ಇಂಟರ್ನೆಟ್, ಕೇಬಲ್ ವೈರ್‌ಗಳನ್ನು ತುಂಡರಿಸಿ ಕೆಂಗಣ್ಣಿಗೆ ಗುರಿಯಾದ ಹೆಸ್ಕಾಂ
ಕಾರವಾರ, ಜೂನ್ 10: ದುರಸ್ತಿ ಕೆಲಸಕ್ಕೆ ಅಡ್ಡಿ ಬರುತ್ತದೆ ಎನ್ನುವ ಕಾರಣ ನೀಡಿ ಸಾವಿರಾರು ಮನೆಗಳಿಗೆ ಕೇಬಲ್ ಹಾಗೂ ಇಂಟರ್‌ನೆಟ್ ಸೇವೆ ನೀಡಲಾಗುತ್ತಿದ್ದ ವೈರ್‌ಗಳನ್ನು ಕಾರವಾರದಲ್ಲಿ ಹೆಸ್ಕಾಂ ಸಿಬ್ಬಂದಿ ತುಂಡರಿಸಿದ್ದು, ಇದರಿಂದಾಗಿ ಜನರು ಪರದಾಡುವಂತಾಯಿತು.
ಪ್ರತಿ ಬುಧವಾರ ಕಾರವಾರದಲ್ಲಿ ವಿದ್ಯುತ್ ದುರಸ್ತಿ ವೇಳೆ ನಗರದ ಹಲವು ಬಡವಾಣೆಗೆ ಬೆಳಿಗ್ಗೆಯಿಂದ ಸಂಜೆಯವರೆಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುತ್ತದೆ. ನಗರದ ಹಬ್ಬುವಾಡದ ಸಾರಿಗೆ ಘಟಕದ ಎದುರು ವಿದ್ಯುತ್ ಕಂಬಗಳ ಮೂಲಕ ಕೇಬಲ್ ಟಿವಿಗೆ ಹಾಗೂ ಇಂಟರ್‌ನೆಟ್ ಸೇವೆಗೆ ಸಂಪರ್ಕ ಕಲ್ಪಿಸುವ ವೈರ್‌ಗಳು ಸಾಗಿದ್ದು, ಈ ಬಾರಿ ವಿದ್ಯುತ್ ದುರಸ್ತಿ ಸಂದರ್ಭ ಕೆಲಸಕ್ಕೆ ಅಡ್ಡಿ ಬರುತ್ತದೆ ಎನ್ನುವ ಕಾರಣ ನೀಡಿ ಈ ವೈರ್‌ಗಳನ್ನು ತುಂಡರಿಸಲಾಗಿದೆ.

ಹೆಸ್ಕಾಂ ವಿರುದ್ಧ ಜನರ ಹಿಡಿಶಾಪ
ನಗರ ಹಾಗೂ ಗ್ರಾಮೀಣ ಭಾಗದ ಸುಮಾರು ಎರಡು ಸಾವಿರಕ್ಕೂ ಅಧಿಕ ಮನೆ, ಅಂಗಡಿಗಳಿಗೆ ಇಂಟರ್‌ನೆಟ್ ಹಾಗೂ ಕೇಬಲ್ ಟಿವಿ ಸಂಪರ್ಕದ ಕೇಬಲ್ ವೈರ್‌ಗಳು ಅನೇಕ ವರ್ಷಗಳಿಂದ ಇದೇ ವಿದ್ಯುತ್ ಕಂಬಗಳ ಮೂಲಕ ಸಾಗಿವೆ. ಆದರೆ ಇದೀಗ ಏಕಾಏಕಿ ವೈರ್‌ಗಳನ್ನು ತುಂಡು ಮಾಡಿದ್ದರಿಂದ ಇಂಟರ್‌ನೆಟ್ ಸೇವೆ ಬಂದ್ ಆಗಿ ಜನರು ಪರದಾಡುವಂತಾಯಿತು.
ಸದ್ಯ ಲಾಕ್‌ಡೌನ್ ಹಿನ್ನಲೆಯಲ್ಲಿ ಬೇರೆ ಬೇರೆ ಊರುಗಳಿಂದ ಜನರು ವಾಪಸ್ ತಮ್ಮೂರುಗಳಿಗೆ ಮರಳಿದ್ದು, ವರ್ಕ್ ಫ್ರಮ್ ಹೋಮ್‌ನಲ್ಲಿದ್ದಾರೆ. ಬುಧವಾರ ಹೆಸ್ಕಾಂ ಸಿಬ್ಬಂದಿ ವೈರ್ ತುಂಡು ಮಾಡಿದ ಪರಿಣಾಮ ಇಂಟರ್‌ನೆಟ್ ಇಲ್ಲದೇ ಕೆಲಸ ಮಾಡಲು ಸಾಧ್ಯವಾಗದೇ ಹೆಸ್ಕಾಂ ವಿರುದ್ಧ ಜನರು ಹಿಡಿಶಾಪ ಹಾಕಿದ್ದಾರೆ.

ಮುನ್ಸೂಚನೆ ನೀಡದೆ ವೈರ್‌ಗಳನ್ನು ತುಂಡು ಮಾಡಿದ್ದಾರೆ
ವಿದ್ಯುತ್ ಕಂಬಗಳ ಮೇಲೆ ಕೇಬಲ್ ವೈರ್‌ಗಳನ್ನು ಅಳವಡಿಸುವ ಪೂರ್ವ ಅನುಮತಿ ಪಡೆಯುವಂತೆ ಕೆಲ ದಿನದ ಹಿಂದೆ ಹೆಸ್ಕಾಂ ಅಧಿಕಾರಿಗಳು ಪ್ರಕಟಣೆ ಹೊರಡಿಸಿದ್ದರು. ಕಂಬವೊಂದಕ್ಕೆ ನೂರು ರೂಪಾಯಿ ತುಂಬುವಂತೆ ಕೂಡ ಹೇಳಿದ್ದರಂತೆ. ನೂರು ರೂಪಾಯಿ ತುಂಬುವುದು ಕಷ್ಟಸಾಧ್ಯವಾದ ಹಿನ್ನಲೆಯಲ್ಲಿ ಕಡಿಮೆ ಮಾಡುವಂತೆ ಕೇಬಲ್ ಮಾಲಿಕರು ಮನವಿ ಮಾಡಿಕೊಂಡಿದ್ದರು. ಇದಕ್ಕೆ ಅಧಿಕಾರಿಗಳು ಒಪ್ಪಿಗೆ ನೀಡಿರಲಿಲ್ಲ.
ಇದೇ ಸಿಟ್ಟಿನಲ್ಲಿ ಯಾವುದೇ ಮುನ್ಸೂಚನೆ ನೀಡದೆ ವೈರ್‌ಗಳನ್ನು ತುಂಡು ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಇನ್ನು ಕೆಲವರು ಶಾಸಕಿ ರೂಪಾಲಿ ನಾಯ್ಕ ಅವರ ಗಮನಕ್ಕೂ ಈ ವಿಷಯ ತಂದಿದ್ದಾರೆನ್ನಲಾಗಿದ್ದು, ಅಧಿಕಾರಿಗಳಿಗೆ ಲಾಕ್‌ಡೌನ್ ವೇಳೆಯಲ್ಲಿ ಈ ರೀತಿ ವರ್ತನೆ ತೋರದಂತೆ ಸೂಚಿಸಿದ್ದಾರೆ ಎನ್ನಲಾಗಿದೆ.

ಮಳೆಯಲ್ಲಿ ಪರದಾಡಿದ ಕೇಬಲ್ ಸಿಬ್ಬಂದಿ
ಹೆಸ್ಕಾಂ ಸಿಬ್ಬಂದಿ ವೈರ್‌ಗಳನ್ನೇನೋ ತುಂಡರಿಸಿ ಹೊರಟರು. ಆದರೆ, ಮನೆಗಳಿಗೆ ಇಂಟರ್ನೆಟ್, ಕೇಬಲ್‌ಗಳು ಸಂಪರ್ಕ ಬರದೇ ನೂರಾರು ಜನರು ಇಂಟರ್ನೆಟ್, ಕೇಬಲ್ ಪೂರೈಕೆದಾರರಿಗೆ ಕರೆ ಮಾಡಿ, ಕೂಡಲೇ ಸಂಪರ್ಕ ನೀಡುವಂತೆ ಮನವಿ ಮಾಡಿದ್ದಾರೆ. ಈ ಕಾರಣದಿಂದಾಗಿ ವೈರ್‌ಗಳನ್ನು ಸರಿಪಡಿಸಲು ಕೇಬಲ್ ಸಿಬ್ಬಂದಿ ಮಳೆಯಲ್ಲೇ ಪರದಾಡಿದರು. ಬೆಳಿಗ್ಗೆಯಿಂದ ಸಂಜೆಯವರೆಗೂ ಮಳೆಯಲ್ಲೇ ನೆನೆಯುತ್ತ ಸಂಪರ್ಕಗಳನ್ನು ನೀಡಿದ್ದಾರೆ.
ಇನ್ನು ಯಾಕೆ ಮಾಹಿತಿ ನೀಡದೆ ಕೇಬಲ್‌ಗಳನ್ನು ತುಂಡು ಮಾಡಿದ್ದೀರಿ ಎಂದು ಹೆಸ್ಕಾಂ ಅಧಿಕಾರಿಯೊಬ್ಬರನ್ನು ಕೇಬಲ್ ಸಿಬ್ಬಂದಿ ಕೇಳಿದರೆ, ಮಾಧ್ಯಮದವರು ಈ ವೈರ್‌ಗಳನ್ನು ವಿದ್ಯುತ್ ತಂತಿಗಳ ಮೇಲೆ ಅಳವಡಿಸುವವರ ವಿರುದ್ಧ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಕೇಳುತ್ತಿದ್ದಾರೆ. ಅದಕ್ಕಾಗಿಯೇ ತುಂಡರಿಸಿದ್ದೇವೆ ಎಂದು ಹೇಳಿದ್ದಾರಂತೆ.

ಹೆಸ್ಕಾಂನವರು ಸಹಕರಿಸಬೇಕು
""ರಾಜ್ಯದ ಬಹುತೇಕ ಎಲ್ಲಾ ಕಡೆ ಕೇಬಲ್‌ಗಳು ವಿದ್ಯುತ್ ಕಂಬದ ಮೂಲಕವೇ ಹೋಗಿದೆ. ಈಗ ಏಕಾಏಕಿ ಕಟ್ ಮಾಡಿ ಪರ್ಯಾಯ ಸಂಪರ್ಕ ಮಾಡಿಕೊಳ್ಳಿ ಅಂದರೆ ಕಷ್ಟಸಾಧ್ಯ. ಅಲ್ಲದೇ ಕಂಬವೊಂದಕ್ಕೆ ನೂರು ರೂಪಾಯಿ ಬಾಡಿಗೆ ತುಂಬಿ ಎಂದು ಸಹ ಹೇಳಿದ್ದು, ಇದು ಸಹ ಕಷ್ಟವಾಗುತ್ತದೆ. ಕೊರೊನಾದಂತಹ ಸಂಕಷ್ಟದ ಸಂದರ್ಭದಲ್ಲಿ ಹೆಸ್ಕಾಂ ಅಧಿಕಾರಿಗಳು ನಮ್ಮೊಂದಿಗೆ ಸಹಕರಿಸಬೇಕು'' ಎಂದು ಕೇಬಲ್ ಸಿಬ್ಬಂದಿಯೊಬ್ಬರು ಹೇಳಿದರು.

ಅಡ್ಡಿಯಾದ ಕಾರಣಕ್ಕೆ ತುಂಡರಿಸಲಾಗಿದೆ
ಇನ್ನು ಈ ಬಗ್ಗೆ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ವಿ.ಎಸ್ ಶೇಬಣ್ಣನವರ್ ಅವರನ್ನು ಕೇಳಿದರೆ, ""ನಮಗೆ ಕೇಬಲ್ ವೈರ್ ತುಂಡು ಮಾಡಿ ಎಂದು ಯಾರ ಒತ್ತಡವಿಲ್ಲ. ಆದರೆ ಕೆಲಸಕ್ಕೆ ಅಡ್ಡಿ ಬಂದ ಹಿನ್ನಲೆಯಲ್ಲಿ ತುಂಡು ಮಾಡಲಾಗಿದೆಯಷ್ಟೇ. ಅನುಮತಿ ಇಲ್ಲದೇ ವಿದ್ಯುತ್ ಕಂಬದ ಮೂಲಕ ಸಾಗಿರುವ ಕೇಬಲ್ ತುಂಡು ಮಾಡುವುದಿದ್ದರೆ ಎಲ್ಲಾ ಕಡೆ ತುಂಡು ಮಾಡಬೇಕಿತ್ತು. ಆದರೆ ಹಾಗೆ ಮಾಡಿಲ್ಲ. ಬಸ್ ಡಿಪೋ ಬಳಿ ಕೆಲಸ ಇದ್ದಿದ್ದರಿಂದ ಮಾತ್ರ ಕೇಬಲ್ ತುಂಡು ಮಾಡಲಾಗಿದೆ'' ಎಂದು ಸ್ಪಷ್ಟಪಡಿಸಿದರು.