ಬ್ಯಾಂಕ್‌ಗಳ ಮೇಲೆ ಮುಖ್ಯಮಂತ್ರಿ ಯಡಿಯೂರಪ್ಪ ಕೆಂಡಾಮಂಡಲ ಆಗಿದ್ಯಾಕೆ?
ಬೆಂಗಳೂರು, ಫೆ. 11: ಪ್ರಧಾನಮಂತ್ರಿ ಆವಾಸ್ ಯೋಜನೆ ಮತ್ತು ಪ್ರಧಾನಮಂತ್ರಿ ಸ್ವನಿಧಿ ಯೋಜನೆಗಳಡಿ ಬ್ಯಾಂಕರುಗಳು ವಿಳಂಬ ಧೋರಣೆ ಅನುಸರಿಸದೇ ತ್ವರಿತವಾಗಿ ಸಾಲ ವಿತರಣೆ ಮಾಡಲು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ಮಾಡಿದ್ದಾರೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಮತ್ತು ಪ್ರಧಾನಮಂತ್ರಿ ಸ್ವ ನಿಧಿ ಯೋಜನೆಗಳ ಪ್ರಗತಿ ಕುರಿತು ಬ್ಯಾಂಕರ್‌ಗಳೊಂದಿಗೆ ಮಹತ್ವದ ಸಭೆಯನ್ನು ಮಾಡಿದರು.
ಪ್ರಧಾನ ಮಂತ್ರಿ ಆವಾಸ್ ಯೋಜನೆ ಮತ್ತು ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಗಳು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬಡವರಿಗಾಗಿ ಜಾರಿಗೊಳಿಸಿರುವ ಮಹತ್ವಾಕಾಂಕ್ಷೆಯ ಯೋಜನೆಗಳು. ಇವುಗಳ ಅನುಷ್ಠಾನಕ್ಕೆ ಬ್ಯಾಂಕರ್‌ಗಳು ಆದ್ಯತೆ ನೀಡಬೇಕು ಎಂದು ಸಿಎಂ ಖಡಕ್ ಸೂವಚನೆ ನೀಡಿದ್ದಾರೆ. ಫಲಾನುಭವಿಗಳಿಗೆ ಅನುದಾನ ನೀಡುವಲ್ಲಿ ಬ್ಯಾಂಕ್‌ಗಳು ಅನಗತ್ಯವಾಗಿ ಅಲೆದಾಡಿಸುತ್ತಿವೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸಭೆಯನ್ನು ಕರೆಯಲಾಗಿತ್ತು.
ಕೇಂದ್ರ ಸರ್ಕಾರ ರಾಜ್ಯದಲ್ಲಿನ ವಸತಿ ಯೋಜನೆಗಳ ಕುರಿತು ಅಸಮಾಧಾನ ವ್ಯಕ್ತಪಡಿಸಿ, ತಕ್ಷಣ ಯೋಜನೆಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸುವಂತೆ ಸೂಚಿಸಿತ್ತು. ಆ ಹಿನ್ನೆಲೆಯಲ್ಲಿ ಸ್ವತಃ ಸಿಎಂ ಯಡಿಯೂರಪ್ಪ ಅವರು ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಸಭೆಯಲ್ಲಿ ಬ್ಯಾಂಕರ್‌ಗಳ ಮೇಲೆ ಯಡಿಯೂರಪ್ಪ ಅವರು ಕೆಂಡಾಮಂಡಲರಾಗಿದ್ದರು ಎಂದು ತಿಳಿದು ಬಂದಿದೆ.

ಯಡಿಯೂರಪ್ಪ ತೀವ್ರ ಅಸಮಾಧಾನ
ಪ್ರಧಾನಮಂತ್ರಿ ಆವಾಸ್ ಯೋಜನೆಯ ಸಿ.ಎಲ್.ಎಸ್.ಎಸ್ ಯೋಜನೆಯಡಿ ರಾಜ್ಯದಲ್ಲಿ 53,695 ಅರ್ಜಿಗಳಿಗೆ ಮಾತ್ರ ಮಂಜೂರಾತಿ ದೊರೆತಿದ್ದು, ಇತರೆ ರಾಜ್ಯಗಳಿಗೆ ಹೋಲಿಸಿದಾಗ, ನಮ್ಮ ರಾಜ್ಯ ಹಿಂದುಳಿದಿದೆ.
ಅದೇ ರೀತಿ ಪಾಲುದಾರಿಕೆಯಲ್ಲಿ ಕೈಗೆಟಕುವ ವಸತಿ ಯೋಜನೆಯಡಿ ಮಂಜೂರಾಗಿರುವ 3,46,414 ಪ್ರಕರಣಗಳ ಪೈಕಿ 1,16,168 ಪ್ರಕರಣಗಳಿಗೆ ಕಾರ್ಯಾದೇಶವನ್ನು ನೀಡಲಾಗಿದ್ದು, ಕೇವಲ 19,658 ಮನೆಗಳು ಮಾತ್ರ ಪೂರ್ಣಗೊಂಡಿವೆ. ಈ ಯೋಜನೆಯಡಿ ಬ್ಯಾಂಕಿನಿಂದ ನೀಡುವ ಸಾಲ ಪ್ರಕ್ರಿಯೆ ಪ್ರಾರಂಭವಾಗದಿರುವುದು ಯೋಜನೆಯ ಪ್ರಗತಿಗೆ ಪೂರಕವಾಗಿಲ್ಲ ಎಂದು ಸಿಎಂ ಯಡಿಯೂರಪ್ಪ ಅವರು ಸಭೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಬ್ಯಾಂಕರ್‌ಗಳಿಗೆ ಸಿಎಂ ಸೂಚನೆ
ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಈ ಎರಡೂ ಯೋಜನೆಗಳ ಪ್ರಗತಿ ಕುಂಠಿತವಾಗಿದೆ. ಈ ಯೋಜನೆಗಳಡಿ ಸಾಲ ಮಂಜೂರಾತಿ ವಿಳಂಬವಾಗುತ್ತಿರುವುದು ಗಮನಕ್ಕೆ ಬಂದಿದ್ದು, ಈ ಬಗ್ಗೆ ಗಮನ ಹರಿಸುವಂತೆ ಬ್ಯಾಂಕರುಗಳಿಗೆ ಯಡಿಯೂರಪ್ಪ ಖಡಕ್ ಆದೇಶ ನೀಡಿದರು.
ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು 15 ದಿನಗಳೊಳಗೆ ಆಯಾ ಜಿಲ್ಲೆಗಳ ಲೀಡ್ ಬ್ಯಾಂಕ್ ಗಳಿಗೆ ಸಲ್ಲಿಸಲಾಗುವುದು. ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಅವುಗಳನ್ನು ವಿವಿಧ ಬ್ಯಾಂಕುಗಳಿಗೆ ಕಳುಹಿಸಿ, ಮಂಜೂರಾತಿ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಸಿಎಂ ಸೂಚಿಸಿದರು.

ಸಾಲ ಯೋಜನೆಯಲ್ಲೂ ಬ್ಯಾಂಕ್‌ಗಳ ಕಳಪೆ ಸಾಧನೆ
ಪ್ರಧಾನಮಂತ್ರಿ ಸ್ವನಿಧಿ ಯೋಜನೆಯು ಜುಲೈ 2020 ರಿಂದ ಜಾರಿಗೆ ಬಂದಿದ್ದು, ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯದಿಂದ ಅನುದಾನ ಬಿಡುಗಡೆಯಾಗಲಿದೆ. ಪಿಎಂ ಸ್ವನಿಧಿ ಯೋಜನೆಯಡಿ ಬೀದಿ ವ್ಯಾಪಾರಿಗಳಿಗೆ 10 ಸಾವಿರ ರೂ.ಗಳ ದುಡಿಯುವ ಬಂಡವಾಳ ಸೌಲಭ್ಯದೊಂದಿಗೆ ನಿಯಮಿತ ಪಾವತಿಗೆ ಶೇಕಡಾ 7ರ ಬಡ್ಡಿ ದರದಂತಹ ಪ್ರೋತ್ಸಾಹಕಗಳನ್ನು ಹಾಗೂ ಡಿಜಿಟಲ್ ವಹಿವಾಟಿಗೆ ಪುರಸ್ಕಾರವನ್ನೂ ನೀಡಲಾಗುವುದು.
ಈವರೆಗೆ 2,24,368 ಅರ್ಜಿಗಳನ್ನು ಯೋಜನೆಯಡಿ ಸ್ವೀಕರಿಸಲಾಗಿದ್ದು, ಕೇವಲ 66,423 ಅರ್ಜಿಗಳಿಗೆ ಮಂಜೂರಾತಿ ದೊರೆತಿದೆ. ರಾಜ್ಯದ ಬ್ಯಾಂಕ್‌ಗಳು ಶೇ 30 ರಷ್ಟು ಅರ್ಜಿಗಳನ್ನು ಮಾತ್ರ ವಿಲೇವಾರಿ ಮಾಡಿವೆ. ಕೋವಿಡ್-19 ಸಾಂಕ್ರಾಮಿಕದಿಂದ ತತ್ತರಿಸಿರುವ ಬಡಜನರಿಗೆ ಈ ಯೋಜನೆ ಪ್ರಯೋಜನಕಾರಿಯಾಗಲಿದ್ದು, ಬಾಕಿ ಇರುವ ಎಲ್ಲ ಅರ್ಜಿಗಳನ್ನು ಬ್ಯಾಂಕುಗಳು ಅತಿ ಶೀಘ್ರವಾಗಿ ಮಂಜೂರಾತಿ ನೀಡಿ ವಿಲೇವಾರಿ ಮಾಡಬೇಕೆಂದು ಸೂಚಿಸಿದರು.

ಯಡಿಯೂರಪ್ಪ ಕೆಂಡಾಮಂಡಲ!
ಕೇಂದ್ರ ಸರ್ಕಾರದ ಅನುದಾಡಿ ನಡೆಯುವ ವಸತಿ ಯೋಜನೆಗಳ ಕುರಿತು ಬ್ಯಾಂಕರ್‌ಗಳನ್ನು ಸಿಎಂ ಯಡಿಯೂರಪ್ಪ ಅವರು ಸಭೆಯಲ್ಲಿ ತರಾಟೆಗೆ ತೆಗದುಕೊಂಡಿದ್ದಾರೆ. ಬ್ಯಾಂಕರ್ ವರ್ತನೆಗೆ ಸಿಎಂ ಕೆಂಡಾಮಂಡಲರಾಗಿದ್ದು, ಸಾಲ ನೀಡುವುದರಲ್ಲಿ ಕರ್ನಾಟಕ 5 ನೇ ಸ್ಥಾನದಲ್ಲಿದೆ. ಅನೇಕ ಬ್ಯಾಂಕ್‌ಗಳು ಸಾಲ ಕೊಡುತ್ತಿಲ್ಲ ಅಂತ ನಮಗೆ ದೂರು ಬಂದಿವೆ. ಜೊತೆಗೆ ಅಂಕಿ ಅಂಶಗಳೂ ಕೂಡ ನೀವು ಸರಿಯಾಗಿ ಸಾಲ ಕೊಡುತ್ತಿಲ್ಲ ಎಂದು ಸಾಬೀತು ಮಾಡಿವೆ. ನಿಮ್ಮ ಈ ವರ್ತನೆ ಸಹಿಸಲು ಸಾಧ್ಯವಿಲ್ಲ ಎಂದು ಯಡಿಯೂರಪ್ಪ ಅವರು ಸಭೆಯಲ್ಲಿ ಗರಂ ಆಗಿದ್ದರು.
ಪಿಎಂ ಸ್ವನಿಧಿ ಯೋಜನೆಯಲ್ಲಿ ನಾವು ಮೊದಲ ಸ್ಥಾನಕ್ಕೆ ಬರಬೇಕು ಎಂದು ಸೂಚಿಸಿರುವ ಸಿಎಂ ಬ್ಯಾಂಕರ್‌ಗಳಿಗೆ ಗಡುವು ಕೊಟ್ಟಿದ್ದಾರೆ. ಫೆಬ್ರವರಿ ಅಂತ್ಯದ ವೇಳೆಗೆ ಎಲ್ಲ ಸರಿ ಮಾಡಬೇಕು ಎಂದು ಸೂಚಿಸಿದ್ದಾರೆ. ಅದಕ್ಕೆ ಅಗತ್ಯವಾದ ಕ್ರಮಗಳನ್ನು ಬ್ಯಾಂಕರ್‌ಗಳು ತೆಗೆದುಕೊಳ್ಳಬೇಕು. ಪ್ರಾಮಾಣಿಕವಾಗಿ ಲೋನ್ ಕೊಡುವ ಕೆಲಸ ಮಾಡಿ. ಮತ್ತೆ ಲೋನ್ ಕೊಡದ ವಿಚಾರ ಗಮನಕ್ಕೆ ಬಂದರೆ ಸರ್ಕಾರ ಸಹಿಸುವುದಿಲ್ಲ ಎಂದು ಬ್ಯಾಂಕರ್‌ಗಳನ್ನು ಯಡಿಯೂರಪ್ಪ ಸಭೆಯಲ್ಲಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ
ಸಭೆಯಲ್ಲಿ ಡಿಸಿಎಂ ಡಾ. ಸಿ.ಎನ್. ಅಶ್ವಥ್ ನಾರಾಯಣ, ವಸತಿ ಸಚಿವ ವಿ. ಸೋಮಣ್ಣ, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಅಪರ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಕೆನರಾ ಬ್ಯಾಂಕ್ ಕಾರ್ಯನಿರ್ವಾಹಕ ನಿರ್ದೇಶಕಿ ಎ. ಮಣಿಮೇಖಲೈ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಪ್ರಾದೇಶಿಕ ನಿರ್ದೇಶಕ ಜೋಸ್ ಜೆ ಕಟ್ಟೂರ್ ಮತ್ತು ಸರ್ಕಾರದ ಹಿರಿಯ ಅಧಿಕಾರಿಗಳು ಹಾಗೂ ವಿವಿಧ ಬ್ಯಾಂಕುಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.