ಅಡುಗೆ ಸಿಲೆಂಡರ್ ಇ-ಕೆವೈಸಿ ಗೊಂದಲ: 180 ರೂಗೆ ಗ್ಯಾಸ್ ಪೈಪ್ ಕೂಡ ನೀಡಿದ ಏಜೆನ್ಸಿಗಳು
ಕಾರವಾರ, ಜನವರಿ 02: ಅಡುಗೆ ಸಿಲೆಂಡರ್ ಸಂಪರ್ಕ ಪಡೆದವರು ತಿಂಗಳ ಅಂತ್ಯದೊಳಗೆ ಇ-ಕೆವೈಸಿ ಮಾಡದೆ ಇದ್ದಲ್ಲಿ ಸಬ್ಸಿಡಿ ಸಿಗುವುದಿಲ್ಲ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಪರಿಣಾಮ ಜನ ಕಳೆದ ಕೆಲ ದಿನಗಳಿಂದ ಗ್ಯಾಸ್ ಏಜನ್ಸಿಗಳ ಎದುರು ಸರದಿಗಟ್ಟತೊಡಗಿದ್ದಾರೆ. ಆದರೆ ಇ-ಕೆವೈಸಿಗೆ ಯಾವುದೇ ಕೊನೆಯ ದಿನಾಂಕ ನಿಗದಿ ಮಾಡಿಲ್ಲ. ಗ್ಯಾಸ್ ಮನೆಗಳಿಗೆ ಡಿಲವರಿ ಕೊಡುವ ಸಂದರ್ಭದಲ್ಲಿಯೇ ಇ-ಕೆವೈಸಿ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಕಳೆದ ಕೆಲ ದಿನಗಳಿಂದ ಅಡುಗೆ ಸಿಲಿಂಡರ್ ಇ-ಕೆವೈಸಿ ಮಾಡಿಸಲು ಡಿ.31 ಕೊನೆಯ ದಿನಾಂಕವೆಂದು ಸಾಮಾಜಿಕ ಜಾಲತಣಾದಲ್ಲಿ ಹಬ್ಬಿದ ಸುಳ್ಳು ಸುದ್ದಿಗೆ ನೂರಾರು ಜನರು ಕಳೆದ ಕೆಲ ದಿನಗಳಿಂದ ಗ್ಯಾಸ ಏಜೆನ್ಸಿಗಳ ಎದುರು ಸಾಲುಗಟ್ಟುತ್ತಿದ್ದು, ನಗರದ ಭಾರತ್ ಗ್ಯಾಸ್ ಎಜೆನ್ಸಿ ಸೇರಿದಂತೆ ಇತರೆಡೆ ಜನ ಸಂಜೆವರೆಗೂ ಸಾಲುಗಟ್ಟಿ ಇಕೆವೈಸಿ ಮಾಡಿಸಿಕ್ಕೊಳ್ಳಲು ಹರಸಾಹಸ ಪಡುತ್ತಿರುವುದು ಕಂಡುಬಂತು.

ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಇಲಾಖೆಯೂ ಇತ್ತೀಚೆಗೆ ಎಲ್ಲ ತೈಲ ಕಂಪನಿಗಳು ಪಿಎಂಯುವೈ (ಪ್ರಧಾನಮಂತ್ರಿ ಉಜ್ವಲ ಯೋಜನೆ) ಆದ್ಯತೆಯೊಂದಿಗೆ ಆಧಾರ್ ಒದಗಿಸಿದ ಫಲಾನುಭವಿಗಳಿಂದ ಬಯೋಮೆಟ್ರಿಕ್ ಪಡೆದುಕ್ಕೊಳ್ಳುವಂತೆ ಸೂಚಿಸಿದೆ. ಆದರೆ ಈ ಬಗ್ಗೆ ಅಂತಿಮ ದಿನಾಂಕ, ಸಹಾಯಧನ ಕಡಿತ, ಇಕೆವೈಸಿ ಮಾಡಿಸದೆ ಇದ್ದಲ್ಲಿ ಏನಾಗಲಿದೆ ಎಂಬುದರ ಬಗ್ಗೆ ಸಂಬಂಧಪಟ್ಟ ಇಲಾಖೆಯಾಗಲಿ ತೈಲ ಕಂಪೆನಿಗಳಾಗಲಿ ತಿಳಿಸಿಸಿಲ್ಲ.
ಆದರೆ ಸಾಮಾಜಿಕ ಜಾಲತಾಣದಲ್ಲಿ ಇ-ಕೆವೈಸಿ ಇದ್ದಲ್ಲಿ ವಾಣಿಜ್ಯ ದರದಲ್ಲಿ 1,400 ರೂ ಗಳನ್ನು ಗೃಹ ಬಳಕೆಯ ಅಡುಗೆ ಸಿಲಿಂಡರ್‌ಗೂ ಪಾವತಿಸಬೇಕಾಗುತ್ತದೆ ಎಂದು ಸುದ್ದಿ ಹಬ್ಬಿದೆ. ಇದನ್ನೆ ನಂಬಿ ಕಳೆದ ಕೆಲ ದಿನಗಳಿಂದ ತಾಲೂಕಿನ ಗ್ರಾಮೀಣ ಭಾಗದಿಂದ ವೃದ್ಧರು, ಮಹಿಳೆಯರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಇ-ಕೆವೈಸಿಗೆ ಭಾರತ್ ಗ್ಯಾಸ್ ಎಜೆನ್ಸಿ ಕಚೇರಿಗೆ ಮುಗ್ಗಿಬಿದ್ದಿದ್ದಾರೆ.
ಇನ್ನು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕ ಮಂಜುನಾಥ ರೇವಣಕರ ಕೂಡ ಸ್ಥಳಕ್ಕೆ ಭೇಟಿ ನೀಡಿ ಜನರಿಗೆ ಇಕೆವೈಸಿಗೆ ಯಾವುದೇ ನಿಗದಿತ ಸಮಯ ನೀಡಿಲ್ಲ ಎಂದು ತಿಳಿಸಿದ್ದರು. ಆದರೂ ಜನರು ಗ್ಯಾಸ್ ಏಜೆನ್ಸಿಗಳ ಮುಂದೆ ಈ ಕೆವೈಸಿ ಮಾಡಿಸಿಕ್ಕೊಳ್ಳಲ ಮುಗ್ಗಿಬಿದ್ದಿದ್ದಾರೆ.
ಡಿ. 31ರೊಳಗೆ ಇಕೆವೈಸಿ ಮಾಡದೇ ಇದ್ದರೆ ಸಬ್ಸಿಡಿ ಸಿಗುವುದಿಲ್ಲ ಎನ್ನುತ್ತಾರೆ. ಆದರೆ ನಮಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಅವರಿವರು ಹೇಳಿದ್ದನ್ನು ಕೇಳಿಕ್ಕೊಂಡು ಬಂದಿದ್ದೇವೆ. ಸಿಲೆಂಡರ್ ದರ ದುಬಾರಿಯಾಗಿದೆ. ಇದೀಗ ಮತ್ತೆ ಈ ರಿತಿ ಹೇಳಿ ನೀವು ಇ ಕೆವೈಸಿ ಮಾಡಿಸಿಲ್ಲ ಎಂದು 1,400 ರೂಗೆ ಗ್ಯಾಸ್ ನೀಡಿದರೆ ಬದುಕುವುದು ಕಷ್ಟ ಆದ್ದರಿಂದ ಕಷ್ಟವಾದರೂ ಸಾಲಿನಲ್ಲಿ ನಿಂತು ಮಾಡಿಸುತ್ತಿದ್ದೇವೆ ಎಂದು ಮಹಿಳೆಯರು ತಮ್ಮ ಕಷ್ಟ ತೋಡಿಕೊಂಡಿದ್ದಾರೆ.
ಗ್ಯಾಸ್ ಇ-ಕೆವೈಸಿ ಮಾಡಿಸುವುದರ ಜೊತೆಗೆ ಗ್ಯಾಸ್ ಏಜೆನ್ಸಿಗಳು 180 ರೂಗೆ ಗ್ಯಾಸ್ ಪೈಪ್ ಕೂಡ ನೀಡುತ್ತಿದ್ದಾರೆ. ಆದರೆ ನಮಗೆ ಅದರ ಅಳವಡಿಕೆಯ ಬಗ್ಗೆ ತಿಳಿಯುವುದಿಲ್ಲ. ಗ್ಯಾಸ್ ಸಿಲೆಂಡರ್ ಡಿಲೆವರಿ ಕೊಡುವ ಸಂದರ್ಭದಲ್ಲಿಯೇ ಇರುವ ಗ್ಯಾಸ್ ಪೈಲ್ ವ್ಯಾಲಿಡಿಟಿ ನೋಡಿ ಅದನ್ನು ಬದಲಿಸಿಕೊಡುವ ಕೆಲಸ ಆಗಬೇಕು. ಈ ರಿತಿ ಕೈಯಲ್ಲಿ ಕೊಟ್ಟು ಏನಾದರು ಅನಾಹುತಗಳಾದಲ್ಲಿ ಅದಕ್ಕೆ ಗ್ಯಾಸ್ ಎಜೆನ್ಸಿಗಳೇ ಹೊಣೆಯಾಗಬೇಕು. ಅಲ್ಲದೆ ಈಗ ಗೊಂದಲ ಸೃಷ್ಟಿಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎನ್ನುತ್ತಾರೆ ಗ್ಯಾಸ್ ಇಕೆವೈಸಿಗೆ ಬಂದ ಸಂಜಯ್ ಮಾಳ್ಸೇಕರ್.
ಗ್ಯಾಸ್ ಇ-ಕೆವೈಸಿ ಬಗ್ಗೆ ಗೊಂದಲ ಬೇಡ
ಜಿಲ್ಲೆಯ ಎಲ್ಲಾ ಗ್ಯಾಸ್ ಏಜನ್ಸಿಯ ಕಚೇರಿಗಳಲ್ಲಿ ಇ-ಕೆವೈಸಿ ಸಲುವಾಗಿ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಸಾಲು ಸಾಲು ನಿಂತಿರುವುದು ಕಂಡು ಬಂದಿದೆ. ಡಿ. 31 ರೊಳಗಡೆ ಇ ಕೆವೈಸಿ ಮಾಡಿಸಬೇಕು ಎಂಬ ವಿಷಯದ ಕುರಿತಂತೆ ಉತ್ತರಕನ್ನಡ ಜಿಲ್ಲೆಯ ನೋಡಲ್ ಸೇಲ್ಸ್ ಆಫೀಸರ್ ಅಭಿನವ ಕುಮಾರರಿಗೆ ಸ್ಪಷ್ಠಿಕರಣ ಕೇಳಿದ್ದು, ಸರ್ಕಾರವು ಡಿ. 31 ಕೊನೆಯ ದಿನ ಎಂದು ನಿಗದಿ ಮಾಡಿಲ್ಲ ಎಂದು ತಿಳಿಸಿದ್ದಾರೆ.
ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಗ್ಯಾಸ್ ಎಜನ್ಸಿಯ ಕಚೇರಿ ಎದುರುಗಡೆ ಸಾಲು ಮಾಡಿ ನಿಂತಿರುವುದನ್ನು ತಪ್ಪಿಸಲು, ಗ್ರಾಹಕರ ಮನೆಯಲ್ಲಿ ಗ್ಯಾಸ್ ಹೋಂ ಡೆಲಿವರಿ ನೀಡುವ ಸಂದರ್ಭದಲ್ಲಿ ಇ-ಕೆವೈಸಿ ಮಾಡಿಸುವುದು ಹಾಗೂ ಕೇವಲ ತೊಂದರೆದಾಯಕ ಪ್ರಕರಣಗಳಲ್ಲಿ ಮಾತ್ರ ಕಚೇರಿಗಳಲ್ಲಿ ಮಾಡಲು ಅನಿಲ ವಿತರಕರಿಗೆ ತಿಳಿಸುತ್ತೇವೆ ಎಂದು ಹೇಳಿದ್ದಾರೆ. ಆದ್ದರಿಂದ ಡಿಸೆಂಬರ್ 31 ರೊಳಗಾಗಿ ಇ-ಕೆವೈಸಿ ಮಾಡಿಸಬೇಕು ಎನ್ನುವ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಹರದಾಡುತ್ತಿರುವ ವಂದತಿಗಳಿಗೆ ಗ್ಯಾಸ ಬಳಕೆದಾರರು ಗೊಂದಲಕ್ಕೊಳಗಾಗಬಾರದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.












Click it and Unblock the Notifications