ಕರ್ನಾಟಕದ 26ನೇ ಸಿಎಂ ಆಗಿ ಯಡಿಯೂರಪ್ಪ ಪ್ರಮಾಣ ವಚನ
ಬೆಂಗಳೂರು, ಜುಲೈ 26 : ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಬಿ. ಎಸ್. ಯಡಿಯೂರಪ್ಪ ರಾಜ್ಯದ 26ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ರಾಜ್ಯದಲ್ಲಿ 4 ನೇ ಬಾರಿ ಮುಖ್ಯಮಂತ್ರಿಯಾಗುವ ಮೂಲಕ ಯಡಿಯೂರಪ್ಪ ಐತಿಹಾಸಿಕ ಸಾಧನೆ ಮಾಡಿದರು.
ಶುಕ್ರವಾರ ಸಂಜೆ 6.30ಕ್ಕೆ ರಾಜ್ಯಪಾಲ ವಜುಭಾಯಿ ವಾಲಾ ಯಡಿಯೂರಪ್ಪಗೆ ಪ್ರಮಾಣ ವಚನ ಬೋಧಿಸಿದರು. ರಾಜಭವನದ ಗಾಜಿನ ಮನೆಯಲ್ಲಿ ನಡೆದ ಸಮಾರಂಭಕ್ಕೆ ಬಿಜೆಪಿಯ ಶಾಸಕರು ಸೇರಿದಂತೆ ಹಲವು ಗಣ್ಯರು ಸಾಕ್ಷಿಯಾದರು.
ಬಿಳಿ ಸಫಾರಿ ಸೂಟು ತೊಟ್ಟಿದ್ದ ಯಡಿಯೂರಪ್ಪ, ಹೆಗೆಲ ಮೇಲೆ ಹಸಿರು ಶಾಲು ಹಾಕಿಕೊಂಡಿದ್ದರು. ದೇವರ ಹೆಸರಿನಲ್ಲಿ ಅವರು ಪ್ರಮಾಣ ವಚನವನ್ನು ಸ್ವೀಕಾರ ಮಾಡಿದರು. ರಾಜ್ಯಪಾಲರು ಯಡಿಯೂರಪ್ಪಗೆ ಹೂ ಗುಚ್ಛ ನೀಡಿ ಅಭಿನಂದನೆ ಸಲ್ಲಿಸಿದರು.

ರಾಜಭವನ ಬಿಜೆಪಿ ನಾಯಕರು, ಕಾರ್ಯಕರ್ತರಿಂದ ತುಂಬಿ ಹೋಗಿತ್ತು. ರಾಜಭವನದ ಹೊರಗೆ ಸಾವಿರಾರು ಕಾರ್ಯಕರ್ತರು ಜಮಾವಣೆಗೊಂಡು ಬಿಜೆಪಿ ಮತ್ತು ಯಡಿಯೂರಪ್ಪಗೆ ಜೈಕಾರ ಕೂಗುತ್ತಿದ್ದರು. ಎಲ್‌ಇಡಿ ಪರದೆಯಲ್ಲಿ ರಾಜಭವನದ ಹೊರಗೆ ಪ್ರಮಾಣ ವಚನ ಕಾರ್ಯಕ್ರಮ ವೀಕ್ಷಣೆ ಮಾಡಲು ಅವಕಾಶ ಕಲ್ಪಿಸಲಾಗಿತ್ತು.












Click it and Unblock the Notifications