ಯುವನಿಧಿ ಫಲಾನುಭವಿ ಪ್ರತಿ ತಿಂಗಳು ಪ್ರಮಾಣ ಪತ್ರ ಸಲ್ಲಿಕೆ ಕಡ್ಡಾಯ
ಬೆಂಗಳೂರು, ಜುಲೈ 22: ಕರ್ನಾಟಕದ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವ 5 ಗ್ಯಾರಂಟಿ ಯೋಜನೆಗಳಲ್ಲಿ 'ಯುವನಿಧಿ'ಯೂ ಒಂದು. ಆದರೆ 'ಯುವನಿಧಿ' ಯೋಜನೆಯ ಫಲಾನುಭವಿಗಳು ಪ್ರತಿ ತಿಂಗಳ 25ರೊಳಗೆ ಪ್ರಮಾಣ ಪತ್ರ ಸಲ್ಲಿಕೆ ಮಾಡುವುದು ಕಡ್ಡಾಯವಾಗಿದೆ.
ಈಗಾಗಲೇ ಈ ಯೋಜನೆಯ ಪ್ರಯೋಜನ ಪಡೆಯುತ್ತಿರುವ ಫಲಾನುಭವಿಗಳು ಪ್ರತಿ ತಿಂಗಳು 25ರೊಳಗೆ ಸ್ವಯಂ ದೃಢೀಕೃತ ನಿರುದ್ಯೋಗಿ ಪ್ರಮಾಣ ಪತ್ರವನ್ನು ಸೇವಾಸಿಂಧು ಪೋರ್ಟಲ್ ಮೂಲಕ ಅಪ್‍ಲೋಡ್ ಮಾಡುವುದು ಕಡ್ಡಾಯ.

ಯಾವುದೇ ತಿಂಗಳು ತಮಗೆ ನಿರುದ್ಯೋಗ ಭತ್ಯೆ ಸಂದಾಯವಾಗದಿದ್ದರೆ ತಮ್ಮ ಮೂಲ ದಾಖಲೆಗಳನ್ನು ಕಚೇರಿಗಳಲ್ಲಿ ಪರಿಶೀಲನೆಗೆ ಒಳಪಡಿಸಬೇಕು ಎಂದು ಕರೆ ನೀಡಲಾಗಿದೆ. ಡಿಡಿಪಿಐ ಕಚೇರಿಯಲ್ಲಿ ಎಸ್‍ಎಸ್‍ಎಲ್‍ಸಿ ಪ್ರಮಾಣ ಪತ್ರ, ದ್ವಿತೀಯ ಪಿಯುಸಿ ಪ್ರಮಾಣ ಪತ್ರ ಹಾಗೂ ಡಿಪ್ಲೋಮಾ ಮತ್ತು ಪದವಿ ಪ್ರಮಾಣ ಪತ್ರಗಳನ್ನು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಗೆ ಭೇಟಿ ನೀಡಿ, ದಾಖಲೆಗಳನ್ನು ಪರಿಶೀಲನೆಗೆ ಒಳಪಡಿಸಬೇಕು.
ನೋಂದಣಿಗೆ ಅರ್ಹತೆಗಳು: 'ಯುವನಿಧಿ' ಯೋಜನೆಯ ಫಲಾನುಭವಿಯಾಗಲು ಈಗಲೂ ನೋಂದಣಿ ಮಾಡಲು ಅವಕಾಶವಿದೆ. ರಾಜ್ಯ ಸರ್ಕಾರದ ಈ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಯಡಿ ಪದವಿ ಉತ್ತೀರ್ಣರಾದವರಿಗೆ ರೂ. 3,000 ಮತ್ತು ಡಿಪ್ಲೋಮಾ ಉತ್ತೀರ್ಣರಾದವರಿಗೆ ರೂ. 1,500 ಅನ್ನು ಪ್ರತಿ ತಿಂಗಳು ನೀಡಲಾಗುತ್ತದೆ.
ಯೋಜನೆಯ ಪ್ರಯೋಜನವನ್ನು ಪಡೆಯಲು ಸೇವಾ ಸಿಂಧು ಪೋರ್ಟಲ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು. ಯೋಜನೆಯ ಫಲಾನುಭವಿಯಾಗಲು 2023ರಲ್ಲಿ ಪದವಿ, ಡಿಪ್ಲೋಮಾ ಉತ್ತೀರ್ಣರಾಗಿಬೇಕು.
ಪದವಿ, ಡಿಪ್ಲೋಮಾ ನಂತರ ಕನಿಷ್ಠ 6 ತಿಂಗಳ ಅವಧಿಯವರೆಗೆ ಸರ್ಕಾರಿ, ಖಾಸಗಿ ಉದ್ಯೋಗ ಹೊಂದಿರಬಾರದು. ಸ್ವಯಂ ಉದ್ಯೋಗ ಹೊಂದಿರಬಾರದು. ಉನ್ನತ ವಿದ್ಯಾಭ್ಯಾಸ ಮುಂದುವರಿಸಿರಬಾರದು. ಕರ್ನಾಟಕದಲ್ಲಿ ವಾಸವಿರುವವರು (ಕನಿಷ್ಠ 6 ವರ್ಷಗಳವರೆಗೆ ಪದವಿ, ಡಿಪ್ಲೋಮಾ ತನಕ ಅಧ್ಯಯನ ಮಾಡಿರಬೇಕು).
ಈ ಯೋಜನೆಯ ಅನ್ವಯ ತಪ್ಪು ಘೋಷಣೆ ಅಥವಾ ಉದ್ಯೋಗ ಪಡೆದಿರುವುದನ್ನು ಘೋಷಿಸಲು ವಿಫಲವಾದರೆ ದಂಡ ವಿಧಿಸಲಾಗುತ್ತದೆ ಮತ್ತು ಪಾವತಿಸಿದ ಮೊತ್ತವನ್ನು ಕಾನೂನಿನ ಪ್ರಕಾರ ವಸೂಲಿ ಮಾಡಲಾಗುವುದು ಎಂದು ಎಚ್ಚರಿಸಲಾಗಿದೆ. ಅಲ್ಲದೇ ಅಭ್ಯರ್ಥಿಯು ನಿರುದ್ಯೋಗಿ ಎಂದು ಪ್ರತಿ ತಿಂಗಳು ಕಡ್ಡಾಯವಾಗಿ ದೃಢೀಕರಿಸಬೇಕು.
ಸೇವಾ ಸಿಂಧು ಪೋರ್ಟಲ್‌ನಲ್ಲಿ ಉದ್ಯೋಗಿ ಅಥವಾ ನಿರುದ್ಯೋಗಿಯಾಗಿರುವುದನ್ನು ನಿಗದಿತ ನಮೂನೆಯಲ್ಲಿ ಪ್ರತಿ ತಿಂಗಳ 25ರೊಳಗೆ ಆಧಾರ್ ಆಧಾರಿತ ಒಟಿಪಿ ಮೂಲಕ ಘೋಷಣೆ ಮಾಡತಕ್ಕದ್ದು. ಸ್ವೀಕೃತವಾದ ಘೋಷಣೆಯ ಆಧಾರದ ಮೇಲೆ, ಮುಂದಿನ ತಿಂಗಳ ಭತ್ಯೆಯನ್ನು ಪಾವತಿ ಮಾಡಲಾಗುತ್ತದೆ. ಪ್ರತಿ ತಿಂಗಳು ಘೋಷಣೆ ಮಾಡದಿದ್ದಲ್ಲಿ 90 ದಿನಗಳ ನಂತರ ಫಲಾನುಭವಿಯನ್ನು ನಿಷ್ಕ್ರಿಯಗೊಳಿಸಲಾಗುತ್ತದೆ.
2024ರ ಜನವರಿ 11ರಂದು ಕರ್ನಾಟಕ ಸರ್ಕಾರ ಶಿವಮೊಗ್ಗ ನಗರದ ಫ್ರೀಡಂಪಾರ್ಕ್‌ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ 'ಯುವನಿಧಿ' ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ಯೋಜನೆಯಡಿ ಫಲಾನುಭವಿಗಳ ಖಾತೆಗೆ ನೇರ ನಗದು ವರ್ಗಾವಣೆ ಮೂಲಕ ಹಣ ಸಂದಾಯವಾಗಲಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ್ದ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್, "ನಮ್ಮ ಸರ್ಕಾರದ ಯುವನಿಧಿ ಗ್ಯಾರಂಟಿಯು ನಿರುದ್ಯೋಗಿಗಳ ಪಾಲಿಗೆ ವರದಾನವಾಗಿದೆ. ಯುವ ಜನಾಂಗದ ಸ್ಫೂರ್ತಿಯಾಗಿರುವ ಸ್ವಾಮಿ ವಿವೇಕಾನಂದರ ಜಯಂತಿಯಂದು ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆಗೆ ಚಾಲನೆ ನೀಡಿದ್ದು ವಿಶೇಷ. ನಿರುದ್ಯೋಗಿಗಳಿಗೆ ಕೇವಲ ಭತ್ಯೆ ಕೊಡುವುದು ಮಾತ್ರವಲ್ಲ, ಕೆಲಸಕ್ಕಾಗಿ ಸೂಕ್ತ ತರಬೇತಿ ನೀಡಲಾಗುತ್ತದೆ. ಈ ಮೂಲಕ ಯವಕರ ಭವಿಷ್ಯ ರೂಪಿಸುವುದು ನಮ್ಮ ಸಂಕಲ್ಪ" ಎಂದು ಹೇಳಿದ್ದರು.












Click it and Unblock the Notifications