ಜನವರಿ 22ರ ಯಂಕಂಚಿ ದಾವಲ್ ಮಲಿಕ್ ಜಾತ್ರೆ: ಮುಸ್ಲಿಂ ದೇವರಿಗೆ ಹಿಂದೂ ಪೂಜಾರಿ, ಸರ್ವ ಧರ್ಮ ಸಂಗಮ
ಸಿಂದಗಿ: ಭಕ್ತರ ಮನದಿಚ್ಛೆಯ ಸತ್ಯ ಅರಿತು. ಬೇಡಿದ ವರ ಕೊಡುವ ಭಕ್ತರ ಕಾಮಧೇನುವಾಗಿ ನೆಲೆ ನಿಂತು ಹಿಂದು-ಮುಸ್ಲಿಂರ ಸಾಮರಸ್ಯದ ಕೊಂಡಿಯಾಗಿ ಬೆಳೆದು ಬಂದಿರುವ ದಾವಲ್ ಮಲ್ಲಿಕ್ ದೇವರ ಜಾತ್ರೆ ನೆರೆಯ ನಾಲ್ಕು ರಾಜ್ಯಗಳಲ್ಲಿ ಪ್ರಸಿದ್ದಿ ಪಡೆದಿದೆ. ಇಂಥದ್ದೊಂದು ಜಾತ್ರೆಗೆ ಅಪಾರ ಪ್ರಮಾಣದ ಭಕ್ತಗಣ ಸಾಕ್ಷಿಯಾಗಲಿದೆ. ಈ ಜಾತ್ರೆಯು ಜನವರಿ 22ರ ಗುರುವಾರದಿಂದ ಜರುಗಲಿದೆ.
ಹೌದು, ಉತ್ತರ ಕರ್ನಾಟಕದ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಸುಕ್ಷೇತ್ರ ಯಂಕಂಚಿಯಲ್ಲಿ 'ಸಂತ್ ದಾವಲ್ ಮಲಿಕ್ ಜಾತ್ರೆ' ನಡೆಯಿತು. ಈ ದಾವಲ್ ಮಲಿಕ್‌ರು ಅನೇಕ ಪವಾಡಗಳನ್ನು ಮಾಡುವ ಮೂಲಕ ಈ ಭಾಗದಲ್ಲಿ ಮಾತ್ರವಲ್ಲದೇ ನೆರೆಯ ರಾಜ್ಯಗಳಲ್ಲಿ ಅಸಂಖ್ಯಾತ ಭಕ್ತರನ್ನು ಹೊಂದಿದ್ದು, ಪ್ರತಿ ವರ್ಷ ಈ ಜಾತ್ರೆಗೆ ಜನಸಾಗರವೇ ಹರಿದು ಬರುತ್ತದೆ.

ಭಕ್ತಿಯ ಪರೀಕ್ಷೆ, ಮನಗೆದ್ದ ಭಕ್ತೆ
'ಜಾತಿ ಗೀಳು ಕಾಣದ ಭಕ್ತನ ಭಕ್ತಿಯೊಂದೇ ದೊಡ್ಡ ಶಕ್ತಿ. ಅದಕ್ಕೆ ಯಾವ ಕುಲ - ಮತವೂ ಇಲ್ಲ' ಎಂಬ ಸಂದೇಶ ಸಾರಿರುವ ದಾವಲ್ ಮಲ್ಲಿಕರನ್ನು ನಂಬಿದ ಇಂಡಿ ತಾಲೂಕಿನ ಸಂಗೋಗಿಯ ಮಹಿಳೆಯೊಬ್ಬಳು ಕಳೆದ ಎಂಟು ವರ್ಷಗಳ ಹಿಂದೆ ತನ್ನ ಭಕ್ತಿ ಪೂರ್ವಕ ವರವ ಬೇಡಿ ಪಡೆದ ಮಗುವನ್ನು ಕುದಿಯುವ ಅನ್ನದ ಪಾತ್ರೆಯಲ್ಲಿ ಎದ್ದುವೆ ಎಂದು ಬೇಡಿಕೊಂಡಿದ್ದಳಂತೆ. ಅದರಂತೆ ಎರಡು ವರ್ಷದ ಹೆಣ್ಣು ಮಗುವನ್ನು ಪೂಜಾರಿ ಕೈಗಿತ್ತು, ಭಕ್ತಿ ಪರವಶಳಾದ ತಾಯಿ ದಾವಲ್ ಮಲ್ಲಿಕರನ್ನು ಮನದಲ್ಲಿ ನೆನೆಯುತ್ತಲಿದ್ದಳು. ಆಗ ಪಕ್ಕದಲ್ಲಿ ಕುದಿಯುತ್ತಿದ್ದ ಅನ್ನದ ಪಾತ್ರೆಗೆ ಹೆಣ್ಣು ಮಗುವನ್ನು ಎದ್ದಿದ ಪೂಜಾರಿ. ದಾವಲ್ ಮಲ್ಲಿಕ್ ದೋಸ್ತರ್ ಹೋ ದಿನ್ ಎಂಬ ದ್ವನಿ ಮೊಳಗುತ್ತಿತ್ತು. ಭಕ್ತಿ ಪರಿಕ್ಷೆಯಲ್ಲಿ ದೇವರ ಮನಗೆದ್ದ ಭಕ್ತೆ ಇಂದಿಗೂ ಸಂತನ ಲೀಲೆಯೋ..ಪವಾಡವೋ ಯಾರು ಕಾಣ ಎಂಬಂತೆ ನೆರೆದಿದ್ದವರಲ್ಲಿ ಅಚ್ಚರಿ ಮೂಡಿಸಿದ ಘಟನೆ ಇನ್ನೂ ಮರೆಯಾಗಿಲ್ಲ.
ನಾಣ್ಯ ಹಚ್ಚುವ ನಂಬಿಕೆ: ಈ ಹಿಂದೆ ಭಕ್ತರು ತಮ್ಮ ಬಯಕೆ ಈಡೇರುವುದೇ ಎಂಬ ನಂಬಿಕೆ ಬಲಗೊಳಿಸಲು ದರ್ಗಾದ ಗೋಡೆಗಳಿಗೆ ನಾಣ್ಯಗಳನ್ನು ಅಂಟಿಸುತ್ತಿದ್ದರು. ಸದ್ಯ ಆಧುನೀಕರಣಗೊಂಡಿರುವ ಮೂಲ ದೇವಸ್ಥಾನದಲ್ಲಿ ದರ್ಗಾ ಸುತ್ತಲೂ ಗೋಡೆಗಳಿಗೆ ಮಾರ್ಬಲ್ ಹಾಕಲಾಗಿದ್ದು. ಈಗಲು ಭಕ್ತರು ಅಂಟಿಸುವ ನಾಣ್ಯಗಳು ಅಂಟಿ ನೈಜ ಭಕ್ತರ ಭವಿಷ್ಯದ ನಂಬಿಕೆ ಬಲಗೊಳಿಸುತ್ತಲಿದೆ.
ಹಿಂದು ಪೂಜಾರಿ: ಹಲವಾರೂ ವರ್ಷಗಳಿಂದಲೂ ಸೂಫಿ ಸಂತ ದಾವಲ್ ಮಲಿಕ್ ಮುಸ್ಲಿಂ ಆದರೂ ದೇವಸ್ಥಾನ ಪೂಜಾರಿಕೆ ಮಾತ್ರ ಹಿಂದುಗಳದ್ದಾಗಿದೆ. ಗ್ರಾಮದ ಮುಜಾವರ ಮನೆತನ ತುಂಬ ಭಕ್ತಿ ಶ್ರದ್ದೆಯಿಂದ ಸಂತನ ಸಂದೇಶದಂತೆ ಚಾಚು ತಪ್ಪದೆ ಎಲ್ಲ ವರ್ಗ, ಧರ್ಮಗಳ ಸಂಗಮವನ್ನು ಸಾಕ್ಷೀಯಾಗಿರಿಸಿಕೊಂಡು ಹಿಂದು ಪೂಜಾರಿಗಳಾಗಿ ಭಕ್ತಿ ಸೇವೆ ಸಲ್ಲಿಸುತ್ತಿದ್ದಾರೆ.
ವಾರದಲ್ಲಿ ಎರಡು ದಿನ ಹರಕೆ
ಪ್ರತಿ ಸೋಮವಾರ ಮತ್ತು ಗುರುವಾರ ಎರಡು ದಿನ ಮಲ್ಲಿಕ್ ರ ಭಕ್ತರು ತಮ್ಮ ಬಲಿ ಹರಕೆ ತೀರಿಸುತ್ತಾರೆ. ಅಂದು ದೇವಸ್ಥಾನದಲ್ಲಿ ಜನ ಜಾತ್ರೆಯೇ ನೆರೆದಿರುತ್ತದೆ. ಸೂಫಿ ಸಂತ್ ದಾವಲ್ ಮಲೀಕ್ ಮುಸ್ಲಿಂ ಆದರೂ ಪೂಜಾರಿಕೆ ಮಾತ್ರ ಹಿಂದುಗಳಿಂದ ಆಗುತ್ತದೆ. ಇದು ಹಲವಾರು ವರ್ಷಗಳಿಂದಲೂ ನಡೆದು ಬಂದ ಸಂಪ್ರದಾಯ. ಇಲ್ಲಿನ ದೈವದ ಭಕ್ತರಲ್ಲಿ ಬಾವಾಗಳು,ಜೋಗಪ್ಪಗಳು ಹಾಗೂ ಪೂಜಾರಿಗಳು ಇರುವುದು ವಿಶೇಷ ಸಂಪ್ರದಾಯ ಆಚರಣೆಗೆ ಸಾಕ್ಷಿಯಾಗಿದೆ.
ಪವಾಡ ಪುರುಷ ನೂರಾರು ವರ್ಷಗಳ ಹಿಂದೆ ನೆಲೆಸಿದ್ದ ಸೊಫಿ ಸಂತ್ ದಾವಲ್ ಮಲಿಕರು ಪವಾಡಗಳಿಂದ ಜನರನ್ನು ಉದ್ಧರಿಸುತ್ತಾರೆ ಎಂಬ ನಂಬಿಕೆ ಇದೆ. ನಂಬಿ ಬಂದವರಿಗೆ ದೇವರಾಗಿ, ಮೌಢ್ಯ ಕಂಡು ಬಂದವರಿಗೆ ಮೌನಿಯಾಗಿ ಸಂತೈಸುತ್ತಿದ್ದರು.
ಜನವರಿ 22ರಿಂದ ಜಾತ್ರೆ: ವಿವಿಧ ಧಾರ್ಮಿಕ ಕಾರ್ಯಕ್ರಮಗಳು
ಯಂಕಂಚಿ ದಾವಲ್ ಮಲಿಕ್ ಜಾತ್ರೆ ನಿಮಿತ್ಯ ಜನವರಿ 22 ರಂದು ಮುಜಾವರ ಮನೆಯಿಂದ ದೇವರ ಪಲ್ಲಕ್ಕಿ ಉತ್ಸವವು ರಾತ್ರಿ 1 ಗಂಟೆಗೆ ವಿಜೃಂಭಣೆಯಿಂದ ಹೊರಟು ಬೆಳಗ್ಗೆ 3-15 ಕ್ಕೆ ದೇವಸ್ಥಾನ ತಲಪುವುದು. ನಂತರ ಬೆಳಗ್ಗೆ 4 ಗಂಟೆಗೆ ಗಂಧ ಏರುವುದು. ಜನವರಿ 23 ರಂದು ದೀಪೋತ್ಸವ ವಿಶೇಷ ಜಾತ್ರೆ ನಡೆಯಲಿದೆ.
ಜನವರಿ 24ರಂದು ಬೆಳಗ್ಗೆ 8 ರಿಂದ ರಾತ್ರಿ 5 ಗಂಟೆವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಜನವರಿ 25ರಂದು ಬೆಳಗ್ಗೆ 10 ಗಂಟೆಗೆ ಭಾರ ಎತ್ತುವ ಸ್ಪರ್ಧೆ ಹಾಗೂ ಸಂಜೆ 5 ಗಂಟೆಗೆ ಕುಸ್ತಿ ಪಂಧ್ಯ ನಡೆಯಲಿದೆ. ಜನವರಿ 26 ರಂದು ದೇವಸ್ಥಾನದಿಂದ ರಾತ್ರಿ 10 ಗಂಟೆಯಿಂದ ದೇವರ ಪಲ್ಲಕ್ಕಿ ಉತ್ಸವವು ರಾತ್ರಿ 1-30 ಗಂಟೆಯವರೆಗೆ ಮುಜಾವರ ಮನೆಗೆ ಬಹು ವಿಜೃಂಭಣೆಯಿಂದ ತಲುಪುವುದು. ಜನವರಿ 23ರಿಂದ 26ರವರೆಗೆ ಧನಗಳ ಜಾತ್ರೆ ನಡೆಯಲಿದೆ.












Click it and Unblock the Notifications