Lok Sabha Elections 2024: ಪೆಟ್ಟು ತಿಂದಿದ್ದೇನೆ,ಮತ್ತೆ ಅಂತಹ ಪೆಟ್ಟು ತಿನ್ನಲ್ಲ; ಲೋಕಸಭೆಗೆ ಸ್ಪರ್ಧೆ ಮಾಡಲ್ಲ: ವಿ.ಸೋಮಣ್ಣ
ಬೆಂಗಳೂರು,ಜೂನ್ 08: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಎರಡು ಕ್ಷೇತ್ರದಲ್ಲಿ ಸೋಲು ಅನುಭವಿಸಿರುವ ಮಾಜಿ ಸಚಿವ ವಿ ಸೋಮಣ್ಣ ಅವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿದ್ದಾರೆ ಎಂಬ ಚರ್ಚೆಗೆ ವಿ ಸೋಮಣ್ಣ ಸ್ಪಷ್ಟನೆ ನೀಡಿದ್ದಾರೆ.
ಹೌದು, ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊನ್ನೆಯಾಗಿರುವ ಪೆಟ್ಟು ತಡೆದುಕೊಂಡರೆ ಸಾಕಾಗಿದೆ. ಮತ್ತೆ ಅಂತಹ ಪೆಟ್ಟು ತಿನ್ನಲು ಹೋಗುವುದಿಲ್ಲ ಎಂದು ಮಾಜಿ ಮಾರ್ಮಿಕವಾಗಿ ನುಡಿದಿದ್ದಾರೆ.

ನಾನು ಲೋಕಸಭಾ ಚುನಾವಣೆಯ ಆಕಾಂಕ್ಷಿ ಅಲ್ಲ. ಅದರ ಅವಶ್ಯಕತೆಯೂ ನನಗಿಲ್ಲ. ತುಮಕೂರು ಸಂಸದ ಜಿ.ಎಸ್.ಬಸವರಾಜ ಅವರು ಹಿರಿಯರಾಗಿದ್ದು, ಅವರೊಂದಿಗೆ 40 ವರ್ಷದ ಒಡನಾಟ ಇದೆ. ನನ್ನ ಬಗ್ಗೆ ಒಳ್ಳೆಯ ಮಾತುಗಳನ್ನಾಡಿರುವುದಕ್ಕೆ ಅವರಿಗೆ ಋುಣಿಯಾಗಿದ್ದೇನೆ ಎಂದು ಹೇಳಿದ್ದಾರೆ.
ನಾನು ಯಾವುದೇ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಲ್ಲ, ಅದರ ಅವಶ್ಯಕತೆಯೂ ಇಲ್ಲ. ನನಗೆ 72 ವರ್ಷವಾಗಿದ್ದು, ಮುಂದಿನ ತಿಂಗಳು 73 ವರ್ಷವಾಗಲಿದೆ. ಚುನಾವಣೆಗೆ ಸ್ಪರ್ಧಿಸಿದ್ದು ಒತ್ತಡ ಎನ್ನುವುದಕ್ಕಿಂತ ನಾಯಕರ ಸಂದೇಶವನ್ನು ತಲೆಮೇಲೆ ಹೊತ್ತುಕೊಂಡು ಹೋಗಿ ಕೆಲಸ ಮಾಡಿದ್ದೇನೆ.
ಪುಣ್ಯಾತ್ಮರು ಒಳ್ಳೆಯ ಕೆಲಸ ಮಾಡಿದ್ದಾರೆ.. ಯಾವ ಹುತ್ತದಲ್ಲಿ ಯಾವ ಹಾವಿದೆ ಎಂಬುದನ್ನು ಹುಡುಕಲು ಆಗಲಿಲ್ಲ, ಹುಡುಕುವ ಪರಿಸ್ಥಿತಿಗೂ ಬಂದಿಲ್ಲ ಎಂದು ಪಕ್ಷದ ಕೆಲ ನಾಯಕರ ವಿರುದ್ದ ಅಸಮಾಧಾನ ಹೊರಹಾಕಿದರು.

ಇನ್ನೂ ನಾನು ಪಕ್ಷದ ಕಾರ್ಯಕರ್ತನಾಗಿ, ಒಬ್ಬ ಒಳ್ಳೆಯ ಕೆಲಸಗಾರನಾಗಿ ಬೆಳಗ್ಗೆ 4 ಗಂಟೆಯಿಂದ ತಡರಾತ್ರಿಯವರೆಗೆ ದುಡಿದಿದ್ದೇನೆ. ಅವರ ಮಾತನ್ನು ನಂಬಿ ಹೋಗಿದ್ದೆ. ಸೋಮಣ್ಣ ಗೆದ್ದರೆ ರಾಜ್ಯದಲ್ಲಿ ಪಕ್ಷವು ಒಂದು ದೊಡ್ಡ ಸ್ಥಾನ ನೀಡಲಿದೆ ಎಂದಿದ್ದರು. ಆದಾದ ಮೇಲೆ ನಡೆದ ಕೆಲವು ನೋವುಗಳು ಎಂದಿಗೂ ಮಾಸುವುದಿಲ್ಲ. ಭಗವಂತ ಉತ್ತರ ನೀಡುತ್ತಾನೆ. ಕಾದು ನೋಡೋಣ ಎಂದು ಬೇಸರ ವ್ಯಕ್ತಪಡಿಸಿದರು.
ಹೈಕಮಾಂಡ್ ನಾಯಕರ ಸೂಚನೆಯಂತೆ ನಾನು ವರುಣ ಮತ್ತು ಚಾಮರಾಜನಗರದಲ್ಲಿ ಸ್ಪರ್ಧೆ ಮಾಡಿದ್ದೆ. ನನ್ನನ್ನ ಸೋಲಿಸೋಕೆ ಅಲ್ಲಿಂದಲೇ ನಿರ್ದೇಶನ ಬಂದಿತ್ತು. ನನ್ನ ಸೋಲಿಗೆ ನನ್ನ ಸಮುದಾಯದವರೇ, ಅದರಲ್ಲೂ ಮುಂಚೂಣಿ ನಾಯಕರೇ ಕಾರಣ. ನನ್ನ ಸೋಲಿಗೆ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದು ಯಾರೆಂಬು ದೂ ನನಗೆ ಗೊತ್ತಿದೆ ಎಂದು ಮಾರ್ಮಿಕವಾಗಿ ಹೇಳಿದರು.
ಚಾಮುಂಡೇಶ್ವರಿ ತಾಯಿಯೇ ನನ್ನ ವಿರುದ್ಧದ ಅಪಪ್ರಚಾರವನ್ನು ನೋಡಿ ಕೊಳ್ಳುತ್ತಾಳೆ. ರಾಜಕೀಯ ನಿಂತ ನೀರಲ್ಲ, ನನ್ನ ಸೋಲಿನ ಕಾರಣವೂ ಮುಂದೊಂದು ದಿನ ತಾನೇ ಹೊರಗೆ ಬರುತ್ತದೆ ಎಂದು ಬಿ.ವೈ.ವಿಜಯೇಂದ್ರ ಆಪ್ತ ರುದ್ರೇಶ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ನಾನು ಬೆಂಗಳೂರಿನಲ್ಲಿ ನನ್ನದೇ ಆದ ಕೋಟೆ ಕಟ್ಟಿದ್ದೇನೆ. ಚಿನ್ನದಂಥ ನನ್ನ ಕ್ಷೇತ್ರದ ಜನ ಈಗ ಬೀದಿಯಲ್ಲಿ ಅನಾಥರಾಗಿ ಕಣ್ಣಿರು ಸುರಿಸುತ್ತಿದ್ದಾರೆ. ಹೈಕಮಾಂಡ್ ಸೂಚನೆಯಂತೆ ನಾನು ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಮುಂದಾದೆ. ದೇವರಾಣೆ ನಾನಾಗಿ ಸ್ಪರ್ಧೆ ಮಾಡಬೇಕೆಂದು ಇಲ್ಲಿಗೆ ಬರಲಿಲ್ಲ, ಹೈಕಮಾಂಡ್ ಆದರೂ ಯಾಕೆ ನನ್ನ ಇಲ್ಲಿಗೆ ಕರೆಸಿದ್ದರೋ ಗೊತ್ತಿಲ್ಲ ಎಂದು ಹೇಳಿದರು.












Click it and Unblock the Notifications