ಬಿಎಸ್‌ವೈ ಕುಟುಂಬದ ಟೀಕಾಕಾರ ಯತ್ನಾಳ್‌ಗೆ ವಿಪಕ್ಷ ಸ್ಥಾನ ಸಿಗಲಿದೆಯೇ? ಇನ್‌ಸೈಡ್ ರಿಪೋರ್ಟ್
ಬೆಂಗಳೂರು, ನವೆಂಬರ್ 14: ಕರ್ನಾಟಕದಲ್ಲಿ ಬಿಜೆಪಿಯು ವಿರೋಧ ಪಕ್ಷದ ನಾಯಕನನ್ನು ಇದೇ ನವೆಂಬರ್ 17ರಂದು ಆಯ್ಕೆ ಮಾಡಲಿದೆ. ಈ ಹುದ್ದೆಗೆ ನಮ್ಮ 'ಹಿಂದೂ ಹುಲಿ'ಯೇ ಆಯ್ಕೆ ಆಗುತ್ತಾರೆ ಎಂಬ ಅಚಲ ವಿಶ್ವಾಸ ಹೊಂದಿದ್ದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಅವರ ಅಭಿಮಾನಿಗಳಿಗೆ ನಿರಾಶೆಯಾಗುವ ಎಲ್ಲ ಲಕ್ಷಣಗಳು ಎದ್ದು ಕಾಣುತ್ತಿವೆ.
ಕರ್ನಾಟಕದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೇರುವವರು ಯಾರು? ಎಂಬ ಕುತೂಹಲ ತೆರೆ ಬಿದ್ದಿದೆ. ಇದೀಗ ಎಲ್ಲರ ಚಿತ್ತ ಬಿಜೆಪಿ ವಿರೋಧ ಪಕ್ಷದ ಆಯ್ಕೆಯ ಮೇಲೆ ನೆಟ್ಟಿದೆ. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಪುತ್ರ ಬಿವೈ ವಿಜಯೇಂದ್ರ (BY Vijayendra) ಅವರು ರಾಜ್ಯಾಧ್ಯಕ್ಷ ಸ್ಥಾನ ಅಲಂಕರಿಸಿದ ಬಳಿಕ 'ಹಿಂದೂ ಹುಲಿ' ಯತ್ನಾಳ್ ಮತ್ತವರ ಅಭಿಮಾನಿಗಳಲ್ಲಿ ಯಾವ ನಂಬಿಕೆ-ವಿಶ್ವಾಸಗಳು ಉಳಿದಿಲ್ಲ.

ಏಕೆಂದರೆ, ಸದಾಕಾಲ ಪ್ರತಿಪಕ್ಷದ ನಾಯಕರಂತೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮತ್ತವರ ಪುತ್ರ ಬಿವೈ ವಿಜಯೇಂದ್ರ ಅವರನ್ನು ಶಾಸಕ ಬಸವನಗೌಡ ಯತ್ನಾಳ್ ಅವರು ವಿರೋಧಿಸುತ್ತ, ಟೀಕಿಸುತ್ತಲೇ ಬಂದವರು. ಹೀಗಾಗಿ ವಿರೋಧ ಪಕ್ಷದ ನಾಯಕನ ಸ್ಥಾನ ಅವರಿಗೆ ಸಿಗುವುದು ಅನುಮಾನ ಎನ್ನಲಾಗಿದೆ.
ಯತ್ನಾಳ್ ವಿರುದ್ಧ ಬಿಎಸ್‌ವೈ ಬಣದ ನಾಯಕರು
ತಮ್ಮ ನೇರೆ ನಡೆ-ನುಡಿಗಳಿಂದಲೇ ಹೆಸರುವಾಸಿಯಾಗಿರುವ ಬಸವನಗೌಡ ಯತ್ನಾಳ್ ಅವರ ವಿರುದ್ಧದ ನಿಲುವು ಅನೇಕರಲ್ಲಿ ಬೂದಿ ಮುಚ್ಚಿದ ಕೆಂಡದಂತಿದೆ. ಯತ್ನಾಳ್ ಅವರು ತಮ್ಮ ಟೀಕೆಗಳಿಂದಲೇ ಯಡಿಯೂರಪ್ಪ ಬಣದ ನಾಯಕರಿಂದ ದೂರವಾಗಿದ್ದಾರೆ.
ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಜವಾಬ್ದಾರಿ ಸಿಕ್ಕಿದ ಮೇಲಂತೂ ಯತ್ನಾಳ್ ಅವರ ಮೇಲೆ ಯಡಿಯೂರಪ್ಪ ಬಣದ ಕೆಲವರು ಕತ್ತಿ ಮಸಿಯುತ್ತಿದ್ದಾರೆ. ವಿರೋಧ ಪಕ್ಷದ ಸ್ಥಾನ ಯತ್ನಾಳ್ ಪಾಲಾಗದಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಬಿಎಸ್‌ವೈ-ವಿಜಯೇಂದ್ರಗೆ ಯತ್ನಾಳ್ ಮೇಲೆ ಒಲವಿಲ್ಲ
ಯಡಿಯೂರಪ್ಪ ಬಣದಲ್ಲಿ ಗುರುತಿಸಿಕೊಂಡಿರುವ ಮಾಜಿ ಸಚಿವ ಮುರುಗೇಶ್ ನಿರಾಣಿ ಅವರು ಯತ್ನಾಳ್ ವಿರುದ್ಧ ನೇರಾ ನೇರ ವಾಗ್ದಾಳಿ ನಡೆಸಿದ್ದರು. ಒಂದೇ ಕಾರ್ಯಕ್ರಮದಲ್ಲಿ ಇವರಿಬ್ಬರ ಉಪಸ್ಥಿತಿ ಅಪರೂಪ ಎನ್ನುವಷ್ಟರ ಮಟ್ಟಿಗೆ ಈ ನಾಯಕರ ಮಧ್ಯೆ ಆಂತರಿಕ ಸಂಘರ್ಷ ಇರುವ ವಿಚಾರ ಎಲ್ಲಿಗೂ ಗೊತ್ತೆ ಇದೆ.
ಮೊದಲಿನಿಂದಲೂ ಯತ್ನಾಳ್ ಅವರಿಂದ ಟೀಕೆ ಎದುರಿಸಿರುವ ಬಿಎಸ್ ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರಿಗೆ ವಿರೋಧ ಪಕ್ಷದ ನಾಯಕನನ್ನಾಗಿ ಯತ್ನಾಳ್ ಅವರನ್ನು ಆಯ್ಕೆ ಮಾಡಲು ಮನಸ್ಸಿಲ್ಲ. ಹೀಗಾಗಿ ಈ ಸ್ಥಾನದ ಆಯ್ಕೆ ಹೆಚ್ಚು ಕುತೂಹಲ ಕೆರಳಿಸಿದೆ.

ಬಿಜೆಪಿಯ 2 ಸ್ಥಾನಕ್ಕೆ ಲಿಂಗಾಯತರ ಆಯ್ಕೆ ಅನುಮಾನ
ಕರ್ನಾಟಕ ಬಿಜೆಪಿಯಲ್ಲಿರುವ ಎರಡು ಮುಖ್ಯ ಸ್ಥಾನಗಳಲ್ಲಿ ಒಂದು ಲಿಂಗಾಯತ ಸಮುದಾಯದ ಪಾಲಾಗಿದೆ. ಉಳಿದಿರುವ ಇನ್ನೊಂದು ಸ್ಥಾನಕ್ಕೆ ಮತ್ತೆ ಲಿಂಗಾಯತ ನಾಯಕನ ಆಯ್ಕೆ ಅಸಾಧ್ಯ ಎನ್ನಲಾಗಿದೆ. ಈ ಸ್ಥಾನಕ್ಕೆ ಒಕ್ಕಲಿಗ ಇಲ್ಲವೇ ದಲಿತ ಸಮುದಾಯ ಹಿರಿಯ ನಾಯಕರ ಆಯ್ಕೆ ಮಾಡುವ ಮಾತುಗಳು ಕೇಳಿ ಬಂದಿವೆ. ಹೀಗಾದರೆ ಪಕ್ಷದಲ್ಲಿ ಸಮತೋಲನ ಕಾಯ್ದುಕೊಂಡಂತಾಗುತ್ತದೆ.
ಮೇಲಿನ ಇದೆಲ್ಲ ಕಾರಣಗಳಿಂದ ಹಿಂದೂ ಹುಲಿ ಬಸನಗೌಡ ಪಾಟೀಲ್ ಯತ್ನಾಳ್‌ಗೆ ವಿರೋಧ ಪಕ್ಷದ ಸ್ಥಾನ ಕೈತಪ್ಪುವುದು ಬಹುತೇಕ ನಿಚ್ಚಿತ ಎಂಬ ಮಾತುಗಳು ಕೇಳಿ ಬರುತ್ತಿವೆ.
ಆಯ್ಕೆ ಆದರೆ ಸಮನ್ವಯತೆ, ಪಕ್ಷ ಸಂಘಟನೆ ಸಾಧ್ಯವೇ?
ಒಂದು ವೇಳೆ ಬಸನಗೌಡ ಪಾಟೀಲ್ ಅವರಿಗೇ ವಿರೋಧ ಪಕ್ಷದ ಸ್ಥಾನದಲ್ಲಿ ತಂದು ಕೂರಿಸಿದರೆ ಅವರು ಬಿವೈ ವಿಜಯೇಂದ್ರ ಅವರೊಂದಿಗೆ ಪಕ್ಷ ಸಂಘಟನೆಗೆ ಮುಂದಾಗುವರೇ?. ಈ ಉಭಯ ನಾಯಕರ ಮಧ್ಯೆ ಸಮನ್ವಯತೆ ಸಾಧ್ಯವಾಗುವುದೇ?. ಒಂದು ವೇಳೆ ಸಾಧ್ಯವಾಗದಿದ್ದರೆ ಇದು ಲೋಕಸಭಾ ಚುಣಾವಣೆ ಸಂದರ್ಭದಲ್ಲಿ ಕಾಂಗ್ರೆಸ್-ಜೆಡಿಎಸ್ ಗೆ ಅಸ್ತ್ರವಾಗಿ ಪರಿಣಮಿಸಬಹುದಲ್ಲವೇ ಎಂಬುದನ್ನು ಮರೆಯುವಂತಿಲ್ಲ.
ಬಿಜೆಪಿ ವಿರೋಧ ಪಕ್ಷ ಸ್ಥಾನಕ್ಕೆ ಯತ್ನಾಳ್ ಆಯ್ಕೆಯಾದರೆ, ಎರಡು ಮುಖ್ಯ ಹುದ್ದೆಗಳು ಲಿಂಗಾಯತರ ಪಾಲಾಗುತ್ತವೆ. ಇದು ಒಕ್ಕಲಿಗ, ದಲಿತ ಸೇರಿದಂತೆ ಇನ್ನಿತರ ಸಮುದಾಯಗಳ ನಾಯಕರ ಅಸಮಧಾನಕ್ಕೆ, ಆಂತರಿಕ ಭಿನ್ನಾಭಿಪ್ರಾಯಕ್ಕೆ ಕಾರಣವಾಗಲೂಬಹುದು. ಇದೆಲ್ಲ ಕಾರಣ/ಅಂಶಗಳಿಂದ ಹಿಂದು ಹುಲಿಗೆ ವಿರೋಧ ಪಕ್ಷದ ಸ್ಥಾನ ಕಬ್ಬಿಣದ ಕಡಲೆಯಾಗಿಯೇ ಉಳಿಯಲಿದೆ.












Click it and Unblock the Notifications