ರೋಹಿತ್ ಚಕ್ರತೀರ್ಥ ಐಐಟಿ ಪ್ರೊಫೆಸರ್ - ಬಿ.ಸಿ. ನಾಗೇಶ್!
ಬೆಂಗಳೂರು, ಮೇ 23: 'ರೋಹಿತ್ ಚಕ್ರತೀರ್ಥ ಐಐಟಿ ಪ್ರಾಧ್ಯಾಪಕರಾಗಿದ್ದರು. ಈ ದೇಶದ ಯಾವ ದೇಶ ಪ್ರೇಮಿಯನ್ನೂ ನಾವು ಬಿಡಲ್ಲ.' ಇದು ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಅವರ ಬಗ್ಗೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಕೊಟ್ಟಿರುವ ವ್ಯಾಖ್ಯಾನ.
"ನಾಡಗೀತೆಯನ್ನು ಅವಹೇಳನ ಮಾಡಿದ, ರಾಷ್ಟ್ರ ಕವಿಯನ್ನು ಗೇಲಿ ಮಾಡಿದ ಇಂತಹ ಒಬ್ಬ ಕಿಡಿಗೇಡಿಯನ್ನು ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಗೆ ಅಧ್ಯಕ್ಷರನ್ನಾಗಿ ಮಾಡಿದ ಬಿಜೆಪಿ ಕರ್ನಾಟಕ ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ, ಮೊದಲು ಈತನನ್ನು ಕಿತ್ತು ಹಾಕಬೇಕು," ಇದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೋಹಿತ್ ಚಕ್ರತೀರ್ಥ ಬಗ್ಗೆ ಮಾಡಿರುವ ಟ್ವೀಟ್ ನ ಪದಗಳು.

ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇತಿಹಾಸ ಪಠ್ಯ ಕ್ರಮ ಪರಿಷ್ಕರಣೆ ಮಾಡುವ ಸಂಬಂಧ ಪರಿಷ್ಕರಣಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ದೊಡ್ಡ ವಿವಾದಕ್ಕೆ ನಾಂದಿ ಹಾಡಿದ್ದಾರೆ. ರೋಹಿತ್ ಚಕ್ರತೀರ್ಥ ಬಗ್ಗೆ ಇಬ್ಬರು ರಾಜಕೀಯ ನಾಯಕರು ಕೊಟ್ಟಿರುವ ಹೇಳಿಕೆ ಇದೀಗ ಚರ್ಚೆಗೆ ನಾಂದಿ ಹಾಡಿದೆ.

ಬಿ.ಸಿ. ನಾಗೇಶ್ ವಾದ:
ಕಾಂಗ್ರೆಸ್ ಸರ್ಕಾರ ತಿರುಚಿದ ಇತಿಹಾಸವನ್ನು ಬಿಜೆಪಿ ಸರ್ಕಾರ ಸರಿ ಪಡಿಸುತ್ತಿದೆ. ರೋಹಿತ್ ಚಕ್ರತೀರ್ಥ ಅವರ ಬಗ್ಗೆ ಮಾತನಾಡುತ್ತಿದ್ದಾರೆ. ಅವರು ಐಐಟಿಯಲ್ಲಿ ಪ್ರಾಧ್ಯಾಪಕರಾಗಿದ್ದರು. ಈ ದೇಶದ ಯಾವ ದೇಶ ಪ್ರೇಮಿಯನ್ನು ನಾವು ಬಿಡುವುದಿಲ್ಲ. ಪಠ್ಯದಲ್ಲಿ ಕಥೆ, ವೈಚಾರಿಕತೆಯನ್ನು ತಿಳಿಸಿದ್ದೇವೆ. ಹೆಡಗೆವಾರ್ ಕ್ರಾಂತಿಕಾರಿಯಾಗಿದ್ದರು. ನಾಗ್ಪುರ್ ಕಾಂಗ್ರೆಸ್ ನಲ್ಲಿದ್ದವರು. ಖಿಲಾಪತ್ ಚಳವಳಿ ಮುನ್ನೆಡೆಸಿದ್ದರು ಎಂದು ಬಿ.ಸಿ. ನಾಗೇಶ್ ರೋಹಿತ್ ಚಕ್ರತೀರ್ಥ ಅವರನ್ನು ಸಮರ್ಥಿಸಿಕೊಂಡಿದ್ದಾರೆ. ದ್ವಿತೀಯ ಪಿಯುಸಿ ಇತಿಹಾಸ ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರವಾಗಿ ಉಂಟಾಗಿರುವ ಗೊಂದಲ ಬಗ್ಗೆ ಸ್ಪಷ್ಟನೆ ನೀಡಲು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಸ್ತಾಪಿಸಿದರು.

2017 ರಲ್ಲಿ ನಾಡಗೀತೆಯನ್ನು ವಿರೂಪಗೊಳಿಸಿ ಕುವೆಂಪು ಅವರಿಗೆ ಅವಮಾನ ಮಾಡಿ ರೋಹಿತ್ ಚಕ್ರತೀರ್ಥ ರಚನೆ ಮಾಡಿದ್ದ ನಾಡಗೀತೆ ದೊಡ್ಡ ವಿವಾದಕ್ಕೆ ನಾಂದಿ ಹಾಡಿತ್ತು. ಇದನ್ನು ಉಲ್ಲೇಖಿಸಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ರೋಹಿತ್ ಚಕ್ರತೀರ್ಥ ಅವರನ್ನು ಕಿಡಿಗೇಡಿ ಎಂದು ಸಂಬೋಧಿಸಿ ಟ್ವೀಟ್ ಮಾಡಿದ್ದಾರೆ. ನಾಡಗೀತೆಯನ್ನು ಅವಹೇಳನ ಮಾಡಿದ, ರಾಷ್ಟ್ರ ಕವಿಯನ್ನು ಗೇಲಿ ಮಾಡಿದ ಇಂತಹ ಒಬ್ಬ ಕಿಡಿಗೇಡಿಯನ್ನು ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಗೆ ಅಧ್ಯಕ್ಷರನ್ನಾಗಿ ಮಾಡಿದ ಬಿಜೆಪಿ ಕರ್ನಾಟಕ ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ, ಮೊದಲು ಈತನನ್ನು ಕಿತ್ತು ಹಾಕಬೇಕು ಎಂದು ಸಿದ್ಧರಾಮಯ್ಯ ಅಗ್ರಹಿಸಿದ್ದಾರೆ.












Click it and Unblock the Notifications