KFD Death: ಮಂಗನ ಕಾಯಿಲೆಗೆ ಸಾವಿನ ಸರಣಿ: ಉತ್ತರ ಕನ್ನಡದಲ್ಲಿ ಮತ್ತೊಂದು ಸಾವು
ಉತ್ತರ ಕನ್ನಡ, ಫೆಬ್ರವರಿ 26: ಮಂಗನ ಕಾಯಿಲೆ ರಾಜ್ಯಾದ್ಯಂತ ತನ್ನ ಕಬಂದ ಬಾಹು ಚಾಚುತ್ತಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ ಎರಡನೇ ಸಾವು ಸಂಭವಿಸಿದೆ. ಮಂಗನ ಕಾಯಿಲೆಯ ಆತಂಕ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸೋಂಕಿತರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ.
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕೊರ್ಲಕೈ ಗ್ರಾಮದ 60 ವರ್ಷದ ವೃದ್ಧೆ ಮಂಗನ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ. 20 ದಿನಗಳಿಂದ ಮಂಗನ ಕಾಯಿಲೆಯಿಂದ ಬಳಲುತ್ತಿದ್ದ ವೃದ್ಧೆಗೆ ಜ್ವರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿತ್ತು. ಜ್ವರ ತೀವ್ರವಾದ ಕಾರಣ ಮೂರು ದಿನಗಳ ಹಿಂದೆ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ನಿನ್ನೆ ಭಾನುವಾರ ರಾತ್ರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಮಂಗನ ಕಾಯಿಲೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ವರ್ಷದ ಎರಡನೇ ಸಾವಾಗಿದ್ದು, ಐದು ದಿನಗಳ ಹಿಂದೆ ಸಿದ್ದಾಪುರ ತಾಲೂಕಿನ ಮಹಿಳೆಯೊಬ್ಬರು ಸಾವನಪ್ಪಿದ್ದರು. ಸದ್ಯ ಸಿದ್ದಾಪುರ ತಾಲೂಕಿನಲ್ಲಿ ಮಂಗನ ಕಾಯಿಲೆಯಿಂದ 43 ಮಂದಿ ಬಳಲುತ್ತಿದ್ದಾರೆ.
ಚಿಕ್ಕಮಗಳೂರಿನಲ್ಲಿ ಹೆಚ್ಚಿದ ಮಂಗನ ಕಾಯಿಲೆ
ಕಾಫಿನಾಡಿನಲ್ಲೂ ಮಂಗನ ಕಾಯಿಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕೊಪ್ಪ ತಾಲೂಕಿನಲ್ಲಿ ನುಗ್ಗಿ ಗ್ರಾಮ ಪಂಚಾಯಿತಿಯ ಎರಡು ಹಳ್ಳಿಗಳು ಮಂಗನ ಕಾಯಿಲೆಯ ಮಿತಿ ಮೀರುತ್ತಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಟ್ಟು 26 ಜನರು ಈ ಕಾಯಿಲೆಯಿಂದ ಬಳಲುತ್ತಿದ್ದಾರೆ.
ಇತ್ತೀಚಿಗೆ ಮಂಗನ ಕಾಯಿಲೆಗೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಬೇಗಾನೆ ಗ್ರಾಮದ 79 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದರು. ಕೊಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಅವರು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆ ದಾಖಲಾಗಿದ್ದರು. ಆದರೆ ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದರು.
ಇನ್ನು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಅರಳಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಪ್ಪನಮನೆ ಗ್ರಾಮದ 18 ವರ್ಷದ ಯುವತಿ ಮಂಗನ ಕಾಯಿಲೆಯಿಂದ ಮೃತಪಟ್ಟಿದ್ದರು. ಇದು ಶಿವಮೊಗ್ಗ ಜಿಲ್ಲೆಯಲ್ಲಿ ಮಂಗನ ಕಾಯಿಲೆಗೆ ಈ ವರ್ಷ ಮೃತಪಟ್ಟ ಮೊದಲ ಪ್ರಕರಣವಾಗಿದೆ.












Click it and Unblock the Notifications