ಇದ್ದ ಮೂರು ಜನರಲ್ಲಿ ಕದ್ದವರಾರು?: ಬಿಎಸ್‌ವೈಗೆ ಸಿದ್ದರಾಮಯ್ಯ ಟಾಂಗ್
ಬೆಂಗಳೂರು, ನವೆಂಬರ್ 4: ಆಪರೇಷನ್ ಕಮಲದ ಕುರಿತು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಹೇಳಿದ್ದಾರೆ ಎನ್ನಲಾದ ಮಾತುಗಳು ಮಾಧ್ಯಮಗಳಲ್ಲಿ ಪ್ರಸಾರವಾಗಿರುವುದಕ್ಕೆ ಬಿಜೆಪಿ ಒಳಗಿನವರೇ ಕಾರಣ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಆಡಿಯೋ ಬಹಿರಂಗಕ್ಕೆ ಸಿದ್ದರಾಮಯ್ಯ ಅವರೇ ಕಾರಣ ಎಂದು ಬಿಜೆಪಿ ಆರೋಪಿಸಿದೆ. ಜತೆಗೆ ಅನರ್ಹ ಶಾಸಕರ ರಾಜೀನಾಮೆ ಮತ್ತು ಅನರ್ಹತೆಯ ಘಟನೆಗಳಲ್ಲಿ ಸಿದ್ದರಾಮಯ್ಯ ಅವರ ಪಾತ್ರ ಮುಖ್ಯವಾಗಿದೆ. ಅವರ ರಾಜೀನಾಮೆಗೂ ನಮಗೂ ಸಂಬಂಧವಿಲ್ಲ. ಹಾಗೆಯೇ ಆಡಿಯೋದಲ್ಲಿರುವುದು ತಮ್ಮ ಹೇಳಿಕೆಯಲ್ಲ. ಅದನ್ನು ಕಾಂಗ್ರೆಸ್ಸಿಗರು ತಿರುಚಿದ್ದಾರೆ ಎಂದು ಯಡಿಯೂರಪ್ಪ ಆರೋಪಿಸಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ, ಯಡಿಯೂರಪ್ಪ ವಿರುದ್ಧ ಹರಿಹಾಯ್ದಿದ್ದಾರೆ. ಸೋಮವಾರ ಸರಣಿ ಟ್ವೀಟ್‌ಗಳನ್ನು ಮಾಡಿರುವ ಸಿದ್ದರಾಮಯ್ಯ, ಬಿಜೆಪಿ ಒಳಗೆ ಯಡಿಯೂರಪ್ಪ ಅವರಿಗೆ ಬಹಳ ವೈರಿಗಳಿದ್ದಾರೆ. ಅವರಲ್ಲಿಯೇ ಒಬ್ಬರು ಅವರ ಮಾತುಗಳನ್ನು ಧ್ವನಿ ಮುದ್ರಿಸಿ ಬಹಿರಂಗಪಡಿಸಿದ್ದಾರೆ. ಈ ಧ್ವನಿ ತಮ್ಮದೇ ಎಂದು ಯಡಿಯೂರಪ್ಪ ಮೊದಲು ಒಪ್ಪಿಕೊಂಡಿದ್ದರು. ಆದರೆ ಅಮಿತ್ ಶಾ ತರಾಟೆಗೆ ತೆಗೆದುಕೊಂಡ ಬಳಿಕ ವರಸೆ ಬದಲಿಸಿದ್ದಾರೆ ಎಂದು ಹರಿಹಾಯ್ದಿದ್ದಾರೆ.

ಯಡಿಯೂರಪ್ಪಗೆ ಶತ್ರುಗಳು
ಬಿಜೆಪಿ ಪಕ್ಷದಲ್ಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಬಹಳ ಜನ ಶತ್ರುಗಳಿದ್ದಾರೆ. ಅವರಲ್ಲೇ ಯಾರೋ ಆಡಿಯೋ ರೆಕಾರ್ಡ್ ಮಾಡಿ, ಮಾಧ್ಯಮಗಳಿಗೆ ಕೊಟ್ಟಿದ್ದಾರೆ. ಇದ್ದ ಮೂರ್ ಜನದಲ್ಲಿ ಕದ್ದವರಾರು ಅಂತ ನಮ್ಮನ್ನ ಕೇಳಿದ್ರೆ ಹೇಗಪ್ಪ? ಎಂದು ಸಿದ್ದರಾಮಯ್ಯ ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.

ನಾಟಕ ಆಪರೇಷನ್ ಕಮಲದ ಭಾಗ
ಶ್ರೀಮಂತ ಪಾಟೀಲ್ ಹೃದಯದ ಕಾಯಿಲೆ ಎಂದು ಸುಳ್ಳು ಹೇಳಿ 300 ಕಿ.ಮೀ ದೂರದ ಚೆನ್ನೈಗೆ ಹೋಗಿದ್ದರು. ಕೊನೆಗೆ ಅಲ್ಲಿಂದ ಹೃದ್ರೋಗ ತಜ್ಞರೇ ಇಲ್ಲದ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಈ ನಾಟಕಗಳೆಲ್ಲ ಆಪರೇಷನ್ ಕಮಲದ ಭಾಗವಲ್ಲವೇ? ಇದಕ್ಕೂ ಬಿಜೆಪಿಗೂ ಸಂಬಂಧವಿಲ್ಲವೇ? ಎಂದು ಕೇಳಿದ್ದಾರೆ.

ಯಡಿಯೂರಪ್ಪಗೆ ಅಮಿತ್ ಶಾ ತರಾಟೆ
ಮೊದಲು ಆಡಿಯೋದಲ್ಲಿನ ಹೇಳಿಕೆ ತಮ್ಮದೇ ಎಂದು ಒಪ್ಪಿಕೊಂಡಿದ್ದ ಯಡಿಯೂರಪ್ಪ ಅವರು, ಅಮಿತ್ ಶಾ ತರಾಟೆಗೆ ತಗೊಂಡ ಮೇಲೆ ವರಸೆ ಬದಲಿಸಿದ್ದಾರೆ. ಇದರಿಂದಾಗಿಯೇ ಅಮಿತ್ ಶಾ ನಿರ್ದೇಶನದಂತೆಯೇ ಸರ್ಕಾರವನ್ನು ಬೀಳಿಸಲಾಗಿದೆ ಎಂಬ ಯಡಿಯೂರಪ್ಪನವರ ಹೇಳಿಕೆ ಸತ್ಯ ಎಂದು ಸಾಬೀತಾಗಿದೆ ಎಂದು ಆರೋಪಿಸಿದ್ದಾರೆ.

ನಳಿನ್ ಕುಮಾರ್ ಟ್ವೀಟ್
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಆಡಿಯೋ ನನ್ನಿಂದ ರಿಲೀಸ್ ಆಗಿದೆಯೆಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಜೋಕ್ ಮಾಡಿದ್ದಾರೆ. ಬಿಜೆಪಿ ಕೋರ್ ಕಮಿಟಿ ಸಭೆಗೆ ವಿರೋಧ ಪಕ್ಷದ ನಾಯಕನನ್ನು ಆಹ್ವಾನಿಸಿದ್ದೀರಾ? ಜೋಕ್ ಮಾಡೋರನ್ನ '......' ಎನ್ನುತ್ತಾರೆ ಗೊತ್ತಾ? ಎಂದು ನಳಿನ್ ಕುಮಾರ್ ಅವರನ್ನು ಟೀಕಿಸಿ ಸಿದ್ದರಾಮಯ್ಯ ಭಾನುವಾರ ಟ್ವೀಟ್ ಮಾಡಿದ್ದರು.












Click it and Unblock the Notifications