ಸಮುದ್ರದ ತೀರದ ಪ್ರೋಟೀನ್ ಗಣಿ: ಕರಾವಳಿಗರ ಅಚ್ಚುಮೆಚ್ಚಿನ ಕಪ್ಪೆಚಿಪ್ಪಿನ ಸಂಪೂರ್ಣ ಮಾಹಿತಿ ಇಲ್ಲಿದೆ

ಕರಾವಳಿ ಭಾಗದ ಜನರಿಗೆ 'ಕಪ್ಪೆಚಿಪ್ಪು' ಎಂದರೆ ಬಲು ಅಚ್ಚುಮೆಚ್ಚು. ಸಮುದ್ರ ಹಾಗೂ ನದಿ ಸೇರುವ ಅಳಿವೆ ಪ್ರದೇಶಗಳಲ್ಲಿ, ಹಿನ್ನೀರಿನಲ್ಲಿ ಹೇರಳವಾಗಿ ಸಿಗುವ ಈ ಕಪ್ಪೆಚಿಪ್ಪು, ಕರಾವಳಿಯ ಆಹಾರ ಸಂಸ್ಕೃತಿಯ ಒಂದು ಅವಿಭಾಜ್ಯ ಅಂಗವಾಗಿದೆ. ರುಚಿ ಹಾಗೂ ಆರೋಗ್ಯಕ್ಕೆ ಹೆಸರಾಗಿರುವ ಇದೇ ಕಪ್ಪೆಚಿಪ್ಪು ಆರಿಸಲು ಹೋಗಿ ಅನೇಕರು ಹೂಳಿನಲ್ಲಿ ಸಿಲುಕಿ ಪ್ರಾಣ ಕಳೆದುಕೊಂಡಿರುವ ವಿಷಾದನೀಯ ಘಟನೆಗಳೂ ನಮ್ಮ ಮುಂದಿವೆ. ಹಾಗಾದರೆ, ಕಪ್ಪೆಚಿಪ್ಪು ಎಂದರೇನು? ಅದು ಎಲ್ಲಿ ಸಿಗುತ್ತದೆ? ಅದರಿಂದಾಗುವ ಲಾಭಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ.

ಕಪ್ಪೆಚಿಪ್ಪು ಎಂದರೇನು?

ಕಪ್ಪೆಚಿಪ್ಪು ಎಂಬುದು ಗಟ್ಟಿಯಾದ ಚಿಪ್ಪಿನೊಳಗೆ ವಾಸಿಸುವ ಒಂದು ಮೃದ್ವಂಗಿ (Bivalve mollusc). ಇದು ಉಪ್ಪು ನೀರು ಮತ್ತು ಸಿಹಿ ನೀರು ಸೇರುವ ಜಾಗದಲ್ಲಿ ಮಣ್ಣಿನ ಅಡಿಯಲ್ಲಿ ಬೆಳೆಯುತ್ತದೆ. ಕರಾವಳಿಯ ವಿವಿಧ ಭಾಗಗಳಲ್ಲಿ ಇದಕ್ಕೆ ಬೇರೆ ಬೇರೆ ಹೆಸರುಗಳಿವೆ. ಕುಂದಾಪುರ ಭಾಗಗಳಲ್ಲಿ ಇದನ್ನು ಮೋಳಿ ಅಥವಾ ಮಳಿ ಚಿಪ್ಪು, ತುಳುವಿನಲ್ಲಿ 'ಮರುವಾಯಿ', ಕೊಂಕಣಿಯಲ್ಲಿ 'ಟಿಸ್ಸ್ರಿಯಾ', ಉತ್ತರ ಕನ್ನಡದಲ್ಲಿ 'ಖುಬ್ಬೆ' ಹಾಗೂ ಇಂಗ್ಲಿಷ್‌ನಲ್ಲಿ ಇದನ್ನು 'ಕ್ಲಾಮ್ಸ್' ಎಂದು ಕರೆಯಲಾಗುತ್ತದೆ.

What Are Clams

ಎಲ್ಲಿ ಸಿಗುತ್ತದೆ ಮತ್ತು ಆರಿಸುವುದು ಹೇಗೆ?

ಕರ್ನಾಟಕದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡದ ನದೀಮುಖ ಪ್ರದೇಶಗಳಲ್ಲಿ ಇವು ಹೆಚ್ಚಾಗಿ ಸಿಗುತ್ತವೆ. ಮಂಗಳೂರು, ಕುಂದಾಪುರ, ಗಂಗೊಳ್ಳಿ, ಕಾರವಾರ, ಹೊನ್ನಾವರ ಮತ್ತು ಭಟ್ಕಳದ ನದಿ ತೀರಗಳಲ್ಲಿ ಇವುಗಳ ಲಭ್ಯತೆ ಹೆಚ್ಚು.

ಕಪ್ಪೆಚಿಪ್ಪು ಆರಿಸುವುದು ಸುಲಭದ ಕೆಲಸವಲ್ಲ. ನದಿಯ ಆಳವಿಲ್ಲದ ಪ್ರದೇಶದಲ್ಲಿ, ಮಣ್ಣು ಅಥವಾ ಮರಳಿನೊಳಗೆ ಹುದುಗಿರುವ ಇವುಗಳನ್ನು ಪಾದಗಳಿಂದ ಸ್ಪರ್ಶಿಸಿ, ಬಳಿಕ ಮುಳುಗಿ ಕೈಯಿಂದ ಹೆಕ್ಕಿ ತೆಗೆಯಬೇಕು. ಇದು ಶ್ರಮದಾಯಕ ಹಾಗೂ ಅಪಾಯಕಾರಿ ಕೆಲಸ. ನದಿಯ ನೀರು ಇಳಿಕೆಯಾದಾಗ ಮಾತ್ರ ಈ ಕೆಲಸ ಮಾಡಲು ಸಾಧ್ಯ.

ಆಹಾರ ಮತ್ತು ಇತರ ಉಪಯೋಗಗಳು

ಕಪ್ಪೆಚಿಪ್ಪಿನಿಂದ ಅತ್ಯಂತ ರುಚಿಕರವಾದ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಕರಾವಳಿಯ ಪ್ರಸಿದ್ಧ 'ಮಳಿ ಸುಕ್ಕ', ಮಳಿ ಗಸಿ, ಮತ್ತು ಅಕ್ಕಿ ತರಿ ಬಳಸಿ ಮಾಡುವ ' ಮಳಿ ಪುಂಡಿ' ಬಹಳ ಜನಪ್ರಿಯ. ಒಳಗಿನ ಮಾಂಸವನ್ನು ತಿಂದ ಬಳಿಕ, ಉಳಿಯುವ ಗಟ್ಟಿ ಚಿಪ್ಪನ್ನು ಸುಟ್ಟು ವೀಳ್ಯದೆಲೆ ಸೇರಿಸಿ ತಿನ್ನುವ ಸುಣ್ಣವನ್ನು ತಯಾರಿಸಲು, ಕೋಳಿ ಆಹಾರದಲ್ಲಿ ಕ್ಯಾಲ್ಸಿಯಂ ಪೂರಕವಾಗಿ ಮತ್ತು ಅಲಂಕಾರಿಕ ವಸ್ತುಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ.

ಆರೋಗ್ಯಕ್ಕೆ ಲಾಭಗಳೇನು?

ಈ ಕಪ್ಪೆಚಿಪ್ಪಿನ ಮಾಂಸವು ಪ್ರೋಟೀನ್‌ನ ಅತ್ಯುತ್ತಮ ಮೂಲವಾಗಿದೆ. ಇದರಲ್ಲಿ ಕೊಬ್ಬಿನಾಂಶ ತೀರಾ ಕಡಿಮೆ ಇದ್ದು, ಹೃದಯದ ಆರೋಗ್ಯಕ್ಕೆ ಇದು ಹೇಳಿಮಾಡಿಸಿದ ಆಹಾರ. ವಿಟಮಿನ್ ಬಿ12, ಕಬ್ಬಿಣಾಂಶ, ಸತು (Zinc) ಮತ್ತು ಒಮೆಗಾ-3 ಫ್ಯಾಟಿ ಆಸಿಡ್ ಇದರಲ್ಲಿ ಹೇರಳವಾಗಿದೆ. ರಕ್ತಹೀನತೆಯನ್ನು ತಡೆಯಲು, ಥೈರಾಯ್ಡ್ ಆರೋಗ್ಯ ಕಾಪಾಡಲು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಇದು ಅದ್ಭುತವಾಗಿ ಕೆಲಸ ಮಾಡುತ್ತದೆ.

ಹಿಂದಿನ ದುರಂತಗಳು

ಈ ಚಿಪ್ಪುಗಳನ್ನು ಆರಿಸುವಾಗ ಜಲ ದುರಂತಗಳು ಸಂಭವಿಸುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಉಡುಪಿ, ಕುಂದಾಪುರ, ಮತ್ತು ಕಾರವಾರ ಭಾಗಗಳಲ್ಲಿ ಅನೇಕ ಪ್ರಕರಣಗಳು ನಡೆದಿವೆ. ಉದಾಹರಣೆಗೆ, ಕುಂದಾಪುರದ ಪಂಚಗಂಗಾವಳಿ ಹಿನ್ನೀರು ಹಾಗೂ ಉಡುಪಿಯ ಸ್ವರ್ಣ ಮತ್ತು ಸೀತಾ ನದಿಪಾತ್ರದ ಅಳಿವೆಗಳಲ್ಲಿ ಸ್ಥಳೀಯರು ಕಪ್ಪೆಚಿಪ್ಪು ಆರಿಸಲು ಹೋದಾಗ ದಿಢೀರನೆ ನೀರಿನ ಮಟ್ಟ ಹೆಚ್ಚಾಗಿ ಕೊಚ್ಚಿಹೋಗಿರುವ ಘಟನೆಗಳು ಹಿಂದಿನ ವರ್ಷಗಳಲ್ಲಿ ವರದಿಯಾಗಿವೆ.

ಕಾರವಾರದ ಕಾಳಿ ನದಿ ಹಿನ್ನೀರಿನಲ್ಲಿಯೂ ಸಹ, ನದಿ ತಳದಲ್ಲಿರುವ ಮರಳಿನ ಅಡಿಯಲ್ಲಿ ಕಪ್ಪೆಚಿಪ್ಪು ಹೆಕ್ಕುವಾಗ ಕಾಲಿನ ಕೆಳಗಿನ ಮಣ್ಣು ಕುಸಿದು ಹೂಳಿನಲ್ಲಿ ಸಿಲುಕಿ ಪ್ರಾಣ ಕಳೆದುಕೊಂಡ ನಿದರ್ಶನಗಳಿವೆ. ಸಾಮಾನ್ಯವಾಗಿ ಮಧ್ಯಾಹ್ನದ ವೇಳೆಗೆ ಸಮುದ್ರದ ಅಲೆಗಳ ಅಬ್ಬರ ನದಿಯೊಳಗೆ ನುಗ್ಗಿದಾಗ, ನೀರಿನ ಸೆಳೆತದ ಬಗ್ಗೆ ಯಾವುದೇ ಅಂದಾಜು ಸಿಗದೆ, ಈಜಲು ಬಾರದವರು ಸುಳಿಯಲ್ಲಿ ಸಿಲುಕಿ ಇಂತಹ ಭೀಕರ ದುರಂತಗಳು ಸಂಭವಿಸುತ್ತವೆ.

ಭಟ್ಕಳ ದುರಂತ

ಇದೇ ಮಾದರಿಯ ಘೋರ ದುರಂತ ಇತ್ತೀಚೆಗೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಶಿರಾಲಿ ಸಮೀಪದ ವೆಂಕಟಾಪುರ (ತಟ್ಟೆಹಕ್ಕಲು) ನದಿಯಲ್ಲಿ ಸಂಭವಿಸಿದೆ. ಭಾನುವಾರ (ಮೇ 24, 2026) ಬೆಳಿಗ್ಗೆ ಕಪ್ಪೆಚಿಪ್ಪು ಆರಿಸಲು ನದಿಗೆ ಇಳಿದಿದ್ದ ಒಂದೇ ಕುಟುಂಬದ 14 ಜನರ ಪೈಕಿ 11 ಮಂದಿ ಏಕಾಏಕಿ ನೀರಿನ ಹರಿವು ಹೆಚ್ಚಾದ ಪರಿಣಾಮ ನೀರಿನಲ್ಲಿ ಕೊಚ್ಚಿಹೋಗಿ ಸಾವನ್ನಪ್ಪಿದ್ದಾರೆ. ಹೊಟ್ಟೆಪಾಡಿಗಾಗಿ ನದಿಗೆ ಇಳಿದಿದ್ದವರು ಜಲಸಮಾಧಿಯಾಗಿರುವುದು ಇಡೀ ಕರಾವಳಿಯನ್ನೇ ಬೆಚ್ಚಿಬೀಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+