Eid-E-Milad ಈ ಭಾಗದಲ್ಲಿ ಈದ್ ಮೆರವಣಿಗೆ ಮುಂದೂಡಿಕೆ, ಯಾಕೆ ?
ಯಾರಪ್ಪಂದ್ ಏನೈತಿ ಬೆಳಗಾವಿ ನಮ್ದೈತಿ ಅನ್ನೋ ಮಾತು ನಿಮ್ಗ ಬೆಳಗಾವಿಯಾಗ ಎಲ್ಲಿ ನಿಂತ್ರೂ ಕೇಳಿಸ್ತದ. ನಾವು ಈಗ ಹೇಳ್ತಿರೋದು ಅದಲ್ಲ. ಈ ಭಾರೀ ಗಣೇಶೋತ್ಸವ ಮತ್ ಈದ್ ಮೆರವಣಿಗೆ ಒಂದೇ ಟೈಮ್‌ನಾಗ ಬಂದೈತಿ. ಈ ಟೈಮ್‌ನಾಗ ಮುಸ್ಲಿಂ ಸಮುದಾಯದವರು ಸೌಹಾರ್ದತೆ ಮೆರೆದಿದ್ದಾರೆ. ಈ ಮೂಲಕ ಯಾರಪ್ಪಂದ್ ಏನೈತಿ ಬೆಳಗಾವಿಯಾಗ ಸೌಹಾರ್ದತೆ ಮಸ್ತ್ ಐತಿ ಅನ್ನಾಕ್ತಾರ.
ಈ ಬಾರಿ ಗಣೇಶೋತ್ಸವ ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗದಲ್ಲಿ ಶಾಂತಿ - ಸೌಹಾರ್ದತೆಯಿಂದ ಆಚರಿಸುತ್ತಿದ್ದಾರೆ. ಕರ್ನಾಟಕದಲ್ಲಿಯೂ ಬಹುತೇಕ ಶಾಂತಿಯುತವಾಗಿ ಗಣೇಶೋತ್ಸವ ಆಚರಣೆ ಆಗುತ್ತಿದೆ. ಅಲ್ಲಲ್ಲಿ ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿದರೆ, ಕರ್ನಾಟಕದ ಬಹುತೇಕ ಪ್ರದೇಶದಲ್ಲಿ ಗಣೇಶೋತ್ಸವ ಆಚರಣೆ ಅದ್ಧೂರಿ ಹಾಗೂ ವಿಜೃಂಭ್ರಣೆಯಿಂದ ನಡೆದಿದೆ. ಇನ್ನು ಇದೀಗ ಬೆಳಗಾವಿಯಲ್ಲಿ ಭಾವೈಕ್ಯತೆ ಹಾಗೂ ಸೌಹಾರ್ದದ ವಿಷಯದಿಂದ ಗಮನ ಸೆಳೆದಿದೆ.

ದೇಶದಲ್ಲಿ ಮಹಾರಾಷ್ಟ್ರದ ನಂತರ ಕರ್ನಾಟಕದಲ್ಲಿ ಅದ್ಧೂರಿಯಾಗಿ ಗಣೇಶ ಚತುರ್ಥಿಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಉತ್ತರ ಕರ್ನಾಟಕದ ಬೆಳಗಾವಿ ಹಾಗೂ ವಿವಿಧ ಜಿಲ್ಲೆಗಳಲ್ಲೂ ಅದ್ಧೂರಿಯಾಗಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ. ಆದರೆ, ಕೆಲವೊಮ್ಮೆ ಸಣ್ಣಪುಟ್ಟ ಗೊಂದಲಗಳು ಸೃಷ್ಟಿಯಾಗುವುದಿದೆ. ಆದರೆ, ಕನ್ನಡಿಗರು ಉಳಿದ ರಾಜ್ಯಗಳಿಗೆ ಹೋಲಿಕೆ ಮಾಡಿದರೆ, ಆ ರೀತಿಯ ತಪ್ಪುಗಳಿಗೆ ಆಸ್ಪದ ನೀಡುವುದು ಕಡಿಮೆ. ಇದಕ್ಕೆ ಕರ್ನಾಟಕದ ಪರಂಪರೆಯೂ ಕಾರಣ. ಕರ್ನಾಟಕದಲ್ಲಿ ಕೆಲವು ರಾಜಕೀಯ ನಾಯಕರು ಹಾಗೂ ರಾಜಕೀಯ ಪಕ್ಷಗಳಿಂದ ಸೌಹಾರ್ದತೆಗೆ ಧಕ್ಕೆ ಎದುರಾಗಿದೆ ಎನ್ನುವ ಆರೋಪಗಳಿವೆ. ರಾಜಕೀಯ ನಾಯಕರ ಷಡ್ಯಂತರವನ್ನು ಕನ್ನಡಿಗರು ಸೋಲಿಸಿದ್ದೇ ಹೆಚ್ಚು. ಇದೀಗ ಬೆಳಗಾವಿಯಲ್ಲೂ ಜನ ಸೌಹಾರ್ದತೆ ಮೆರೆದಿದ್ದಾರೆ.
ಈದ್ ಮೆರವಣಿಗೆಯಲ್ಲಿ ಬದಲಾವಣೆ
ಈದ್ ಮೆರವಣಿಗೆಯನ್ನು ಮುಸ್ಲಿಂ ಸಮುದಾಯದವರು ಮುಂದೂಡಿದ್ದಾರೆ. ಅಲ್ಲದೇ ಹಿಂದೂ - ಮುಸ್ಲಿಂ ಸಮುದಾಯದ ಇಬ್ಬರೂ ಸೇರಿ ಗಣೇಶೋತ್ಸವ ಆಚರಣೆ ಮಾಡುತ್ತಿರುವುಕ್ಕೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬೆಳಗಾವಿಯಲ್ಲಿ ಸೆಪ್ಟೆಂಬರ್ 16 ರಂದು ಈದ್ ಮಿಲಾದ್ ಮೆರವಣಿಗೆ ನಡೆಯಬೇಕಿತ್ತು. ಆದರೆ, ಗಣೇಶೋತ್ಸವದ ಹಿನ್ನೆಲೆಯಲ್ಲಿ ಸೆ.16ರಂದು ಆಯೋಜಿಸಿದ್ದ ಈದ್ ಮಿಲಾದ್ ಮೆರವಣಿಗೆಯನ್ನು ಸೆಪ್ಟೆಂಬರ್ 22ಕ್ಕೆ ಮುಂದೂಡಲಾಗಿದೆ.
ಮುಸ್ಲಿಂ ಸಮುದಾಯದ ಈ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಈಚೆಗೆ ಸಭೆ ಸೇರಿದ ಮುಸ್ಲಿಂ ಸಮಾಜದ ಹಿರಿಯರು, ವಿವಿಧ ಕಮಿಟಿಗಳ ಪದಾಧಿಕಾರಿಗಳು ಮತ್ತು ಧರ್ಮಗುರುಗಳು ಈ ಕುರಿತು ಒಮ್ಮತದ ನಿರ್ಣಯ ತೆಗೆದುಕೊಂಡಿದ್ದಾರೆ. ಈ ಬಾರಿ ಕ್ಯಾಲೆಂಡರ್‌ನ ಪ್ರಕಾರ, ಈದ್ ಮಿಲಾದ್ ಮೆರವಣಿಗೆಯೂ ಸೆಪ್ಟೆಂಬರ್ 16ಕ್ಕೆ ಇದೆ.ಆದರೆ, ಬೆಳಗಾವಿಯ ಈ ಭಾಗದಲ್ಲಿ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಯನ್ನು ಸೆಪ್ಟೆಂಬರ್ 17ಕ್ಕೆ ಆಯೋಜಿಸಲಾಗಿದೆ. ಅಲ್ಲದೇ ಸಾಮಾನ್ಯವಾಗಿ ಬೆಳಗಾವಿಯಲ್ಲಿ ಗಣಪತಿ ವಿಸರ್ಜನಾ ಮೆರವಣಿಗೆಯು ಅತ್ಯಂತ ಅದ್ಧೂರಿಯಾಗಿ ನಡೆಯುತ್ತದೆ.
ಈ ಹಿನ್ನೆಲೆಯಲ್ಲಿ ಗಣೇಶೋತ್ಸವ ಹಾಗೂ ಹಬ್ಬಕ್ಕೆ ಯಾವುದೇ ತೊಡಕಾಗಬಾರದು ಮತ್ತು ಉತ್ಸವ ಸುಸೂತ್ರವಾಗಿಯೂ, ಶಾಂತಿ-ಸಹಬಾಳ್ವೆ ಕಾಪಾಡುವ ಉದ್ದೇಶದಿಂದ ಈದ್ ಮೆರವಣಿಗೆ ಮುಂದೂಡಲಾಗಿದೆ. ಈ ಸಂಬಂಧ ಮಾಹಿತಿ ನೀಡಿರುವ ಶಾಸಕ ಆಸಿಫ್ ಸೇ ಅವರು, ಸೆಪ್ಟೆಂಬರ್ 16ರಂದು ಪದ್ಧತಿಯನುಸಾರ ಎಲ್ಲಾ ಮಸೀದಿ ಹಾಗೂ ಮನೆಗಳಲ್ಲಿ ಈದ್ ಆಚರಣೆಗಳು ಎಂದಿನಂಯೆ ನಡೆಯಲಿವೆ. ಆದರೆ ಮೆರವಣಿಗೆಯನ್ನು ಮುಂದೂಡಲಾಗಿದೆ ಎಂದು ಮಾಹಿತಿ ನೀಡಿದರು.












Click it and Unblock the Notifications