ಏನಿದು? ಬಿಎಸ್‌ವೈ-ಎಚ್‌ಡಿಕೆ ನಡುವೆ ಹೆಲಿಕಾಪ್ಟರ್ ಕಿತ್ತಾಟ
ಬೆಂಗಳೂರು, ಜೂನ್ 07: ಹೆಲಿಕಾಪ್ಟರ್ ಬಳಕೆ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಬಿಎಸ್‌ವೈ ಮತ್ತು ಹಾಲಿ ಮುಖ್ಯಮಂತ್ರಿ ಎಚ್‌ಡಿಕೆ ಮಧ್ಯೆ ರಾಜಕೀಯ ತಿಕ್ಕಾಟ ನಡೆಯುತ್ತಿದೆ.
'ಎರಡು ದಿನ ಮುಖ್ಯಮಂತ್ರಿ ಆದವರು ಹೆಲಿಕಾಪ್ಟರ್‌ನಲ್ಲಿ ಓಡಾಡಲು ಲಕ್ಷಾಂತರ ಹಣ ಖರ್ಚು ಮಾಡಿದ್ದಾರೆ' ಎಂದು ಯಡಿಯೂರಪ್ಪ ಅವರ ಹೆಸರು ಹೇಳದೆ ಕುಮಾರಸ್ವಾಮಿ ಇತ್ತೀಚೆಗಷ್ಟೆ ಆರೋಪ ಮಾಡಿದ್ದರು. ಇದು ಯಡಿಯೂರಪ್ಪ ಅವರನ್ನು ಕೆರಳಿಸಿದೆ.
ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಯಾಗಿ ಬಹಿರಂಗ ಪತ್ರ ಬರೆದಿರುವ ಯಡಿಯೂರಪ್ಪ ಅವರು, ಮಹಾಂತ ಶಿವಯೋಗಿಗಳು ಲಿಂಗೈಕ್ಯರಾಗಿದ್ದ ಕಾರಣ ಜವಾಬ್ದಾರಿಯುತ ಉಸ್ತುವಾರಿ ಮುಖ್ಯಮಂತ್ರಿಯಾಗಿ ಅಲ್ಲಿಗೆ ಹೋಗಲೇ ಬೇಕಿತ್ತು ಅಲ್ಲದೆ ರೈತನೋರ್ವ ಆತ್ಮಹತ್ಯೆ ಕೂಡ ಮಾಡಿಕೊಂಡಿದ್ದ ಕಾರಣ ಅಲ್ಲಿಗೆ ತೆರಳಲೆಂದು ಹೆಲಿಕಾಪ್ಟರ್ ಬಳಸಿದ್ದೇನೆ ವೈಯಕ್ತಿಕ ಕಾರಣಕ್ಕೆ ಅಲ್ಲ ಎಂದಿದ್ದಾರೆ.

'ಹೆಲಿಕಾಪ್ಟರ್ ಬಳಕೆ ಬಗ್ಗೆ ಅಧಿಕಾರಿಗಳು ಸೂಚಿಸಿದ್ದಕ್ಕಾಗಿಯೇ ಅದನ್ನು ಬಳಸಿದ್ದೇನೆ. ಅದರ ವೆಚ್ಚವನ್ನು ಈಗಲೂ ಭರಿಸಲು ನಾನು ಸಿದ್ದನಿದ್ದೇನೆ' ಎಂದು ಯಡಿಯೂರಪ್ಪ ಬೇಸರದಿಂದ ಪತ್ರ ಬರೆದಿದ್ದಾರೆ.
ಈ ಬಗ್ಗೆ ಇಂದು ಪ್ರತಿಕ್ರಿಯೆ ನೀಡಿರುವ ಸಿಎಂ ಕುಮಾರಸ್ವಾಮಿ ಅವರು, ದುಂದುವೆಚ್ಚ ಆಗಿದೆ ಅದಕ್ಕೆ ಕಡಿವಾಣ ಹಾಕಬೇಕು ಎಂದಷ್ಟೆ ನಾನು ಹೇಳಿದ್ದೇನೆ ಎಂದಿದ್ದಾರೆ. ಆದರೆ ಯಡಿಯೂರಪ್ಪ ಅವರ ವೆಚ್ಚ ಭರಿಸುವ ಮಾತಿಗೆ ಕಿಡಿ ಕಾರಿರುವ ಅವರು 'ಯಡಿಯೂರಪ್ಪ ಅವರಿಂದ ಹಣ ಪಡೆಯುವಷ್ಟು ನನ್ನ ಸರ್ಕಾರಕ್ಕೆ ದರಿದ್ರ ಬಡಿದಿಲ್ಲ' ಎಂದು ಖಾರವಾಗಿ ನುಡಿದಿದ್ದಾರೆ.












Click it and Unblock the Notifications