ಹೊನ್ನಾವರ ಬಂದರು ವಿವಾದ: ಕೋರ್ಟ್‌ಗೆ ಸುಳ್ಳು ಮಾಹಿತಿ ನೀಡಿದ ಅಧ್ಯಯನ ಸಂಸ್ಥೆಗಳು!
ಕಾರವಾರ, ಆಗಸ್ಟ್ 25: ಉತ್ತರ ಕನ್ನಡ ಜಿಲ್ಲೆ ಹೊನ್ನಾವರದ ಹಸಿ ಮೀನು ವ್ಯಾಪಾರಸ್ಥರು ಹೈಕೋರ್ಟ್‌ನಲ್ಲಿ ಹೊನ್ನಾವರದ ವಾಣಿಜ್ಯ ಬಂದರು ನಿರ್ಮಾಣ ಕಾಮಗಾರಿಗೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸುವಂತೆ ಕೋರ್ಟ್‌ನಲ್ಲಿ ಹೊನ್ನಾವರ ಪೋರ್ಟ್ ಪ್ರೈವೇಟ್ ಲಿಮಿಟೆಡ್ ಕಂಪನಿ ಪ್ರತಿವಾದ ಮಂಡಿಸಿದೆ.
ಪ್ರೈವೇಟ್ ಲಿಮಿಟೆಡ್ ಕಂಪನಿ ನ್ಯಾಯಾಲಯಕ್ಕೆ ಸಲ್ಲಿಸಿರುವ ಮಾಹಿತಿಯಲ್ಲಿ ಕೆಲವು ಸುಳ್ಳು ಮತ್ತು ತಪ್ಪು ಮಾಹಿತಿಗಳಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಇದು ಕಾಮಗಾರಿಯನ್ನು ಟೆಂಡರ್ ಪಡೆಯಲು ಕಂಪನಿ ಅಡ್ಡದಾರಿ ಹಿಡಿಯಿತಾ ಎನ್ನುವ ಅನುಮಾನ ಮೂಡಿಸಿದೆ.
ಕರಾವಳಿಯ ಗಡಿಯನ್ನು ವಿಸ್ತರಿಸಲಾಗಿದೆ, ಅಳಿವಿನಂಚಿನಲ್ಲಿರುವ ಕಡಲಾಮೆ ಸಂತತಿ ಸೇರಿದಂತೆ ಜೀವ ವೈವಿಧ್ಯತೆಗೆ ಹಾನಿಯಾಗುತ್ತದೆ. ಸ್ಥಳೀಯರ ವೃತ್ತಿ ಮತ್ತು ಆರೋಗ್ಯದ ಮೇಲೆ ವಾಣಿಜ್ಯ ಬಂದರು ನಿರ್ಮಾಣ ಗಂಭೀರ ಪರಿಣಾಮವನ್ನುಂಟು ಮಾಡುತ್ತದೆ. ಸಾಂಪ್ರದಾಯಿಕ ಮೀನುಗಾರಿಕೆ ನಶಿಸಿ ಹೋಗುತ್ತದೆ. ಸಾವಿರಾರು ಕುಟುಂಬ ಬೀದಿಗೆ ಬರುತ್ತದೆ ಎನ್ನುವ ಹಲವು ಅಂಶಗಳನ್ನು ನಮೂದಿಸಿ ಮೀನುಗಾರರು ನ್ಯಾಯಾಲಯದ ಕದ ತಟ್ಟಿದ್ದರು. ಆದರೆ ಮೀನುಗಾರರ ವಾದವನ್ನು ಸಾರಾಸಗಟಾಗಿ ತಳ್ಳಿ ಹಾಕಿರುವ ಖಾಸಗಿ ಕಂಪನಿ, ನ್ಯಾಯಾಯಲಕ್ಕೆ ಹಲವು ಪುಟಗಳ ಸಮಗ್ರ ವರದಿಯನ್ನು ಸ್ಪಷ್ಟನೆಯಾಗಿ ನೀಡಿದೆ. ಅದರಲ್ಲಿ ಪ್ರಮುಖವಾದ ಒಂದು ಅಂಶ ಇದೀಗ ಕಂಪನಿಯ ಒಟ್ಟೂ ಕಾರ್ಯವೈಖರಿಯನ್ನೇ ಅನುಮಾನದಿಂದ ನೋಡುವಂತೆ ಮಾಡಿದೆ.

ಕರಾವಳಿಯಲ್ಲಿ ಆಮೆ ಗೂಡುಗಳೇ ಇಲ್ಲ
ಕಂಪನಿ ಹೇಳುವ ಪ್ರಕಾರ, ವಾಣಿಜ್ಯ ಬಂದರು ನಿರ್ಮಾಣಕ್ಕೆ ಮಂಜೂರಾತಿಯನ್ನು ಪಡೆದುಕೊಳ್ಳಲು ರಾಷ್ಟ್ರೀಯ ಕಡಲತೀರ ನಿರ್ವಹಣಾ ಕೇಂದ್ರ, ಪರಿಸರ ಸಚಿವಾಲಯ, ಅರಣ್ಯ ಮತ್ತು ಹವಾಮಾನ ಬದಲಾವಣೆ ಕ್ಲಿಯರೆನ್ಸ್ ಅಗತ್ಯವಾಗಿದೆ. ನ್ಯಾಷನಲ್ ಸೆಂಟರ್ ಫಾರ್ ಸಸ್ಟೈನೇಬಲ್ ಕೋಸ್ಟಲ್ ಮ್ಯಾನೇಜ್ಮೆಂಟ್, ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆಯ ಸಚಿವಾಲಯ ಈ ಭಾಗದಲ್ಲಿ ಅಧ್ಯಯನ ನಡೆಸಿ ಸಲ್ಲಿಸಿದ ವರದಿಯ ಪ್ರಕಾರ ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಯಾವುದೇ ಆಮೆ ಗೂಡುಗಳಿಲ್ಲ ಎನ್ನುವುದನ್ನು ನ್ಯಾಯಾಲಯದ ಮುಂದಿಟ್ಟಿದೆ.

ಕಡಲಾಮೆ ಮೊಟ್ಟೆ ಸಂರಕ್ಷಣಾ ಕೇಂದ್ರ
ಹೊನ್ನಾವರ ತಾಲೂಕಿನ ಹಳದಿಪುರದಲ್ಲಿಯೇ ಕಡಲಾಮೆ ಮೊಟ್ಟೆ ಸಂರಕ್ಷಣಾ ಕೇಂದ್ರವಿದ್ದು, ಅಪ್ಸರಕೊಂಡ, ಕಾಸರಕೋಡ, ಪಾವಿನಕುರ್ವಾ, ಹಳದಿಪುರದ ಕಡಲತೀರದಲ್ಲಿ ಕಡಲಾಮೆಗಳು ಇಡುವ ಮೊಟ್ಟೆಯನ್ನು ಸಂರಕ್ಷಿಸಿ ಮರಿ ಮಾಡಿ ಮತ್ತೆ ಕಡಲಿಗೆ ಬಿಡುವ ಪ್ರಕ್ರಿಯೆಯನ್ನು ಅರಣ್ಯ ಇಲಾಖೆ ಇಂದಿಗೂ ಮಾಡುತ್ತಿದೆ. ಆದರೆ ಬಂದರು ನಿರ್ಮಾಣ ಕಾಮಗಾರಿಗಾಗಿ ಈ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಿರುವ ಸಂಸ್ಥೆಗಳ ವರದಿಯನ್ನು ಗಮನಿಸಿದರೆ, ಇದು ಅಧ್ಯಯನ ವರದಿದೆಯೋ ಅಥವಾ ಎಸಿ ಕಚೇರಿಯಲ್ಲಿ ಕುಳಿತು ಬರೆದಿರುವ ವರದಿಯೋ ಎಂಬ ಅನುಮಾನ ಮೂಡಿಸುತ್ತಿದೆ.

ರಸ್ತೆ ನಿರ್ಮಾಣ ತನಗೆ ಸಂಬಂಧವಿಲ್ಲ ಎಂದ ಕಂಪನಿ
ಕಂಪನಿ ತನ್ನ ತಪ್ಪುಗಳನ್ನು ಮುಚ್ಚಿಕೊಳ್ಳಲು ಸುಳ್ಳಿನ ಸರಮಾಲೆಯನ್ನು ಹೆಣೆಯುತ್ತಿದೆಯಾ ಎನ್ನುವ ಅನುಮಾನ ಕಾಡುತ್ತಿದೆ. ಒಂದು ಕಡೆ ಪ್ರಸ್ತಾವದಲ್ಲಿ ಪ್ರಸ್ತುತ ಈಗಿರುವ ಮೀನುಗಾರಿಕಾ ಬಂದರು ಮತ್ತು ಜನವಸತಿ ಪ್ರದೇಶದಲ್ಲಿರುವ ರಸ್ತೆಯನ್ನು ತಾನು ಬಳಸುವುದಿಲ್ಲ. ವಾಣಿಜ್ಯ ಬಂದರಿಗಾಗಿಯೇ ಸಮುದ್ರದ ಬದಿಯಲ್ಲಿ ಹೊಸದಾಗಿ ರಸ್ತೆ ನಿರ್ಮಿಸಿಕೊಳ್ಳುತ್ತೇವೆ ಎಂದು ಹೇಳಿರುವ ಕಂಪನಿ, ಇದೀಗ ಬೀಚ್ ಸೈಡ್ ನಿರ್ಮಾಣವಾಗುತ್ತಿರುವ ರಸ್ತೆ ತಾನು ಮಾಡುತ್ತಿರುವುದಲ್ಲ ಎನ್ನುವ ಅರ್ಥದ ಉತ್ತರವನ್ನು ನೀಡಿದೆ.
ಭಟ್ಕಳ ಉಪವಿಭಾಗಾಧಿಕಾರಿ, ಡಿವೈಎಸ್‌ಪಿ, ಸ್ಥಳೀಯ ಕಂದಾಯ ಮತ್ತು ಪೊಲೀಸ್ ಅಧಿಕಾರಿಗಳು ಕಾನೂನು ಬಾಹಿರ ಅತಿಕ್ರಮಣಗಳನ್ನು ತೆಗೆದು ಹಾಕಲು ಕ್ರಮ ಕೈಗೊಂಡಿದ್ದಾರೆ ಮತ್ತು ಇದರ ಉದ್ದೇಶ ಕಾಸರಕೋಡನ್ನು ಸಂಪರ್ಕಿಸುವ ಕಚ್ಚಾರಸ್ತೆಯನ್ನು ಸುಧಾರಿಸುವುದು ಎಂದು ಹೇಳಿದೆ. ಆದರೆ ಕಡಲತೀರದ ಬದಿಯಲ್ಲಿ ಕಚ್ಚಾ ರಸ್ತೆ ಇರುವ ಬಗ್ಗೆ ಅಥವಾ ಇದ್ದ ಬಗ್ಗೆ ಸರ್ವೆ ಆಫ್ ಇಂಡಿಯಾದ ಅಪ್ಡೇಟ್ ನಕ್ಷೆಯಲ್ಲಿ ಯಾವುದೇ ಕುರುಹು ಇಲ್ಲದಿರುವುದು ಅಚ್ಚರಿಗೆ ಕಾರಣವಾಗಿದೆ.
Recommended Video

ಸಾರ್ವಜನಿಕ ಅರ್ಜಿ ವಜಾಕ್ಕೆ ಕಂಪನಿ ಪರ ವಕೀಲರ ವಕಾಲತ್ತು
ಹೈದರಾಬಾದ್ ಮೂಲದ ಕಂಪನಿ ಕಾಸರಕೋಡದಲ್ಲಿ ಖಾಸಗಿ ವಾಣಿಜ್ಯ ಬಂದರು ನಿರ್ಮಾಣಕ್ಕೆ ಟೆಂಡರ್ ಪಡೆದುಕೊಂಡಿದ್ದು 2010ರ ಅ.11ರಲ್ಲಿ. ಪರಿಸರ ಪರವಾನಗಿ ಪಡೆದಿದ್ದು 2012ರ ಸೆ.21ರಲ್ಲಿ. ಸ್ಥಳೀಯರು ಕಾಮಗಾರಿ ವಿರೋಧಿಸಿ ನ್ಯಾಯಾಲಯದ ಕದ ಬಡಿದಿರುವುದು 2020ರಲ್ಲಿ. ಹೀಗೆ ಸರಿಸುಮಾರು 9 ವರ್ಷಗಳ ತರುವಾಯ ಆಕ್ಷೇಪಣಾ ಅರ್ಜಿ ಸಲ್ಲಿಸಿರುವುದರಿಂದ ವಿಚಾರಣೆ ನಡೆಸದೇ ಅರ್ಜಿಯನ್ನು ವಜಾ ಮಾಡುವಂತೆ ಕಂಪನಿ ಪರ ವಕೀಲರು ನ್ಯಾಯಪೀಠವನ್ನು ಒತ್ತಾಯಿಸಿದ್ದಾರೆ.
ದಾಖಲೆಗಳು ಸರಿಯಿದ್ದರೆ, ಕಂಪನಿ ನ್ಯಾಯಮಾರ್ಗದಲ್ಲಿ ಮುನ್ನಡೆಯುತ್ತಿದ್ದರೆ, ಎಲ್ಲವನ್ನೂ ನಿಯಮ ಮತ್ತು ಕಾನೂನು ಬದ್ಧವಾಗಿಯೇ ಮಾಡುತ್ತಿದ್ದರೆ ನ್ಯಾಯಾಲಯದ ಎದುರು ತನ್ನ ದಾಖಲೆಗಳನ್ನು ತೆರೆದಿಟ್ಟು ವಾದವನ್ನು ಮಂಡಿಸಬಹುದಿತ್ತು. ಆದರೆ ಅದು ಬಿಟ್ಟು ತಡವಾಗಿ ಬಂದಿದ್ದಾರೆ ಎನ್ನುವ ಕಾರಣಕ್ಕೆ ಅರ್ಜಿಯನ್ನೇ ವಜಾ ಮಾಡಿ ಎಂದು ವಾದಿಸುತ್ತಿರುವುದು ಕಂಪನಿಯ ನಡೆ ಬಗ್ಗೆ ಮತ್ತಷ್ಟು ಅನುಮಾನ ಮೂಡುವುದಕ್ಕೆ ಕಾರಣವಾಗಿದೆ.












Click it and Unblock the Notifications