ಉತ್ತರಕನ್ನಡದಲ್ಲಿ ಬಿಜೆಪಿಯಿಂದ ಗುಜರಾತ್ ಮಾದರಿಯ ಸಮಾವೇಶ: ಏನು, ಎತ್ತ?
ಕಾರವಾರ, ಫೆ.21: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಕರಾವಳಿ ಜಿಲ್ಲೆಗಳ ಪ್ರವಾಸದಲ್ಲಿದ್ದಾರೆ. ಈ ಹಿನ್ನಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಥಮ ನವಶಕ್ತಿ ಸಮಾವೇಶವನ್ನು ಇಂದು ಕುಮಟಾದಲ್ಲಿ ಆಯೋಜಿಸಲಾಗಿದ್ದು ಈ ಸಮಾವೇಶ ಉದ್ದೇಶಿಸಿ ಶಾ ಮತನಾಡಲಿದ್ದಾರೆ.
ಈ ಸಮಾವೇಶದಲ್ಲಿ ಜಿಲ್ಲೆಯ ಮೂಲೆ ಮೂಲೆಯ ಮತಗಟ್ಟೆಗಳ ಕಾರ್ಯಕರ್ತರು ಭಾಗವಹಿಸಲಿದ್ದು ಅವರಿಗೆ ಅಮಿತ್ ಶಾ ಮಾರ್ಗದರ್ಶನ ಮಾಡಲಿದ್ದಾರೆ. ಇದಕ್ಕಾಗಿ ಈಗಾಗಲೇ ಕ್ಷಣಗಣನೆ ಪ್ರಾರಂಭವಾಗಿದ್ದು, ಕುಮಟಾದ ಕೊಂಕಣ ಎಜುಕೇಶನ್ ಗ್ರೌಂಡ್ ಸಿದ್ಧಗೊಂಡಿದೆ.

ಏನಿದು ನವಶಕ್ತಿ ಸಮಾವೇಶ?
ನವಶಕ್ತಿ ಸಮಾವೇಶ ಎಂಬುದು ಒಂದು ವಿಭಿನ್ನ ಕಾರ್ಯಕ್ರಮ. ಇದು ಗುಜರಾತ್ ಮಾದರಿಯ ಕಾರ್ಯಕ್ರಮವಾಗಿದ್ದು, ಚುನಾವಣೆಯ ಗೆಲುವಿಗೆ ಇದು ಬುನಾದಿ ಎಂದು ಹೇಳಲಾಗುತ್ತಿದೆ. ಈ ಸಮಾವೇಶದಲ್ಲಿ ಸಾರ್ವಜನಿಕರು ಪಾಲ್ಗೊಳ್ಳುವುದಕ್ಕೆ ಅವಕಾಶ ಇಲ್ಲ. ಅತ್ಯಂತ ಕಟ್ಟುನಿಟ್ಟಾಗಿ ಪಕ್ಷದ ಆಯ್ದ ಪ್ರಮುಖರು ಮತ್ತು ಪೂರ್ವ ಆಹ್ವಾನಿತ ಕಾರ್ಯಕರ್ತರಿಗೆ ಮಾತ್ರ ಪ್ರವೇಶ ಇರುತ್ತದೆ.

3 ಕ್ಷೇತ್ರಕ್ಕೊಂದು ಸಮಾವೇಶ
ಜಿಲ್ಲೆಯ ಕರಾವಳಿಯ ಕಾರವಾರ ವಿಧಾನಸಭೆ ಕ್ಷೇತ್ರ, ಕುಮಟಾ-ಹೊನ್ನಾವರ ಕ್ಷೇತ್ರ ಮತ್ತು ಭಟ್ಕಳ ಕ್ಷೇತ್ರದ ಬೂತ್ ಮಟ್ಟದ ಕಾರ್ಯಕರ್ತರನ್ನು ಮಾತ್ರ ಸಮಾವೇಶಕ್ಕೆ ಕರೆಯಲಾಗಿದೆ.
ಈ ಕ್ಷೇತ್ರದಲ್ಲಿ ಬಿಜೆಪಿಯ 725 ಮತಗಟ್ಟೆ ಸಮಿತಿಗಳಿವೆ. ಪ್ರತಿ ಮತಗಟ್ಟೆ ಸಮಿತಿಯಿಂದ ಅಧ್ಯಕ್ಷ -ಕಾರ್ಯದರ್ಶಿ, ಮಹಿಳಾ-ಪರಿಶಿಷ್ಟ ಪ್ರತಿನಿಧಿ ಸೇರಿದಂತೆ ತಲಾ 9 ಮಂದಿ ಮಾತ್ರ ಈ ಸಮಾವೇಶಕ್ಕೆ ಆಹ್ವಾನಿತರಾಗಿದ್ದಾರೆ.

ಎಲ್ಲರಿಗೂ ಆಸನ ಮೀಸಲು
ಒಟ್ಟೂ 6,525 ಮಂದಿ ಬೂತ್ ಮಟ್ಟದ ಕಾರ್ಯಕರ್ತರು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಅವರಿಗೆಲ್ಲ ಪಾಸ್ ವ್ಯವಸ್ಥೆ ಮಾಡಲಾಗಿದೆ. ಪ್ರತ್ಯೇಕವಾಗಿ ವಿಧಾನಸಭೆ ಕ್ಷೇತ್ರವಾರು ಕೌಂಟರ್ ಮಾಡಿ ಮತಗಟ್ಟೆ ಹೆಸರಿನಲ್ಲಿ ಪ್ರತ್ಯೇಕವಾಗಿ ಆಸನ ವ್ಯವಸ್ಥೆ ಮಾಡಲಾಗುತ್ತಿದೆ.
ಜಿಲ್ಲೆಯ ಎಲ್ಲೆಡೆಯಿಂದ 200 ಮಂದಿ ಪ್ರಮುಖರು, ಪದಾಧಿಕಾರಿಗಳ ಪಟ್ಟಿ ಮಾಡಿ ಆಹ್ವಾನಿಸಿ ಪಾಸ್ ಮತ್ತು ಆಸನ ವ್ಯವಸ್ಥೆಯಾಗಿದೆ.
ಇದೇ ರೀತಿಯ ಸಮಾವೇಶವನ್ನು ದಕ್ಷಿಣ ಕನ್ನಡದ ಕುಲ್ಕುಂದ ಮತ್ತು ಬಂಟ್ವಾಳದಲ್ಲಿ ಹಾಗೂ ಉಡುಪಿಯಲ್ಲಿ ಈಗಾಗಲೇ ಹಮ್ಮಿಕೊಳ್ಳಲಾಗಿತ್ತು.

ಶಾ ಗೋಕರ್ಣ ಭೇಟಿ ರದ್ದು
ಅಮಿತ್ ಶಾ ಜ್ವರದಿಂದ ಬಳಲುತ್ತಿದ್ದರು. ಸ್ವಲ್ಪ ಮಟ್ಟಿಗೆ ಅವರು ಚೇತರಿಸಿಕೊಂಡಿದ್ದರೂ ಇನ್ನೂ ಪೂರ್ಣ ಗುಣಮುಖರಾಗಿಲ್ಲ. ಹೀಗಾಗಿ ಇಂದು ಗೋಕರ್ಣದ ಮಹಾಬಲೇಶ್ವರ ದೇವಸ್ಥಾನಕ್ಕೆ ನಿಗದಿಯಾಗಿದ್ದ ಅವರ ಭೇಟಿ ರದ್ದಾಗಿದೆ.

ಅಂಗಡಿ ವ್ಯಾಪಾರಿಗಳು ಗರಂ
ಅಮಿತ್ ಶಾ ಭೇಟಿ ಹಿನ್ನೆಲೆಯಲ್ಲಿ ಗೋಕರ್ಣದ ಜಾತ್ರಾ ಮಾರುಕಟ್ಟೆಯಲ್ಲಿನ ಅಂಗಡಿಗಳನ್ನು ಜಿಲ್ಲಾಡಳಿತದ ವತಿಯಿಂದ ಬೆಳಿಗ್ಗೆ ಏಕಾಏಕಿ ಸ್ಥಳಾಂತರಿಸಲಾಗಿತ್ತು.
ಪಂಚಾಯತಿ, ಅಧಿಕಾರಿಗಳು, ಜಿಲ್ಲಾಡಳಿತಕ್ಕೆ ಹಣ ತುಂಬಿ, ಇದೀಗ ಬಿಜೆಪಿಯವರ ಅರ್ಧ ಗಂಟೆಯ ಕಾರ್ಯಕ್ರಮಕ್ಕೆ ಅಂಗಡಿಗಳನ್ನು ತೆರವು ಮಾಡುವುದು ಎಷ್ಟು ಸರಿ ಎಂದು ಅಂಗಡಿಕಾರರು ಅಸಮಾಧಾನ ವ್ಯಕ್ತಪಡಿಸಿದ್ದರು.
ಇದೀಗ ಬಿಜೆಪಿ ಮೂಲಗಳಿಂದ ಕಾರ್ಯಕ್ರಮ ರದ್ದಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಗೋಕರ್ಣದ ಜಾತ್ರಾ ಮಾರುಕಟ್ಟೆಯ ವ್ಯಾಪಾರಿಗಳು ಅಂಗಡಿಗಳನ್ನು ತೆರವುಗೊಳಿಸಿದ್ದಕ್ಕೆ ಜಿಲ್ಲಾಡಳಿತದ ವಿರುದ್ಧ ಮುನಿಸಿಕೊಂಡಿದ್ದಾರೆ.
ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !