ಉತ್ತರ ಕನ್ನಡದ ವಿವಿಧ ರಸ್ತೆ ಅಭಿವೃದ್ಧಿಗೆ ಅನುದಾನ ಮಂಜೂರಾತಿ: ವಿವರ
ಕಾರವಾರ, ಮಾರ್ಚ್ 20: ಉತ್ತರ ಕನ್ನಡ ಜಿಲ್ಲೆಯ ವಿವಿಧ ರಸ್ತೆಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಅಸ್ತು ಎಂದಿದೆ. ಉತ್ತರ ಕನ್ನಡದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿದ್ದು, ಜಿಲ್ಲೆಯ ವಿವಿಧ ರಸ್ತೆ ಅಭಿವೃದ್ಧಿಗೆ ಅನುದಾನ ಪಡೆದಿದ್ದಾರೆ.
ಕೇಂದ್ರ ಸರ್ಕಾರದಿಂದ ಉತ್ತರ ಕನ್ನಡದ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಅಂಕೋಲಾದ ವಿಠ್ಠಲ ಘಾಟ್, ಭಟ್ಕಳ ತಾಲೂಕಿನ ಮೂಡ ಭಟ್ಕಳ ಮತ್ತು ಕಾಯ್ಕಿಣಿ ಬಳಿ ಅಂಡರ್‌ಪಾಸ್ ನಿರ್ಮಾಣಕ್ಕೆ 47.48 ಕೋಟಿ ರೂಪಾಯಿ ಮಂಜೂರಾತಿ ದೊರಕಿದೆ. ಅಲ್ಲದೇ ಕುಮಟಾ ತಾಲೂಕಿನ ಹೊನ್ಮಾಂವ್ ಮತ್ತು ಮಾನೀರ ಸಮೀಪ ಹೊಸ ಸೇತುವೆ ನಿರ್ಮಾಣಕ್ಕೆ 9.1 ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಲಾಗಿದೆ.

ಈ ಬಗ್ಗೆ ಸಂಸದ ವಿಶ್ವೇಶ್ವರ ಹೆಗೆಡೆ ಕಾಗೇರಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸವಿವರವಾಗಿ ಹಂಚಿಕೊಂಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಸಾರಿಗೆ ಸಂಪರ್ಕ ಬಲಪಡಿಸಲು ನೆರವಾಗುವ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ-66ರ ಕಾಮಗಾರಿಗಳು ವೇಗ ಪಡೆದುಕೊಳ್ಳಲು ಸಂಸದನಾಗಿ ನಾನು ನಿರಂತರ ಪ್ರಯತ್ನ ನಡೆಸಿದ್ದೇನೆ. ಕಾಲಕಾಲಕ್ಕೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಹೆದ್ದಾರಿ ಕಾಮಗಾರಿ ಸಮಪರ್ಕವಾಗಿ ಮುಂದುವರೆಯಲು ನಿರ್ದೇಶನ ನೀಡಿದ್ದೇನೆ.
ಸಂಸದನಾಗಿ ಆಯ್ಕೆಯಾದ ಸಂದರ್ಭದಲ್ಲಿ ಜನರನ್ನು ಭೇಟಿ ಮಾಡಿದ ವೇಳೆ ಕರಾವಳಿ ಭಾಗದ ಜನರು ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಆಗಬೇಕಾದ ಕೆಲ ಮಾರ್ಪಾಟುಗಳ ಬಗ್ಗೆ ನನ್ನ ಗಮನಕ್ಕೆ ತಂದಿದ್ದರು. ಅಂಕೋಲಾ ತಾಲೂಕಿನ ವಿಠ್ಠಲಘಾಟ್, ಭಟ್ಕಳ ತಾಲೂಕಿನ ಮೂಡಭಟ್ಕಳ, ಕಾಯ್ಕಿಣಿಯಲ್ಲಿ ಅಂಡರ್‌ಪಾಸ್ ನಿರ್ಮಾಣ ಮಾಡಿಸುವಂತೆ ಒತ್ತಾಯಿಸಿದ್ದರು. ಕುಮಟಾ ತಾಲೂಕಿನ ಜನರು ಹೊನ್ಮಾಂವ್, ಮಾನೀರ ಸಮೀಪ ಹಳೆಯ ಸೇತುವೆ ತೆರವುಗೊಳಿಸಿ, ಹೊಸ ಸೇತುವೆ ನಿರ್ಮಿಸಿಕೊಡಲು ಮನವಿ ಮಾಡಿದ್ದರು.
ಸಂಸದನಾಗಿ ಜನರ ಸಮಸ್ಯೆಗೆ ಸ್ಪಂದಿಸುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದೇನೆ. ಜನರ ಬೇಡಿಕೆಗಳನ್ನು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರ ಗಮನಕ್ಕೆ ತಂದಿದ್ದೆ. ಅಲ್ಲದೇ ಜನರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದ್ದೆ. ಅದರ ಫಲವಾಗಿ ಕೇಂದ್ರ ಸಚಿವರಿಂದ ಸ್ಪಂದನೆಯೂ ಸಿಕ್ಕಿತು.

ಚತುಷ್ಪಥ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಅಂಕೋಲಾದ ವಿಠ್ಠಲ ಘಾಟ್, ಭಟ್ಕಳ ತಾಲೂಕಿನ ಮೂಡಭಟ್ಕಳ ಮತ್ತು ಕಾಯ್ಕಿಣಿ ಬಳಿ ಅಂಡರ್‌ಪಾಸ್ ನಿರ್ಮಾಣಕ್ಕೆ 47.48 ಕೋಟಿ ರೂಪಾಯಿ ಮಂಜೂರಾತಿ ದೊರಕಿದ್ದು, ಸದ್ಯದಲ್ಲಿಯೇ ಟೆಂಡರ್ ಪ್ರಕ್ರಿಯೆ ನಡೆಯಲಿದೆ. ಕುಮಟಾ ತಾಲೂಕಿನ ಹೊನ್ಮಾಂವ್ ಮತ್ತು ಮಾನೀರ ಸಮೀಪ ಹೊಸ ಸೇತುವೆ ನಿರ್ಮಾಣಕ್ಕೆ 9.1 ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಲಾಗಿದೆ. ಕಾಮಗಾರಿಯ ಟೆಂಡರ್ ಪ್ರಕ್ರಿಯೆಗಳನ್ನೂ ಅಂತಿಮಗೊಳಿಸಲಾಗಿದೆ ಎಂದು ಜನತೆಗೆ ತಿಳಿಸಬಯಸುತ್ತೇನೆ ಎಂದರು.
ಇದಲ್ಲದೇ ಕಾರವಾರದಲ್ಲಿ ಕಳೆದ ವರ್ಷದ ಆಗಸ್ಟ್ ತಿಂಗಳಿನಲ್ಲಿ ಕುಸಿದು ಬಿದ್ದಿದ್ದ ಕಾಳಿ ಸೇತುವೆಯ ಅವಶೇಷಗಳನ್ನು ತ್ವರಿತಗತಿಯಲ್ಲಿ ತೆರವುಗೊಳಿಸಲಾಗಿದೆ. ಇಲ್ಲಿಯೂ ಹೊಸ ಸೇತುವೆ ನಿರ್ಮಾಣಕ್ಕೆ ಆದಷ್ಟು ಶೀಘ್ರದಲ್ಲಿ ಮಂಜೂರಾತಿ ಪಡೆದುಕೊಳ್ಳಲು ಎಲ್ಲಾ ಪ್ರಯತ್ನ ನಡೆಸಲಾಗುತ್ತದೆ ಎಂದು ಸಂಸದರು ತಿಳಿಸಿದ್ದಾರೆ.
ಇನ್ನು ಜಿಲ್ಲೆಯ ಜನರ ಆಶೋತ್ತರಗಳಿಗೆ ಕೇಂದ್ರ ಸರ್ಕಾರದ ಭಾಗವಾಗಿ ನಾನು ಸದಾಕಾಲ ಸ್ಪಂದಿಸುತ್ತಿದ್ದು, ಕೇಂದ್ರ ಸರ್ಕಾರದ ಚತುಷ್ಪಥ ಹೆದ್ದಾರಿ ಕಾಮಗಾರಿ ಯೋಜನೆ ಪೂರ್ಣರೂಪದಲ್ಲಿ ಸಾಕಾರಗೊಳ್ಳಲು ಜನತೆಯ ಸಹಕಾರ ಕೋರುತ್ತೇನೆ. ಅದರಂತೆಯೆ ಭೂಸ್ವಾಧೀನ ಪ್ರಕ್ರಿಯೆ ಸೇರಿದಂತೆ ರಾಜ್ಯ ಸರಕಾರದಿಂದ ಅಗತ್ಯ ಸಹಕಾರ ಕಾಮಗಾರಿ ಮುಂದುವರಿಯಲು ಅಗತ್ಯವಿದ್ದು, ಈ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಕೂಡ ಸಹಕಾರ ನೀಡಲಿ ಎಂದು ಆಶಿಸುತ್ತೇನೆ ಎಂದು ಹೇಳಿದ್ದಾರೆ.












Click it and Unblock the Notifications