DK Shivakumar: ಮಹದಾಯಿ ಯೋಜನೆ ಕುರಿತು ಅಪ್ಡೇಟ್ ಕೊಟ್ಟ ಡಿ ಕೆ ಶಿವಕುಮಾರ್
ಬೆಂಗಳೂರು, ಡಿಸೆಂಬರ್ 16: ಅನುಮತಿ ಸಿಕ್ಕ ಕೂಡಲೇ ಮಹದಾಯಿ ಯೋಜನೆ ಕೆಲಸ ಆರಂಭವಾಗಲಿದೆ. ಇಂದು ₹200 ಕೋಟಿಗೂ ಹೆಚ್ಚು ಮೊತ್ತದ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಮಹದಾಯಿ ಯೋಜನೆಯೂ ಈ ಭಾಗಕ್ಕೆ ಬರಲಿದೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದರು.
ಈ ಕುರಿತು ಡಿ ಕೆ ಶಿವಕುಮಾರ್ ಅವರು ಮಾತನಾಡಿ, ಮಹದಾಯಿ ಯೋಜನೆ ಅನುಮತಿ ನೀಡಲು ನಾನು ಹಾಗೂ ಮುಖ್ಯಮಂತ್ರಿಗಳು ಪ್ರಧಾನಮಂತ್ರಿ ಅವರನ್ನು ಭೇಟಿ ಮಾಡಿದ್ದೇವೆ. ಯೋಜನೆ ಸಂಬಂಧ ಟೆಂಡರ್ ಕರೆಯಲಾಗಿದ್ದು, ಕೇಂದ್ರ ಅರಣ್ಯ ಇಲಾಖೆ ಅನುಮತಿ ದೊರೆತ ತಕ್ಷಣ ಕಾಮಗಾರಿ ಮಾಡಲಾಗುವುದು. ಈ ಕ್ಷೇತ್ರ ಹಾಗೂ ರೈತರ ಅಭಿವೃದ್ಧಿಗೆ ಏನೆಲ್ಲಾ ಮಾಡಲು ಸಾಧ್ಯವೋ ಅದೆಲ್ಲವನ್ನು ನಮ್ಮ ಸರ್ಕಾರ ಮಾಡಲಿದೆ ಎಂದು ತಿಳಿಸಿದರು.

ನಿಮ್ಮ ಕಾಲದಲ್ಲೇ ಕೆಲವು ನೀರಾವರಿ ಯೋಜನೆಗಳು ಆಗಬೇಕು ಎಂದು ಜಿ.ಎಸ್ ಪಾಟೀಲ್ ಅವರು ನನ್ನ ಬೆನ್ನತ್ತಿದ್ದಾರೆ. ಅವರ ಜತೆಗಿನ ಸಂಬಂಧ, ಅವರು ನಮ್ಮ ಪಕ್ಷಕ್ಕೆ ನೀಡಿರುವ ಶಕ್ತಿಗೆ ನಾನು ಅವರ ಬೇಡಿಕೆಗಳನ್ನು ಈಡೇರಿಸುತ್ತೇನೆ ಎಂದು ಭರವಸೆ ನೀಡುತ್ತೇನೆ ಎಂದು ಹೇಳಿದರು.
ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ ಹಾಗೂ ಹಳೆ ಮೈಸೂರು ಭಾಗದಲ್ಲಿ ಜನ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಿದ್ದಾರೆ. ಆಮೂಲಕ ರಾಜ್ಯಕ್ಕೆ ಸಂದೇಶ ರವಾನಿಸಿದ್ದಾರೆ. ನಮ್ಮ ಸರ್ಕಾರ ನಿಮ್ಮ ಸೇವೆ ಮುಂದುವರಿಸಲಿದೆ.
ಮಹಾತ್ಮಾ ಗಾಂಧೀಜಿ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ನೂರು ವರ್ಷಗಳು ಪೂರೈಸಲಾಗಿದೆ. ಈಗ ಆ ಸ್ಥಾನದಲ್ಲಿ ನಮ್ಮದೇ ರಾಜ್ಯದ ಮಲ್ಲಿಕಾರ್ಜುನ ಖರ್ಗೆ ಅವರು ಕೂತಿದ್ದಾರೆ. ಗಾಂಧೀಜಿ ಅವರ ಬೆಳಗಾವಿ ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮವನ್ನು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಾವು ಮಾಡುತ್ತಿದ್ದೇವೆ. ಈ ಕಾರ್ಯಕ್ರಮದ ರೂಪುರೇಷೆ ನಿರ್ಧರಿಸಲು ಹೆಚ್.ಕೆ. ಪಾಟೀಲ್ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ.
27ರಂದು ಬೆಳಗಾವಿಯಲ್ಲಿ ಐತಿಹಾಸಿಕ ಸಾರ್ವಜನಿಕ ಸಭೆಯನ್ನು ನಾವು ಆಯೋಜಿಸಿದ್ದೇವೆ. ಈ ವೇದಿಕೆಯಿಂದಲೇ ನಾನು ನಿಮ್ಮೆಲ್ಲರಿಗೂ ಆ ಕಾರ್ಯಕ್ರಮಕ್ಕೆ ಆಹ್ವಾನ ನೀಡುತ್ತಿದ್ದೇನೆ. ಈ ಐತಿಹಾಸಿಕ ಕ್ಷಣವನ್ನು ನೀವು ಕಣ್ತುಂಬಿಕೊಳ್ಳಬೇಕು. ಸುವರ್ಣಸೌಧದಲ್ಲಿ ಗಾಂಧಿ ಪುತ್ಥಳಿ ಅನಾವರಣ ಕಾರ್ಯಕ್ರಮ ಏರ್ಪಡಿಸಲಾಗಿದೆ. ಮೈಸೂರು ದಸರಾದಂತೆ ಬೆಳಗಾವಿಯಲ್ಲಿ ವಿಜೃಂಭಣೆಯಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದೇವೆ.
ಗಾಂಧೀಜಿ ಅವರು ಈ ದೇಶದ ಆಸ್ತಿ. ಹೆಚ್.ಕೆ ಪಾಟೀಲ್ ಅವರು ಈ ಹಿಂದೆ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದಾಗ ಗದಗ ಜಿಲ್ಲೆಯಲ್ಲಿ ಗ್ರಾಮೀಣ ವಿವಿಯಲ್ಲಿ ಗಾಂಧೀಜಿ ಅವರ ಸಬರಮತಿ ಆಶ್ರಮವನ್ನು ನಿರ್ಮಿಸಿದ್ದಾರೆ. ಆಮೂಲಕ ಜನಸಾಮಾನ್ಯರು ಅದನ್ನು ಕಣ್ತುಂಬಿಕೊಳ್ಳಲು ಅವಕಾಶ ಕಲ್ಪಿಸಿದ್ದಾರೆ. ಆಮೂಲಕ ಜನರಿಗೆ ಗಾಂಧಿ ತತ್ವ, ಗಾಂಧಿ ಆದರ್ಶ ಪಸರಿಸಲು ಈ ಯೋಜನೆ ಮಾಡಿ ದೇಶಕ್ಕೆ ಮಾದರಿಯಾಗಿದ್ದಾರೆ.
ನಾವು ವಿರೋಧ ಪಕ್ಷದಲ್ಲಿದ್ದಾಗ ಪಕ್ಷದ ಸಂಘಟನೆ ವಿಚಾರವಾಗಿ ಪ್ರವಾಸ ಮಾಡುತ್ತಿದ್ದಾಗ ಶುದ್ಧ ಕುಡಿಯುವ ನೀರಿನ ಘಟಕ ನೋಡಿದೆ. ಇದನ್ನು ಮಾಡಿದವರು ಯಾರು ಎಂದು ಕೇಳಿದಾಗ ಹೆಚ್.ಕೆ ಪಾಟೀಲ್ ಎಂದು ಹೇಳಿದರು. ನಂತರ ರೋಣಾದಲ್ಲಿ ಅದೇ ರೀತಿಯ ಶುದ್ಧ ಕುಡಿಯುವ ನೀರಿನ ಘಟಕ ನೋಡಿದೆ. ಕೂಡಲೇ ನಾನು ನನ್ನ ಸಹೋದರನಿಗೆ ಕರೆ ಮಾಡಿ ಒಂದು ತಂಡ ಮಾಡಿಕೊಂಡು ಈ ಘಟಕ ವೀಕ್ಷಣೆ ಮಾಡಲು ಹೇಳಿದೆ. ಅವರು ಬಂದು ನೋಡಿದ ನಂತರ ನಮ್ಮ ಭಾಗದಲ್ಲಿ ಶುದ್ಧ ನೀರಿನ ಘಟಕ ಸ್ಥಾಪಿಸಿದೆವು.
ಮೊದಲನೇ ಘಟಕವನ್ನು ಹೆಚ್.ಕೆ ಪಾಟೀಲ್ ಅವರಿಂದ ಉದ್ಘಾಟನೆ ಮಾಡಿಸಿದೆ. ನಿಮ್ಮಿಂದ ಸ್ಪೂರ್ತಿಗೊಂಡು ನನ್ನ ತಮ್ಮ ಮೂರು ಬಾರಿ ಸಂಸದನಾಗಿ ಆಯ್ಕೆಯಾದ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 400ಕ್ಕೂ ಹೆಚ್ಚು ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಲಾಗಿದೆ. ನಂತರ ಇದು ಇಡೀ ರಾಜ್ಯಾದ್ಯಂತ ವಿಸ್ತರಣೆಯಾಯಿತು. ಹೀಗೆ ನಿಮ್ಮ ಜಿಲ್ಲೆಯ ಅನೇಕ ನಾಯಕರು ಅನೇಕ ಕಾರ್ಯಕ್ರಮ ರೂಪಿಸಿಕೊಂಡು ಬಂದಿದ್ದಾರೆ.
ರೋಣ ಕ್ಷೇತ್ರದಲ್ಲಿ ಜಿ.ಎಸ್ ಪಾಟೀಲ್ ಅವರ ಕುಟುಂಬ ನಾಯಕರಾಗಿ ಅಲ್ಲ ಸೇವಕರಾಗಿ ಕೆಲಸ ಮಾಡಿಕೊಂಡು ಬಂದಿದ್ದಾರೆ. ರೈತ ಕುಟುಂಬದಿಂದ ಬಂದು ನಿಮ್ಮ ಸೇವೆ ಮಾಡುತ್ತಿದ್ದಾರೆ. ಅವರಿಗೆ ಶಕ್ತಿ ತುಂಬಿ, ಇಡೀ ಸರ್ಕಾರ ಅವರ ಬೆನ್ನಿಗೆ ನಿಲ್ಲಲು ನಾನು ಹಾಗೂ ಮುಖ್ಯಮಂತ್ರಿಗಳು ಬಂದಿದ್ದೇವೆ. ನಾನು ಡಿಸಿಎಂ ಆದರೂ ನನ್ನ ಕ್ಷೇತ್ರದಲ್ಲಿ ಇಷ್ಟು ದೊಡ್ಡ ಕಾರ್ಯಕ್ರಮವನ್ನು ಮಾಡಲು ನನ್ನಿಂದ ಸಾಧ್ಯವಾಗಿಲ್ಲ ಎಂದು ಡಿ ಕೆ ಶಿವಕುಮಾರ್ ಹೇಳಿದರು.












Click it and Unblock the Notifications