ಜನ ಚೇಂಜ್ ಕೇಳ್ತಾರೆ, ಟಾಕ್ಸಿಕ್ ಟೀಸರ್‌ನಲ್ಲಿ ಈಗಿನ ಟ್ರೆಂಡ್‌ಗೆ ತಕ್ಕಂತೆ ಬೋಲ್ಡ್ ದೃಶ್ಯಗಳಿವೆ: ಯಶ್ ತಾಯಿ ಪುಷ್ಪಾ ಸಮರ್ಥನೆ
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ 'ಟಾಕ್ಸಿಕ್' ಚಿತ್ರದ ಟೀಸರ್ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆ ಮತ್ತು ಟ್ರೋಲ್‌ಗಳಿಗೆ ಕಾರಣವಾಗಿತ್ತು. ಟೀಸರ್‌ನಲ್ಲಿದ್ದ ಕೆಲವು ಬೋಲ್ಡ್ ದೃಶ್ಯಗಳ ಕುರಿತು ವ್ಯಕ್ತವಾಗಿದ್ದ ಟೀಕೆಗಳಿಗೆ ಯಶ್ ಅವರ ತಾಯಿಯೂ ಆಗಿರುವ ನಿರ್ಮಾಪಕಿ ಪುಷ್ಪಾ ಅರುಣ್‌ಕುಮಾರ್ ಅವರು ಸ್ಪಷ್ಟನೆ ನೀಡುವ ಮೂಲಕ ಮಗನ ಬೆಂಬಲಕ್ಕೆ ನಿಂತಿದ್ದಾರೆ. ಟಾಕ್ಸಿಕ್ ಟೀಸರ್‌ನಲ್ಲಿನ ಬೋಲ್ಡ್ ದೃಶ್ಯಗಳು ಈಗಿನ ಟ್ರೆಂಡ್‌ಗೆ ತಕ್ಕಂತೆ ಇದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಬದಲಾಗುತ್ತಿರುವ ಸಿನಿಮಾ ಟ್ರೆಂಡ್ ಕುರಿತು ಮಾತನಾಡಿರುವ ಅವರು, "ಇಂದಿನ ಯುವ ಪೀಳಿಗೆಯ ಅಭಿರುಚಿ ಬದಲಾಗಿದೆ. ಪ್ರೇಕ್ಷಕರು ಕಥೆಯಲ್ಲಿ ಹೊಸತನ ಮತ್ತು ಮಾಸ್ ಅಂಶಗಳನ್ನು ಬಯಸುತ್ತಾರೆ. ಪ್ರತಿಯೊಬ್ಬರ ಆಹಾರದ ಆಯ್ಕೆ ಒಂದೇ ಆಗಿರುವುದಿಲ್ಲ, ಹಾಗೆಯೇ ಸಿನಿಮಾದಲ್ಲೂ ಬದಲಾವಣೆ ಅನಿವಾರ್ಯ. ಕೇವಲ ಒಂದು ಟೀಸರ್ ನೋಡಿ ಇಡೀ ಸಿನಿಮಾವನ್ನು ಅಳೆಯುವುದು ತಪ್ಪು. ಜನರನ್ನು ಚಿತ್ರಮಂದಿರದತ್ತ ಆಕರ್ಷಿಸಲು ಟೀಸರ್‌ನಲ್ಲಿ ಅಂತಹ ದೃಶ್ಯಗಳನ್ನು ಬಳಸಲಾಗಿರುತ್ತದೆ" ಎಂದು ಸಮರ್ಥಿಸಿಕೊಂಡಿದ್ದಾರೆ.

"ಈಗ ಎಲ್ಲ ಸಿನಿಮಾದಲ್ಲೂ ಮಚ್ಚು ಇರೋಲ್ಲ, ಆದ್ರೆ ಈಗಿನ ಯುವಕರು ಮಚ್ಚು ಕೇಳ್ತಾರೆ. ಹಾಗಾಗಿ ಕಥೆಗೆ ತಕ್ಕಂತೆ ಪೂರಕವಾಗಿ ಅವುಗಳನ್ನು ತೋರಿಸ್ತಾರೆ. ಯುವಜನರು ಬದಲಾದಾಗ ನಿರ್ದೇಶಕರು ಕೂಡ ಅವರಿಗೆ ಇಷ್ಟವಾಗಿದ್ದನ್ನೇ ಕೊಡ್ತಾರೆ. ರುಚಿಗೆ ತಕ್ಕಂತೆ ಎಲ್ಲರೂ ಮುದ್ದೆ, ರೊಟ್ಟಿಯನ್ನೇ ತಿನ್ನಲ್ಲ. ಚೇಂಜ್ ಕೇಳ್ತಾರೆ. ನನ್ನ ಮಗ ಯಶ್ ನಟಿಸಿರುವ ಟಾಕ್ಸಿಕ್ ಸಿನಿಮಾ ಇನ್ನೂ ಥಿಯೇಟರ್‌ಗೆ ಬಂದಿಲ್ಲ. ಟೀಸರ್ ಬಿಟ್ಟ ಕೂಡಲೇ ಅದೇ ಸಿನಿಮಾ ಆಗೋದಿಲ್ಲ. ಜನರನ್ನ ಸೆಳೆಯೋಕೆ, ಈಗಿನ ಟ್ರೆಂಡ್‌ಗೋಸ್ಕರ ಆ ರೀತಿ ಮಾಡಿದ್ದಾರೆ ಎನ್ನುತ್ತಾರೆ ಪುಷ್ಪಾ.
ಯಶ್ ಸಿನಿಮಾಗಳಲ್ಲಿ ಅಶ್ಲೀಲತೆ ಇರಲ್ಲ
"ಯಶ್ ಇದುವರೆಗೆ ನಟಿಸಿರುವ ಯಾವುದೇ ಚಿತ್ರಗಳಲ್ಲೂ ಅಶ್ಲೀಲತೆಗೆ ಜಾಗ ನೀಡಿಲ್ಲ. ಕುಟುಂಬ ಸಮೇತರಾಗಿ ನೋಡುವಂತಹ ಸಿನಿಮಾಗಳನ್ನೇ ಅವರು ನೀಡುತ್ತಾ ಬಂದಿದ್ದಾರೆ. ಇಂದು ನಮ್ಮ ಸಿನಿಮಾಗಳು ಜಾಗತಿಕ ಮಟ್ಟ ತಲುಪಬೇಕಿದೆ. ವಿದೇಶಿ ಪ್ರೇಕ್ಷಕರನ್ನು ಸೆಳೆಯಬೇಕೆಂದರೆ ಅಂತರರಾಷ್ಟ್ರೀಯ ಗುಣಮಟ್ಟ ಹಾಗೂ ಪ್ರಸ್ತುತ ಟ್ರೆಂಡ್‌ಗೆ ತಕ್ಕಂತೆ ಸಿನಿಮಾ ಮಾಡಬೇಕಾಗುತ್ತದೆ. ಯಶ್ ಎಂದಿಗೂ ಪ್ರೇಕ್ಷಕರಿಗೆ ನಿರಾಸೆ ಮಾಡುವುದಿಲ್ಲ. ಅವನು ತನ್ನ ಹೆತ್ತವರಿಗಿಂತ ಹೆಚ್ಚಾಗಿ ಅಭಿಮಾನಿಗಳನ್ನು ಪ್ರೀತಿಸುತ್ತಾನೆ, ಅವನ ಶ್ರಮದ ಮೇಲೆ ಎಲ್ಲರಿಗೂ ನಂಬಿಕೆ ಇರಲಿ" ಎಂದಿದ್ದಾರೆ.

ನಾವೆಲ್ಲ ಹೆಮ್ಮೆ ಪಡಬೇಕು
ಇದೇ ವೇಳೆ ಸ್ಟಾರ್ ನಟರ ಸಿನಿಮಾಗಳ ಬಿಡುಗಡೆ ತಡವಾಗುತ್ತಿರುವ ಕುರಿತ ಚರ್ಚೆಗೆ ಉತ್ತರಿಸಿದ ಅವರು, "ಕನ್ನಡ ಚಿತ್ರರಂಗ ಇಂದು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವ ಬೃಹತ್ ಬಜೆಟ್ ಸಿನಿಮಾಗಳನ್ನು ನಿರ್ಮಿಸುತ್ತಿದೆ. ಇಂತಹ ದೊಡ್ಡ ಸಾಧನೆಯನ್ನು ಕಂಡು ನಾವು ಹೆಮ್ಮೆಪಡಬೇಕೇ ಹೊರತು, ಸಿನಿಮಾ ತಡವಾಗುತ್ತಿದೆ ಎಂದು ಬೇಸರ ಮಾಡಿಕೊಳ್ಳಬಾರದು" ಎಂದು ಹೇಳಿದ್ದಾರೆ. ಅಂತರರಾಷ್ಟ್ರೀಯ ಮಟ್ಟದ ಬಿಗ್ ಬಜೆಟ್ ಸಿನಿಮಾಗಳನ್ನು ತಯಾರಿಸಲು ಹೆಚ್ಚಿನ ಸಮಯ ಬೇಕಾಗುತ್ತದೆ. ಸ್ಯಾಂಡಲ್‌ವುಡ್ ಇಷ್ಟು ಎತ್ತರಕ್ಕೆ ಬೆಳೆಯುತ್ತಿರುವುದನ್ನು ನೋಡಿ ನಾವು ಹೆಮ್ಮೆ ಪಡಬೇಕು" ಎಂದು ಹೇಳುವ ಮೂಲಕ ಮಗನ ಸಿನಿಮಾ ಪ್ರಯತ್ನಕ್ಕೆ ಬೆಂಬಲ ಘೋಷಿಸಿದ್ದಾರೆ.
ಪ್ರೇಕ್ಷಕರ ರುಚಿ ಮತ್ತು ಇಂದಿನ ಟ್ರೆಂಡ್‌ಗೆ ತಕ್ಕಂತೆ ನಿರ್ದೇಶಕರು ದೃಶ್ಯಗಳನ್ನು ಸೃಷ್ಟಿಸುತ್ತಾರೆ. ಒಂದು ಟೀಸರ್ ಇಡೀ ಸಿನಿಮಾವನ್ನು ಪ್ರತಿನಿಧಿಸುವುದಿಲ್ಲ. ಪ್ರಚಾರದ ದೃಷ್ಟಿಯಿಂದ ಟೀಸರ್ ಅನ್ನು ಆ ರೀತಿ ಬಂದಿರಬಹುದು. ಯಶ್ ಸಿನಿಮಾಗಳು ಯಾವತ್ತೂ ಪ್ರೇಕ್ಷಕರು ಮುಜುಗರ ಪಡುವಂತೆ ಇರುವುದಿಲ್ಲ. ನಮ್ಮ ಸಿನಿಮಾಗಳು ಕೇವಲ ಸ್ಥಳೀಯವಾಗಿ ಉಳಿಯದೆ ಜಾಗತಿಕ ಮಟ್ಟದಲ್ಲಿ ವಿದೇಶಿಗರನ್ನೂ ತಲುಪಬೇಕಿದೆ, ಅದಕ್ಕಾಗಿ ಇಂತಹ ಪ್ರಯತ್ನಗಳು ನಡೆದಿವೆ ಎಂದಿದ್ದಾರೆ.













Click it and Unblock the Notifications