Karnataka elections 2023; ಬಿಜೆಪಿ ಅಧಿಕಾರಕ್ಕೆ ಬಂದರೆ ಯಾರು ಸಿಎಂ
ಬೆಂಗಳೂರು, ಮೇ 05; ಕರ್ನಾಟಕದ ಚುನಾವಣಾ ಕಣ ರಂಗೇರಿದೆ. ಕೆಲವು ಸಮೀಕ್ಷೆಗಳು ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಹೇಳುತ್ತಿವೆ. ಹಾಗಾದರೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾದರೆ ಮುಖ್ಯಮಂತ್ರಿ ಯಾರು? ಎಂಬುದು ಪ್ರಶ್ನೆ. ಕರ್ನಾಟಕದಲ್ಲಿ ಮೇ 10ರ ಬುಧವಾರ ಚುನಾವಣೆ ನಡೆಯಲಿದ್ದು, ಮೇ 13ರ ಶನಿವಾರ ಫಲಿತಾಂಶ ಪ್ರಕಟವಾಗಲಿದೆ.
ಈ ಹಿಂದೆ ಕರ್ನಾಟಕದ ಬಿಜೆಪಿ ಉಸ್ತುವಾರಿಯಾಗಿದ್ದ ಧರ್ಮೇಂದ್ರ ಪ್ರಧಾನ್ 2023ರ ವಿಧಾನಸಭೆ ಚುನಾವಣೆಗೆ ಬಿಜೆಪಿಯ ರಾಜ್ಯ ಉಸ್ತುವಾರಿ. ಕೇಂದ್ರದ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವರಾದ ಅವರು ರಾಜ್ಯದ ರಾಜಕೀಯವನ್ನು ಚೆನ್ನಾಗಿ ತಿಳಿದಿದ್ದಾರೆ. ಕನ್ನಡ ಪ್ರಭ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಅವರು ರಾಜ್ಯದ ಮುಂದಿನ ಮುಖ್ಯಮಂತ್ರಿ ಬಗ್ಗೆ ಮಾತನಾಡಿದ್ದಾರೆ.

ಬಿ. ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಸವರಾಜ ಬೊಮ್ಮಾಯಿಯನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡುವಾಗಲೂ ಧರ್ಮೇಂದ್ರ ಪ್ರಧಾನ್ ರಾಜ್ಯಕ್ಕೆ ವೀಕ್ಷಕರಾಗಿ ಆಗಮಿಸಿದ್ದರು. ರಾಜ್ಯದಲ್ಲಿ ಹಲವು ಕಡೆ ಅವರು ಪ್ರಚಾರವನ್ನು ಸಹ ನಡೆಸುತ್ತಿದ್ದಾರೆ. ಸಂದರ್ಶನದಲ್ಲಿ ಅವರು, "ಬಿಜೆಪಿ ಈ ಬಾರಿ ಸ್ಪಷ್ಟ ಬಹುತಗಳಿಸುವತ್ತ ಹೆಜ್ಜೆ ಹಾಕಿದೆ. ಇದರಲ್ಲಿ ಎಳ್ಳಷ್ಟೂ ಅನುಮಾನ ಬೇಡ' ಎಂದು ಹೇಳಿದ್ದಾರೆ. ಸಂದರ್ಶನದ ಆಯ್ದ ಪ್ರಶ್ನೆಗಳು ಇಲ್ಲಿವೆ...
ಮುಖ್ಯಮಂತ್ರಿ ಯಾರು?; ಕನ್ನಡ ಪ್ರಭಕ್ಕೆ ನೀಡಿದ ಸಂದರ್ಶನದಲ್ಲಿ ಧರ್ಮೇಂದ್ರ ಪ್ರಧಾನ್, "ಈಗ ಬಸವರಾಜ ಬೊಮ್ಮಾಯಿ ಅವರೇ ಮುಖ್ಯಮಂತ್ರಿ. ನಾವು ಅವರ ನೇತೃತ್ವದ ಸರ್ಕಾರವನ್ನು ಪುನರ್ ಸ್ಥಾಪನೆ ಮಾಡಲು ಜನರ ಬೆಂಬಲ ಕೇಳುತ್ತಿದ್ದೇವೆ. ಪ್ರಚಾರ ಸಮಿತಿ ಅಧ್ಯಕ್ಷರೂ ಬೊಮ್ಮಾಯಿ ಅವರೇ ಆಗಿದ್ದಾರೆ" ಎಂದು ಹೇಳಿದ್ದಾರೆ.
"ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ಬಸವರಾಜ ಬೊಮ್ಮಾಯಿ ಅವರು ಪ್ರಚಾರ ಸಮಿತಿಯ ನೇತೃತ್ವ ವಹಿಸಿಕೊಂಡಿದ್ದಾರೆ. ಇಡೀ ಪಕ್ಷ ಅವರ ಬೆನ್ನಿಗಿದೆ. ಹೀಗಾಗಿ, ಅವರೇ ಮುಂದಿನ ಮುಖ್ಯಮಂತ್ರಿಯಾಗುತ್ತಾರೆ" ಎಂದು ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.

"ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಸೇರಿದಂತೆ ಎಲ್ಲಾ ನಾಯಕರೂ ಚುನಾವಣಾ ಪ್ರಚಾರದ ವೇಳೆ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವನ್ನು ಬೆಂಬಲಿಸುವಂತೆ ಮತಯಾಚನೆ ಮಾಡುತ್ತಿದ್ದಾರೆ" ಎಂದು ಧರ್ಮೇಂದ್ರ ಪ್ರಧಾನ್ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಭ್ರಷ್ಟಾಚಾರದ ಆರೋಪಗಳು; ಕರ್ನಾಟಕದ ಪ್ರತಿಪಕ್ಷ ಕಾಂಗ್ರೆಸ್ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಡುತ್ತಿರುವ ಭ್ರಷ್ಟಾಚಾರದ ಆರೋಪಗಳ ಕುರಿತು ಧರ್ಮೇಂದ್ರ ಪ್ರಧಾನ್ ಮಾತನಾಡಿದ್ದಾರೆ. "ಆರೋಪ ಮಾಡುತ್ತಿರುವವರು ಯಾರು. ಕಾಂಗ್ರೆಸ್ ಪಕ್ಷದವರು. ತಮ್ಮ ಪಕ್ಷ ಉಳಿಸಿಕೊಳ್ಳಲು ಆರೋಪ ಮಾಡುತ್ತಲೇ ಇರುತ್ತಾರೆ. ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ವಿಷಯಗಳು ಸಿಗದೇ ಇರುವುದರಿಂದ ಹತಾಶರಾಗಿ ಜನರನ್ನು ಗೊಂದಲಕ್ಕೀಡು ಮಾಡಲು ಪ್ರಯತ್ನಿಸುತ್ತಿದ್ದಾರೆ. ಆರೋಪ ಮುಖ್ಯವಾಗುವುದಿಲ್ಲ. ಜನರು ಯಾರನ್ನು ಒಪ್ಪುತ್ತಾರೆ, ಯಾರ ನಾಯಕತ್ವಕ್ಕೆ ಮನ್ನಣೆ ನೀಡುತ್ತಾರೆ ಎಂಬುದು ಮುಖ್ಯ" ಎಂದು ಹೇಳಿದ್ದಾರೆ.
ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಪ್ರಚಾರ ಬಿರುಸಿನಿಂದ ಸಾಗಿದೆ. ಮೇ 8ರ ಸಂಜೆ 6 ಗಂಟೆಯ ತನಕ ಬಹಿರಂಗ ಪ್ರಚಾರ ಮಾಡಲು ಅವಕಾಶವಿದೆ. ಪ್ರತಿಪಕ್ಷ ಕಾಂಗ್ರೆಸ್ ಸಿಎಂ ಅಭ್ಯರ್ಥಿ ಘೋಷಣೆ ಮಾಡಿ ಎಂದು ಬಿಜೆಪಿಗೆ ಸವಾಲು ಹಾಕುತ್ತಿದೆ.
ನರೇಂದ್ರ ಮೋದಿ, ಅಮಿತ್ ಶಾ, ರಾಜನಾಥ್ ಸಿಂಗ್ ಸೇರಿದಂತೆ ಕೇಂದ್ರದ ವಿವಿಧ ನಾಯಕರು ರಾಜ್ಯದಲ್ಲಿ ಪಕ್ಷದ ಪರವಾಗಿ ಪ್ರಚಾರದಲ್ಲಿ ತೊಡಗಿದ್ದಾರೆ. ಮೇ 10ರ ಬುಧವಾರ ರಾಜ್ಯದಲ್ಲಿ ಮತದಾನ ನಡೆಯಲಿದೆ, ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ.












Click it and Unblock the Notifications