ನೆಪೋಟಿಸಂ ಬಗ್ಗೆ ರಾಜ್‌ಕುಮಾರ್ ಮಕ್ಕಳಿಗೂ ಪ್ರಶ್ನೆ ಕೇಳಿ, ಅದು ದೊಡ್ಮನೆಯಿಂದಲೇ ಶುರುವಾಯ್ತಲ್ಲ? ಗರಂ ಆದ ಕಿಚ್ಚ ಸುದೀಪ್
ಕನ್ನಡ ಚಿತ್ರರಂಗದಲ್ಲಿ ಸದ್ಯ ಭಾರಿ ಸದ್ದು ಮಾಡುತ್ತಿರುವ ನಟ ಕಿಚ್ಚ ಸುದೀಪ್ ಅವರ ಸೋದರಳಿಯ ಸಂಚಿತ್ ಸಂಜೀವ್ ನಟನೆಯ ಚೊಚ್ಚಲ ಚಿತ್ರ 'ಮ್ಯಾಂಗೋ ಪಚ್ಚ' ಬಿಡುಗಡೆಯಾಗಿದೆ. ಇತ್ತೀಚೆಗೆ ನಡೆದ ಈ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ಸದಾ ಚರ್ಚೆಯಾಗುವ 'ನೆಪೋಟಿಸಂ' (ವಂಶಪಾರಂಪರ್ಯ, ಸ್ವಜನಪಕ್ಷಪಾತ) ಕುರಿತಾದ ಪ್ರಶ್ನೆ ಎದುರಾಗಿದ್ದು, ಇದಕ್ಕೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅತ್ಯಂತ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಶಿವಣ್ಣನಿಗೂ ಇದೇ ಪ್ರಶ್ನೆ ಕೇಳ್ತೀರಾ? ಎಂದು ಗರಂ ಆಗಿದ್ದಾರೆ.
ಸಂಚಿತ್ ಸಂಜೀವ್ ಅವರ ಮೊದಲ ಸಿನಿಮಾ 'ಮ್ಯಾಂಗೋ ಪಚ್ಚ' ಚಿತ್ರತಂಡ ಹಮ್ಮಿಕೊಂಡಿದ್ದ ಮಾಧ್ಯಮ ಗೋಷ್ಠಿಯಲ್ಲಿ ಪತ್ರಕರ್ತರೊಬ್ಬರು ಸಂಚಿತ್ ಅವರಿಗೆ, "ಕನ್ನಡ ಚಿತ್ರರಂಗದಲ್ಲೂ ನೆಪೋಟಿಸಂ ನಡೀತಿದೆ. ಸುದೀಪ್ ಅವರ ಕುಟುಂಬದಿಂದಲೂ ಈಗ ಮತ್ತೊಬ್ಬರು ಬಂದಿದ್ದಾರೆ" ಎಂಬ ಅರ್ಥದಲ್ಲಿ ಪ್ರಶ್ನೆ ಕೇಳಿದರು. ಸೋದರಳಿಯನಿಗೆ ಎದುರಾದ ಈ ಪ್ರಶ್ನೆಗೆ ಸ್ವತಃ ಕಿಚ್ಚ ಸುದೀಪ್ ಅವರೇ ಮೈಕ್ ಕೈಗೆತ್ತಿಕೊಂಡು ತುಸು ಕೋಪದಲ್ಲೇ ಉತ್ತರಿಸಲು ಆರಂಭಿಸಿದರು.

ಶಿವಣ್ಣನಿಗೂ ಇದೇ ಪ್ರಶ್ನೆ ಕೇಳ್ತೀರಾ?
ನೆಪೋಟಿಸಂ ಚರ್ಚೆಯ ಬಗ್ಗೆ ಮಾತನಾಡುತ್ತಾ ಸುದೀಪ್ ನೇರವಾಗಿ ರಾಜ್‌ಕುಮಾರ್ ಕುಟುಂಬದ ಉದಾಹರಣೆ ನೀಡಿದರು. "ಇದೇ ಪ್ರಶ್ನೆಯನ್ನು ನೀವು ಎಲ್ಲರಿಗೂ ಕೇಳ್ತೀರಾ? ನೆಪೋಟಿಸಂ ಅನ್ನೋದಾದ್ರೆ ಅದು ದೊಡ್ಮನೆಯಿಂದಲೇ ಸ್ಟಾರ್ಟ್ ಆಯ್ತಲ್ಲಾ? ನೀವು ಎಂದಾದರೂ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರಿಗೆ ಈ ಪ್ರಶ್ನೆ ಕೇಳಿದ್ದೀರಾ? ನೆಪೋಟಿಸಂ ಅನ್ನೋದಾದ್ರೆ ರಾಜ್‌ಕುಮಾರ್ ಅವರ ಮಕ್ಕಳಿಗೂ ನೀವು ಇದೇ ಪ್ರಶ್ನೆ ಕೇಳಬೇಕಲ್ಲ?" ಎಂದು ಖಾರವಾಗಿ ಪ್ರಶ್ನಿಸಿದರು.
ಬಾಂಬೆಯಲ್ಲಿ ಹುಟ್ಟಿದ ಪದ ಇಲ್ಲಿ ಬೇಡ
"ಬಾಂಬೆಯಲ್ಲಿ (ಬಾಲಿವುಡ್) ಯಾವ್ದೋ ಒಂದು ಪದ ಹುಟ್ಟಿಕೊಳ್ತು ಅಂತ ಅದನ್ನು ತಂದು ಕರ್ನಾಟಕಕ್ಕೆ ಅನ್ವಯಿಸಬೇಡಿ. ನಮ್ಮಲ್ಲಿ ಡಾ. ರಾಜ್‌ಕುಮಾರ್ ಅವರ ಕಾಲದಿಂದಲೂ ಅವರ ಕುಟುಂಬದವರಿಗೆ ಆ ಯೋಗ್ಯತೆ, ಅರ್ಹತೆ ಮತ್ತು ಕಲೆ ಅನ್ನೋದು ಒಲಿದು ಬಂದಿದೆ. ಅಕಸ್ಮಾತ್ ಕನ್ನಡದ ಜನ ಅವರನ್ನು ಇಷ್ಟಪಟ್ಟರೆ, ಈ ಚಿತ್ರರಂಗ ಯಾರಪ್ಪನ ಜಾಗ ಬೇಕಾದರೂ ಆಗಬಹುದು. ಇಂದು ಶಿವಣ್ಣ ಅವರ ಸ್ಫೂರ್ತಿಯಿಂದ ಚಿತ್ರರಂಗದಲ್ಲಿ ಹಲವರು ಬೆಳೀತಿದ್ದಾರೆ. ಪುನೀತ್ ರಾಜ್‌ಕುಮಾರ್ (ಅಪ್ಪು) ಇಂದು ನಮ್ಮ ಜೊತೆ ಇಲ್ಲದೇ ಇರಬಹುದು, ಆದರೆ ಅವರು ಅದ್ಭುತವಾದ ಪ್ರತಿಭೆಯಾಗಿದ್ದರು. ಹೀಗಿರುವಾಗ ನಾವು ಮುಂಬೈನ ಆ ಒಂದು ಪದವನ್ನು ಇಲ್ಲಿ ಬಳಸುವುದು ತಪ್ಪು" ಎಂದರು.
Nepotism ಅಂದ್ರೆ ಅದು ರಾಜ್ ಕುಮಾರ್ ಫ್ಯಾಮಿಲಿ ಅಂತ ದುರಂಕಾರ ದಲ್ಲಿ dr ರಾಜ್ ಫ್ಯಾಮಿಲಿ ಗೆ ಟಾಂಗ್ ಕೊಟ್ಟ ಸುದೀಪ್ 🔥#kicchasudeep #mangopachcha pic.twitter.com/nHI9bFW2x3
— ದೆವ್ವ 😈 (@AshwiniPrkMinda) June 6, 2026
ಕೇವಲ ಸಿನಿಮಾ ರಂಗವನ್ನಷ್ಟೇ ಅಲ್ಲದೆ ಉದ್ಯಮ ರಂಗವನ್ನೂ ಎಳೆದು ತಂದ ಸುದೀಪ್, "ಇದೇ ಪ್ರಶ್ನೆಯನ್ನು ನೀವು ಉದ್ಯಮಿ ಮುಕೇಶ್ ಅಂಬಾನಿಗೂ ಕೇಳಿ. ನಿಮ್ಮ ಆಸ್ತಿ ಎಲ್ಲ ನಿಮ್ಮ ಮಕ್ಕಳಿಗೇ ಹೋಗ್ತಿದೆಯಲ್ಲ, ಬೇರೆಯವರಿಗೂ ಕೊಡಿ ಅಂತ ಪ್ರತಿಯೊಬ್ಬರೂ ಕೇಳಬೇಕು. ಅಲ್ಲಿ ಕೇಳದ ಪ್ರಶ್ನೆಯನ್ನು ಇಲ್ಲಿ ಕೇಳುವುದು ಎಷ್ಟು ಸರಿ?" ಎಂದು ತಿರುಗೇಟು ನೀಡಿದರು.

ಮಗಳು ಹಾಡ್ತಾಳೆ, ಚಿತ್ರರಂಗಕ್ಕೆ ಬಂದಿದ್ದಾಳೆ
ತಮ್ಮ ಸ್ವಂತ ಕುಟುಂಬದ ಬಗ್ಗೆ ಮಾತನಾಡಿದ ಕಿಚ್ಚ, "ನನ್ನ ಮನೆಯಲ್ಲಿ ಇವರನ್ನು (ಸಂಚಿತ್) ಹೊರತುಪಡಿಸಿ ನನ್ನ ಅಕ್ಕಂದಿರ ಮಕ್ಕಳು ತುಂಬಾ ಜನ ಇದ್ದಾರೆ. ನಮ್ಮ ಕುಟುಂಬ ದೊಡ್ಡದಿದೆ. ಆದರೆ ಅವರು ಯಾರೂ ಚಿತ್ರರಂಗಕ್ಕೆ ಬರಲಿಲ್ಲ. ನನ್ನ ಮಗಳು ಸಾನ್ವಿ ಚೆನ್ನಾಗಿ ಹಾಡು ಹಾಡ್ತಾಳೆ, ಹಾಗಾಗಿ ಅವಳು ಚಿತ್ರರಂಗಕ್ಕೆ ಬಂದಿದ್ದಾಳೆ. ಸಂಚಿತ್‌ಗೆ ನಟನೆ ಮತ್ತು ಸಿನಿಮಾ ಮೇಲೆ ನಿಜವಾದ ಆಸಕ್ತಿ ಇರೋದಕ್ಕೆ ಬಂದಿದ್ದಾನೆ. ನೆಪೋಟಿಸಂ ಅನ್ನೋ ಪದ ನಮಗೆ ತುಂಬಾ ವರ್ಷಗಳಿಂದಲೂ ಸೂಟ್ ಆಗಲ್ಲ. ಆ ಪದಕ್ಕೆ ಈ ಭಾಗದ ಎಷ್ಟೋ ಜನರಿಗೆ ಅರ್ಥವೇ ಗೊತ್ತಿಲ್ಲ" ಎಂದು ಸ್ಪಷ್ಟಪಡಿಸಿದರು.
ಕೊನೆಯದಾಗಿ ಸ್ಯಾಂಡಲ್‌ವುಡ್‌ನ ಪ್ರೇಕ್ಷಕರನ್ನು ಶ್ಲಾಘಿಸಿದ ಸುದೀಪ್, "ಕರ್ನಾಟಕದ ಜನತೆಗೆ ಗೊತ್ತಿರೋದು ಒಂದೇ ಒಂದು, ಅದು 'ಕಲೆ'. ಯಾರಲ್ಲಿ ನಿಜವಾದ ಕಲೆ ಮತ್ತು ಪ್ರತಿಭೆ ಇರುತ್ತದೆಯೋ, ಅವರನ್ನು ಮಾತ್ರ ಇಲ್ಲಿನ ಜನ ಕೈಹಿಡಿಯುತ್ತಾರೆ. ಕಲೆ ಇದ್ದವರು ಮಾತ್ರ ಇಲ್ಲಿ ಬೆಳೀತಾರೆ ಅಷ್ಟೇ" ಎನ್ನುವ ಮೂಲಕ ನೆಪೋಟಿಸಂ ವದಂತಿ ಹಾಗೂ ಟೀಕೆಗಳಿಗೆ ಖಡಕ್ ಪೂರ್ಣವಿರಾಮ ಇಟ್ಟಿದ್ದಾರೆ ಕಿಚ್ಚ.













Click it and Unblock the Notifications