ಕರ್ನಾಟಕ ರಾಜಕೀಯ; ಕನ್ನಡ ನಟ, ನಟಿಯರ ಪ್ರಚಾರ, ಕಾರಣ, ವಿಶ್ಲೇಷಣೆ

ಬೆಂಗಳೂರು, ಏಪ್ರಿಲ್‌ 28; ಕರ್ನಾಟಕ ವಿಧಾನಸಭೆ ಚುನಾವಣಾ ಕಣ ರಂಗೇರಿದೆ. ಮೇ 10ರಂದು ನಡೆಯುವ ಚುನಾವಣೆಗೆ ವಿವಿಧ ಪಕ್ಷಗಳ ಪ್ರಚಾರ ಬಿಸಿಲಿನ ಕಾವಿಗಿಂತ ಹೆಚ್ಚಾಗಿದೆ. ಸಿನಿಮಾ ತಾರೆಯರು ವಿವಿಧ ಪಕ್ಷಗಳ ಅಭ್ಯರ್ಥಿಗಳ ಪರ ಪ್ರಚಾರ ಕಣಕ್ಕೆ ಧುಮುಕಿದ್ದಾರೆ. ನೆಚ್ಚಿನ ನಟ-ನಟಿಯರನ್ನು ನೋಡಲು ಜನಸಾಗರ ಸೇರುತ್ತಿದೆ. ಆದರೆ ಇದು ಮತವಾಗಿ ಪರಿವರ್ತನೆ ಆಗಲಿದೆಯೇ? ಎಂದು ಕಾದು ನೋಡಬೇಕಿದೆ.

ಈ ಬಾರಿಯ ಚುನಾವಣೆಯ ದಿನಾಂಕ ಘೋಷಣೆಯಾದ ಬಳಿಕ ಭಾರೀ ಸುದ್ದಿ ಯಾಗಿದ್ದು ನಟ ಕಿಚ್ಚ ಸುದೀಪ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಬೆಂಬಲ ನೀಡಿದ ಅವರು ಪ್ರೀತಿಯ ಮಾಮನ ಪರವಾಗಿ ಪ್ರಚಾರ ಮಾಡುತ್ತೇನೆ ಎಂದು ಘೋಷಣೆ ಮಾಡಿದರು. ಬಿಜೆಪಿ ಅಭ್ಯರ್ಥಿಗಳ ಪರವಾಗಿ ಅವರು ರಾಜ್ಯದ ವಿವಿಧ ಕಡೆ ಪ್ರಚಾರ ಮಾಡುತ್ತಿದ್ದಾರೆ. ಆದರೆ ನಾನು ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎಂದು ಸುದೀಪ ಸ್ಪಷ್ಟವಾಗಿ ಹೇಳಿದ್ದಾರೆ.

Why Celebrities Taking Political Stance In Recent Times

ಮುನಿರತ್ನ, ಎಚ್. ಡಿ. ಕುಮಾರಸ್ವಾಮಿ, ಉಪೇಂದ್ರ, ತಾರಾ, ನಿಖಿಲ್ ಕುಮಾರಸ್ವಾಮಿ, ಬಿ. ಸಿ. ಪಾಟೀಲ್, ಸುಮಲತಾ, ರಮ್ಯಾ, ಶೃತಿ, ಸಿ. ಪಿ. ಯೋಗೇಶ್ವರ್, ಜಗ್ಗೆಶ್‌, ಉಮಾಶ್ರೀ ಹೀಗೆ ಚಿತ್ರರಂಗದ ನಂಟು ಹೊಂದಿರುವ ಅನೇಕರು ಕರ್ನಾಟಕದ ರಾಜಕೀಯದಲ್ಲಿ ವಿವಿಧ ಪಕ್ಷಗಳಲ್ಲಿ ಸಕ್ರಿಯರಾಗಿದ್ದಾರೆ. ಹಲವು ನಟ-ನಟಿಯರು ವಿವಿಧ ಪಕ್ಷಗಳಿಗೆ ಸೇರ್ಪಡೆಯಾಗಿದ್ದು, ಚುನಾವಣೆ ಸಂದರ್ಭದಲ್ಲಿ ಪ್ರಚಾರದಲ್ಲಿ ತೊಡಗಿದ್ದಾರೆ.

ಕರ್ನಾಟಕ ರಾಜಕೀಯ, ಸಿನಿಮಾ; ಕರ್ನಾಟಕದ ಅಕ್ಕಪಕ್ಕದ ತಮಿಳುನಾಡು, ಆಂಧ್ರ ಪ್ರದೇಶದ ರಾಜಕೀಯ ನೋಡಿದಾಗ ಸಿನಿಮಾ ಮತ್ತು ರಾಜಕೀಯದ ನಡುವಿನ ನಂಟು ತೀರಾ ಹತ್ತಿರವಾಗಿದೆ. ಸಿನಿಮಾದಲ್ಲಿ ಯಶಸ್ಸಿನ ಉತ್ತುಂಗಕ್ಕೆ ಏರಿದ ನಾಯಕರು ರಾಜಕೀಯಕ್ಕೆ ಧುಮುಕಿ ಮುಖ್ಯಮಂತ್ರಿ ಸ್ಥಾನದ ತನಕ ಏರಿದ್ದಾರೆ. ರಾಜಕೀಯ ಪಕ್ಷವನ್ನು ಕಟ್ಟಿ ಸಿನಿಮಾದ ಯಶಸ್ಸನ್ನು ಅಲ್ಲಿ ಸಾಧಿಸಲು ಆಗದೇ ಇರುವವರು ಇದ್ದಾರೆ.

ರಾಜ್ಯ ರಾಜಕೀಯ ಮತ್ತು ಸಿನಿಮಾರಂಗ ನಡುವಿನ ನಂಟು ಅಷ್ಟಿಲ್ಲ. ಕರ್ನಾಟಕದ ಮೂರು ಪ್ರಮುಖ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್, ಜೆಡಿಎಸ್‌ನಲ್ಲಿ ಸಿನಿಮಾ ರಂಗದ ಹಲವರು ಇದ್ದಾರೆ. ಶಾಸಕರಾಗಿ, ಸಚಿವರಾಗಿ, ವಿಧಾನ ಪರಿಷತ್ ಸದಸ್ಯರಾಗಿ, ಸಂಸದರಾಗಿ, ವಿವಿಧ ನಿಗಮ/ ಮಂಡಳಿಗಳ ಅಧ್ಯಕ್ಷರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ. ನಟ, ನಿರ್ದೇಶಕ ಉಪೇಂದ್ರ ಹೊಸ ಪಕ್ಷ ಕಟ್ಟಿ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಹಲವು ನಟ, ನಟಿಯರು ಚುನಾವಣೆಯಲ್ಲಿ ಪ್ರಚಾರ ಮಾಡುತ್ತಾರೆ. ಆದರೆ ಸಿನಿಮಾ ನಟರು ಕರೆ ನೀಡಿದಾಗ ಮಾತ್ರಕ್ಕೆ ಚುನಾವಣೆ ಮೇಲೆ ಪ್ರಭಾವ ಬೀರಲಿದೆ ಎನ್ನುವಂತೆ ರಾಜ್ಯ ರಾಜಕೀಯವಿಲ್ಲ.

Why Celebrities Taking Political Stance In Recent Times

ಡಾ. ರಾಜ್ ಕುಮಾರ್ ರಾಜಕೀಯಕ್ಕೆ ಬರಲಿಲ್ಲ; ಕನ್ನಡ ಚಿತ್ರರಂಗದ ಬಗ್ಗೆ ಮಾತನಾಡುವಾಗ ಡಾ. ರಾಜ್ ಕುಮಾರ್ ಬಗ್ಗೆ ನೆನಪು ಮಾಡಿಕೊಳ್ಳಬೇಕು. ಕರ್ನಾಟಕ ರತ್ನ, ಅಭಿಮಾನಿಗಳ ಪಾಲಿನ ಅಣ್ಣಾವ್ರು ಕನ್ನಡ ನಾಡು, ನುಡಿ ಬಗೆಗಿನ ಹೋರಾಟದಲ್ಲಿ ಪಾಲ್ಗೊಂಡರು. ಗೋಕಾಕ್ ಚಳವಳಿಯಲ್ಲಿ ಭಾಗಿಯಾದರು. ಆದರೆ ಅವರು ಎಂದಿಗೂ ರಾಜಕೀಯಕ್ಕೆ ಬರಲಿಲ್ಲ. ಡಾ. ರಾಜ್‌ ಕುಮಾರ್ ಸೊಸೆ ಗೀತಾ ಶಿವರಾಜ್ ಕುಮಾರ್ ರಾಜಕೀಯಕ್ಕೆ ಬಂದಿದ್ದಾರೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ 2014ರಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಅವರು ಬಿಜೆಪಿಯ ಬಿ. ಎಸ್‌. ಯಡಿಯೂರಪ್ಪ ವಿರುದ್ಧ ಸೋಲು ಕಂಡಿದ್ದರು. ಶುಕ್ರವಾರ ಅವರು ಕಾಂಗ್ರೆಸ ಪಕ್ಷವನ್ನು ಸೇರುತ್ತಿದ್ದಾರೆ.

1978ರ ಚಿಕ್ಕಮಗಳೂರು ಲೋಕಸಭೆ ಉಪ ಚುನಾವಣೆಯಲ್ಲಿ ಇಂದಿರಾ ಗಾಂಧಿ ಸ್ಪರ್ಧಿಸಿದ್ದರು. ಆಗ ಡಾ. ರಾಜ್ ಕುಮಾರ್ ಅವರನ್ನು ಎದುರಾಳಿಯಾಗಿ ನಿಲ್ಲಿಸಬೇಕು ಎಂದು ವಿವಿಧ ಪಕ್ಷಗಳು ಪ್ರಯತ್ನ ನಡೆಸಿದವು. ಆದರೆ ಅವರು ಒಪ್ಪಲಿಲ್ಲ. ಪುತ್ರ ರಾಘವೇಂದ್ರ ರಾಜ್‌ಕುಮಾರ್ ಬಳಿಕ ತಾವು ಏಕೆ ರಾಜಕೀಯಕ್ಕೆ ಹೋಗಲ್ಲ ಎಂದು ಡಾ. ರಾಜ್ ವಿವರಿಸಿದ್ದರಂತೆ. ಬರಗೂರು ರಾಮಚಂದ್ರಪ್ಪ ಬರೆದಿರುವ 'ಜನಪದ ನಾಯಕ ಡಾ. ರಾಜಕುಮಾರ್' ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ರಾಘವೇಂದ್ರ ರಾಜ್ ಕುಮಾರ್ ಈ ಬಗ್ಗೆ ಮಾತನಾಡಿದ್ದರು.

ಡಾ. ರಾಜ್ ಕುಮಾರ್‌, "ಒಬ್ಬ ವ್ಯಕ್ತಿಯನ್ನು ಮಣಿಸಲು ನನ್ನನ್ನು ಬಾಣವನ್ನಾಗಿ ಬಳಸಿಕೊಳ್ಳಲು ಬಯಸಿದ್ದಾರೆ. ನನ್ನಿಂದ ಇತರರಿಗೆ ಒಳಿತಾಗಬೇಕೇ ಹೊರತು, ಕೆಡುಕಾಗಬಾರದು. ಗಾಂಧಿಯಿಂದ ಈ ದೇಶ ಸರಿಪಡಿಸಲು ಆಗಲಿಲ್ಲ. ಇನ್ನು ಈ ರಾಜ್ ಕುಮಾರ್‌ನಿಂದ ಸರಿಯಾಗಲು ಸಾಧ್ಯವೇ?. ನನ್ನಿಂದ ಒಳ್ಳೆಯ ಕೆಲಸ ಮಾಡಿಸಿಕೊಳ್ಳುವ ಇಚ್ಛೆ ಅವರಿಗೆ ಇಲ್ಲ. ಒಮ್ಮೆ ಪ್ರಯೋಗಿಸಿದ ಬಾಣದಂತೆ ನನ್ನನ್ನು ಬಳಸಿ ಬಿಟ್ಟು ಬಿಡಲಿದ್ದಾರೆ. ನನಗೆ ಬಾಣವಾಗಿ ಬಳಕೆಯಾಗಲು ಇಷ್ಟವಿಲ್ಲ" ಎಂದು ರಾಜಕೀಯ ಪ್ರವೇಶದ ಬಗ್ಗೆ ವಿವರಣೆ ನೀಡಿದ್ದರು.

ಅಂಬರೀಶ್ ರಾಜಕೀಯಕ್ಕೆ ಬಂದರು. ಸಂಸದ, ಶಾಸಕ, ಸಚಿವರಾಗಿ ಕೆಲಸ ಮಾಡಿದರು. ಡಾ. ವಿಷ್ಣುವರ್ಧನ್ ರಾಜಕೀಯಕ್ಕೆ ಬರಲಿಲ್ಲ. ನಿರ್ಮಾಪಕರಾಗಿರುವ ಎಚ್. ಡಿ. ಕುಮಾರಸ್ವಾಮಿ, ಮುನಿರತ್ನ ರಾಜಕೀಯದಲ್ಲಿದ್ದಾರೆ. ನಟರಾದ ಜಗ್ಗೇಶ್, ಬಿ. ಸಿ. ಪಾಟೀಲ್, ಸಿ. ಪಿ. ಯೋಗೇಶ್ವರ್ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ದಿ. ಅಂಬರೀಶ್ ಪತ್ನಿ ಸುಮಲತಾ ಅಂಬರೀಶ್ ಪ್ರಸ್ತುತ ಮಂಡ್ಯದ ಸಂಸದರು. 2013ರ ಮಂಡ್ಯ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ರಮ್ಯಾ 67,611 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. 2014ರ ಚುನಾವಣೆಯಲ್ಲಿ ಅವರು ಸೋತರು. ಬಳಿಕ ಕಾಂಗ್ರೆಸ್ ಚಟುವಟಿಕೆಯಲ್ಲಿ ಸಕ್ರಿಯರಾದರೂ, ರಾಜ್ಯ ರಾಜಕೀಯದಿಂದ ದೂರವಾದರು.

ಈಗಿನ ಚುನಾವಣೆ ನಟ-ನಟಿಯರು; ಈಗ ಕರ್ನಾಟಕದ ಸಿನಿಮಾ ತಾರೆಯರು ಏಕೆ ರಾಜಕೀಯದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ? ಎಂಬ ಪ್ರಶ್ನೆ ಇದೆ. ಆದರೆ ಇಲ್ಲಿ ಅಧಿಕಾರದ ಆಸೆಗಿಂತ ವ್ಯಕ್ತಿಗಳು ಮುಖ್ಯವಾಗುತ್ತಾರೆ. ಸುದೀಪ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೇಲಿನ ಪ್ರೀತಿಯಿಂದ ಪ್ರಚಾರದ ಕಣಕ್ಕೆ ಧುಮುಕಿದ್ದಾರೆ. ಆದರೆ ಅವರು ಚುನಾವಣೆಗೆ ಸ್ಪರ್ಧೆ ಮಾಡುತ್ತಿಲ್ಲ.

ನಟ ದರ್ಶನ್ ವಿವಿಧ ಪಕ್ಷಗಳ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. ನಮ್ಮ ಆಪ್ತರ ಪರವಾಗಿ ಪ್ರಚಾರ ಮಾಡುತ್ತೇನೆ. ಇಲ್ಲಿ ಪಕ್ಷ, ಅಧಿಕಾರ ಎಲ್ಲವೂ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ನಟ ಜಗ್ಗೇಶ್, ಸುಮಲತಾ ಪಕ್ಷಗಳ ಜೊತೆ ಗುರುತಿಸಿಕೊಂಡು ಹುದ್ದೆಗಳನ್ನು ಪಡೆದಿದ್ದಾರೆ. ಇನ್ನೂ ಕೆಲವು ನಟ, ನಟಿಯರು ಅವರು ಸೇರಿರುವ ಪಕ್ಷ ಅಧಿಕಾರಕ್ಕೆ ಬಂದರೆ ನಿಗಮ/ ಮಂಡಳಿಗಳ ಹುದ್ದೆಗಳ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿರುತ್ತಾರೆ. ಅಧಿಕಾರ ಪಡೆದ ಉದಾಹರಣೆಗಳು ಸಹ ಇವೆ. ಅಲ್ಲದೇ ಪಕ್ಷಗಳು ಸಿನಿಮಾ ಕೋಟಾದಡಿ ಹಲವು ತಾರೆಯರಿಗೆ ವಿಧಾನ ಪರಿಷತ್ ನಾಮ ನಿರ್ದೇಶವನ್ನು ಸಹ ಮಾಡಿವೆ.

ಸಿನಿಮಾ ತಾರೆಯರ ಬಳಿ ಅಭಿಮಾನಿಗಳು ಸದಾ ಆಗಮಿಸುತ್ತಾರೆ. ಅವರಲ್ಲಿ ಅನೇಕರು ಚಿಕಿತ್ಸಾ ವೆಚ್ಚ, ಉದ್ಯೋಕ್ಕೆ ಪಡೆಯಲು ಸಹಾಯ, ವಿದ್ಯಭ್ಯಾಸಕ್ಕೆ ಸಹಾಯ ಸೇರಿದಂತೆ ಹಲವು ಮನವಿಗಳನ್ನು ಸಹ ಮಾಡುತ್ತಾರೆ. ನಟ-ನಟಿಯರು ರಾಜಕೀಯ ವ್ಯಕ್ತಿಗಳ ಜೊತೆ ನಂಟಿದ್ದಾಗ ಅವರ ಸಹಾಯದ ಮೂಲಕ ಅಭಿಮಾನಿಗಳಿಗೆ ನೆರವಾಗುತ್ತಾರೆ. ಈ ಕಾರಣಕ್ಕಾಗಿಯೂ ಕೆಲವು ನಟ-ನಟಿಯರು ರಾಜಕೀಯದಲ್ಲಿ ಗುರುತಿಸಿಕೊಳ್ಳುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+