Bhatkal Constituency Analysis: ಹಾಲಿ ಶಾಸರಿಗೆ ಸ್ವಪಕ್ಷೀಯರಿಂದಲೇ ವಿರೋಧ, ಶಿವನ ಕೃಪೆ ಯಾರ ಮೇಲೆ?
ಭಟ್ಕಳ ಮಾರ್ಚ್ 20: ಕನ್ನಡದ ಕರ್ನಾಟಕ ಶಬ್ದಾನುಶಾಸನ ಬರೆದ ಜೈನ ಮುನಿ ಭಟ್ಟಾಕಳಂಕನ ಊರು ಭಟ್ಕಳ. ಜೈನರ ನೆಲೆಬೀಡಾಗಿದ್ದ ಭಟ್ಕಳ ಕ್ಷೇತ್ರ ಕರ್ನಾಟಕದ ಪ್ರಸಿದ್ಧ ಐತಿಹಾಸಿಕ ತಾಣಗಳಲ್ಲಿ ಒಂದಾಗಿದೆ. ವಿಶ್ವದಲ್ಲೇ ಅತೀ ದೊಡ್ಡ ಶಿವನ ಮೂರ್ತಿ ಎಂದು ಪ್ರಖ್ಯಾತಿ ಪಡೆದಿರುವ ಮುರುಡೇಶ್ವರ ದೇವಸ್ಥಾನ ಭಟ್ಕಳದಲ್ಲಿದೆ.
ಪ್ರತಿ ನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡುವ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಚಂದ್ರಗಿರಿ ಬೆಟ್ಟ, 24 ತೀರ್ಥಂಕರರ ವಿಗ್ರಹ, ಪದ್ಮಾವತಿ ದೇವಿಯ ದೇವಾಲಯ ಐತಿಹಾಸಿಕ ಪ್ರವಾಸಿ ತಾಣವಾಗಿದೆ. ಪ್ರವಾಸಿ ತಾಣವಾಗಿರುವ ಭಟ್ಕಳದ ಸದ್ಯದ ರಾಜಕೀಯ ವಿಶ್ಲೇಷಣೆ ಇಲ್ಲಿದೆ.

ಹಿಂದೂ ಮುಸ್ಲಿಂ ನೆಲೆಸಿರುವ ಭಟ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯದ ತಜೀಂ ಸಂಸ್ಥೆಯ ನಿರ್ಧಾರ, ಅಭ್ಯರ್ಥಿಗಳ ಸೋಲು ಗೆಲುವಿಗೆ ಕಾರಣವಾಗುವ ಸಾಧ್ಯತೆಗಳೇ ಹೆಚ್ಚಾಗಿದೆ. ಪ್ರಬಲ ಹಿಂದೂತ್ವದ ಪ್ರಯೋಗ ಶಾಲೆಯಂತಿರುವ ಭಟ್ಕಳದಲ್ಲಿ ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದು ಬೀಗಿದ್ದ ಸುನೀಲ್ ನಾಯ್ಕ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಸಜ್ಜಾಗುವ ವೇಳೆಗೆ ಸ್ವಪಕ್ಷೀಯರಿಂದಲೇ ಟಿಕೆಟ್ ನೀಡುವುದಕ್ಕೆ ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ.
ಇನ್ನು ಬಿಜೆಪಿ ವಿರುದ್ಧ ಕಡಿಮೆ ಅಂತರದ ಮತಗಳಿಂದ ಪರಾಭವಗೊಂಡಿದ್ದ ಮಂಕಾಳು ವೈದ್ಯ ಈ ಬಾರಿ ಕಾಂಗ್ರೆಸ್‌ನಿಂದ ಬಹುತೇಕ ಟಿಕೆಟ್ ಪಡೆಯುವುದು ನಿಶ್ಚಯವಾಗಿದೆ. ಇನ್ನು ಈ ಬಾರಿ ತಜೀಂ ಸಂಸ್ಥೆಯ ಅಧ್ಯಕ್ಷ, ಜೆಡಿಎಸ್ ಮುಖಂಡ ಇನಾಯಿತುಲ್ಲಾ ಶಾಬಂದ್ರಿ ಜೆಡಿಎಸ್ ನಿಂದ ಮತ್ತೊಮ್ಮೆ ಸ್ಫರ್ಧೆಗೆ ಮುಂದಾಗಿದ್ದು, ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆ ದಟ್ಟವಾಗಿದೆ.
ಕಳೆದ ಬಾರಿ ಹಿಂದೂತ್ವದ ಅಲೆ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿತ್ತು. ಮಂಕಾಳು ವೈದ್ಯ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಅನುದಾನ ತಂದವರ ಸಾಲಿನಲ್ಲಿ ಗುರುತಿಸಿಕೊಂಡಿದ್ದರೂ ಹಿಂದೂತ್ವದ ಅಲೆಯಲ್ಲಿ ಅದು ಗೌಣವಾಗಿತ್ತು. ಆದರೆ ಸೋತರು ಜನರೊಂದಿಗೆ ಬೆರೆತು ಓಡಾಟ ನಡೆಸಿರುವ ಮಂಕಾಳು ವೈದ್ಯರು ಮತ್ತೊಮ್ಮೆ ಬಿಜೆಪಿ ಜೆಡಿಎಸ್ ಎದುರಿಸಲು ಮುಂದಾಗಿದ್ದಾರೆ.
ಇನ್ನು ಸುನಿಲ್ ನಾಯ್ಕ ಕೂಡ ಒಂದಿಷ್ಟು ಅಭಿವೃದ್ಧಿ ಕಾರ್ಯ ಕೈಗೊಂಡು ಇದೀಗ ಮತ್ತೊಮ್ಮೆ ಸ್ಪರ್ಧೆಗೆ ಮುಂದಾಗಿದ್ದಾರೆ. ಆದರೆ ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆ 2023ರಲ್ಲಿ ಅವರ ಗೆಲುವು ಅಷ್ಟು ಸುಲಭವಾಗಿಲ್ಲ. ಸ್ವಪಕ್ಷಿಯರೇ ಸುನೀಲ್ ನಾಯ್ಕ ಶಾಸಕರು ಅಯೋಗ್ಯ ಎಂದು ಅವರಿಗೆ ಟಿಕೆಟ್ ನೀಡಿದರೆ ತಮ್ಮ ಬೆಂಬಲ ಬೇರೆ ಅಭ್ಯರ್ಥಿಗೆ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಇದು ಹೈಕಮಾಂಡ್‌ವರೆಗೂ ತಲುಪುವ ಸಾಧ್ಯತೆ ಇದ್ದು, ಟಿಕೆಟ್ ಗಿಟ್ಟಿಸಿಕೊಳ್ಳುವುದೇ ಸುನೀಲ್ ನಾಯ್ಕ್‌ಗೆ ಬಿಸಿತುಪ್ಪವಾಗಿದೆ.
ಇನ್ನು ಒಗ್ಗಟ್ಟಾಗಿರುವ ಮುಸ್ಲಿಂ ಸಮುದಾಯದ ಮತಗಳನ್ನು ನಂಬಿ ಇನಾಯಿತುಲ್ಲಾ ಸಾಬಂದ್ರಿ ಮತ್ತೊಮ್ಮೆ ಜೆಡಿಎಸ್‌ನಿಂದ ಸ್ಪರ್ಧೆಗೆ ಮುಂದಾಗಿದ್ದಾರೆ. ತಜೀಂ ಅಧ್ಯಕ್ಷರು ಅವರೇ ಆಗಿರುವ ಕಾರಣ ಈ ಬಾರಿ ಮುಸ್ಲಿಂ ಹಾಗೂ ಒಂದಿಷ್ಟು ಇತರೆ ಪಕ್ಷಗಳ ಮತಗಳೊಂದಿಗೆ ಗೆಲ್ಲುವ ಲೆಕ್ಕಚಾರದಲ್ಲಿದ್ದಾರೆ ಎನ್ನಲಾಗಿದೆ.
ಆದರೆ ಕ್ಷೇತ್ರದಲ್ಲಿ ಹಿಂದೂ ಮುಸ್ಲಿಂ ಪ್ರಭಲವಾಗಿರುವ ಕಾರಣ ತಜೀಂ ಯಾರಿಗೆ ಬೆಂಬಲ ನೀಡುವುದೋ ಅದರ ತದ್ವಿರುದ್ಧ ಹಿಂದೂಮತಗಳು ಬೀಳಲಿದೆ. ಆದರೆ ಈ ಬಾರಿ ಮೂರು ಪಕ್ಷಗಳಿಂದ ಸ್ಪರ್ಧೆ ಮಾಡಲಿರುವ ಕಾರಣ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆ ದಟ್ಟವಾಗಿದೆ.
ಭಟ್ಕಳ ವಿಧಾನಸಭಾ ಕ್ಷೇತ್ರದ ಮತದಾರರ ವಿವರ
ಒಟ್ಟು ಮತದಾರರು-2,19,876
ಪುರುಷರು-1,11,740
ಮಹಿಳೆಯರು-1,08,136
2018 ಭಟ್ಕಳ ವಿಧಾನಸಭಾ ಚುನಾವಣಾ ಫಲಿತಾಂಶ
2018 ವಿಧಾನಸಭಾ ಚುನಾವಣೆಯಲ್ಲಿ ಸುನೀಲ್ ನಾಯ್ಕ, ಬಿಜೆಪಿಯಿಂದ ಸ್ಪರ್ಧಿಸಿ 83,172 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮಂಕಾಳು ವೈದ್ಯ 77,242 ಮತಗಳನ್ನು ಪಡೆದಿದ್ದರು.












Click it and Unblock the Notifications