'ಬಿಜೆಪಿಯ ಮಿತ್ರರೇ' ಎಂದ ಡಿಕೆಶಿ ಹೇಳಿಕೆಯ ಹಿಂದಿನ ಮರ್ಮವೇನು?
ಒಂದು ಕಾಲದಲ್ಲಿ aggressive ರಾಜಕೀಯಕ್ಕೆ ಹೆಸರಾಗಿದ್ದ ಡಿ. ಕೆ. ಶಿವಕುಮಾರ್ ಅವರ ಇತ್ತೀಚಿನ ರಾಜಕಾರಣದ ಪಕ್ವತೆಯೇ ಬದಲಾಗಿದೆ. ವೃತ್ತಿಪರ ರಾಜಕಾರಣಿಯ ರೀತಿಯಲ್ಲಿ ತಮ್ಮ ಕಾರ್ಯಶೈಲಿಯನ್ನು ಬದಲಾಯಿಸಿಕೊಂಡಿರುವ ಡಿಕೆಶಿ, ಅದೆಷ್ಟೋ ಬಾರಿ ಕಾಂಗ್ರೆಸ್ ಅನ್ನು ಬಚಾವ್ ಮಾಡಿ ಸೈ ಎನಿಸಿಕೊಂಡಿರುವವರು. ಜೊತೆಗೆ, ಕಷ್ಟವನ್ನೂ ಅನುಭವಿಸಿದವರು.
ಪಕ್ಷಕ್ಕಾಗಿ ಯಾವ ಮಟ್ಟಕ್ಕೆ ಇಳಿಯಲೂ ಸಿದ್ದರಾಗಿರುವ ಡಿಕೆಶಿಗೆ ಬಿಜೆಪಿಯಲ್ಲೂ ಮಿತ್ರರಿದ್ದಾರೆ, ಕಾಂಗ್ರೆಸ್ಸಿನಲ್ಲೂ ಶತ್ರುಗಳಿದ್ದಾರೆ. ಬಿಜೆಪಿಯ ನಾಯಕರನ್ನು 'ನನ್ನ ಬಿಜೆಪಿಯ ಮಿತ್ರ' ಎಂದೇ ಸಂಬೋಧಿಸುವ ಡಿಕೆಶಿ, ರಾಜಕಾರಣ ಬೇರೆ ವೈಯಕ್ತಿಕ ವಿಚಾರ ಬೇರೆ ಎನ್ನುವ ನಿಲುವನ್ನು ಹೊಂದಿರುವವರು.
ಡಿಕೆಶಿ ಬಂಧನ: ಸಿಎಂ ಯಡಿಯೂರಪ್ಪ ಹೇಳಿದ್ದು ಹೀಗೆ
ರಾಜಕಾರಣದಿಂದ ಹೊರತಾಗಿ, ಡಿಕೆಶಿ ಮತ್ತು ಯಡಿಯೂರಪ್ಪ ಪರಮಾಪ್ತರು ಎನ್ನುವುದು ರಾಜ್ಯಕ್ಕೆಲ್ಲಾ ಗೊತ್ತಿರುವ ವಿಚಾರ. ಆಡಳಿತ- ವಿರೋಧ ಪಕ್ಷ ಎನ್ನುವ ಒಂದು ಕಾರಣ, ಜನರಿಗೆ ಅಪಾರ್ಥ ಸಂದೇಶ ಹೋಗಬಾರದು ಎನ್ನುವ ಇನ್ನೊಂದು ಕಾರಣಕ್ಕಾಗಿ, ಹಾಗೇ ಸುಮ್ಮನೆ ಆವಾಗಾವಾಗ, ಬಿಎಸ್ವೈ - ಡಿಕೆಶಿ ಮಾತಿನ ಚಕಮಕಿ ನಡೆಸುತ್ತಿದ್ದರಾಯೇ ಹೊರತು, ಅವರಿಬ್ಬರ ನಡುವಿನ ರಾಜಕಾರಣ ತೀರಾ ಕೆಳಮಟ್ಟಕ್ಕೆ ಹೋದ ಉದಾಹರಣೆಗಳು ಕಮ್ಮಿ.
ಅದ್ಯಾವ ಗಳಿಗೆಯಲ್ಲಿ ಡಿಕೆಶಿಗೆ, ರಮೇಶ್ ಕುಮಾರ್ ಮಾತು ಕೊಟ್ರೋ? ಹಾಗೇ ಆಯ್ತು
"ಬಿಜೆಪಿಯಲ್ಲಿ ನನಗೆ ಬಹಳಷ್ಟು ಜನ ಮಿತ್ರರಿದ್ದಾರೆ" ಎನ್ನುವ ಡಿಕೆಶಿ ಹೇಳಿಕೆಯಲ್ಲಿ ರಾಜಕೀಯದಿಂದ ಹೊರತಾದ ಸಂಬಂಧವಿದೆಯೋ ಅಥವಾ ಲೂಪೋಲ್ಸ್ ಗಳು ಏನಾದರೂ ಇದೆಯೋ ಗೊತ್ತಿಲ್ಲ, ಆದರೆ, ಪ್ರತಿ ಬಾರಿ, ಬಿಜೆಪಿಯ ಕೆಲವು ನಾಯಕರನ್ನು ಡಿಕೆಶಿ ಕರೆಯುವುದೇ 'ಬಿಜೆಪಿಯ ನನ್ನ ಗೆಳೆಯ' ಎಂದು.

ಡಿಕೆಶಿ ಮನೆಯಲ್ಲಿ ನಡೆದ ತಪಾಸಣೆಯ ವೇಳೆ, ಯಡಿಯೂರಪ್ಪನವರಿಗೆ ಸಂಬಂಧ ಪಟ್ಟ ಡೈರಿ
ಇತ್ತೀಚೆಗೆ ಡಿಕೆಶಿ ಮನೆಯಲ್ಲಿ ನಡೆದ ತಪಾಸಣೆಯ ವೇಳೆ, ಯಡಿಯೂರಪ್ಪನವರಿಗೆ ಸಂಬಂಧ ಪಟ್ಟ ಡೈರಿಯೊಂದು ಸಿಕ್ಕಿತ್ತು. ಇದನ್ನು, 'ಬಿಜೆಪಿಯ ನನ್ನ ಮಿತ್ರರೇ ನನಗೆ ತಲುಪಿಸಿದ್ದು' ಎನ್ನುವ ಮಾತನ್ನು ಡಿ ಕೆ ಶಿವಕುಮಾರ್ ಹೇಳಿದ್ದರು. ಡಿಕೆಶಿ ಈ ಹೇಳಿಕೆ ಭಾರೀ ಚರ್ಚೆಗೆ ಗುರಿಯಾಗಿತ್ತು. "ಸಮಯ ಬಂದಾಗ ಎಲ್ಲವನ್ನೂ ಸವಿಸ್ತಾರವಾಗಿ ಹೇಳುತ್ತೇನೆ" ಎಂದು ಆ ಘಟನೆಗೆ ವಿರಾಮವನ್ನು ಡಿಕೆಶಿ ನೀಡಿದ್ದರು.

ಶಿವಕುಮಾರ್ ಅಣ್ಣ..ಐ ಯಾಮ್ ಸಾರಿ
ಇನ್ನು, ಡಿ ಕೆ ಶಿವಕುಮಾರ್ ಬಂಧನವಾಗುತ್ತಿದ್ದಂತೇ, ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಎಂದು ಹೇಳಿದ್ದ ಶ್ರೀರಾಮುಲು, ಪಿತೃಗಳಿಗೆ ಎಡೆಯಿಡಲು ಆಗುತ್ತಿಲ್ಲ ಎಂದು ಡಿಕೆಶಿ ಕಣ್ಣೀರು ಹಾಕಿದಾಗ, ತಮ್ಮ ಮಾತನ್ನು ಬದಲಾಯಿಸಿದ್ದಾರೆ. "ನನ್ನ ಮಾತು ಕೇವಲ ರಾಜಕೀಯಕ್ಕೆ ಸೀಮಿತ. ನನ್ನಿಂದ ನೋವಾಗಿದ್ದರೆ, ಶಿವಕುಮಾರ್ ಅಣ್ಣ..ಐ ಯಾಮ್ ಸಾರಿ" ಎಂದು ಹೇಳಿದ್ದಾರೆ.

ಎಲ್ಲರಿಗಿಂತ ಸಂತೋಷ ಪಡುವವನು ನಾನು
ಇನ್ನು, ಮುಖ್ಯಮಂತ್ರಿ ಯಡಿಯೂರಪ್ಪ, "ಡಿ ಕೆ ಶಿವಕುಮಾರ್ ಅವರು ಬಿಡುಗಡೆಯಾದರೆ ಎಲ್ಲರಿಗಿಂತ ಸಂತೋಷ ಪಡುವವನು ನಾನು. ನನಗಿದು ಸಂತೋಷ ತಂದಿಲ್ಲ, ನಾನಾಗಲಿ, ಬಿಜೆಪಿಯಾಗಲಿ ದ್ವೇಷದ ರಾಜಕಾರಣ ಮಾಡಿಲ್ಲ" ಎಂದು ಹೇಳಿದ್ದಾರೆ. ಅವರ ಮಾತಿನಲ್ಲಿ, ಮುಖದಲ್ಲಿ ನೋವು ಕಾಣಿಸುತ್ತಿತ್ತು.

ಡಿಸಿಎಂ ಗೋವಿಂದ ಕಾರಜೋಳ ಹೇಳಿಕೆ
"ಅವರವರ ಕರ್ಮ, ಪುಣ್ಯ" ಎಂದು ಹೇಳಿದ್ದ ಡಿಸಿಎಂ ಗೋವಿಂದ ಕಾರಜೋಳ, ನಂತರ, " ಬೇರೆಯವರು ಕಷ್ಟದಲ್ಲಿದ್ದಾಗ ಸಂತೋಷ ಪಡುವವನು ಮನುಷ್ಯನಲ್ಲ. ಬಿಜೆಪಿ ಎಂದಿಗೂ ದ್ವೇಷದ ರಾಜಕಾರಣ ಮಾಡಿಲ್ಲ. ತನಿಖೆಯಿಂದ ಸತ್ಯಾಸತ್ಯತೆ ಹೊರಗೆ ಬರಲಿ" ಎನ್ನು ಹೇಳಿಕೆಯನ್ನು ನೀಡಿದ್ದಾರೆ.

'ಬಿಜೆಪಿಯವರ ನನ್ನ ಮಿತ್ರರು' ಎನ್ನುವ ಹೇಳಿಕೆಯ ಹಿಂದೆ, ಅದೇನು ಗೂಡಾರ್ಥವಿದೆಯೋ
ಒಟ್ಟಿನಲ್ಲಿ, ಡಿಕೆಶಿಯವರ 'ಬಿಜೆಪಿಯವರ ನನ್ನ ಮಿತ್ರರು' ಎನ್ನುವ ಹೇಳಿಕೆಯ ಹಿಂದೆ, ಅದೇನು ಗೂಡಾರ್ಥವಿದೆಯೋ, ಸದ್ಯದ ಇಡಿ ಸಮಸ್ಯೆಯಿಂದ ಹೊರಬಂದ ಮೇಲೆ, ಅದರ ಸತ್ಯಾಸತ್ಯತೆ ಹೊರಬಂದರೂ ಬರಬಹುದು. ಯಾಕೆಂದರೆ, ಡಿಕೆಶಿಯವರೇ ಹೇಳಿದ ಹಾಗೇ, "ಕಾಲಚಕ್ರದ ಸುಳಿಯಲ್ಲಿ ಎಲ್ಲರೂ ಒಂದಲ್ಲಾ ಒಂದು ಸಿಕ್ಕಿಹಾಕಿಕೊಳ್ಳಲೇ ಬೇಕು".