಾಯ್ಕ ಏರುಧ್ವನಿಯಲ್ಲೇ ಅವರು ಹೋದಲ್ಲಿ ಬಂದಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಶಾಸಕಿ ರೂಪಾಲಿ ಹಾಗೂ ಮಾಜಿ ಶಾಸಕ ಸೈಲ್ ನಡುವೆ ಮಾತಿನ ಚಕಮಕಿ ನಡೆಯಿತು. ಕೊನೆಗೆ ಸಭೆಯನ್ನು 15 ನಿಮಿಷ ಮುಂದೂಡಿ ಬಳಿಕ ಸಭೆ ನಡೆಸಲಾಯಿತು.

 ಅಪಘಾತಗಳನ್ನು ತಪ್ಪಿಸಬೇಕಿದೆ

ಅಪಘಾತಗಳನ್ನು ತಪ್ಪಿಸಬೇಕಿದೆ

ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಮಾತನಾಡಿ, ಪರಿಸರವಾದಿಗಳ ಹೋರಾಟದಿಂದಾಗಿ ಕಳೆದ 25 ವರ್ಷಗಳಿಂದಲೂ ನ್ಯಾಯಾಲಯದಲ್ಲಿರುವ ಕಾರಣ ಯೋಜನೆಗೆ ಹಿನ್ನಡೆ ಆಗಿದೆ. ಮಹಾರಾಷ್ಟ್ರ, ಗುಜರಾತ್‌ ಹಾಗೂ ಕೊಡಗು ಪ್ರದೇಶದಲ್ಲಿ ರೈಲು ಚಲಿಸುತ್ತವೆ. ಆದರೆ ನಮ್ಮಲ್ಲಿ ಮಾತ್ರ ಆಗದಿರುವುದು ದೌರ್ಭಾಗ್ಯ. ಅಂಕೋಲಾ-ಹುಬ್ಬಳ್ಳಿ ಮಧ್ಯ ಪ್ರತಿ ದಿನ 3-4 ಸಾವಿರ ವಾಹನಗಳು ಓಡಾಡುತ್ತವೆ. ಈ ನಡುವೆ ಪ್ರತಿ ದಿನವೂ ಒಂದಿಲ್ಲೊಂದು ಅಪಘಾತ ಸಂಭವಿಸಿ ಜೀವಹಾನಿಗಳು ಆಗುತ್ತಿದ್ದು, ಇವೆಲ್ಲವನ್ನು ತಪ್ಪಿಸಬೇಕಾಗಿದೆ. ಜೊತೆಗೆ ಉತ್ತರ ಕರ್ನಾಟಕ ಹಾಗೂ ಉತ್ತರ ಕನ್ನಡ ಸೇರದೇ ಅಭಿವೃದ್ಧಿ ಸಾಧ್ಯವಿಲ್ಲ. ಜಿಲ್ಲೆಯಲ್ಲಿ ಕೈಗಾರಿಕೆ ಆರಂಭಿಸಲು ರೈಲ್ವೆ ಸಂಪರ್ಕ ಅತ್ಯವಶ್ಯಕವಾಗಿದೆ. ನೌಕಾ ನೆಲೆಗೆ ಸಂಬಂಧಿಸಿದ ಸಾಮಗ್ರಿ ತರಲು ರೈಲು ಅವಶ್ಯಕವಾಗಿದೆ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

 ಉದ್ಯೋಗವಿಲ್ಲದೆ ಯುವ ಜನತೆ ಪರದಾಟ

ಉದ್ಯೋಗವಿಲ್ಲದೆ ಯುವ ಜನತೆ ಪರದಾಟ

ಬಳಿಕ ಶಾಸಕಿ ರೂಪಾಲಿ ನಾಯ್ಕ ಮಾತನಾಡಿದ್ದು, "ಅರಣ್ಯ ಮತ್ತು ವನ್ಯಜೀವಿಗಳ ಬಗ್ಗೆ ನಮಗೂ ಕಾಳಜಿ ಇದೆ. ಅವುಗಳ ರಕ್ಷಣೆಗೆ ನಾವು ಕ್ರಮ ಕೈಗೊಂಡಿದ್ದೇವೆ. ಈಗ ಜನರಿಗೆ ಅನುಕೂಲ ಕಲ್ಪಿಸಿ ಜನತೆಯ ಹಿತಾಸಕ್ತಿ ಕಾಪಾಡಬೇಕಾಗಿದೆ. ಕೈಗಾ ಅಣು ವಿದ್ಯುತ್ ಸ್ಥಾವರ, ಕದಂಬ ನೌಕಾನೆಲೆ, ವಿಮಾನ ನಿಲ್ದಾಣ ಹಾಗೂ ಕೊಂಕಣ ರೈಲು ಯೋಜನೆಗೆ ಜಾಗವನ್ನು ನೀಡಿದ್ದೇವೆ. ಉದ್ಯೋಗವಿಲ್ಲದೆ ಯುವ ಜನತೆ ಪರದಾಡುತ್ತಿದ್ದಾರೆ. ಈ ಯೋಜನೆ ಆದರೆ ನಮ್ಮ ಜಿಲ್ಲೆಯ ಯುವಕರಿಗೆ ಉದ್ಯೋಗ ಸಿಗುತ್ತದೆ. ಇದರಿಂದ ಆ ಕುಟುಂಬಗಳು ಉತ್ತಮವಾಗಿ ಬದುಕು ಕಟ್ಟಿಕೊಳ್ಳಲು ಸಾಧ್ಯವಿದೆ. ಆದರೆ ಯೋಜನೆಗೆ ವಿರೋಧ ಮಾಡುವವರು ಬೆರಳೆಣಿಕೆಯಷ್ಟು ಜನರಿದ್ದಾರೆ. ಆಧುನಿಕ ತಂತ್ರಜ್ಞಾನ ಬಳಸಿ ನಮ್ಮ ಅರಣ್ಯ, ವನ್ಯಜೀವಿಗೆ ಉಂಟಾಗುವ ಹಾನಿಯ ಪ್ರಮಾಣವನ್ನು ಕಡಿಮೆ ಮಾಡಿ ಜನತೆಗೆ ಅನುಕೂಲವಾದ ರೈಲು ಮಾರ್ಗವನ್ನು ಮಾಡಬಹುದಾಗಿದೆ," ಎಂದು ಲಿಖಿತ ರೂಪದಲ್ಲಿ ಮನವಿಯನ್ನು ಸಲ್ಲಿಸಿದರು.

 19 ವರ್ಷದಿಂದ ಯೋಜನೆಗಾಗಿ ಹೋರಾಟ

19 ವರ್ಷದಿಂದ ಯೋಜನೆಗಾಗಿ ಹೋರಾಟ

ಹುಬ್ಬಳ್ಳಿ-ಅಂಕೋಲಾ ರೈಲು ಹೋರಾಟ ಸಮಿತಿಯ ಅಧ್ಯಕ್ಷ ರಮಾನಂದ ನಾಯಕ ಮಾತನಾಡಿ, "ಸಾಗರಮಾಲಾ ಯೊಜನೆಯಡಿ ಬೆಲೇಕೇರಿ, ಕಾರವಾರ ಬಂದರುಗಳ ಅಭಿವೃದ್ಧಿ ನಡೆಯುತ್ತಿದ್ದು, ಇದಕ್ಕಾಗಿ ಹುಬ್ಬಳ್ಳಿ-ಅಂಕೋಲಾ ರೈಲು ಯೋಜನೆ ಅತಿ ಅವಶ್ಯಕವಾಗಿದೆ. ಜಿಲ್ಲೆಯ ಪ್ರವಾಸೋದ್ಯಮ ಬೆಳವಣಿಗೆಗೂ ಇದು ಅನಿವಾರ್ಯವಾಗಿದೆ. ಕಳೆದ 19 ವರ್ಷದಿಂದ ಯೋಜನೆಗಾಗಿ ಹೋರಾಟ ನಡೆಸುತ್ತಾ ಬಂದಿದ್ದೇವೆ. ರಸ್ತೆ ಮಾರ್ಗದ ಮೂಲಕ 140 ಕಿಲೋ ಮೀಟರ್‌ ಇರುವ ದೂರವು ರೈಲ್ವೆ ಯೋಜನೆಯಲ್ಲಿ 120 ಕಿಲೋ ಮೀಟರ್‌ ದೂರ ಆಗುತ್ತದೆ. ಹುಬ್ಬಳ್ಳಿಯಿಂದ ಕಲಘಟಗಿ ಈಗಾಗಲೇ ಕಾಮಗಾರಿ ನಡೆದಿದೆ. ಆದ್ದರಿಂದ ಈ ಯೋಜನೆಯು ಶೀಘ್ರ ಆರಂಭವಾಗಲು ವರದಿ ಸಲ್ಲಿಸುವಂತೆ," ಕೋರಿದರು.

English summary
Implementation of Hubballi-Ankola railway project, site inspection conducted written opinion collected from Public. know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X