Yediyurappa on Budget: ಬರೀ ತೆರಿಗೆ ಹೊರ ಇರುವ ಬಜೆಟ್; ಸಿದ್ದರಾಮಯ್ಯ ಬಜೆಟ್ ಕುರಿತು ಬಿ ಎಸ್ ಯಡಿಯೂರಪ್ಪ ಹೇಳಿದ್ದೇನು?
ಬೆಂಗಳೂರು, ಜುಲೈ 07: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮಂಡಿಸಿರುವ ಪ್ರಸ್ತುತ ಸಾಲಿನ ಬಜೆಟ್ ರಾಜ್ಯದ ಸಮಗ್ರ ಅಭಿವೃದ್ಧಿ ಕಲ್ಪನೆ ಇಲ್ಲದ ತೆರಿಗೆ ಹೊರ ಇರುವ ಬಜೆಟ್. ರೂ. 85000 ಕೋಟಿ ಸಾಲ ಮಾಡುತ್ತೇನೆ ಎಂದು ಹೇಳಿದ್ದಾರೆ. ಈ ಸಾಲದ ಹೊರ ರಾಜ್ಯದ ಜನತೆಯ ಮೇಲೆ ಬೀಳುತ್ತದೆ ಎಂದು ಸಿದ್ದರಾಮಯ್ಯ ಬಜೆಟ್ ವಿರುದ್ದ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಕಿಡಿಕಾರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಬಜೆಟ್ ಮಂಡಿಸಿದ ಮುಖ್ಯಮಂತ್ರಿಗಳು ತಮ್ಮ ಮೂರು ಗಂಟೆಗಳ ಸುದೀರ್ಘ ಭಾಷಣದಲ್ಲಿ ಕೆಲವು ಸಮಯವನ್ನು ಕೇಂದ್ರ ಬಿಜೆಪಿ ಸರ್ಕಾರ ಮತ್ತು ರಾಜ್ಯದಲ್ಲಿ ಈ ಹಿಂದೆ ಇದ್ದ ಬಿಜೆಪಿ ಸರ್ಕಾರದ ಆರ್ಥಿಕ ನೀತಿಗಳನ್ನು ಅನಗತ್ಯವಾಗಿ ಟೀಕಿಸಲು ಬಳಸಿಕೊಂಡರು. ಹಿಂದಿನ ನನ್ನ ನೇತ್ರತ್ವದ ಮತ್ತು ಬಸವರಾಜ ಬೊಮ್ಮಾಯಿ ಅವರ ನೇತ್ರತ್ವದಲ್ಲಿ ಸಾಧಿಸಿದ ಪ್ರಗತಿ ಮತ್ತು ಆರ್ಥಿಕ ದೃಢತೆಯನ್ನು ಮರೆಮಾಚಿ ಇಲ್ಲದ ವೈಫಲ್ಯವನ್ನು ಎತ್ತಿ ಆಡುವ ಮೂಲಕ ಬಜೆಟ್ ಮಂಡನೆಯ ಪವಿತ್ರ ಸಂದರ್ಭವನ್ನು ಕೀಳು ಮಟ್ಟದ ರಾಜಕೀಯಕ್ಕೆ ಬಳಸಿಕೊಂಡಿದ್ದು ಖಂಡನೀಯ ಎಂದು ಹೇಳಿದ್ದಾರೆ.

ಪ್ರಥಮ ಸಚಿವ ಸಂಪುಟದಲ್ಲಿಯೇ ಎಲ್ಲ ಗ್ಯಾರೆಂಟಿಗಳನ್ನು ಜಾರಿಗೆ ತರುತ್ತೇವೆ ಎಂದು ಹೇಳಿದ ಕಾಂಗ್ರೆಸ್ ಸರ್ಕಾರ ಇಂದು ಈ ಬಜೆಟ್ ನಲ್ಲಿ ಈ ಯೋಜನೆಗಳನ್ನು ಜಾರಿಗೆ ತರಲು ಇಡೀ ಆರ್ಥಿಕ ವರ್ಷ ಬೇಕಾಗಬಹುದು ಎಂದು ಅಧಿಕೃತವಾಗಿ ಹೇಳಿದಂತಾಗಿದೆ. ಅವುಗಳ ಜಾರಿಗೆ ಅಗತ್ಯ ಇರುವ ಸುಮಾರು 52 ಸಾವಿರ ಕೋಟಿ ರೂಗಳನ್ನು ಹೇಗೆ ಹೊಂದಿಸಲಾಗುವುದು ಎಂಬ ಸ್ಪಷ್ಟ ಚಿತ್ರಣವನ್ನು ಅವರು ನೀಡಿಲ್ಲ.
ಜನರಿಗೆ ತಮ್ಮ ಸರ್ಕಾರ ಏನು ಮಾಡುತ್ತದೆ ಎಂದು ಹೇಳುವುದಕ್ಕಿಂತ ಮುಖ್ಯವಾಗಿ ಕೇಂದ್ರ ಬಿಜೆಪಿ ಮತ್ತು ಹಿಂದಿನ ರಾಜ್ಯ ಬಿಜೆಪಿ ಸರ್ಕಾರದ ನೀತಿಗಳನ್ನು ವಿರೋಧಿಸುವುದೇ ಅವರ ಮುಖ್ಯ ಉದ್ದೇಶವಾಗಿತ್ತು. ಎನ್ನುವುದು ಸ್ಪಷ್ಟವಾಗಿತ್ತು. ಇಂದಿನ ಬಜೆಟ್ ಮಂಡನೆ ರಾಜಕೀಯ ಭಾಷಣದಂದಿತ್ತು.
ಮುಖ್ಯಮಂತ್ರಿ ಶ್ರೀ @siddaramaiah ನವರು ಇಂದು ಮಂಡಿಸಿರುವ ಬಜೆಟ್, ರಾಜ್ಯದ ಸಮಗ್ರ ಅಭಿವೃದ್ಧಿಯ ಕಲ್ಪನೆ ಇರದ, ಜನಸಾಮಾನ್ಯರ ಮೇಲೆ ತೆರಿಗೆ ಹೊರೆ ಹೊರೆಸುವ ಬಜೆಟ್ ಆಗಿದೆ.
— B.S.Yediyurappa (@BSYBJP) July 7, 2023
ಈ ಕುರಿತು ನನ್ನ ವಿವರವಾದ ಪ್ರತಿಕ್ರಿಯೆಯನ್ನು ಇಲ್ಲಿ ಹಂಚಿಕೊಳ್ಳುತಿದ್ದೇನೆ. pic.twitter.com/3z41pkFFN6
ಗ್ಯಾರಂಟಿ ಯೋಜನೆಗಳ ಜಾರಿಗೆ ಹಲವು ಷರತ್ತುಗಳನ್ನು ವಿಧಿಸಿ ಜನರಿಗೆ ಈಗಾಗಲೇ ಮೋಸ ಮಾಡಿರುವ ಕಾಂಗ್ರೆಸ್ ಸರ್ಕಾರ ಮುಂದಿನ ದಿನಗಳಲ್ಲಿ ತೆರಿಗೆ ಹೆಚ್ಚಳದ ಮೂಲಕ ಜನರಿಗೆ ಬರೆ ಎಳೆಯುವುದು ಖಚಿತ, ತೆರಿಗೆ ಹೆಚ್ಚಳದ ಹಲವು ಪ್ರಸ್ತಾಪಗಳು ಈ ಬಜೆಟ್ ನಲ್ಲಿ ಇವೆ ವಿವೇಚನ ಇಲ್ಲದ ಘೋಷಿಸಿದ ಯೋಜನೆಗಳ ಪರಿಣಾಮ ಮುಂದಿನ ದಿನಗಳಲ್ಲಿ ಆರ್ಥಿಕ ಸಂಕಷ್ಟ ಎದುರಾಗುವ ಸಾಧ್ಯತೆ ಇದ್ದು ಅದರ ಸುಳಿವರಿತ ಮುಖ್ಯಂತ್ರಿಗಳು ಕೇಂದ್ರ ಬಿಜೆಪಿ ಸರ್ಕಾರ ಮತ್ತು ಹಿಂದಿನ ರಾಜ್ಯದ ಬಿಜೆಪಿ ಸರ್ಕಾರದ ಜನಪರ ಕಾರ್ಯಕ್ರಮಗಳನ್ನು ಮರೆತು ಆರ್ಥಿಕ ನೀತಿಗಳನ್ನು ಅನಗತ್ಯವಾಗಿ ಟೀಕಿಸಿದ್ದಾರೆ. ಆ ಮೂಲಕ ತಮ್ಮ ವೈಫಲ್ಯ: ಮರೆಮಾಚಿಕೊಳ್ಳಲು ಈಗಾಗಲೇ ಸಿದ್ಧತೆ ನಡೆಸಿದ್ದಾರೆ.
ಬಜೆಟ್ ನಲ್ಲಿ ಕೃಷಿ ಕ್ಷೇತ್ರಕ್ಕೆ ಅನುದಾನ ಕಡಿಮೆ ಮಾಡಲಾಗಿದೆ. ಆರೋಗ್ಯ: ನೀರಾವರಿ ಕ್ಷೇತ್ರಗಳ ನ್ನು ಕಡೆಗಣಿಸಲಾಗಿದೆ. ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ ಮಾಡಿದ ಕಾಂಗ್ರೆಸ್ ಸರ್ಕಾರ ಈ ಬಜೆಟ್ ನಲ್ಲಿ ಒಂದು ರೂಪಾಯಿನ್ನು ನೀಡಿಲ್ಲ. ಒಟ್ಟಿನಲ್ಲಿ ಜಲಸಂಪನ್ಮೂಲ ಇಲಾಖೆ ಹಾಗೂ ನೀರಾವರಿ ಯೋಜನೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ.

ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕದ ಅಭಿವೃದ್ಧಿಗೆ ಸ್ಪಷ್ಟ ಚಿತ್ರಣ ಇಲ್ಲ. ನೀರಾವರಿಗೆ ಹಿಂದಿನ ಬಿಜೆಪಿ ಸರ್ಕಾರ 22,854 ಕೋಟಿ ರೂ ಬಂಡವಾಳ ಒದಗಿಸಿದ್ದರೆ, ಅದನ್ನು ಈಗ 19 ಸಾವಿರ ಕೋಟಿ ರೂ ಗೆ ಇಳಿಸಿ ಅನ್ಯಾಯ ಮಾಡಲಾಗಿದೆ. ಸರ್ಕಾರಿ ನೌಕರರಿಗೆ ನೀಡಲಾಗುವ 7ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಜಾರಿ ಮಾಡುವ ಬಗ್ಗೆ, ಹಾಗೂ ಹಳೇ ಪಿಂಚಣಿ ಯೋಜನೆಯನ್ನು ಜಾರಿಗೆ ತರುವ ಬಗ್ಗೆ ಎಲ್ಲಿಯೂ ಪಸ್ತಾಪಿಸಿಲ್ಲ.
ಎನ್ ಇ ಪಿ (ಹೊಸ ರಾಷ್ಟ್ರೀಯ ಶಿಕ್ಷಣ ನೀತಿ) ಯನ್ನು ಕೈಬಿಡುವ ಉದ್ದೇಶವೇ ಅರ್ಥವಾಗುತ್ತಿಲ್ಲ. ಶಿಕ್ಷಣ ಕ್ಷೇತ್ರದಲ್ಲಿ ದೇಶ ಪ್ರಗತಿಯ ಕಡೆ ನೋಡುತ್ತಿದ್ದರೆ ಕರ್ನಾಟಕವನ್ನು ವಿರುದ್ಧ ದಿಕ್ಕಿನಲ್ಲಿ ಕೊಂಡೊಯ್ಯುತ್ತಿದ್ದಾರೆ. ಇದರಿಂದ ವಿಧ್ಯಾರ್ಥಿ ಹಾಗೂ ಶಿಕ್ಷಕರಲ್ಲಿ ಗೊಂದಲ ಮೂಡಿಸಿದ್ದಾರೆ. ಇದು ಖಂಡಿತವಾಗಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗಿದೆ ಎಂದು ಬಜೆಟ್ ವಿರುದ್ದ ಕುಟುಕಿದ್ದಾರೆ.












Click it and Unblock the Notifications