• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಡ್ಯದಲ್ಲಿ ಬಿಜೆಪಿ ತಂತ್ರ ಫಲಿಸುತ್ತಾ, ಮುಳುವಾಗುತ್ತಾ?

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಬೆಂಗಳೂರು, ನವೆಂಬರ್ 30; ಜೆಡಿಎಸ್ ಪ್ರಾಬಲ್ಯ ಹೊಂದಿರುವ ಮಂಡ್ಯದಲ್ಲಿ ಕಮಲ ಅರಳಿಸಲು ಬೇಕಾದ ರಾಜಕೀಯ ತಂತ್ರಗಳನ್ನು ಬಿಜೆಪಿ ನಾಯಕರು ಇದೀಗ ಆರಂಭಿಸಿದ್ದಾರೆ. ಅದರ ಮೊದಲ ಪ್ರಯೋಗ ಎಂಬಂತೆ ಮಾಜಿ ಸಚಿವ ಅಂಬರೀಶ್ ಮತ್ತು ಸಂಸದೆ ಸುಮಲತಾ ಅವರಿಗೆ ಆಪ್ತರಾಗಿದ್ದ ಸಚ್ಚಿದಾನಂದ ಮತ್ತು ಮಲ್ಲಿಕಾರ್ಜುನ ಅಲಿಯಾಸ್ ಪೈಟರ್ ರವಿ ಅವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಲಾಗಿದೆ. ಆ ಮೂಲಕ ಮುಂದಿನ ದಿನಗಳಲ್ಲಿ ಇನ್ನಷ್ಟು ನಾಯಕರನ್ನು ಸೆಳೆಯುವ ಮುನ್ಸೂಚನೆ ನೀಡಲಾಗಿದೆ.

ಹಾಗೆ ನೋಡಿದರೆ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಪ್ರಾಬಲ್ಯ ಸಾಧಿಸಿದ್ದು, ಬಿಜೆಪಿ ಮೂರನೇ ಸ್ಥಾನದಲ್ಲಿದೆ. ಆದರೆ ರಾಜಕೀಯ ಇತಿಹಾಸವನ್ನು ನೋಡಿದರೆ ಬಿಜೆಪಿ ಹಳೇ ಮೈಸೂರು ಭಾಗದಲ್ಲಿ ಅಷ್ಟೇನು ಪ್ರಾಬಲ್ಯ ಸಾಧಿಸಿಲ್ಲ. ನಿಧಾನವಾಗಿ ಸಂಘಟನೆಯಾಗುತ್ತಿದೆ. ಮಲೆನಾಡು, ಕರಾವಳಿ ಭಾಗದಲ್ಲಿ ಗಟ್ಟಿಯಾಗಿದ್ದು, ಈ ಬಾರಿ ಏನಾದರೂ ತಂತ್ರಗಳನ್ನು ಮಾಡಿ ಜೆಡಿಎಸ್ ಮತ್ತು ಕಾಂಗ್ರೆಸ್‌ಗೆ ಸೆಡ್ಡು ಹೊಡೆಯುವ ಪ್ರಯತ್ನ ಮಾಡಿದೆ.

ಮಂಡ್ಯದಲ್ಲಿ ಆಪರೇಷನ್ ಕಮಲ; ಸುಮಲತಾ ಆಪ್ತ ಸಚ್ಚಿದಾನಂದ ಸೇರಿ ಹಲವರು ಬಿಜೆಪಿಗೆಮಂಡ್ಯದಲ್ಲಿ ಆಪರೇಷನ್ ಕಮಲ; ಸುಮಲತಾ ಆಪ್ತ ಸಚ್ಚಿದಾನಂದ ಸೇರಿ ಹಲವರು ಬಿಜೆಪಿಗೆ

ಮಂಡ್ಯವನ್ನು ಮುಖ್ಯವಾಗಿ ಟಾರ್ಗೆಟ್ ಮಾಡಿದ ಬಿಜೆಪಿ ಕೆಲವು ಮುಖಂಡರನ್ನು ಪಕ್ಷಕ್ಕೆ ಎಳೆದು ತರುವ ತರಾತುರಿಯಲ್ಲಿ ಇದೀಗ ಎಡವಟ್ಟು ಮಾಡಿಕೊಳ್ಳುತ್ತಿದ್ದಾರೆ. ಇದರ ನಡುವೆ ಮಲ್ಲಿಕಾರ್ಜನ ಅಲಿಯಾಸ್ ಪೈಟರ್ ರವಿ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡು ಮುಜುಗರ ಅನುಭವಿಸುವಂತಾಗಿದೆ. ರೌಡಿಶೀಟರ್‌ಗಳು ಒಬ್ಬರ ಮೇಲೆ ಒಬ್ಬರಂತೆ ಪಕ್ಷದತ್ತ ಮುಖ ಮಾಡಲು ಮುಂದಾಗಿರುವುದು ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಬಿಜೆಪಿ ವಿರುದ್ಧ ಮಾತನಾಡಲು ಅಸ್ತ್ರ ಸಿಕ್ಕಂತಾಗಿದೆ.

ರಾಜಕೀಯ ಬಿಟ್ಟರೂ, ಮಂಡ್ಯವನ್ನು ಮಾತ್ರ ಬಿಡಲ್ಲ: ಸಂಸದೆ ಸುಮಲತಾ ರಾಜಕೀಯ ಬಿಟ್ಟರೂ, ಮಂಡ್ಯವನ್ನು ಮಾತ್ರ ಬಿಡಲ್ಲ: ಸಂಸದೆ ಸುಮಲತಾ

ಸಮಿಶ್ರ ಸರ್ಕಾರ ಪತನದ ಬಳಿಕ ಆಗಿದ್ದೇನು?

ಸಮಿಶ್ರ ಸರ್ಕಾರ ಪತನದ ಬಳಿಕ ಆಗಿದ್ದೇನು?

ಕಳೆದ ವಿಧಾನಸಭಾ ಚುನಾವಣೆ ನಂತರ ಅದರಲ್ಲೂ ಸಮಿಶ್ರ ಸರ್ಕಾರ ಪತನವಾದ ಬಳಿಕ ರಾಜ್ಯದಲ್ಲಿ ಸಕ್ರಿಯವಾದ ಬಿಜೆಪಿ ಪಕ್ಷ ಸಂಘಟನೆ ಜತೆ ಜತೆಯಲ್ಲಿಯೇ ನಾಯಕರನ್ನು ಎಳೆದು ತರುವ ಕೆಲಸವನ್ನು ಮಾಡುತ್ತಲೇ ಬಂದಿದೆ. ಈಗಾಗಲೇ ಕಾಂಗ್ರೆಸ್‌ನಲ್ಲಿದ್ದ ಘಟಾನುಘಟಿ ಶಾಸಕರು ಬಿಜೆಪಿಯಲ್ಲಿದ್ದಾರೆ. ಜತೆಗೆ ಇತ್ತೀಚೆಗಿನ ವರ್ಷಗಳಲ್ಲಿ ಕೊಳ್ಳೇಗಾಲ ಶಾಸಕ ಎನ್. ಮಹೇಶ್, ಮಾಜಿ ಸಂಸದ ಮುದ್ದಹನುಮೇಗೌಡ ಹೀಗೆ ಒಬ್ಬರ ನಂತರ ಒಬ್ಬರು ಪಕ್ಷ ಸೇರುತ್ತಿದ್ದಾರೆ.

ಸಿದ್ಧಾಂತ ಗಾಳಿಗೆ ತೂರುತ್ತಿರುವ ಬಿಜೆಪಿ

ಸಿದ್ಧಾಂತ ಗಾಳಿಗೆ ತೂರುತ್ತಿರುವ ಬಿಜೆಪಿ

ಈ ರೀತಿಯ ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದರೆ ಅದರ ವರ್ಚಸ್ಸು ಇನ್ನಷ್ಟು ಹೆಚ್ಚಾಗುತ್ತಿತ್ತೇನೋ ಆದರೆ ಘಟಾನುಘಟಿ ಬಿಜೆಪಿ ನಾಯಕರ ಸಮ್ಮುಖದಲ್ಲಿಯೇ ಕ್ರಿಮಿನಲ್ ಹಿನ್ನಲೆವುಳ್ಳ ಪೈಟರ್ ರವಿ ಅವರನ್ನು ಮಂಡ್ಯದಲ್ಲಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿರುವುದು ಮತ್ತು ಪಕ್ಷಕ್ಕೆ ಸೇರ್ಪಡೆಯಾದ ಬೆನ್ನಲ್ಲೇ ಜೆಡಿಎಸ್ ಕಾರ್ಯಕರ್ತನಿಗೆ ಆವಾಜ್ ಹಾಕಿದ ವಿಡಿಯೋ ವೈರಲ್ ಆಗಿರುವುದು ಎಲ್ಲವೂ ಬಿಜೆಪಿ ಪಕ್ಷಕ್ಕೆ ಮುಳುವಾಗಿ ಪರಿಣಮಿಸಿದೆ. ದೇಶಭಕ್ತರ, ಶಿಸ್ತಿನ ಪಕ್ಷ ಎಂದು ಹೇಳಿಕೊಳ್ಳುತ್ತಿದ್ದ ಬಿಜೆಪಿ ನಾಯಕರು ಇತ್ತೀಚೆಗಿನ ವರ್ಷಗಳಲ್ಲಿ ಕೇವಲ ಅಧಿಕಾರದ ಬೆನ್ನತ್ತಿ ಹೋಗುತ್ತಿರುವುದರಿಂದ ಅಧಿಕಾರ ಹಿಡಿಯುವ ಭರದಲ್ಲಿ ಪಕ್ಷದ ಸಿದ್ಧಾಂತವನ್ನೇ ಬದಿಗೆ ತಳ್ಳಿ ತಾವು ಮಾಡಿದ ಎಡವಟ್ಟು ನಿರ್ಧಾರಗಳನ್ನು ಸಮರ್ಥನೆ ಮಾಡಿಕೊಂಡು ಮುನ್ನಡೆಯುತ್ತಿರುವುದು ಎದ್ದು ಕಾಣಿಸುತ್ತಿದೆ.

ಮಂಡ್ಯದಲ್ಲಿ ಜೆಡಿಎಸ್ ಅನ್ನು ಮಣಿಸಿ ಹೇಗಾದರೂ ಮಾಡಿ ಒಂದಷ್ಟು ಸ್ಥಾನಗಳನ್ನು ಗೆಲ್ಲಲೇ ಬೇಕೆಂದು ಕಳೆದ ವಿಧಾನಸಭಾ ಉಪಚುನಾವಣೆಯ ನಂತರ ಹಠಕ್ಕೆ ಬಿದ್ದ ಕಮಲ ನಾಯಕರು ಮಂಡ್ಯದ ಒಕ್ಕಲಿಗ ಸಮುದಾಯವನ್ನು ಸೆಳೆಯುವ ಸಲುವಾಗಿ ಪಕ್ಷದ ಒಕ್ಕಲಿಗ ನಾಯಕರನ್ನು ಮಂಡ್ಯಕ್ಕೆ ಕಳುಹಿಸಿ ಅಲ್ಲಿರುವ ಕೆಲವು ನಾಯಕರನ್ನು ಆಪರೇಷನ್ ಕಮಲಕ್ಕೆ ಕೆಡವಲು ಬೇಕಾದ ತಯಾರಿಗಳನ್ನು ನಡೆಸಿಕೊಂಡಿದ್ದರು. ಆಪರೇಷನ್ ಕಮಲಕ್ಕೆ ಹೈಕಮಾಂಡ್ ನಿಂದಲೇ ಗ್ರೀನ್ ಸಿಗ್ನಲ್ ನೀಡಲಾಗಿತ್ತು ಎಂಬ ಮಾತುಗಳು ಕೇಳಿ ಬರುತ್ತಿವೆ.

ಜೆಡಿಎಸ್ ಪ್ರಾಬಲ್ಯ ಸಾಧಿಸಿದ್ದು ಹೇಗೆ?

ಜೆಡಿಎಸ್ ಪ್ರಾಬಲ್ಯ ಸಾಧಿಸಿದ್ದು ಹೇಗೆ?

ಕಳೆದ 2018ರ ವಿಧಾನಸಭಾ ಚುನಾವಣೆ ವೇಳೆ ಮಂಡ್ಯದ ಏಳು ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲುವು ಸಾಧಿಸುವುದರ ಮೂಲಕ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಧೂಳಿಪಟ ಮಾಡಿತ್ತು. ಅವತ್ತು ಅಷ್ಟೊಂದು ಪ್ರಮಾಣದಲ್ಲಿ ಜೆಡಿಎಸ್ ಗೆಲ್ಲಲು ಜೆಡಿಎಸ್‌ನ ನಾಯಕರು ಜಿಲ್ಲೆಯಲ್ಲಿ ಮಾಡಿದ ಕೆಲಸ ಕಾರ್ಯಗಳು ಸಾಕ್ಷಿಯಾಗಿದ್ದವು. ಮಳೆಯಿಲ್ಲದೇ ಬರದಿಂದ ತತ್ತರಿಸಿದ ರೈತರು ಮೇಲಿಂದ ಮೇಲೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ವೇಳೆ ಕುಮಾರಸ್ವಾಮಿ ಅವರು ನೊಂದ ರೈತರ ಮನೆಗೆ ತೆರಳಿ ತಮ್ಮ ಕೈಲಾದ ಸಹಾಯ ಮಾಡಿ ಅವರ ಪರ ನಿಂತಿದ್ದರು. ಆ ಕೆಲಸ ಜಿಲ್ಲೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಲು ಕಾರಣವಾಗಿತ್ತು.

ಚುನಾವಣೆ ನಂತರ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವಿನ ಮೈತ್ರಿ ಕಾಂಗ್ರೆಸ್ ಮತ್ತು ಜೆಡಿಎಸ್ ಎರಡು ಪಕ್ಷಗಳಿಗೂ ಒಳಿತು ಮಾಡಿಲ್ಲ ಎಂಬುದಂತು ಸತ್ಯ. ಸಮ್ಮಿಶ್ರ ಸರ್ಕಾರ ಬಿದ್ದಿದ್ದಲ್ಲದೇ, ಒಂದಷ್ಟು ಶಾಸಕರನ್ನು ಎರಡು ಪಕ್ಷದವರು ಕಳೆದುಕೊಳ್ಳಬೇಕಾಯಿತು. ಅದರ ಪರಿಣಾಮದಿಂದಾಗಿ ಮಂಡ್ಯದಲ್ಲಿ ಬಿಜೆಪಿ ಖಾತೆ ತೆರೆಯುವಂತಾಯಿತು. ಜತೆಗೆ ಬಿಜೆಪಿಗೆ ಮಂಡ್ಯದಲ್ಲಿ ರಾಜಕೀಯವಾಗಿ ಚಿಗುರೊಡೆಯುವ ಹಂಬಲವೂ ಹೆಚ್ಚಾಯಿತು.

ಸದ್ಯ ಮಂಡ್ಯದಲ್ಲಿ ಜೆಡಿಎಸ್ ಭದ್ರವಾಗಿದೆ

ಸದ್ಯ ಮಂಡ್ಯದಲ್ಲಿ ಜೆಡಿಎಸ್ ಭದ್ರವಾಗಿದೆ

ಈಗಿನ ಪರಿಸ್ಥಿತಿಯನ್ನು ಗಮನಿಸಿದರೆ ಸದ್ಯಕ್ಕಿರುವ 6 ಕ್ಷೇತ್ರಗಳಲ್ಲಿ ಜೆಡಿಎಸ್ ಭದ್ರವಾಗಿದೆ. ಮಳವಳ್ಳಿಯಲ್ಲಿ ಡಾ. ಕೆ. ಅನ್ನದಾನಿ, ಮದ್ದೂರು ಕ್ಷೇತ್ರದಲ್ಲಿ ಡಿ. ಸಿ. ತಮ್ಮಣ್ಣ, ಮೇಲುಕೋಟೆಯಲ್ಲಿ ಸಿ. ಎಸ್. ಪುಟ್ಟರಾಜು, ಮಂಡ್ಯದಲ್ಲಿ ಎಂ. ಶ್ರೀನಿವಾಸ್, ಶ್ರೀರಂಗಪಟ್ಟಣದಲ್ಲಿ ರವೀಂದ್ರ ಶ್ರೀಕಂಠಯ್ಯ, ನಾಗಮಂಗಲ ಕ್ಷೇತ್ರದಲ್ಲಿ ಸುರೇಶ್ ಗೌಡ ಪ್ರತಿನಿಧಿಸುತ್ತಿದ್ದು, ಇವರಿಗೆ ಎದುರಾಳಿಯಾಗಿ ಬಿಜೆಪಿ ಘಟಾನುಘಟಿ ನಾಯಕರನ್ನು ಹುಡುಕಲೇ ಬೇಕಾಗಿದೆ.

ಅದು ಅಷ್ಟು ಸುಲಭವಾಗಿ ಉಳಿದಿಲ್ಲ. ಹೀಗಾಗಿ ಮುಂದಿನ 2023ರ ವಿಧಾನಸಭಾ ಚುನಾವಣೆಗೆ ಜರೂರಾಗಿ ಮಂಡ್ಯದಲ್ಲಿ ಒಂದಷ್ಟು ಸ್ಥಾನಗಳನ್ನು ಪಡೆಯ ಬೇಕಾದರೆ ಘಟಾನುಘಟಿ ನಾಯಕರನ್ನು ಪಕ್ಷಕ್ಕೆ ಎಳೆದು ತರುವುದು ಅನಿವಾರ್ಯವಾಗಿದೆ.

ನಗೆಪಾಟಲಿಗೀಡಾಗುತ್ತಿರುವ ಬಿಜೆಪಿ

ನಗೆಪಾಟಲಿಗೀಡಾಗುತ್ತಿರುವ ಬಿಜೆಪಿ

ಪಕ್ಷಕ್ಕೆ ಸಿಕ್ಕಸಿಕ್ಕವರನ್ನು ಸೇರಿಸಿಕೊಳ್ಳುತ್ತಿರುವ ಬಿಜೆಪಿ ನಗೆಪಾಟಲಿಗೀಡಾಗುತ್ತಿದೆ. ಸುಮಲತಾ ಅವರಿಗೆ ಆಪ್ತರಾಗಿದ್ದ ಸಚ್ಚಿದಾನಂದ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದು, ಅವರಿಗೆ ಮಂಡ್ಯದ ಯಾವುದಾದರೊಂದು ಕ್ಷೇತ್ರದಿಂದ ಟಿಕೆಟ್ ಸಿಗುವುದಂತು ಖಚಿತ. ಯಾವುದೇ ಪಕ್ಷದಲ್ಲಿ ಗುರುತಿಸಿಕೊಳ್ಳದೆ ಪಕ್ಷೇತರರಾಗಿ ಉಳಿದಿರುವ ಸಂಸದೆ ಸುಮಲತಾ ಅಂಬರೀಶ್ ಅವರು ವಿಧಾಸಭಾ ಚುನಾವಣೆ ಬಳಿಕ ಮುಂದಿನ ನಿರ್ಧಾರ ಮಾಡುವ ಸಾಧ್ಯತೆಯಿದೆ.

ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ಪೈಕಿ ಕೆ. ಆರ್. ಪೇಟೆಯಲ್ಲಿ ಈಗಾಗಲೇ ಬಿಜೆಪಿಯನ್ನು ಅರಳಿಸಿ ಗೆದ್ದು ಬಂದಿರುವ ನಾರಾಯಣಗೌಡರು ಮತ್ತೊಮ್ಮೆ ಗೆದ್ದು ಬರುವ ನಿರೀಕ್ಷೆಯಲ್ಲಿದ್ದಾರೆ. ಇನ್ನೊಂದು ಕ್ಷೇತ್ರಕ್ಕೆ ಸಚ್ಚಿದಾನಂದ ಖಚಿತವಾಗಿದೆ.

ಉಳಿದ ಐದು ಕ್ಷೇತ್ರಗಳಿಗೆ ಘಟಾನುಘಟಿ ಅಭ್ಯರ್ಥಿಗಳನ್ನು ಹುಡುಕುವುದು ಬಿಜೆಪಿಗೆ ಸುಲಭವಾಗಿ ಉಳಿದಿಲ್ಲ. ಆದರೆ ಕೇವಲ ಗೆಲುವಿಗಾಗಿ ಮಾಡುವ ತಂತ್ರಗಳು ಬಿಜೆಪಿಗೆ ಮುಳುವಾದರೂ ಅಚ್ಚರಿ ಪಡಬೇಕಾಗಿಲ್ಲ. ಚುನಾವಣೆಗೆ ನಾಲ್ಕೈದು ತಿಂಗಳಷ್ಟೆ ಬಾಕಿಯಿರುವುದರಿಂದ ಮುಂದಿನ ಬೆಳವಣಿಗೆಯನ್ನು ಕಾದು ನೋಡುವುದು ಅನಿವಾರ್ಯವಾಗಿದೆ.

English summary
Several leaders joining BJP in Mandya district. Will Karnataka BJP strategy work in district ahead of 2023 assembly elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X