ನಟ ದರ್ಶನ್ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ: ಜೂನ್ 1ರಿಂದ ಬದಲಾಗಲಿದೆ ಇಡೀ ಕೇಸ್‌ನ ದಿಕ್ಕು
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಅವರಿಗೆ ಸದ್ಯಕ್ಕಂತೂ ಬಿಡುಗಡೆ ಭಾಗ್ಯ ಇಲ್ಲ ಎನ್ನುವುದು ಸುಪ್ರೀಂ ಕೋರ್ಟ್ ಆದೇಶದಿಂದ ಸಾಬೀತಾಗಿದೆ. ಈ ಆಘಾತದಿಂದ ದರ್ಶನ್ ಕುಟುಂಬ ಇನ್ನೂ ಚೇತರಿಸಿಕೊಳ್ಳುವ ಮುನ್ನವೇ, ಇತ್ತ ಪ್ರಕರಣದಲ್ಲಿ ಅತ್ಯಂತ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಇದೇ ಜೂನ್ 1ರಿಂದ ಈ ಹೈಪ್ರೊಫೈಲ್ ಕೇಸ್‌ನ ದಿಕ್ಕೇ ಬದಲಾಗಲಿದ್ದು, ಆ ಬದಲಾವಣೆ ಬಗ್ಗೆ ಮಾಹಿತಿ ಇಲ್ಲಿದೆ.
ನ್ಯಾಯಾಲಯಗಳ ಪೊಲೀಸ್ ಠಾಣಾ ವ್ಯಾಪ್ತಿಯನ್ನು ಮರು ಹಂಚಿಕೆ ಮಾಡಲಾಗಿರುವ ಹಿನ್ನೆಲೆಯಲ್ಲಿ, ಈ ಹೈಪ್ರೊಫೈಲ್ ಪ್ರಕರಣದ ವಿಚಾರಣಾ ನ್ಯಾಯಾಲಯ ಬದಲಾಗುತ್ತಿದೆ. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಗೆ ಒಳಪಡುವ ಈ ಪ್ರಕರಣವನ್ನು ಇದುವರೆಗೆ 'ಸಿಸಿಹೆಚ್ 57' ನ್ಯಾಯಾಲಯ ವಿಚಾರಣೆ ನಡೆಸುತ್ತಿತ್ತು. ಇನ್ಮುಂದೆ ಇದನ್ನು 'ಸಿಸಿಹೆಚ್ 59' ನ್ಯಾಯಾಲಯಕ್ಕೆ ವರ್ಗಾಯಿಸಲಾಗುತ್ತಿದೆ. ಸಿಟಿ ಸಿವಿಲ್ ಕೋರ್ಟ್‌ನ ಡೆಪ್ಯುಟಿ ರಿಜಿಸ್ಟ್ರಾರ್ ಅವರು ಈ ಬಗ್ಗೆ ಅಧಿಕೃತ ಆದೇಶ ಹೊರಡಿಸಿದ್ದು, ಜೂನ್ 1ರಿಂದ ಹೊಸ ಕೋರ್ಟ್‌ನಲ್ಲಿ ಪ್ರಕ್ರಿಯೆಗಳು ಆರಂಭವಾಗಲಿವೆ. ಹೊಸ ನ್ಯಾಯಾಧೀಶರು ಇನ್ಮುಂದೆ ಈ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದ್ದಾರೆ.

ವಾರದಲ್ಲಿ 4 ದಿನ ವಿಚಾರಣೆ ಸಾಧ್ಯತೆ
ಮುಂದಿನ ಒಂದು ವರ್ಷದೊಳಗೆ ಈ ಪ್ರಕರಣದ ಎಲ್ಲ ಸಾಕ್ಷಿಗಳ ವಿಚಾರಣೆಯನ್ನು ಮುಕ್ತಾಯಗೊಳಿಸಬೇಕು ಎಂದು ಸುಪ್ರೀಂಕೋರ್ಟ್ ಕಟ್ಟುನಿಟ್ಟಿನ ಆದೇಶ ನೀಡಿದೆ. ಈ ಆದೇಶದ ಪ್ರತಿಯನ್ನು ದರ್ಶನ್ ಪರ ವಕೀಲರು ಈಗಾಗಲೇ ಸ್ಥಳೀಯ ಸೆಷನ್ಸ್ ಕೋರ್ಟ್‌ಗೆ ಸಲ್ಲಿಕೆ ಮಾಡಿದ್ದಾರೆ. ಹೀಗಾಗಿ ಸುಪ್ರೀಂಕೋರ್ಟ್ ಗಡುವಿನ ಒಳಗಾಗಿ ಸಾಕ್ಷ್ಯ ವಿಚಾರಣೆ ಮುಗಿಸಲು ಸ್ಥಳೀಯ ನ್ಯಾಯಾಲಯವು ವಾರದಲ್ಲಿ ಕನಿಷ್ಠ ಎರಡರಿಂದ ನಾಲ್ಕು ದಿನಗಳ ಕಾಲ ನಿರಂತರವಾಗಿ ಈ ಕೇಸ್‌ನ ವಿಚಾರಣೆ ನಡೆಸುವ ಸಾಧ್ಯತೆ ಇದೆ.
ಆತಂಕದಲ್ಲಿ ದರ್ಶನ್ ಕುಟುಂಬ
ಇತ್ತೀಚೆಗಷ್ಟೇ ಸುಪ್ರೀಂಕೋರ್ಟ್‌ನಲ್ಲಿ ದರ್ಶನ್ ಅವರ ಜಾಮೀನು ಅರ್ಜಿ ವಜಾಗೊಂಡಿರುವುದು ಅವರ ಕುಟುಂಬಕ್ಕೆ ದೊಡ್ಡ ಆಘಾತ ತಂದಿದೆ. ಮುಂದಿನ ವರ್ಷದ ಮೇ ತಿಂಗಳವರೆಗೆ ಸದ್ಯಕ್ಕೆ ಜಾಮೀನು ಸಿಗುವುದು ಕಷ್ಟ ಎಂಬುದು ಖಾತರಿಯಾಗಿರುವುದರಿಂದ ದರ್ಶನ್ ಹಾಗೂ ಅವರ ಕುಟುಂಬಸ್ಥರಲ್ಲಿ ಆತಂಕ ಮನೆಮಾಡಿದೆ. ಇತ್ತೀಚೆಗೆ ದರ್ಶನ್ ದಂಪತಿಯ ಮದುವೆ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪತ್ನಿ ವಿಜಯಲಕ್ಷ್ಮಿ ಹಾಗೂ ಪುತ್ರ ವಿನೀಶ್ ಅವರು ಜೈಲಿಗೆ ಭೇಟಿ ದರ್ಶನ್ ಅವರನ್ನು ಭೇಟಿಯಾಗಿದ್ದರು. ತದನಂತರ ವಿಜಯಲಕ್ಷ್ಮಿ ಅವರು ದರ್ಶನ್ ಶೀಘ್ರದಲ್ಲೇ ಹೊರಬರಲಿದ್ದಾರೆ ಎಂದು ಅಭಿಮಾನಿಗಳಿಗೆ ಧೈರ್ಯ ತುಂಬಿದ್ದರು.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಅವರಿಗೆ ಸದ್ಯಕ್ಕಂತೂ ಬಿಡುಗಡೆ ಭಾಗ್ಯ ಇಲ್ಲ ಎಂಬುದು ಸ್ಪಷ್ಟವಾಗಿದೆ. ಇದರ ನಡುವೆಯೇ ಈ ಹೈಪ್ರೊಫೈಲ್ ಕೇಸ್‌ನಲ್ಲಿ ಒಂದು ಪ್ರಮುಖ ತಾಂತ್ರಿಕ ಬದಲಾವಣೆಯಾಗಿದ್ದು, ಪ್ರಕರಣದ ವಿಚಾರಣೆ ನಡೆಸುವ ನ್ಯಾಯಾಲಯ ಮತ್ತು ನ್ಯಾಯಾಧೀಶರು ಬದಲಾಗಲಿದ್ದಾರೆ.













Click it and Unblock the Notifications