ಮುಸ್ಲಿಮರಿಗೆ ದೇವೇಗೌಡರು ನೀಡಿದ ಸಲಹೆ ಏನು?
ಬೆಂಗಳೂರು, ಡಿ. 23 : ಕಾಂಗ್ರೆಸ್ ಪಕ್ಷ ಮುಸ್ಲಿಮರನ್ನು ವೋಟ್ ಬ್ಯಾಂಕ್ ಆಗಿ ಬಳಸಿಕೊಂಡು ದ್ರೋಹ ಬಗೆದಿದೆ, ಇಂತಹ ಪಕ್ಷದ ಬಗ್ಗೆ ಮುಸ್ಲಿಮರು ಎಚ್ಚರಿಕೆ ವಹಿಸಬೇಕು ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಕರೆ ನೀಡಿದ್ದಾರೆ.
ಭಾನುವಾರ ಬೆಂಗಳೂರಿನಲ್ಲಿ ನಡೆದ ಜೆಡಿಎಸ್ 'ಮುಸ್ಲಿಂ ಮೇಧಾವಿ'ಗಳ ಸಮಾವೇಶದಲ್ಲಿ ಮಾತನಾಡಿದ ದೇವೇಗೌಡರು, ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು. ದ್ರೋಹ ಬಗೆಯುವುದರಲ್ಲಿ ಕಾಂಗ್ರೆಸ್ಸಿಗರು ನಿಸ್ಸೀಮರು. ಕಾಂಗ್ರೆಸ್ ಪಕ್ಷದವರಿಗೆ ನೈತಿಕತೆ ಇಲ್ಲ ಎಂದು ಅವರು ಆರೋಪಿಸಿದರು.

50 ವರ್ಷಗಳಿಂದ ಮುಸ್ಲಿಮರ ಮತಗಳನ್ನು ಪಡೆದ ಕಾಂಗ್ರೆಸ್ ಆ ಸಮುದಾಯದ ಅಭಿವೃದ್ಧಿಗೆ ಏನು ಮಾಡಿದೆ ಎಂದು ಗೌಡರು ಪ್ರಶ್ನಿಸಿದರು. ಕಾಂಗ್ರೆಸ್ ಪಕ್ಷ ಮುಸ್ಲಿಮರ ವಿರೋಧಿ ಎನ್ನುವುದಕ್ಕೆ ಹಲವಾರು ನಿದರ್ಶನಗಳಿವೆ. ಇಂತಹ ದ್ರೋಹ ಮಾಡುವ ಕಾಂಗ್ರೆಸ್ ಪಕ್ಷದ ಬಗ್ಗೆ ಮುಸ್ಲಿಮರು ಎಚ್ಚರಿಕೆ ವಹಿಸಬೇಕು ಎಂದರು.
ಕಾಂಗ್ರೆಸ್ ಪಕ್ಷ ಎಂದಿಗೂ ಸ್ವಂತ ಬಲದ ಮೇಲೆ ಅಧಿಕಾರ ನಡೆಸಲಿಲ್ಲ, ಜೆಡಿಎಸ್ ದುಡಿಮೆಯ ಫಲವನ್ನು ಕಾಂಗ್ರೆಸ್ ಪಡೆದುಕೊಳ್ಳುತ್ತಿದೆ. ಕಾಂಗ್ರೆಸ್‌ನಲ್ಲಿ ನಾಯಕರೇ ಇಲ್ಲ. ಜೆಡಿಎಸ್‌ನಲ್ಲಿ ಬೆಳದ ನಾಯಕರು ಇಂದು ಕಾಂಗ್ರೆಸ್ ಪಕ್ಷದಲ್ಲಿ ಆಡಳಿತ ನಡೆಸುತ್ತಿದ್ದಾರೆ ಎಂದು ಗೌಡರು ವಿಶ್ಲೇಷಿಸಿದರು. [ಜಯಲಲಿತಾ ಪ್ರಧಾನಿಯಾಗಲಿ ಅಂದ್ರು ದೇವೇಗೌಡ]
ಮೈತ್ರಿ ಇಲ್ಲ : ಮುಂದಿನ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಏಕಾಂಗಿಯಾಗಿ ಚುನಾವಣೆ ಎದುರಿಸಲಿದೆ. ಕಾಂಗ್ರೆಸ್ ಅಥವಾ ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ಅನಿವಾರ್ಯ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಜತೆ ಸೇರಿ ಸರ್ಕಾರ ರಚನೆ ಮಾಡಬೇಕಾಯಿತು. ಮುಂದೆ ಆ ತಪ್ಪು ಮಾಡುವುದಿಲ್ಲ ಎಂದು ದೇವೇಗೌಡರು ಭರವಸೆ ನೀಡಿದರು.


Click it and Unblock the Notifications
