ಹಣ, ಹೆಂಡ, ಗಿಫ್ಟ್‌ಗೆ ಮತ: ರಾಜಕೀಯದಲ್ಲಿ ಬದಲಾವಣೆ ಮಾಡುವವರು ಯಾರು?
ಬೆಂಗಳೂರು, ಮಾರ್ಚ್ 23: ಪ್ರತಿ ಬಾರಿ ಚುನಾವಣೆ ಬಂದಾಗ ರಾಜಕೀಯದಲ್ಲಿ ಏನಾದರೂ ಬದಲಾವಣೆಯಾಗುತ್ತಾ ಎಂದು ಜನ ಕಾಯುತ್ತಿರುತ್ತಾರೆ. ಆದರೆ ಗೆಲುವಿನ ಲೆಕ್ಕಾಚಾರಗಳ ಮೂಲಕ ಯಾವ ಬದಲಾವಣೆಯೂ ಇಲ್ಲದೆ ಚುನಾವಣೆ ನಡೆಯುತ್ತವೆ. ಬದಲಾವಣೆ ಪ್ರಶ್ನೆಯಾಗಿ ಉಳಿಯುತ್ತದೆ.
ರಾಜಕೀಯಕ್ಕೆ ಯುವಕರನ್ನು ತರಬೇಕು, ಮಹಿಳೆಯರಿಗೆ ಹೆಚ್ಚಿನ ಸ್ಥಾನ ಮಾನಗಳನ್ನು ನೀಡಬೇಕು ಎಂಬ ಹೇಳಿಕೆಗಳು ಚುನಾವಣೆಗೆ ಮುನ್ನ ಪುಂಖಾನುಪುಂಖವಾಗಿ ಹೊರಬರುತ್ತದೆಯಾದರೂ ಚುನಾವಣೆ ಹತ್ತಿರ ಬಂದಾಗ ಯಾವುದೂ ನಡೆಯುವುದೇ ಇಲ್ಲ. ಪ್ರಭಾವಿಗಳು, ಹಣವಂತರು, ರಾಜಕೀಯ ನಾಯಕರ ಮಕ್ಕಳು, ಹೀಗೆ ಇಂತಹವರಿಗೆ ಟಿಕೆಟ್ ನೀಡಲಾಗುತ್ತದೆ. ಮತ್ತು ಅವರೇ ಗೆದ್ದು ಬರುತ್ತಾರೆ.

ಎಲ್ಲ ಪಕ್ಷಗಳಲ್ಲಿಯೂ ನಿಯತ್ತಾಗಿ, ಪ್ರಾಮಾಣಿಕವಾಗಿ ನಿಷ್ಠೆಯಿಂದ ಕೆಲಸ ಮಾಡಿಕೊಂಡು ಬಂದ ನಾಯಕರು ಬದಿಗೆ ಸರಿಸಲ್ಪಟ್ಟು ಪಕ್ಷದ ಮುಖಂಡರು ಎಂಬ ನಾಮಧೇಯಕ್ಕೆ ಸೀಮಿತರಾಗಿ ಬಿಡುತ್ತಾರೆ. ಇಂತಹ ನಾಯಕರು ಜನಪ್ರಿಯರಾಗಿದ್ದರೂ ಅವರು ಮುನ್ನಲೆಗೆ ಬರುವುದೇ ಇಲ್ಲ. ಗೆದ್ದವರು ಪ್ರತಿ ಬಾರಿಯೂ ಗೆಲ್ಲುತ್ತಲೇ ಇರುತ್ತಾರೆ.
ಮತದಾರರ ಓಲೈಕೆಗೆ ಹಲವು ಕಸರತ್ತು
ಪ್ರಮುಖ ಮುಖಂಡರು ತಮ್ಮ ಬಳಿಕ ಮಕ್ಕಳನ್ನು ರಾಜಕೀಯಕ್ಕೆ ಎಳೆದು ತರುತ್ತಾರೆ. ಆದರೆ ನಾಯಕನಾಗಿ ಹೊರಹೊಮ್ಮುವ ನಾಯಕತ್ವ ಗುಣಗಳಿದ್ದರೂ ಆತ ಕಾರ್ಯಕರ್ತನಾಗಿ ಉಳಿದು ಬಿಡುತ್ತಾನೆ. ಹೀಗಾದರೆ ರಾಜಕೀಯದಲ್ಲಿ ಬದಲಾವಣೆ ತರುವುದು ಹೇಗೆ? ಕುಟುಂಬ ರಾಜಕಾರಣಗಳು ವಿಜೃಂಭಿಸಿದರೆ ದೇಶದ ಉದ್ಧಾರ ಹೇಗೆ? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಸಿಗದಂತಾಗಿದೆ.

ಇವತ್ತಿನ ರಾಜಕೀಯದಲ್ಲಿ ಹಣವೇ ಮುಖ್ಯವಾಗಿರುವುದರಿಂದ ವ್ಯಕ್ತಿಯ ವರ್ಚಸ್ಸು ಎಷ್ಟು ಕೆಲಸ ಮಾಡುತ್ತದೆಯೋ ಅದಕ್ಕಿಂತ ಹೆಚ್ಚಾಗಿ ಹಣವೂ ಹರಿದಾಡುತ್ತದೆ. ಜೊತೆಗೆ ಉಡುಗೊರೆಗಳ ಮೂಲಕ ಮತ ಪಡೆಯುವ ಕೆಟ್ಟಚಾಳಿಗಳು ಹೆಚ್ಚಾಗುತ್ತಿವೆ. ಹುಟ್ಟುಹಬ್ಬ, ಜಾತ್ರೆಗಳ ಹೆಸರಿನಲ್ಲಿ ಜನ ಸೇರಿಸಿ ಅವರಿಗೆ ಉಡುಗೊರೆಗಳನ್ನು ಕೊಟ್ಟು ಕಳಿಸುವುದು ಹೆಚ್ಚಾಗಿದೆ. ಆ ಮೂಲಕ ಮತದಾರರ ಓಲೈಕೆ ನಡೆಯುತ್ತದೆ.
ದಿನೇ ದಿನೇ ಕುಸಿದ ಮತದ ಮೌಲ್ಯ
ಇವತ್ತಿನ ಪರಿಸ್ಥಿತಿಯಲ್ಲಿ ಚುನಾವಣೆ ಸಮಯದಲ್ಲಿ ಉಡುಗೊರೆ ಕೊಡಲಿಲ್ಲ ಎಂದಾದರೆ ಆತ ನಾಯಕನೇ ಅಲ್ಲ. ಎಂಬ ಮಟ್ಟಿಗೆ ಬಂದು ನಿಂತಿದೆ. ಇದರಿಂದ ಭ್ರಷ್ಟಾಚಾರ ಮಾಡಿ ಹಣ ತಂದು ಹಂಚುವ ನಾಯಕರು ಗೆಲ್ಲುತ್ತಿದ್ದಾರೆ. ಖರ್ಚು ಮಾಡಿದ ಹಣವನ್ನು ಭರ್ತಿ ಮಾಡಲು ಮತ್ತೆ ಭ್ರಷ್ಟಾಚಾರ ಮಾಡುತ್ತಾರೆ. ನಾವು ಚುನಾವಣೆ ವೇಳೆ ನೀಡಿದ ಗಿಫ್ಟ್, ಹಣ, ಹೆಂಡಕ್ಕೆ ಮರುಳಾಗಿ ಮತ ಹಾಕಿ ಮತದ ಮೌಲ್ಯವನ್ನು ಹಾಳು ಮಾಡುತ್ತಿದ್ದೇವೆ. ಹಣ ಹೆಂಡ ನೀಡಿ ಗೆದ್ದ ನಾಯಕನಿಂದ ನಾವು ಸಾಮಾಜಿಕ ಅಭಿವೃದ್ಧಿಯನ್ನು ನಿರೀಕ್ಷಿಸುವುದಾದರೂ ಹೇಗೆ?

ಇನ್ನು ಪ್ರತಿ ಚುನಾವಣೆ ಬಂದಾಗಲೂ ಏನಾದರೂ ಬದಲಾಗುತ್ತಾ ಎಂದು ನಿರೀಕ್ಷಿಸುತ್ತಲೇ ಇರುತ್ತೇವೆ. ಆದರೆ ಯಾವುದೂ ಆಗುವುದೇ ಇಲ್ಲ. ನಮ್ಮ ರಾಜ್ಯದಲ್ಲಿ ಬಹಳಷ್ಟು ಹಿರಿಯ ರಾಜಕಾರಣಿಗಳಿದ್ದಾರೆ. ಅವರೆಲ್ಲರೂ ಸ್ಪರ್ಧಿಸದೆ ಕಿರಿಯರಿಗೆ ಅವಕಾಶ ಮಾಡಿಕೊಡಬಹುದು ಆದರೆ 80 ವರ್ಷವಾದರೂ ನಾವೇ ಸ್ಪರ್ಧಿಸಬೇಕೆನ್ನುವ ಬಯಕೆ ತೋರುತ್ತಾರೆ. ಪಕ್ಷ ಅವರಿಗೆ ಟಿಕೆಟ್ ನೀಡದೆ ಹೋದರೆ ಬಂಡಾಯ ಏಳುತ್ತಾರೆ.
ಮಹಿಳೆಯರಿಗೆಷ್ಟು ಸ್ಥಾನ ನೀಡುತ್ತಾರೆ?
ಇದೇ ಕಾರಣಕ್ಕೆ ಬಹಳಷ್ಟು ಪಕ್ಷಗಳಲ್ಲಿ ಯುವ ನಾಯಕ, ನಾಯಕಿಯರಿಗೆ ಸ್ಥಾನಗಳು ಸಿಗದಂತಾಗಿದೆ. ಮಹಿಳೆಯರ ಬಗ್ಗೆ ಮಾತನಾಡುವ ಪಕ್ಷಗಳು ಈ ಬಾರಿ ಎಷ್ಟು ಮಹಿಳೆಯರಿಗೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನೀಡುತ್ತದೆ ಎಂಬುದನ್ನು ನೋಡಬೇಕಿದೆ. ರಾಜಕೀಯ ಸ್ಥಿತಿಗತಿಗಳು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಭಿನ್ನವಾಗಿದೆ. ಬೇರೆಲ್ಲೋ ಮಾಡಿದಂತೆ ಇಲ್ಲಿ ಮಾಡಬಹುದು ಎಂಬುದು ಸುಲಭದ ಮಾತಲ್ಲ.
ಈಗಾಗಲೇ ಬಹುಮತ ಬಾರದೆ ರಾಜ್ಯದಲ್ಲಿ ನಡೆದ ರಾಜಕೀಯ ವಿದ್ಯಮಾನಗಳನ್ನು ಕಣ್ಣಾರೆ ನೋಡಿದ್ದೇವೆ. ಅದರ ಪರಿಣಾಮಗಳನ್ನು ಅನುಭವಿಸಿದ್ದೇವೆ. ಹೀಗಾಗಿ ಬಹುಮತದ ಸರ್ಕಾರದ ಅಗತ್ಯತೆಯಂತು ಇದ್ದೇ ಇದೆ. ರಾಜಕೀಯದ ಬಗ್ಗೆ, ರಾಜಕಾರಣಿಗಳ ಬಗ್ಗೆ ಮಾತನಾಡುವ ಬಹಳಷ್ಟು ಮಂದಿ ಚುನಾವಣೆಯ ಮತದಾನಕ್ಕೆ ಬರುವುದೇ ಇಲ್ಲ.
ವಿದ್ಯಾವಂತರೇ ಮತದಾನ ಮಾಡುತ್ತಿಲ್ಲ
ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಈಗಲೂ ಸರ್ಕಾರಗಳು ಮತದಾನದ ಅರಿವು ಕಾರ್ಯಕ್ರಮಗಳನ್ನು ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ. ಇದು ಸ್ವಾತಂತ್ರ್ಯ ಭಾರತದ ದುರಂತವಲ್ಲದೆ ಮತ್ತೇನು? ಹಳ್ಳಿ ಪ್ರದೇಶದಲ್ಲಿ ನಡೆಯುವಷ್ಟು ಮತದಾನಗಳು ಪಟ್ಟಣ ಪ್ರದೇಶದಲ್ಲಿ ನಡೆಯುವುದಿಲ್ಲ. ವಿದ್ಯಾವಂತರೇ ಮತಕೇಂದ್ರದತ್ತ ಸುಳಿಯುತ್ತಿಲ್ಲ. ಹೀಗಾದರೆ ಬದಲಾವಣೆ ತರುವುದು ಹೇಗೆ?
ರಾಜಕೀಯ ಪಕ್ಷಗಳಿಗೂ ಗೆಲುವು ಮುಖ್ಯವಾಗಿರುವುದರಿಂದ ಹೊಸ ಪ್ರಯೋಗಗಳನ್ನು ಮಾಡಿದರೆ ಗೆಲುವಿಗೆ ತೊಂದರೆಯಾಗುತ್ತದೆ ಎಂಬ ಭಯವೂ ಇದೆ. ಹೀಗಾಗಿ ಗೆಲ್ಲುವ ನಾಯಕರನ್ನೇ ಅವಲಂಭಿಸಿದ್ದು ಬದಲಾವಣೆ ಮಾಡುವ ಧೈರ್ಯ ಮಾಡುತ್ತಿಲ್ಲ. ಅದರ ಪರಿಣಾಮ ರಾಜಕೀಯ ವ್ಯವಸ್ಥೆಗಳು ಹೇಗಿವೆಯೋ ಹಾಗೆ ಮುಂದುವರೆಯುತ್ತಿವೆ. ಇಷ್ಟಕ್ಕೂ ಚುನಾವಣೆ ಬಂದಾಗ ಒಂದಷ್ಟು ಬದಲಾವಣೆಗಳನ್ನು ಮಾಡಲು ಅವಕಾಶವಿರುವುದು ಪ್ರಜ್ಞಾವಂತ ಮತದಾರರಿಗೆ ಮಾತ್ರ. ಅವರು ಮನಸ್ಸು ಮಾಡಿ ಮತದಾನ ಮಾಡಿದರೆ ಬದಲಾವಣೆ ಸಾಧ್ಯವಾಗಬಹುದು.
-
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ -
Bengaluru: ಶಾಲೆಗಳಿಗೂ BWSSB ನೀರಿನ ಬಿಲ್ ಶಾಕ್; ಡಿಸಿಎಂ ಡಿ.ಕೆ. ಶಿವಕುಮಾರ್ ಮೊರೆ ಹೋದ ಖಾಸಗಿ ಶಿಕ್ಷಣ ಸಂಸ್ಥೆಗಳು -
ಮಾರ್ಚ್ 29ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು












Click it and Unblock the Notifications