ಕರ್ನಾಟಕ ಚುನಾವಣೆ; ಬಿಜೆಪಿ ಪಟ್ಟಿ ವಿಳಂಬಕ್ಕೆ 3 ಕಾರಣಗಳು!
ಬೆಂಗಳೂರು, ಏಪ್ರಿಲ್ 07; ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ರಾಜ್ಯದ ಪ್ರತಿಪಕ್ಷ ಕಾಂಗ್ರೆಸ್ ಗುರುವಾರ ಅಭ್ಯರ್ಥಿಗಳ 2ನೇ ಪಟ್ಟಿ ಘೋಷಣೆ ಮಾಡಿದೆ. ಮೊದಲ ಪಟ್ಟಿಯಲ್ಲಿ 124 ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಣೆ ಮಾಡಿತ್ತು. ಆದರೆ ರಾಜ್ಯದ ಆಡಳಿತ ಪಕ್ಷ ಬಿಜೆಪಿಯ ಒಂದು ಪಟ್ಟಿಯೂ ಬಿಡುಗಡೆಯಾಗಿಲ್ಲ.
ವಿಧಾನಸಭೆ ಚುನಾವಣೆ ಅಧಿಸೂಚನೆ ಏಪ್ರಿಲ್ 13ರಂದು ಪ್ರಕಟವಾಗಲಿದೆ. ಏಪ್ರಿಲ್ 20ರ ತನಕ ನಾಮಪತ್ರ ಸಲ್ಲಿಕೆಗೆ ಅವಕಾಶವಿದೆ. ಆದರೆ ಬಿಜೆಪಿ ಏಕೆ ಇನ್ನೂ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿಲ್ಲ? ಎಂಬುದು ಎಲ್ಲರ ಪ್ರಶ್ನೆ. ರಾಜ್ಯದ 224 ಕ್ಷೇತ್ರಗಳಿಗೆ ಮೇ 10ರ ಬುಧವಾರ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮೇ 13ರ ಶನಿವಾರ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

ಬಿಜೆಪಿ ಪಟ್ಟಿ ಬಿಡುಗಡೆ ವಿಳಂಬವಾಗುವುದಕ್ಕೆ ಕಾರಣವನ್ನು ಕರ್ನಾಟಕ ಕಾಂಗ್ರೆಸ್ ಕಂಡು ಹಿಡಿದಿದೆ. ಈ ಕುರಿತು ಶುಕ್ರವಾರ ಸರಣಿ ಟ್ವೀಟ್‌ಗಳನ್ನು ಮಾಡಿದೆ. 'ಇಂತಹ ದುರ್ಬಲ ಬಿಜೆಪಿ ಚುನಾವಣೆಯಿಂದ ಹಿಂದೆ ಸರಿಯುವುದೇ ಒಳಿತು!' ಎಂದು ರಾಜ್ಯದ ಆಡಳಿತ ಪಕ್ಷವಾದ ಬಿಜೆಪಿಗೆ ಪ್ರತಿಪಕ್ಷ ಸಲಹೆಯನ್ನು ನೀಡುವ ಮೂಲಕ ಟೀಕೆ ಮಾಡಿದೆ.
ಕಾಂಗ್ರೆಸ್ ತನ್ನ ಟ್ವೀಟ್‌ನಲ್ಲಿ, ಚುನಾವಣೆ ಘೋಷಣೆಯಾದರೂ ಅಭ್ಯರ್ಥಿಗಳ ಒಂದು ಪಟ್ಟಿಯನ್ನೂ ಬಿಡುಗಡೆ ಮಾಡದಷ್ಟು ಬಿಜೆಪಿಯಲ್ಲಿ ಗೊಂದಲವಿದೆ.
ಇದಕ್ಕೆ ಕಾರಣ
* ಬಿಜೆಪಿಯಲ್ಲಿರುವ ನಾಯಕತ್ವದ ಕೊರತೆಯೋ
* #BJPvsBJP ಕಾದಾಟದ ಪರಿಣಾಮವೋ
* ಬಣ ಬಡಿದಾಟದ ಸಮಸ್ಯೆಯೋ ಎಂಬುದು ಸ್ವತಃ @BJP4Karnataka
ಗೇ ತಿಳಿಯುತ್ತಿಲ್ಲ! ಎಂದು ಟ್ವೀಟ್ ಮಾಡುವ ಮೂಲಕ ವ್ಯಂಗ್ಯವಾಡಿದೆ.

ಮತ್ತೊಂದು ಟ್ವೀಟ್‌ನಲ್ಲಿ ಕಾಂಗ್ರೆಸ್ ಪಕ್ಷ, 'ಬಿಜೆಪಿಯಲ್ಲಿ ಟಿಕೆಟ್ ಘೋಷಣೆಗೂ ಮುನ್ನವೇ ಕುರುಕ್ಷೇತ್ರದಂತಹ ರಣರಂಗ ಸೃಷ್ಟಿಯಾಗಿದೆ. ಟಿಕೆಟ್ ಘೋಷಣೆಯ ನಂತರ "ವರ್ಲ್ಡ್ ವಾರ್ 3" ಶುರುವಾಗಲಿದೆ! ಮಾಜಿ ಡಿಸಿಎಂಗೇ ಟಿಕೆಟ್ ಸಿಗುವ ಭರವಸೆ ಇಲ್ಲ ಎಂದರೆ ಬಿಜೆಪಿಯಲ್ಲಿ ಬಣ ಬಡಿದಾಟದ ಮಹಾಸಮರವೇ ನಡೆಯುತ್ತಿದೆ ಎಂದರ್ಥ. ಒಟ್ಟಿನಲ್ಲಿ ಬಿಜೆಪಿಯನ್ನು ಬಿಜೆಪಿಗರೇ ಮುಳುಗಿಸುವುದು ನಿಶ್ಚಿತ!' ಎಂದು ಹೇಳುವ ಮೂಲಕ ಪಕ್ಷದ ಒಳಜಗಳವನ್ನು ಪಕ್ಷ ಬಯಲು ಮಾಡಿದೆ.
ಎಂದು ಪಟ್ಟಿ ಬಿಡುಗಡೆ?; ಬಿಜೆಪಿ ಪಟ್ಟಿಯ ಬಿಡುಗಡೆ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿದ್ದಾರೆ. "ಏಪ್ರಿಲ್ 9ರಂದು ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಗಲಿದೆ. ಒಂದು ಕ್ಷೇತ್ರಕ್ಕೆ ಮೂವರು ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಎಲ್ಲಾ ರೀತಿಯ ಪ್ರಕ್ರಿಯೆ ಮುಗಿಸಿ ನವದೆಹಲಿಗೆ ಪಟ್ಟಿ ಕಳುಹಿಸಲಾಗಿದೆ" ಎಂದು ಅವರು ಹೇಳಿದ್ದಾರೆ.
ಶುಕ್ರವಾರ ಬಸವರಾಜ ಬೊಮ್ಮಾಯಿ ಹುಬ್ಬಳ್ಳಿಯಿಂದ ದೆಹಲಿಗೆ ತೆರಳಿದ್ದಾರೆ. ಕೇಂದ್ರ ಚುನಾವಣಾ ಸಮಿತಿ ಸದಸ್ಯ, ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಕರ್ನಾಟಕ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಶುಕ್ರವಾರ ದೆಹಲಿಗೆ ತೆರಳಿದ್ದು, ಶನಿವಾರ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಯಲಿದೆ.
ಬಸವರಾಜ ಬೊಮ್ಮಾಯಿ, "ಏಪ್ರಿಲ್ 7 ಮತ್ತು 8ರಂದು ಸಭೆ ಸೇರಿ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುತ್ತೇವೆ. ಬಿಜೆಪಿ ಗೆಲ್ಲುವ ಪಕ್ಷ, ಹೀಗಾಗಿ ಟಿಕೆಟ್ಗಾಗಿ ಪೈಪೋಟಿ ಸಾಮಾನ್ಯ" ಎಂದು ಹೇಳಿದ್ದಾರೆ. ಮುಖ್ಯಮಂತ್ರಿಗಳು ಹೇಳಿದಂತೆ ಏಪ್ರಿಲ್ 9ರ ಭಾನುವಾರ ಬಿಜೆಪಿಯ ಮೊದಲ ಪಟ್ಟಿ ಬಿಡುಗಡೆಯಾಗುವ ನಿರೀಕ್ಷೆ ಇದೆ.
ಪ್ರತಿಪಕ್ಷ ಕಾಂಗ್ರೆಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಬಸವರಾಜ ಬೊಮ್ಮಾಯಿ, "ಕಾಂಗ್ರೆಸ್‌ನವರು ಕಳೆದ ಬಾರಿಗಿಂತ ಹೀನಾಯವಾಗಿ ಸೋಲುತ್ತಾರೆ. ಅವರಿಗೆ ಇನ್ನೂ 60 ಕ್ಷೇತ್ರಗಳಲ್ಲಿ ಸೂಕ್ತ ಅಭ್ಯರ್ಥಿ ಸಿಗುತ್ತಿಲ್ಲ. ಹೀಗಾಗಿ ಕಾಂಗ್ರೆಸ್‌ನವರು ನಮ್ಮವರನ್ನು ಸಂಪರ್ಕ ಮಾಡಿದ್ದಾರೆ. ಎರಡನೇ ಪಟ್ಟಿ ಸಿದ್ಧತೆ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಸಂಪರ್ಕಿಸಿದ್ದರು" ಎಂದು ಆರೋಪ ಮಾಡಿದರು.
ಈ ಬಾರಿಯ ಚುನಾವಣೆಗೆ ಜೆಡಿಎಸ್ 93 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಕಾಂಗ್ರೆಸ್ ಮಾರ್ಚ್ 25ರಂದು 124, ಏಪ್ರಿಲ್ 6ರಂದು 42 ಕ್ಷೇತ್ರಗಳಿಗೆ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ. ಆದರೆ ರಾಷ್ಟ್ರೀಯ ಪಕ್ಷವಾದ ಬಿಜೆಪಿ ಇನ್ನೂ ಸಹ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿಲ್ಲ.












Click it and Unblock the Notifications