'ಆಪರೇಷನ್ ಕಮಲ ಮಾಡುತ್ತಿಲ್ಲ, ಅದರ ಅಗತ್ಯವೂ ಇಲ್ಲ'
ಬೆಂಗಳೂರು, ಆಗಸ್ಟ್ 08 : ದೆಹಲಿ ಭೇಟಿ ಬಗ್ಗೆ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮೌನ ಮುರಿದಿದ್ದಾರೆ. 'ಆಪರೇಷನ್ ಕಮಲ ಮಾಡುತ್ತಿಲ್ಲ, ಅದರ ಅಗತ್ಯವೂ ಇಲ್ಲ' ಎಂದು ಅವರು ಸ್ಪಷ್ಟಪಡಿಸಿದರು.
ಬೆಂಗಳೂರೊನಲ್ಲಿ ಬುಧವಾರ ಮಾಧ್ಯಮಗಳ ಜೊತೆ ಯಡಿಯೂರಪ್ಪ ಮಾತನಾಡಿದರು. ಮಂಗಳವಾರ ಅವರು ದೆಹಲಿಗೆ ತೆರಳಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ, ವಿವಿಧ ಕೇಂದ್ರ ಸಚಿವರನ್ನು ಭೇಟಿಯಾಗಿ ಬಂದಿದ್ದರು. ಆ ಕುರಿತು ಮಾಹಿತಿ ನೀಡಿದರು.
'ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ಭೇಟಿಗೆ ಸಮಯ ನೀಡಿದ್ದರು. ಆದ್ದರಿಂದ ತೆರಳಿದ್ದೆ. ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆಯೂ ಈ ಸಂದರ್ಭದಲ್ಲಿ ಚರ್ಚೆ ನಡೆಸಿದ್ದೇವೆ' ಎಂದು ಯಡಿಯೂರಪ್ಪ ಹೇಳಿದರು.

'ಆಪರೇಷನ್ ಕಮಲ ಮಾಡುತ್ತಿಲ್ಲ. ಅದರ ಅಗತ್ಯವೂ ಇಲ್ಲ. ನಾವು ವಿರೋಧ ಪಕ್ಷದ ಸ್ಥಾನದಲ್ಲಿಯೇ ಕುಳಿತು, ಆಡಳಿತ ಪಕ್ಷದ ವಿರುದ್ಧ ನಮ್ಮ ಹೋರಾಟವನ್ನು ಮುಂದುವರೆಸುತ್ತೇವೆ' ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದರು.
'ರಾಜ್ಯಕ್ಕೆ ಆಗಬೇಕಿರುವ ಕೆಲಸಗಳ ಬಗ್ಗೆ ಕೇಂದ್ರ ಸಚಿವರ ಜೊತೆ ಮಾತುಕತೆ ನಡೆಸಿದ್ದೇನೆ. ಮುಂದೆ ಇಡಬೇಕಾದ ಹೆಜ್ಜೆಯ ಕುರಿತು ಚರ್ಚೆ ಮಾಡಿದ್ದೇನೆ. ಆಗಸ್ಟ್ 9ರಿಂದ ರಾಜ್ಯ ಪ್ರವಾಸ ಮಾಡುತ್ತೇನೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿಯೂ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಗುರಿ ಇದೆ' ಎಂದು ಹೇಳಿದರು.
ಯಡಿಯೂರಪ್ಪ ದೆಹಲಿ ಭೇಟಿ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು, 'ಬಿಜೆಪಿಗೆ ಅಧಿಕಾರ ದಾಹವಿದೆ. ಆಪರೇಷನ್ ಕಮಲದ ಬಗ್ಗೆ ಚರ್ಚೆ ಮಾಡಲು ದೆಹಲಿಗೆ ಹೋಗಿದ್ದಾರೆ' ಎಂದು ಹೇಳಿಕೆ ನೀಡಿದ್ದರು. ಯಡಿಯೂರಪ್ಪ ಈ ಹೇಳಿಕೆಯನ್ನು ತಳ್ಳಿ ಹಾಕಿದ್ದಾರೆ.












Click it and Unblock the Notifications