
ಬಿಎಸ್ವೈಗೆ ಉನ್ನತ ಸ್ಥಾನಮಾನ: ಕಾರಣ ಬಿಚ್ಚಿಟ್ಟ ಸಿ.ಟಿ.ರವಿ
ಬೆಂಗಳೂರು, ಆಗಸ್ಟ್ 17: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಬಿಜೆಪಿಯ ಅತ್ಯುನ್ನತ ಸಂಸದೀಯ ಮಂಡಳಿಗೆ ಆಯ್ಕೆಯಾಗಿರುವ ಬಗ್ಗೆ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರತಿಕ್ರಿಯೆಯನ್ನು ನೀಡಿದ್ದಾರೆ.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಸಿ.ಟಿ.ರವಿ, "ಯಡಿಯೂರಪ್ಪನವರು ಪಕ್ಷದ ಸಾಮಾನ್ಯ ಕಾರ್ಯಕರ್ತರಾಗಿ, ಅನೇಕ ಜವಾಬ್ದಾರಿಗಳನ್ನು ನಿರ್ವಹಿಸಿ, ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿ, ಈಗ ಪಕ್ಷದ ಅತ್ಯುನ್ನತ ಸಂಸದೀಯ ಮಂಡಳಿಗೆ ಆಯ್ಕೆಯಾಗಿದ್ದಾರೆ. ಇದು ನಮಗೆಲ್ಲಾ ಸಂತೋಷದ ವಿಷಯ"ಎಂದು ರವಿ ಹೇಳಿದರು.
ರಾಜ್ಯ ರಾಜಕಾರಣದಿಂದ ಬಿಎಸ್ವೈ ದೂರವಿಡುವ ಪ್ರಯತ್ನ: ಕಾಂಗ್ರೆಸ್ ಟೀಕೆ
"ಕರ್ನಾಟಕದಿಂದ ಯಡಿಯೂರಪ್ಪ, ತೆಲಂಗಾಣದಿಂದ ಲಕ್ಷ್ಮಣ, ತಮಿಳುನಾಡಿನ ವಾನತಿ ಶ್ರೀನಿವಾಸನ್ ಸೇರಿದಂತೆ ಮೂವರು ಸಂಸದೀಯ ಮಂಡಳಿಗೆ ಆಯ್ಕೆಯಾಗಿದ್ದಾರೆ. ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲೂ ಬಿಜೆಪಿಯನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಯಡಿಯೂರಪ್ಪನವರು ಸಲಹೆ, ಮಾರ್ಗದರ್ಶನ, ಮುಂದಾಳುತ್ವವನ್ನು ವಹಿಸಿಕೊಳ್ಳಲಿದ್ದಾರೆ"ಎಂದು ಸಿ.ಟಿ.ರವಿ ಹೇಳಿದರು.
"ಬಿಎಸ್ವೈ ಅವರು ಆಯ್ಕೆಯಾದ ನಂತರ ಹಲವು ರೀತಿಯ ಊಹಾಪೋಹಗಳಿಗೆ ತೆರೆಬಿದ್ದಿದೆ ಎಂದು ನಾನು ಭಾವಿಸುತ್ತೇನೆ. ಯಾರು ಯಾರನ್ನು ಎಲ್ಲಿ ಇಡಬೇಕು, ಎಲ್ಲಿ ಕಟ್ಟಿಹಾಕಬೇಕು ಎನ್ನುವುದನ್ನು ಇನ್ನು ಮುಂದೆ ಯಡಿಯೂರಪ್ಪನವರು ನಿರ್ಧರಿಸುತ್ತಾರೆ"ಎಂದು ಸಿ.ಟಿ.ರವಿ ಹೇಳಿದರು.
"ಈಗಾಗಲೇ ಕೆಲವರು ಟವೆಲ್ ಹಾಕಿಕೊಂಡಿದ್ದಾರೆ, ಪಕ್ಷ ಈಗಾಗಲೇ ಅಧಿಕಾರಕ್ಕೆ ಬಂದೇ ಬಿಟ್ಟಿದೆ ಎಂದು ತಿರುಗಾಡುತ್ತಿರುವವರನ್ನು ಕಟ್ಟಿಹಾಕಲೆಂದೇ ಯಡಿಯೂರಪ್ಪನವರು ಸಂಸದೀಯ ಮಂಡಳಿಗೆ ಹೋಗಿರುವುದು"ಎಂದು ಸಿ.ಟಿ.ರವಿ, ಕಾಂಗ್ರೆಸ್ಸಿಗೆ ಪರೋಕ್ಷ ಎಚ್ಚರಿಕೆಯನ್ನು ನೀಡಿದರು.

"ನಾನು..ನಾನು ಎಂದು ತಿರುಗಾಡಿಕೊಂಡು, ಸೂಟುಬೂಟು ಹಾಕಿಕೊಂಡು ತಿರುಗಾಡುತ್ತಿದ್ದ ವಿಪಕ್ಷಗಳ ನಾಯಕರಿಗೆ ಇಂದಿನ ನಿರ್ಧಾರ ಉತ್ತರವನ್ನು ಕೊಟ್ಟಿದೆ. ನಮ್ಮಲ್ಲಿ ಸಿಎಂ ಖುರ್ಚಿ ಖಾಲಿಯಿಲ್ಲ, ಬೊಮ್ಮಾಯಿಯವರು ಸಿಎಂ ಆಗಿ ಮುಂದುವರಿಯುತ್ತಾರೆ"ಎಂದು ಸಿ.ಟಿ.ರವಿ, ವಿಪಕ್ಷಗಳಿಗೆ ತಿರುಗೇಟು ನೀಡಿದರು.