ಬಿಜೆಪಿ ರಾಜ್ಯ ಕಾರ್ಯಕಾರಣಿಗೆ ಈಶ್ವರಪ್ಪ ಗೈರಾಗಿದ್ದು ಏಕೆ?
ಬೆಂಗಳೂರು, ಆ.06 : ಬಿಜೆಪಿ ರಾಜ್ಯ ಕಾರ್ಯಕಾರಣಿಗೆ ಕೆ.ಎಸ್.ಈಶ್ವರಪ್ಪ ಗೈರಾಗಿದ್ದಾರೆ. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಲು ಸಿದ್ಧವಾಗಿರುವ ರಾಜ್ಯ ಬಿಜೆಪಿಗೆ ಇದು ಹಿನ್ನಡೆ ಉಂಟು ಮಾಡಿದೆ.
ರಾಜ್ಯದ ಪ್ರಸ್ತುತ ಬೆಳವಣಿಗೆಗಳ ಬಗ್ಗೆ ಚರ್ಚಿಸಲು ಭಾನುವಾರ ರಾಜ್ಯ ಬಿಜೆಪಿ ಕಾರ್ಯಕಾರಣಿ ಸಭೆ ನಡೆಯಿತು. ಆದರೆ, ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಸಭೆಗೆ ಗೈರು ಹಾಜರಾಗಿದ್ದರು.

ಕರ್ನಾಟಕ ಬಿಜೆಪಿ ಉಸ್ತುವಾರಿ ಮುರಳೀಧರರಾವ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದ ಗೌಡ, ಜಗದೀಶ್ ಶೆಟ್ಟರ್, ಶೋಭಾ ಕರಂದ್ಲಾಜೆ, ಆರ್.ಅಶೋಕ್ ಮುಂತಾದ ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಶ್ರಾವಣದ ಪೂಜೆ ಇತ್ತು : ಶಿವಮೊಗ್ಗದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಕೆ.ಎಸ್.ಈಶ್ವರಪ್ಪ ಅವರು, 'ಶ್ರಾವಣ ಮಾಸದ ಎರಡನೇ ವಾರ ನಮ್ಮ ಮನೆಯಲ್ಲಿ ಪೂಜೆ ಇರುತ್ತದೆ. ಅದರಲ್ಲಿ ನಾನು ಪಾಲ್ಗೊಂಡಿದ್ದೆ. ಆದ್ದರಿಂದ, ಕಾರ್ಯಕಾರಣಿಗೆ ಆಗಮಿಸಲು ಸಾಧ್ಯವಿಲ್ಲ ಎಂದು ನಾಯಕರಿಗೆ ತಿಳಿಸಿದ್ದೆ' ಎಂದು ಹೇಳಿದ್ದಾರೆ.
ಬಿ.ಎಸ್.ಯಡಿಯೂರಪ್ಪ ಬಿಜೆಪಿ ರಾಜ್ಯಾದ್ಯಕ್ಷರಾಗುತ್ತಿದ್ದಂತೆ ಹಲವು ಪದಾಧಿಕಾರಿಗಳನ್ನು ನೇಮಕ ಮಾಡಿದ್ದರು. ಯಡಿಯೂರಪ್ಪ ಏಕಪಕ್ಷೀಯ ನಿರ್ಧಾರ ಕೈಗೊಳ್ಳುತ್ತಿದ್ದಾರೆ ಎಂದು ಕೆ.ಎಸ್.ಈಶ್ವರಪ್ಪ ಹಲವು ಬಾರಿ ಬಹಿರಂಗವಾಗಿ ಆರೋಪಿಸಿದ್ದರು.
ನಂತರ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ವಿಚಾರದಲ್ಲಿ ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವೆ ಜಟಾಪಟಿ ನಡೆದಿತ್ತು. ಈಶ್ವರಪ್ಪ ಕಾರ್ಯಕಾರಣೀ ಸಭೆಗೆ ಗೈರು ಹಾಜರಾಗಲು ಅಸಮಾಧಾನವೇ ಕಾರಣ? ಎಂದು ವಿಶ್ಲೇಷಿಸಲಾಗುತ್ತಿದೆ.












Click it and Unblock the Notifications