ಡಿ.ಕೆ ಶಿವಕುಮಾರ್ ಬಿಜೆಪಿ ಸೇರ್ತಾರಾ, ಸೋಷಿಯಲ್ ಮೀಡಿಯಾದಲ್ಲಿ ಹೀಗೊಂದು ಪ್ರಶ್ನೆ ಎದ್ದಿದ್ದೇಕೆ ?
ಉಪ ಮುಖ್ಯಮಂತ್ರಿ, ಬೆಂಗಳೂರು ನಗರಾಭಿವೃದ್ಧಿ ಸಚಿವ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಬಿಜೆಪಿ ಸೇರುವ ದಿನಗಳು ಸಮೀಪಿಸುತ್ತಿವೆಯೇ. ಹೌದು ಹೀಗೊಂದು ವಿಷಯ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಇದಕ್ಕೆ ಕಾರಣವೂ ಪ್ರಮುಖವಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಈಶಾ ಫೌಂಡೇಷನ್‌ನ ಸದ್ಗುರು ಜಗ್ಗಿ ವಾಸುದೇವ್ ಅವರೊಂದಿಗೆ ಡಿ.ಕೆ ಶಿವಕುಮಾರ್ ಅವರು ವೇದಿಕೆ ಹಂಚಿಕೊಂಡಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ತಮಿಳುನಾಡಿನ ಕೊಯಮತ್ತೂರಿನ ಈಶಾ ಪ್ರತಿಷ್ಠಾನದ ಸದ್ಗುರು ಜಗ್ಗಿ ವಾಸುದೇವ್ ಅವರು ನೀಡಿದ್ದ ಆಹ್ವಾನದ ಮೇರೆಗೆ ಡಿ.ಕೆ ಶಿವಕುಮಾರ್ ಅವರು ಈ ಸಮಾರಂಭದಲ್ಲಿ ಭಾಗವಹಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇದೀಗ ಈ ಬೆಳವಣಿಗೆ ಭಾರೀ ಚರ್ಚೆಗೆ ಕಾರಣವಾಗಿದೆ.
ಈ ಕಾರ್ಯಕ್ರಮದಲ್ಲಿ ಡಿ.ಕೆ ಶಿವಕುಮಾರ್ ಭಾಗಿಯಾಗಿರುವುದನ್ನು ಹಲವರು ವಿರೋಧ ಮಾಡಿದ್ದಾರೆ. ಒಂದೊಮ್ಮೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರಿಗೆ ಅವಮಾನ ಮಾಡಿದವರೊಂದಿಗೆ ಡಿ.ಕೆ ಶಿವಕುಮಾರ್ ಅವರು ಇಂದು ವೇದಿಕೆ ಹಂಚಿಕೊಂಡಿದ್ದಾರೆ ಎಂದು ಹಲವರು ಸೋಷಿಯಲ್ ಮೀಡಿಯಾದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಬರಹಗಾರರಾದ ನಾಗೇಗವ್ಡ ಕೆ.ಎಸ್ ಅವರು, ನಾವು ಮುಖ್ಯಮಂತ್ರಿ ಸಿದ್ದರಾಮಯ್ಯ, ಸಭಾಧ್ಯಕ್ಷ ಯು.ಟಿ ಖಾದರ್ ಅವರನ್ನು ನೀವು ಅಲ್ಲಿಗೆ ಹೋಗ್ಬೇಡಿ, ಇಲ್ಲಿಗೆ ಹೋಗ್ಬೇಡಿ ಅಂತ ಗೋಳು ಉಯ್ಯುತ್ತೇವೆ. ಆದರೆ, ಡಿ.ಕೆ ಶಿವಕುಮಾರ್ ಅವರು ಎಲ್ಲೆಲ್ಲಿಗೋ ಹೋಗುತ್ತಾರೆ ಎಂದು ಪರೋಕ್ಷವಾಗಿ ಹೇಳಿದ್ದಾರೆ. ಈ ಮನುಶ್ಯನಿಗೆ ಅವರ ವ್ಯವಹಾರ ಅಷ್ಟೇ passion. Disgusting to the core.... ಓಂ ನಮಃ ಶಿವಾಯ ಎಂದಿದ್ದಾರೆ.
ಬರಹಗಾರರಾದ ಪಂಜು ಗಂಗೂಲಿ ಅವರು ಫೇಸ್‌ಬುಕ್‌ನಲ್ಲಿ ಈ ಬಗ್ಗೆ ಬರೆದುಕೊಂಡಿರುವುದು ಸಾಕಷ್ಟು ವೈರಲ್ ಆಗಿದೆ. ತಮ್ಮನ್ನು ತಾವು ದೇವಮಾನವರು, ಸ್ವಾಮೀಜಿಗಳು, ಮಠಾಧೀಶರು, ಜಗದ್ಗುರುಗಳು, ಸದ್ಗುರುಗಳು, ಯೋಗಿಗಳು, ಬಾಬಾಗಳು, ಸನ್ಯಾಸಿಗಳು ಅಂತೆಲ್ಲ ಹೇಳಿಕೊಂಡು ಟಿವಿ ಚಾನಲ್ ಗಳಲ್ಲಿ ಕಾಣಿಸಿಕೊಳ್ಳುವ, ಸತ್ಸಂಗ ನಡೆಸುವ, ಯೋಗ ಕ್ಯಾಂಪ್ ನಡೆಸುವ, ಹಬ್ಬ ಹರಿದಿನಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವವರಲ್ಲಿ ಹೆಚ್ಚಿನವರು ರಾಜಕೀಯ ದಲ್ಲಾಳಿಗಳು, ಬಿಸಿನೆಸ್ ಮೀಡಿಯೇಟರ್ ಗಳು. ಇವರಿಗೆ ಆ ಪಾರ್ಟಿ ಈ ಪಾರ್ಟಿ, ಈ ಬಿಸಿನೆಸ್ ಆ ಬಿಸಿನೆಸ್ ಅಂತೇನಿಲ್ಲ. ಅವರಿಗೆ ಎಲ್ಲ ಪಾರ್ಟಿಗಳೂ ಒಂದೇ. ಯಾವ ಬಿಸಿನೆಸ್ ಆದರೂ ಸೈ. ಇವರು ಎಲ್ಲಾ ಕಾಲದಲ್ಲೂ ಇರುತ್ತಾರೆ. ಹಿಂದೆ ಪಿ ವಿ ನರಸಿಂಹರಾವ್ ಕಾಲದಲ್ಲಿ ಚಂದ್ರ ಸ್ವಾಮಿ. ಇಂದಿರಾ ಕಾಲದಲ್ಲಿ ಧೀರೇಂದ್ರ ಬ್ರಹ್ಮಚಾರಿ. ಈಗಲೂ ಹಲವರಿದ್ದಾರೆ ಎಂದು ಅವರು ಹೇಳಿದ್ದಾರೆ.

ಮಿಸ್ಟರ್ ರಾಮ್ ಆಚಾರ್ಯಾ ಎನ್ನುವವರು ಈ ಸ್ವಾಮೀಜಿಗಳು ಹಾಗೂ ರಾಜಕಾರಣಿಗಳು ಒಂದೆಡೆ ಸೇರಿ ಕಾರ್ಯಕ್ರಮದಲ್ಲಿ ಭಾಗಹಿಸುತ್ತಿದ್ದಾರೆ. ಆದರೆ, ಇವರ ಹಿಂಬಾಲಕರು ಹಾಗೂ ಕಾರ್ಯಕರ್ತರು ಕಿತ್ತಾಡಿಕೊಳ್ಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಪತ್ರಕರ್ತರಾದ ನವೀನ್ ಸೂರಿಂಜೆ ಅವರು, ಈ ಜಗ್ಗಿ ವಾಸುದೇವ್ ಅವರಿಗೆ 'ರಾಹುಲ್ ಗಾಂಧಿ ಅಂದ್ರೆ ಯಾರು ಅಂತಲೇ ಗೊತ್ತಿಲ್ಲವಂತೆ'. ಆದರೆ ಡಿ ಕೆ ಶಿವಕುಮಾರ್ ಯಾರು ಅಂತ ಸರಿಯಾಗಿ ಗೊತ್ತಿದೆ.
ಬ್ಯುಸಿನೆಟ್ ಟುಡೇ ಪತ್ರಕರ್ತ ರಾಹುಲ್ ಗಾಂಧಿ ಬಗ್ಗೆ ಕೇಳಿದ ಪ್ರಶ್ನೆಗೆ ಜಗ್ಗಿ ವಾಸುದೇವ್ ಹೀಗೆ ಉತ್ತರಿಸುತ್ತಾರೆ : "ನನಗೆ ರಾಹುಲ್ ಗಾಂಧಿ ಯಾರು ಎಂಬುದು ನಿಜಕ್ಕೂ ಗೊತ್ತಿಲ್ಲ, ಏಕೆಂದರೆ ಅವರು ಏನನ್ನು ಹೇಳಲು ಪ್ರಯತ್ನಿಸುತ್ತಿದ್ದಾರೆ ಎಂಬುದು ನಮಗೆ ಸ್ಪಷ್ಟವಿಲ್ಲ. ಯಾರಾದರೂ ರಾಜಕೀಯ ಪ್ರಕ್ರಿಯೆಯಲ್ಲಿ ಭಾಗಿಯಾಗಲು ಬಯಸಿದರೆ, ಆ ವ್ಯಕ್ತಿ ಏನನ್ನು ಪ್ರತಿನಿಧಿಸುತ್ತಾರೆ ಎಂಬುದು ಜನತೆಗೆ ಸ್ಪಷ್ಟವಾಗಿರಬೇಕು. ಅರವಿಂದ್ ಕೇಜ್ರಿವಾಲ್ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ, ನರೇಂದ್ರ ಮೋದಿ ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಿದ್ದಾರೆ. ರಾಹುಲ್ ಗಾಂಧಿ ಏನನ್ನು ಪ್ರತಿನಿಧಿಸುತ್ತಾರೆ ? ಕನಿಷ್ಠ ನನಗೆ ಇದು ಸ್ಪಷ್ಟವಾಗಿಲ್ಲ" ಎನ್ನುತ್ತಾರೆ. ಇಂತಹ ಜಗ್ಗಿ ವಾಸುದೇವ್ ಕಾರ್ಯಕ್ರಮದಲ್ಲಿ ಡಿ.ಕೆ ಶಿವಕುಮಾರ್ ಭಾಗವಹಿಸುತ್ತಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಾಜಕೀಯ ಧ್ರುವೀಕರಣವೇ ?
ಇನ್ನು ಡಿ.ಕೆ ಶಿವಕುಮಾರ್ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಸೈದ್ಧಾಂತಿಕವಾಗಿ ಮಾತ್ರವಲ್ಲ ರಾಜಕೀಯವಾಗಿಯೂ ಭಾರೀ ಚರ್ಚೆಗೆ ಕಾರಣವಾಗಿದೆ. ಈಚೆಗೆ ಡಿ.ಕೆ ಶಿವಕುಮಾರ್ ಅವರು ಉತ್ತರಪ್ರದೇಶದಲ್ಲಿ ನಡೆದಿರುವ ಮಹಾಕುಂಭಮೇಳದಲ್ಲಿ ಭಾಗವಹಿಸಿದ್ದರು. ಅಲ್ಲದೆ ಮಹಾಕುಂಭ ಮೇಳವನ್ನು ಅತ್ಯಂತ ಅಚ್ಚುಕಟ್ಟಾಗಿ ಉತ್ತರ ಪ್ರದೇಶದ ಬಿಜೆಪಿ ಸರ್ಕಾರ ಆಯೋಜನೆ ಮಾಡಿದೆ ಎಂದೂ ಹೇಳಿದ್ದರು.
ಇಂದೂ ಸಹ ಅವರು ಈ ವಿಚಾರವಾಗಿ ಮಾತನಾಡಿದ್ದರು. ನಾನು ಹಿಂದೂ ಹಿಂದೂವಾಗಿಯೇ ಹುಟ್ಟಿದ್ದೇನೆ.. ಹಿಂದೂವಾಗಿಯೇ ಇರುತ್ತೇನೆ ಎಂದು ಅವರು ಹೇಳಿದ್ದರು. ಇದರ ಬೆನ್ನಲ್ಲೇ ಬಿಜೆಪಿ ಪ್ರಭಾವಿ ನಾಯಕರು ಹಾಗೂ ಕಾಂಗ್ರೆಸ್ ಹೈಕಮಾಂಡ್‌ನ ಮುಖಂಡ ರಾಹುಲ್ ಗಾಂಧಿ ಅವರನ್ನು ಅವಮಾನಿಸಿದವರೊಂದಿಗೇ ವೇದಿಕೆ ಹಂಚಿಕೊಂಡಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.
ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಿನಿಂದಲೂ ಮುಖ್ಯಮಂತ್ರಿಯಾಗಬೇಕು ಎಂದು ಡಿ.ಕೆ ಶಿವಕುಮಾರ್ ಅವರು ಪ್ರಯತ್ನಿಸುತ್ತಲ್ಲೇ ಇದ್ದಾರೆ. ಆದರೆ, ಇದು ಸಹಕಾರವಾಗುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯ ಬಗ್ಗೆಯೂ ಜೋರು ಚರ್ಚೆ ನಡೆದಿದೆ. ಇದರ ನಡುವೆ ಬಿಜೆಪಿ ರಾಜ್ಯದ ವ್ಯವಸ್ಥೆಯ ಬಗ್ಗೆ ಹಾಗೂ ಬಿಜೆಪಿ ನಾಯಕರ ಕಾರ್ಯಕ್ರಮದಲ್ಲಿ ಡಿ.ಕೆ ಶಿವಕುಮಾರ್ ಅವರು ಭಾಗವಹಿಸುತ್ತಿರುವುದು ಇನ್ನಷ್ಟು ಅನುಮಾನಗಳಿಗೆ ಕಾರಣವಾಗಿದೆ.












Click it and Unblock the Notifications