Government Employee: ಒಪಿಎಸ್ ಜಾರಿಗೆ ಇರುವ ತೊಡಕುಗಳೇನು?
ಬೆಂಗಳೂರು, ಜುಲೈ 18: ಸರ್ಕಾರಿ ನೌಕರರ ಪ್ರಮುಖ ಬೇಡಿಕೆಯಾದ ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗದ ವರದಿ ಶಿಫಾರಸು ಜಾರಿಗೊಳಿಸಲು ಕರ್ನಾಟಕ ಸರ್ಕಾರ ಒಪ್ಪಿಗೆ ನೀಡಿದೆ. ಆದರೆ ಸರ್ಕಾರಿ ನೌಕರರು ಹಳೇ ಪಿಂಚಣೆ ಯೋಜನೆ ಮರು ಜಾರಿಗಾಗಿ ಪಟ್ಟು ಹಿಡಿದಿದ್ದಾರೆ.
ರಾಷ್ಟ್ರೀಯ ಪಿಂಚಣಿ ಯೋಜನೆ (ಹೊಸ ಪಿಂಚಣಿ)ಯನ್ನು ಕೇಂದ್ರ ಮತ್ತು ವಿವಿಧ ರಾಜ್ಯದ ಸರ್ಕಾರಿ ನೌಕರರು ವಿರೋಧಿಸುತ್ತಿದ್ದಾರೆ. ಎನ್‌ಪಿಎಸ್ ರದ್ದುಪಡಿಸಿ ಹಳೇ ಪಿಂಚಣೆ ಯೋಜನೆಯನ್ನು ಮರು ಜಾರಿಗೊಳಿಸಬೇಕು ಎಂದು ಸರ್ಕಾರಗಳನ್ನು ಆಗ್ರಹಿಸುತ್ತಿದ್ದಾರೆ.

ಕರ್ನಾಟಕ ಸರ್ಕಾರ ಈಗಾಗಲೇ ದಿನಾಂಕ 01/04/2006ರ ಪೂರ್ವದಲ್ಲಿ ನೇಮಕಾತಿ ಅಧಿಸೂಚನೆಗಳ ಮೂಲಕ ಆಯ್ಕೆ ಹೊಂದಿ ಆ ದಿನಾಂಕದಂದು ಅಥವಾ ನಂತರದಲ್ಲಿ ರಾಜ್ಯ ಸರ್ಕಾರದ ಸೇವೆಗೆ ಸೇರಿದ ನೌಕರರನ್ನು ಹಳೆಯ ಡಿಫೈನ್ಡ್ ಪಿಂಚಣಿ ಯೋಜನೆಗೆ ಒಳಪಡಿಸುವ ಕುರಿತು ಆದೇಶ ಹೊರಡಿಸಿದೆ. ಆದರೆ ಈ ಸೌಲಭ್ಯ ಸುಮಾರು 11 ಸಾವಿರ ನೌಕರರಿಗೆ ಮಾತ್ರ ಲಭ್ಯವಾಗಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸದನದಲ್ಲಿ ನೀಡಿರುವ ಮಾಹಿತಿ ಅನ್ವಯ ಸುಮಾರು 2,65,715 ನೌಕರರು ಎನ್‌ಪಿಎಸ್ ವ್ಯಾಪ್ತಿಯಲ್ಲಿದ್ದಾರೆ. ಅಲ್ಲದೇ ಎನ್‌ಪಿಎಸ್ ಅಡಿ ಬರುವ 1169 ನೌಕರರು ಮೃತಪಟ್ಟಿದ್ದಾರೆ. 1463 ನೌಕರರು ನಿವೃತ್ತಿ ಹೊಂದಿದ್ದಾರೆ. ಎಲ್ಲಾ ಸರ್ಕಾರಿ ನೌಕರರನ್ನು ಒಪಿಎಸ್ ವ್ಯಾಪ್ತಿಗೆ ತರಬೇಕು ಎಂಬುದು ಪ್ರಮುಖ ಬೇಡಿಕೆಯಾಗಿದೆ.
ಎನ್‌ಪಿಎಸ್ ರದ್ದಿಗೆ ಇರುವ ತೊಡಕುಗಳೇನು?: ಕರ್ನಾಟಕ ಕಾಂಗ್ರೆಸ್ ವಿಧಾನಸಭೆ ಚುನಾವಣೆಯ ಪ್ರಣಾಳಿಕೆಯಲ್ಲಿ ಎನ್‌ಪಿಎಸ್ ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆ ಮರು ಜಾರಿಗೊಳಿಸುವ ಕುರಿತು ಭರವಸೆ ನೀಡಿತ್ತು. ಆದ್ದರಿಂದ ಎನ್‌ಪಿಎಸ್ ನೌಕರರ ಸಂಘ ಈ ಭರವಸೆ ಈಡೇರಿಸಬೇಕು ಎಂದು ಸರ್ಕಾರವ ಮೇಲೆ ಒತ್ತಡ ಹಾಕುತ್ತಿದ್ದಾರೆ.
2.78 ಲಕ್ಷ ಎನ್‌ಪಿಎಸ್ ನೌಕರರು ಇದ್ದು, ಈ ಯೋಜನೆ ರದ್ದು ಮಾಡುವುದರಿಂದ ಸರ್ಕಾರಕ್ಕೆ ಯಾವುದೇ ಹೊರೆ ಆಗುವುದಿಲ್ಲ, ಉಳಿತಾಯವೇ ಆಗಲಿದೆ. ಈ ಕುರಿತು ಎನ್‌ಪಿಎಸ್ ನೌಕರರ ಸಂಘದ ಅಧ್ಯಕ್ಷ ಶಾಂತರಾಮ ಅವರ ನೇತೃತ್ವದ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವರಿಕೆ ಮಾಡಿಕೊಟ್ಟಿದೆ.
ಸರ್ಕಾರ ಈಗಾಗಲೇ ದಿನಾಂಕ 1/3/2023ರ ಆದೇಶದಲ್ಲಿ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ರದ್ದುಪಡಿಸಿ, ಹಳೆ ಪಿಂಚಣಿ ಯೋಜನೆಯನ್ನು ಮರು ಜಾರಿ ಮಾಡಿರುವ ರಾಜ್ಯಗಳಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಿರುವ ಕುರಿತು ಕೈಗೊಂಡಿರುವ ಕ್ರಮಗಳ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ಆದೇಶ ಹೊರಡಿಸಿದೆ.
ಎನ್‌ಪಿಎಸ್ ವ್ಯವಸ್ಥೆ ರದ್ದಾದರೂ ಸಹ ಆಂಧ್ರ ಪ್ರದೇಶ ರಾಜ್ಯ ಸರ್ಕಾರ ಜಾರಿಗೆ ತರಲು ಹೊರಟಿದ್ದ ಹೈಬ್ರಿಡ್ ವ್ಯವಸ್ಥೆ ಅಥವ ಒಪಿಎಸ್ ಜಾರಿಗೆ ಬರಲಿದೆಯೇ? ಎಂಬುದು ಸರ್ಕಾರಿ ನೌಕರರ ಪ್ರಶ್ನೆಯಾಗಿದೆ. ಹೈಬ್ರಿಡ್ ವ್ಯವಸ್ಥೆಯಲ್ಲಿ ಕನಿಷ್ಠ ಪಿಂಚಣಿ ಗ್ಯಾರಂಟಿ ನೀಡಬೇಕಿದೆ. 33 ವರ್ಷದ ಸೇವೆ ಕಡ್ಡಾಯವಾಗಿದೆ ಎಂಬುದು ನಿಯಮ. ಆದರೆ ಎನ್‌ಪಿಎಸ್ ಮತ್ತು ಒಪಿಎಸ್ ಹೊರತುಪಡಿಸಿ ಬೇರೆ ವ್ಯವಸ್ಥೆ ಜಾರಿಗೆ ಅವಕಾಶವಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.
ಜುಲೈ 15ರ ಸಚಿವ ಸಂಪುಟ ಸಭೆಯಲ್ಲಿ ಎನ್‌ಪಿಎಸ್ ರದ್ದುಗೊಳಿಸುವ ಕುರಿತು ಚರ್ಚೆ ನಡೆಯಲಿದೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಈ ಕುರಿತು ಯಾವುದೇ ಚರ್ಚೆ ನಡೆದಿಲ್ಲ. ಆದ್ದರಿಂದ ಸರ್ಕಾರಿ ನೌಕರರು ಈ ಕುರಿತು ಬೇಗ ತೀರ್ಮಾನ ಕೈಗೊಳ್ಳಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಎನ್‌ಪಿಎಸ್ ರದ್ದುಗೊಳಿಸಿ ಒಪಿಎಸ್ ಜಾರಿಗೊಳಿಸಿದರೆ ಸರ್ಕಾರಕ್ಕೆ ಸುಮಾರು 21 ಸಾವಿರ ಕೋಟಿ ರೂ. ಲಭ್ಯವಾಗಲಿದೆ ಎಂದು ಅಂದಾಜಿಸಲಾಗಿದೆ. ಆದರೆ ಸರ್ಕಾರ ಎನ್‌ಪಿಎಸ್ ರದ್ದುಗೊಳಿಸಲು ಯಾವುದೇ ತೀರ್ಮಾನವನ್ನು ಕೈಗೊಂಡಿಲ್ಲ. ಸರ್ಕಾರಿ ನೌಕರರು ಜುಲೈ 23ರಂದು ಮಹತ್ವದ ಸಭೆಯನ್ನು ಕರೆದಿದ್ದಾರೆ. ಎನ್‌ಪಿಎಸ್ ರದ್ದುಗೊಳಿಸಲು ಹೋರಾಟ ತೀವ್ರಗೊಳಿಸುವ ಕುರಿತು ಸಭೆಯಲ್ಲಿ ತೀರ್ಮಾನ ಕೈಗೊಳ್ಳುವ ನಿರೀಕ್ಷೆ ಇದೆ.












Click it and Unblock the Notifications