ಅವತ್ತು ತೊಡೆ ತಟ್ಟಿದವರು ಇವತ್ತು ಮಾಡುತ್ತಿರುವುದೇನು?
ಒಂದು ಕಾಲದಲ್ಲಿ ಬಿಜೆಪಿಗೆ ತೊಡೆತಟ್ಟಿ ಅಕ್ರಮ ಗಣಿಗಾರಿಕೆ ವಿರುದ್ಧ ಬಳ್ಳಾರಿಗೆ ಪಾದಯಾತ್ರೆ ತೆರಳಿದ್ದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ಬಳಿಕ ನಡೆದುಕೊಳ್ಳುತ್ತಿರುವ ರೀತಿ ಹಾಗೂ ಅಧಿಕಾರಕ್ಕೆ ಬಂದ ಬಳಿಕ ನಡೆದ ಘಟನಾವಳಿಗಳು ನಿಜಕ್ಕೂ ಅಚ್ಚರಿ ಹುಟ್ಟಿಸುತ್ತಿವೆ.
ಅಂದಿನ ಬಿಜೆಪಿ ಸರ್ಕಾರದ ಅಸಹ್ಯ ನಡವಳಿಕೆಗಳಿಂದ ಬೇಸತ್ತಿದ್ದ ಕರ್ನಾಟಕದ ಜನ ಉತ್ತಮ ಆಡಳಿತ ನೀಡಬಹುದೆಂಬ ಕಾರಣದಿಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಹುಮತದಿಂದ ಅಧಿಕಾರಕ್ಕೆ ಬರಲು ಅವಕಾಶ ಮಾಡಿಕೊಟ್ಟಿದ್ದರು. ಅದಾಗಿ ಈಗಾಗಲೆ ಮೂರು ವರ್ಷ ಕಳೆದಿವೆ. [ಸಿಎಂ ಬುಡಮೇಲು ಮಾಡಲು ಮತ್ತೆ ಪಾದಯಾತ್ರೆ: ಸಿದ್ದು]
ಅಂದು ಅಕ್ರಮ ಗಣಿಗಾರಿಕೆಯ ವಿರುದ್ಧ ಬಳ್ಳಾರಿ ಪಾದಯಾತ್ರೆ ನಡೆಸಿದ ಸಿದ್ದರಾಮಯ್ಯ ಇಂದು ರಾಜ್ಯವಾಪಿ ನಡೆಯುತ್ತಿರುವ ಮರಳುಗಣಿಗಾರಿಕೆಯನ್ನು ನೋಡಿಕೊಂಡು ತೆಪ್ಪಗಿದ್ದಾರೆ. ತಮ್ಮ ತವರು ಕ್ಷೇತ್ರದಲ್ಲಿ ನಡೆಯುತ್ತಿರುವ ಮರಳು ಮಾಫಿಯಾ, ತಮ್ಮದೇ ಪಕ್ಷದವರ ದಬ್ಬಾಳಿಕೆಯನ್ನು ಹತ್ತಿಕುವ ಬದಲು ಕುಮ್ಮಕ್ಕು ನೀಡುತ್ತಿದ್ದಾರೆ. [ಜಿಲ್ಲಾಧಿಕಾರಿಗೆ ಧಮ್ಕಿ, ಸಿದ್ದರಾಮಯ್ಯ ಮೌನವೇಕೆ?]
ಇವರ ಪರಮಾಪ್ತರ ದರ್ಬಾರ್ ಅಧಿಕಾರಿಗಳು ಮತ್ತು ಜನತೆಯನ್ನು ರೊಚ್ಚಿಗೆಬ್ಬಿಸುವಂತೆ ಮಾಡಿದೆ. ತನ್ನ ಮಗನ ವಿರುದ್ಧ ಮೊಕದ್ದಮೆ ದಾಖಲಿಸಿದರು ಎಂಬ ಒಂದೇ ಕಾರಣಕ್ಕೆ ಪೊಲೀಸ್ ಅಧಿಕಾರಿ ಜಿ.ಎನ್. ಮೋಹನ್ ಎಂಬುವರನ್ನು ತಾವು ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ಅಮಾನತು ಮಾಡಿದ್ದರು. ಈ ಬಗ್ಗೆ ಪ್ರಶ್ನಿಸಿದರೆ ತನ್ನ ಮಗನ ಮೇಲೆ ಪ್ರಕರಣ ದಾಖಲಿಸಿದವನನ್ನು ಸುಮ್ಮನೆ ಬಿಡಬೇಕೇನ್ರಿ ಅಂಥ ಕಣ್ಣಲ್ಲೇ ಕಿಡಿ ಕಾರುತ್ತಾರೆ.
ಬಹುಶಃ ಬೇರೆ ಯಾವುದೇ ಸರ್ಕಾರ ಅಧಿಕಾರ ನಡೆಸಿದಾಗಲೂ ಇಷ್ಟೊಂದು ಆತ್ಮಹತ್ಯೆಗಳನ್ನು ಯಾರೂ ನೋಡಿರಲಿಲ್ಲ. ಸಾವಿರಾರು ರೈತರು ಮೇಲಿಂದ ಮೇಲೆ ನೇಣಿಗೆ ಶರಣಾಗುತ್ತಾ ಹೋದರೂ ತಲೆಕೆಡಿಸಿಕೊಳ್ಳಲಿಲ್ಲ. ಇವತ್ತಿಗೂ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ಸೂಕ್ತವಾದ ಪರಿಹಾರ ನೀಡಿಲ್ಲ. [ಡಿವೈಎಸ್ ಪಿ ಎಂ.ಕೆ.ಗಣಪತಿ ಆತ್ಮಹತ್ಯೆ, ನ್ಯಾಯಾಂಗ ತನಿಖೆ]
ರೈತರ ಆತ್ಮಹತ್ಯೆ ಜತೆ ಜತೆಯಲ್ಲಿಯೇ ಅಧಿಕಾರಿಗಳು ನೇಣಿಗೆ ಶರಣಾಗುತ್ತಿದ್ದಾರೆ. ಮತ್ತೊಂದೆಡೆ ಜಿಲ್ಲಾಧಿಕಾರಿಯಂತಹ ಉನ್ನತ ಅಧಿಕಾರಿಗೆ ಅದು ಕೂಡ ಮಹಿಳಾ ಅಧಿಕಾರಿಗೆ ತಮ್ಮ ಎದುರಲ್ಲೇ ಆಪ್ತರು ಧಮಕಿ ಹಾಕುತ್ತಾರೆ. ಆದರೆ ಇವರು ಅದನ್ನು ಸಮರ್ಥಿಸಿಕೊಳ್ಳುತ್ತಾರೆ. ಏನು ಹೇಳುತ್ತೀರಿ ಇಂಥವರಿಗೆ?
ನಮ್ಮದು ಮಹಿಳಾಪರ ಸರ್ಕಾರ ಎನ್ನುವ ಇವರು ಅಧಿಕಾರಕ್ಕೆ ಬಂದ ಮೇಲೆ ತಮ್ಮ ತವರಲ್ಲೇ ಮಹಿಳಾ ಅಧಿಕಾರಿ ರಶ್ಮಿ ಅವರ ಮೇಲೆ ಹಲ್ಲೆ ನಡೆಯಿತು. ಜಿಲ್ಲಾಧಿಕಾರಿ ಶಿಖಾ ಅವರಿಗೆ ಧಮಕಿ ಹಾಕಿ ಅಶ್ಲೀಲ ಪದಗಳಿಂದ ನಿಂದಿಸಿ ಹಲ್ಲೆಗೂ ಮುಂದಾದರು. ಮಂತ್ರಿಯ ದಬ್ಬಾಳಿಕೆಗೆ ಬೆದರಿ ಅನುಪಮಾ ಶೆಣೈ ರಾಜೀನಾಮೆ ನೀಡುವಂತಾಯಿತು. ಇಷ್ಟೇ ಅಲ್ಲದೆ ಒಬ್ಬ ಪೊಲೀಸ್ ಅಧಿಕಾರಿ ನೇಣಿಗೆ ಶರಣಾದರೆ ಇಡೀ ಸದನದಲ್ಲಿ ಆತನ ಸಾವಿಗೆ ಪತ್ನಿಯೇ ಕಾರಣ ಎಂಬಂತೆ ತೇಜೋವಧೆಯೂ ಮಾಡಲಾಯಿತು. [ರಾಜೀನಾಮೆ ನೀಡಿದ್ದೇಕೆ? ಅನುಪಮಾ ಶೆಣೈ ಪತ್ರದಿಂದ ಬಹಿರಂಗ]
ಅಲ್ಲಿ ನೋಡಿದರೆ, ದೇಶದಾದ್ಯಂತ 'ವಿಮೆನ್ ಎಂಪಾವರ್ಮೆಂಟ್' ಅಂತ ರಾಹುಲ್ ಗಾಂಧಿ ಭಾಷಣ ಬಿಗಿಯುತ್ತಾರೆ, ಇಲ್ಲಿ ನೋಡಿದರೆ ಇವರು ಮಹಿಳೆಯರನ್ನು ಈರೀತಿ ನಡೆಸಿಕೊಳ್ಳುತ್ತಿದ್ದಾರೆ. ಇದೆಲ್ಲವನ್ನು ನೋಡಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಮಹಿಳೆಯರಿಗೆ ರಕ್ಷಣೆಯಿದೆಯಾ? ಸರ್ಕಾರದ ಅಧೀನದಲ್ಲಿರುವ ಮಹಿಳಾ ಆಯೋಗ ಏಕೆ ಮೌನವಾಗಿದೆ.
ಈಗಾಗಲೇ ಜನ ರೊಚ್ಚಿಗೆದ್ದಿದ್ದಾರೆ. ಎಲ್ಲೆಡೆ ಸರ್ಕಾರದ ವಿರುದ್ಧ ಆಕ್ರೋಶ ಅಸಮಾಧಾನಗಳು ವ್ಯಕ್ತವಾಗುತ್ತಿದೆ. ನೊಂದವರ ಕಣ್ಣೀರು, ಶಾಪ ತಟ್ಟುವ ದಿನಗಳು ಕಾಂಗ್ರೆಸ್ಸಿಗೆ ದೂರವಿಲ್ಲ. ನೀವೇನಂತೀರಿ? [ಸಿದ್ದರಾಮಯ್ಯಗೆ ಕಾನೂನು ತಜ್ಞ ಬ್ರಿಜೇಶ್ ಕಾಳಪ್ಪ ಕಿವಿಮಾತು]