ಮತಾಂತರ ನಿಷೇಧ ಕಾನೂನು ವಾಪಸ್: ವಿಎಚ್‌ಪಿ ಪ್ರತಿಭಟನೆ
ಬೆಂಗಳೂರು, ಜೂನ್ 17: ರಾಜ್ಯದಲ್ಲಿ ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದ ಮತಾಂತರ ನಿಷೇಧ ಕಾನೂನನ್ನು ರದ್ದುಗೊಳಿಸುವ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಕಾರ್ಯಕರ್ತರು ಮತ್ತು ಬೆಂಬಲಿಗರು ಹುಬ್ಬಳ್ಳಿಯಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ನಿರತ ಕಾರ್ಯಕರ್ತರು ಮತ್ತು ವಿಎಚ್‌ಪಿ ಬೆಂಬಲಿಗರು ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ, ಹಿಂದೂ ಸಮುದಾಯದ ಹಕ್ಕುಗಳನ್ನು ರಕ್ಷಿಸಲು ಮತಾಂತರ ವಿರೋಧಿ ಕಾನೂನನ್ನು ಮುಂದುವರಿಸಲು ಒತ್ತಾಯಿಸಿದರು.

ಹುಬ್ಬಳ್ಳಿಯ ತಹಸೀಲ್ದಾರ್ ಕಚೇರಿ ಎದುರು ಶಾಂತಿಯುತವಾಗಿ ಪ್ರತಿಭಟನೆ ನಡೆಸಲಾಗಿದ್ದು, ವಿಎಚ್‌ಪಿ ಸದಸ್ಯರು ಮತ್ತು ಬೆಂಬಲಿಗರು ತಮ್ಮ ಬೇಡಿಕೆಗಳಿಗೆ ಒತ್ತಾಯಿಸಿ ಮನವಿ ಪತ್ರ ಸಲ್ಲಿಸಿದರು.
ಕರ್ನಾಟಕ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಸಿದ್ದರಾಮಯ್ಯ ಸರ್ಕಾರದ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ರಕ್ಷಣೆ ಮಸೂದೆ, 2022, ( ಮತಾಂತರ ವಿರೋಧಿ ಮಸೂದೆ) ರದ್ದುಗೊಳಿಸುವ ನಿರ್ಧಾರದ ಬಗ್ಗೆ ವಾಗ್ದಾಳಿ ನಡೆಸಿ ಕಾಂಗ್ರೆಸ್ ಸರ್ಕಾರವು ರಾಜ್ಯದ ಜನರ ಹಿತಾಸಕ್ತಿಗಳಿಗೆ ಧಕ್ಕೆ ತರುತ್ತಿದೆ. ಹೈಕಮಾಂಡ್ ಕೃಪಾಕಟಾಕ್ಷದಿಂದ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕರ್ನಾಟಕದ ಸಿಎಂ ಹೈಕಮಾಂಡ್ ಪರವಾಗಿ ಜನರ ಹಿತಾಸಕ್ತಿಗೆ ಧಕ್ಕೆ ಉಂಟು ಮಾಡುತ್ತಿರುವಂತೆ ಕಾಣುತ್ತಿದೆ ಎಂದು ಹೇಳಿದ್ದರು.
ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತಾಂತರ ವಿರೋಧಿ ಕಾನೂನನ್ನು ರದ್ದುಗೊಳಿಸಲು ಗುರುವಾರ ನಿರ್ಧರಿಸಿದ ನಂತರ ಇದು ವಿವಿಧೆಡೆ ಬಲಪಂಥೀಯ ಸಂಘಟನೆಗಳ ವಿರೋಧ ವ್ಯಕ್ತವಾಗಿದೆ.
ನಮ್ಮ ಸಮಾಜವನ್ನು ಕಾಡುತ್ತಿರುವ ಮತಾಂತರ ವಿರೋಧಿ ಮಸೂದೆಯನ್ನು ರದ್ದುಪಡಿಸುವ ನಿರ್ಧಾರ ಕೈಗೊಂಡು ಯಾರನ್ನು ಸಮಾಧಾನಪಡಿಸುತ್ತಿದೆ ಎಂದು ಸರಕಾರ ಭಾವಿಸುತ್ತಿದೆ?, ರಾಜ್ಯದಲ್ಲಿ ಹೈಕಮಾಂಡ್ ಕೃಪಾಕಟಾಕ್ಷಕ್ಕೆ ಒಳಗಾಗಿ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ಜನರ ಹಿತಾಸಕ್ತಿಗೆ ಧಕ್ಕೆ ತಂದಂತೆ ಕಾಣುತ್ತಿದೆ. ರಾಜ್ಯದ ಹೈಕಮಾಂಡ್ ಪರವಾಗಿದೆ ಎಂದು ಬೊಮ್ಮಾಯಿ ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಇನ್ನು ವಿಜಯಪುರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಕರ್ನಾಟಕದಲ್ಲಿ "ಮತಾಂತರ ನಿಷೇಧ ಕಾಯ್ದೆಯನ್ನು" ವಾಪಸ್ ಪಡೆಯುವ ಮೂಲಕ ಸಿದ್ದರಾಮಯ್ಯ ನವರು ಆಮಿಷದ ಮತಾಂತರಕ್ಕೆ ಬೆಂಬಲ ನೀಡಿದ್ದಾರೆ. ಹಿಂದೂ ಸಮಾಜದ ಪರಮ ಪೂಜ್ಯ ಮಠಾಧೀಶರು ಹಾಗು ಸಂತ ಸಮಾಜ ಸರ್ಕಾರದ ಈ ನಿಲುವಿನ ವಿರುದ್ಧ ಧ್ವನಿ ಎತ್ತಬೇಕಿದೆ ಎಂದು ಟ್ವೀಟ್ ಮಾಡಿದ್ದರು.
ಹಿಂದೂ ಸಮಾಜ ಒಗ್ಗಟ್ಟಾಗದೆ ಇದ್ದರೇ ನಮ್ಮ ಸಮಾಜದ ಬಂಧುಗಳನ್ನು ಮತಾಂತರಕ್ಕೆ ಒಳಪಡಿಸಬಹುದು. ಎಲ್ಲರನ್ನು ಗೌರವಯುತವಾಗಿ ನಡೆಸಿಕೊಳ್ಳೋಣ, ಹಿಂದುತ್ವ ಈ ರಾಷ್ಟ್ರದ ಅಸ್ಮಿತೆ ಅದನ್ನು ಕಾಪಾಡಿಕೊಳ್ಳೋಣ ಎಂದು ತಿಳಿಸಿದ್ದರು.












Click it and Unblock the Notifications