ಕನ್ನಡ ಹೋರಾಟಗಾರರ ಮೇಲಿನ ಕೇಸ್ ವಾಪಸ್ ಪಡೆಯಿರಿ : ಎಚ್‌ಡಿಕೆ
ಬೆಂಗಳೂರು, ಆಗಸ್ಟ್ 19 : ಬೆಂಗಳೂರಲ್ಲಿ ಹಿಂದಿ ಭಾಷೆಯಲ್ಲಿ ಹಾಕಲಾಗಿದ್ದ ಬ್ಯಾನರ್ ಹರಿದು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಮಂದಿ ಕನ್ನಡಪರ ಹೋರಾಟಗಾರರ ಬಂಧನವಾಗಿದೆ. ಹೋರಾಟಗಾರರ ಮೇಲಿನ ಪ್ರಕರಣ ವಾಪಸ್ ಪಡೆಯಿರಿ ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಒತ್ತಾಯಿಸಿದರು.
ಎಚ್. ಡಿ. ಕುಮಾರಸ್ವಾಮಿ ಸೋಮವಾರ ಈ ಕುರಿತು ಟ್ವೀಟ್ ಮಾಡಿದ್ದಾರೆ. "ಮಾನ್ಯ ಮುಖ್ಯಮಂತ್ರಿಗಳೇ ಕನ್ನಡ ಪರ ಹೋರಾಟಗಾರರ ಮೇಲೆ ದಾಖಲಿಸಿರುವ ಮೊಕದ್ದಮೆಯನ್ನು ಹಿಂಪಡೆಯಿರಿ" ಎಂದು ಆಗ್ರಹಿಸಿದರು.
"ನಿಮ್ಮ ಪೌರುಷವನ್ನು ಕೇಂದ್ರ ಸರ್ಕಾರದಿಂದ ನಮ್ಮ ರಾಜ್ಯದ ಪಾಲಿನ ನೆರವಿನ ಹಣವನ್ನು ಪಡೆದುಕೊಂಡು ಬರುವುದರಲ್ಲಿ ತೋರಿಸಿ" ಎಂದು ಕುಮಾರಸ್ವಾಮಿ ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದರು.

ಬೆಂಗಳೂರಿನ ಇನ್‌ಫೆಂಟ್ರಿ ರಸ್ತೆಯ ಬಳಿ ಇರುವ ಮಾರವಾಡಿಗಳ ಗಣೇಶ್ ಬಾಗ್ ಪ್ರಾರ್ಥನಾ ಮಂದಿರದ ಬಳಿ ಶುಕ್ರವಾರ ಈ ಘಟನೆ ನಡೆದಿದೆ. ಮಂದಿರದ ಮುಂದೆ ಹಿಂದಿ ಭಾಷೆಯ ಬ್ಯಾನರ್ ಹಾಕಲಾಗಿತ್ತು. ಇದನ್ನು ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಹರಿದು ಹಾಕಿದ್ದಾರೆ.
ಜೈನ ಸಮುದಾಯದವರು ಈ ಕುರಿತು ಕರ್ಮರ್ಷಿಯಲ್ ಸ್ಟ್ರೀಟ್ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಅನ್ವಯ 6 ಕನ್ನಡ ಪರ ಹೋರಾಟಗಾರರನ್ನು ಬಂಧಿಸಲಾಗಿದೆ. ಬಂಧನ ಖಂಡಿಸಿ ಸೋಮವಾರ ಸಂಜೆ ಟೌನ್ ಹಾಲ್ ಬಳಿ ಪ್ರತಿಭಟನೆಗೆ ಕರೆ ಕೊಡಲಾಗಿದೆ.













Click it and Unblock the Notifications