ಎಷ್ಟೇ ದುಡಿದರೂ ಹಣ ಉಳಿಯುತ್ತಿಲ್ಲವೇ? ಈ 6 ವಾಸ್ತು ನಿಯಮಗಳನ್ನು ಪಾಲಿಸಿದರೆ ಧನಸಂಪತ್ತು ಹೆಚ್ಚುತ್ತದೆ
ಇತ್ತೀಚಿನ ದಿನಗಳಲ್ಲಿ ನಾವು ಎಷ್ಟೇ ದುಡಿದು ಹಣ ಗಳಿಸಿದರು ಅದು ಕೈಯಲ್ಲಿ ಉಳಿಯುತ್ತಿಲ್ಲ ಎಂಬ ಆತಂಕ ಬಹುತೇಕ ಎಲ್ಲರಲ್ಲೂ ಕಾಡುತ್ತಿರುತ್ತದೆ. ತಿಂಗಳ ಆರಂಭದಲ್ಲಿ ಸಂಬಳ ಬಂದರೂ, ತಿಂಗಳ ಕೊನೆಯಲ್ಲಿ ಖರ್ಚುಗಳು ಹೆಚ್ಚಾಗಿ ಹಣ ಖಾಲಿಯಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿರುವ ಶಕ್ತಿಯ ಸಮತೋಲನವು ಆರ್ಥಿಕ ಸ್ಥಿತಿಯ ಮೇಲೂ ಪರಿಣಾಮ ಬೀರುತ್ತದೆ ಎನ್ನಲಾಗುತ್ತದೆ. ಮನೆಯಲ್ಲಿ ಕೆಲವು ಸಣ್ಣ ಬದಲಾವಣೆಗಳನ್ನು ಮಾಡಿಕೊಳ್ಳುವುದರಿಂದ ಧನಸಂಪತ್ತು ಹೆಚ್ಚುವುದು ಮಾತ್ರವಲ್ಲ, ಲಕ್ಷ್ಮೀ ದೇವಿಯ ಕೃಪೆಯೂ ದೊರೆಯುತ್ತದೆ ಎಂದು ವಾಸ್ತು ತಜ್ಞರು ಹೇಳುತ್ತಾರೆ. ಹಣ ಕೈಯಲ್ಲಿ ಉಳಿಯಲು ಸಹಾಯ ಮಾಡುತ್ತದೆ ಎನ್ನಲಾಗುವ ಆರು ಪ್ರಮುಖ ವಾಸ್ತು ನಿಯಮಗಳಿವು.
ಪರ್ಸ್ ಯಾವಾಗಲೂ ಸ್ವಚ್ಛವಾಗಿರಬೇಕು
ನಮ್ಮ ಪರ್ಸ್ ನಮ್ಮ ಆರ್ಥಿಕ ಸ್ಥಿತಿಯನ್ನು ಪ್ರತಿಬಿಂಬಿಸುವ ಪ್ರಮುಖ ವಸ್ತುಗಳಲ್ಲಿ ಒಂದು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಹರಿದ, ಹಳೆಯ ಬಿಲ್ ಅಥವಾ ಗಲೀಜಾದ ಪರ್ಸ್ ಬಳಸುವುದು ಅಶುಭ ಎಂದು ಪರಿಗಣಿಸಲಾಗುತ್ತದೆ. ಕೆಂಪು, ಹಸಿರು ಅಥವಾ ಕಪ್ಪು ಬಣ್ಣದ ಪರ್ಸ್‌ಗಳು ಆರ್ಥಿಕ ಬೆಳವಣಿಗೆಗೆ ಸಹಾಯಕವೆಂದು ನಂಬಲಾಗಿದೆ. ಪರ್ಸ್‌ನಲ್ಲಿ ಒಂದು ಸಣ್ಣ ಬೆಳ್ಳಿ ನಾಣ್ಯ ಅಥವಾ ಕೆಲವು ಅಕ್ಕಿ ಕಾಳುಗಳನ್ನು ಇಟ್ಟುಕೊಳ್ಳುವುದರಿಂದ ಧನ ಆಕರ್ಷಣೆ ಹೆಚ್ಚುತ್ತದೆ ಎನ್ನುವ ನಂಬಿಕೆಯೂ ಇದೆ. ಅನಗತ್ಯವಾದ ಹಳೆಯ ಬಿಲ್‌ಗಳು ಅಥವಾ ಕಾಗದಗಳನ್ನು ಪರ್ಸ್‌ನಲ್ಲಿ ಇಡಬಾರದು.

ಅಡುಗೆಮನೆಯ ಸ್ವಚ್ಛತೆ ಅತ್ಯಂತ ಮುಖ್ಯ
ವಾಸ್ತು ಶಾಸ್ತ್ರದಲ್ಲಿ ಅಡುಗೆಮನೆಯನ್ನು ಲಕ್ಷ್ಮೀ ದೇವಿಯ ಸ್ಥಾನವೆಂದು ಪರಿಗಣಿಸಲಾಗುತ್ತದೆ. ವಿಶೇಷವಾಗಿ ಗ್ಯಾಸ್ ಸ್ಟೌವ್ ಯಾವಾಗಲೂ ಸ್ವಚ್ಛವಾಗಿರಬೇಕು. ಸ್ಟೌವ್ ಮೇಲೆ ಕೊಳಕು ಜಮಾಯಿಸಿದರೆ ಮನೆಯ ಆರ್ಥಿಕ ಬೆಳವಣಿಗೆ ನಿಧಾನಗೊಳ್ಳುತ್ತದೆ ಎಂದು ವಾಸ್ತು ತಜ್ಞರ ಅಭಿಪ್ರಾಯ ಆಗಿದೆ. ಎಲ್ಲಾ ಬರ್ನರ್‌ಗಳನ್ನು ಸಮಾನವಾಗಿ ಬಳಸುವುದು ಶುಭಕರವೆಂದು ನಂಬಲಾಗಿದೆ. ಜೊತೆಗೆ ಅಡುಗೆಮನೆಯಲ್ಲಿ ಹಳದಿ ಬಣ್ಣದ ಆಹಾರ ಪದಾರ್ಥಗಳನ್ನು ಬಳಸುವುದರಿಂದ ಉತ್ತಮ ಫಲಿತಾಂಶ ನೀಡುತ್ತದೆ ಎಂದು ವಾಸ್ತು ತಜ್ಞರು ಹೇಳುತ್ತಾರೆ.
ಮಲಗುವ ದಿಕ್ಕು ಕೂಡ ಪ್ರಭಾವ ಬೀರುತ್ತದೆ
ರಾತ್ರಿ ಮಲಗುವಾಗ ದಕ್ಷಿಣ ಅಥವಾ ಪೂರ್ವ ದಿಕ್ಕಿಗೆ ತಲೆ ಇಟ್ಟು ಮಲಗುವುದು ಉತ್ತಮ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಇದರಿಂದ ಮನಸ್ಸಿಗೆ ಶಾಂತಿ ಸಿಗುವುದರ ಜೊತೆಗೆ ಸರಿಯಾದ ಆರ್ಥಿಕ ನಿರ್ಧಾರಗಳನ್ನು ತೆಗೆದುಕೊಳ್ಳುವ ಶಕ್ತಿಯು ಹೆಚ್ಚುತ್ತದೆ ಎನ್ನಲಾಗುತ್ತದೆ. ಮನೆಯ ಮಾಲೀಕರ ಮಲಗುವ ಕೋಣೆ ನೈಋತ್ಯ ಮೂಲೆಯಲ್ಲಿ ಇದ್ದರೆ ಕುಟುಂಬದ ಸ್ಥಿರತೆ ಮತ್ತು ಆರ್ಥಿಕ ಸಮೃದ್ಧಿ ಹೆಚ್ಚುತ್ತದೆ ಎಂಬ ನಂಬಿಕೆ ಇದೆ.
ಮುರಿದ ವಸ್ತುಗಳನ್ನು ಮನೆಯಲ್ಲಿ ಇಡಬೇಡಿ
ಒಡೆದ ಕನ್ನಡಿಗಳು, ಹಾಳಾದ ಎಲೆಕ್ಟ್ರಾನಿಕ್ ವಸ್ತುಗಳು ಅಥವಾ ಒಡೆದ ಉಪಕರಣಗಳನ್ನು ಮನೆಯಲ್ಲಿ ಇಡುವುದು ಅಶುಭ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಇವು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತವೆ ಎಂದು ನಂಬಲಾಗಿದೆ. ವಿಶೇಷವಾಗಿ ಈಶಾನ್ಯ ಮೂಲೆಯನ್ನು ಯಾವಾಗಲೂ ಸ್ವಚ್ಛವಾಗಿ ಮತ್ತು ಖಾಲಿಯಾಗಿ ಇಡಬೇಕು. ಅಲ್ಲಿ ಭಾರವಾದ ಅಥವಾ ಉಪಯೋಗವಿಲ್ಲದ ವಸ್ತುಗಳನ್ನು ಇಡುವುದನ್ನು ತಪ್ಪಿಸಬೇಕು.
ಉಪ್ಪಿನಿಂದ ನಕಾರಾತ್ಮಕ ಶಕ್ತಿ ನಿವಾರಣೆ
ವಾಸ್ತು ಪ್ರಕಾರ ಉಪ್ಪಿಗೆ ನಕಾರಾತ್ಮಕ ಶಕ್ತಿಯನ್ನು ಹೀರಿಕೊಳ್ಳುವ ಸಾಮರ್ಥ್ಯ ಇರುತ್ತದೆ. ಆದ್ದರಿಂದ ಮನೆಯ ಮೂಲೆಗಳಲ್ಲಿ ಸಣ್ಣ ಗಾಜಿನ ಪಾತ್ರೆಯಲ್ಲಿ ಉಪ್ಪು ಇಡುವುದರಿಂದ ನಕಾರಾತ್ಮಕ ಕಂಪನಗಳು ಕಡಿಮೆಯಾಗುತ್ತವೆ ಎಂದು ಹೇಳಲಾಗುತ್ತದೆ. ವಾರಕ್ಕೊಮ್ಮೆ ಈ ಉಪ್ಪನ್ನು ಬದಲಾಯಿಸುವುದು ಒಳ್ಳೆಯದು ಎಂದು ತಜ್ಞರು ವಾಸ್ತು ಸಲಹೆ ನೀಡುತ್ತಾರೆ. ಇದರಿಂದ ಮನೆಯಲ್ಲಿ ಸಕಾರಾತ್ಮಕ ವಾತಾವರಣ ನಿರ್ಮಾಣವಾಗುತ್ತದೆ ಎಂದು ನಂಬಲಾಗಿದೆ.
ಉತ್ತರ ದಿಕ್ಕನ್ನು ಸ್ವಚ್ಛವಾಗಿಡಿ
ಉತ್ತರ ದಿಕ್ಕಿನ ಅಧಿಪತಿ ಸಂಪತ್ತಿನ ದೇವರು ಕುಬೇರ ಎಂದು ನಂಬಲಾಗುತ್ತದೆ. ಆದ್ದರಿಂದ ಮನೆಯ ಉತ್ತರ ಭಾಗವನ್ನು ಯಾವಾಗಲೂ ಸ್ವಚ್ಛವಾಗಿ, ಬೆಳಕು ಬರುವಂತೆ ಇಡಬೇಕು. ಈ ಜಾಗದಲ್ಲಿ ನೀರಿನಿಂದ ತುಂಬಿದ ಪಾತ್ರೆಯಲ್ಲಿ ತಾಜಾ ಹೂವುಗಳನ್ನು ಇಡುವುದರಿಂದ ಧನ ಸಮೃದ್ಧಿ ಹೆಚ್ಚುತ್ತದೆ ಎಂದು ಹೇಳಲಾಗುತ್ತದೆ. ಉತ್ತರ ದಿಕ್ಕಿನಲ್ಲಿ ಸರಿಯಾದ ವ್ಯವಸ್ಥೆ ಮಾಡಿದರೆ ಹಣದ ಹರಿವು ಸುಧಾರಿಸುತ್ತದೆ ಎನ್ನುವುದು ವಾಸ್ತು ತಜ್ಞರ ಅಭಿಪ್ರಾಯ.
ಗಮನಿಸಿ: ಈ ಮಾಹಿತಿಯು ವಾಸ್ತು ಶಾಸ್ತ್ರ ಮತ್ತು ಸಾಂಪ್ರದಾಯಿಕ ನಂಬಿಕೆಗಳ ಆಧಾರಿತವಾಗಿದೆ. ವೈಯಕ್ತಿಕ ನಂಬಿಕೆ ಮತ್ತು ಅಭಿರುಚಿಗೆ ಅನುಗುಣವಾಗಿ ಅನುಸರಿಸಬಹುದು.














Click it and Unblock the Notifications