ಶಾಸಕರ ರಾಜೀನಾಮೆ : ಸಿದ್ದರಾಮಯ್ಯ ಕಡೆ ನೋಡುವುದೇಕೆ?
ಬೆಂಗಳೂರು, ಜುಲೈ 07 : ಕರ್ನಾಟಕ 9 ಕಾಂಗ್ರೆಸ್ ಮತ್ತು 3 ಜೆಡಿಎಸ್ ಶಾಸಕರು ರಾಜೀನಾಮೆ ನೀಡಿದ್ದಾರೆ. ಶಾಸಕರ ರಾಜೀನಾಮೆ ಹಿಂದೆ ಯಾರಿದ್ದಾರೆ? ಎಂಬುದು ಎಲ್ಲರನ್ನು ಕಾಡುವ ಪ್ರಶ್ನೆ. ಬಿಜೆಪಿ ಕಡೆ ನೋಡುವುದಕ್ಕಿಂತ ಹೆಚ್ಚು ಜನ ಸಿದ್ದರಾಮಯ್ಯ ಕಡೆ ನೋಡುತ್ತಿದ್ದಾರೆ.
ಬಿಜೆಪಿಯವರ ಬೆಂಬಲದಿಂದಾಗಿ ಮಾತ್ರ ಶಾಸಕರು ರಾಜೀನಾಮೆ ನೀಡಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಬಲಿಗರು ರಾಜೀನಾಮೆ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ಸಿದ್ದರಾಮಯ್ಯ ಅವರೇ ಮೈತ್ರಿ ಸರ್ಕಾರ ಪತನಕ್ಕೆ ಮುಹೂರ್ತ ಇಟ್ಟರೇ? ಎಂಬ ಪ್ರಶ್ನೆ ಕಾಡುತ್ತಿದೆ.
ಕೆ.ಆರ್.ಪುರ ಶಾಸಕ ಬೈರತಿ ಬಸವರಾಜ, ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್, ರಾಜರಾಜೇಶ್ವರಿ ನಗರ ಕ್ಷೇತ್ರದ ಮುನಿರತ್ನ ಅವರು ರಾಜೀನಾಮೆ ನೀಡಿರುವುದು ಕಾಂಗ್ರೆಸ್ ನಾಯಕರಿಗೂ ಅಚ್ಚರಿ ಉಂಟುಮಾಡಿದೆ. ಈ ಮೂವರು ಸಿದ್ದರಾಮಯ್ಯ ಅವರ ಪರಮಾಪ್ತರು ಎಂಬುದು ವಿಶೇಷ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಸದಾ ಅಸಮಾಧಾನ ವ್ಯಕ್ತಪಡಿಸುತ್ತಿದ್ದ ಈ ಮೂವರು ಸಿದ್ದರಾಮಯ್ಯ ನಮ್ಮ ನಾಯಕರು ಎಂದು ಹೇಳುತ್ತಿದ್ದರು. ಈ ಮೂವರು ಈಗ ರಾಜೀನಾಮೆ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಸಿದ್ದರಾಮಯ್ಯ ಅವರ ವಾದವೇನಿತ್ತು?
ಕರ್ನಾಟಕದ ಮೈತ್ರಿ ಸರ್ಕಾರ ಮುಂದುವರೆದರೆ ಕಾಂಗ್ರೆಸ್‌ಗೆ ಲಾಭವಿಲ್ಲ ಎಂಬುದು ಸಿದ್ದರಾಮಯ್ಯ ಅವರ ವಾದವಾಗಿತ್ತು. ಲೋಕಸಭಾ ಚುನಾವಣೆಗೆ ಮುನ್ನವೇ ಈ ಬಗ್ಗೆ ಸಿದ್ದರಾಮಯ್ಯ ಅವರು ಆಪ್ತರ ಜೊತೆ ಮಾತುಕತೆ ನಡೆಸಿದ್ದರು. ಸಿದ್ದರಾಮಯ್ಯ ಅವರ ಬೆಂಬಲಿಗರು ರಾಜೀನಾಮೆ ನೀಡಲು ಇದು ಕಾರಣವೇ? ಎಂಬುದು ಈಗ ಚರ್ಚೆಯಾಗುತ್ತಿರುವ ಅಂಶ.

ಮೂವರು ಶಾಸಕರ ನಿಷ್ಠೆ ಬದಲು?
ಕೆ.ಆರ್.ಪುರ ಶಾಸಕ ಬೈರತಿ ಬಸವರಾಜ, ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್, ರಾಜರಾಜೇಶ್ವರಿ ನಗರ ಕ್ಷೇತ್ರದ ಮುನಿರತ್ನ ಅವರು ರಾಮಲಿಂಗಾ ರೆಡ್ಡಿ ಅವರು ನಮ್ಮ ನಾಯಕರು ಎಂದು ಹೇಳಿದ್ದಾರೆ. ಸಿದ್ದರಾಮಯ್ಯ ಬೆಂಬಲಿಗರಾಗಿದ್ದ ಮೂವರು ನಿಷ್ಠೆ ಬದಲಾವಣೆ ಮಾಡಿದ್ದು ಏಕೆ? ಎಂಬುದು ಪ್ರಶ್ನೆಯಾಗಿದೆ.

ಸರ್ಕಾರ ಏನೂ ಆಗಲ್ಲ ನಡೀರಿ
'ರಾಜೀನಾಮೆ ಅಂಗೀಕಾರವಾಗಿಲ್ಲ. ಸರ್ಕಾರ ಅಸ್ಥಿರ ಆಗೋದು ಹೇಗೆ?. ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಬಂದಿದ್ದಾರೆ. ಸರ್ಕಾರ ಏನೂ ಆಗಲ್ಲ ನಡೀರಿ' ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಪರಿಸ್ಥಿತಿ ಕೈ ಮೀರಿ ಹೋಗಿದೆ
'ಅತೃಪ್ತ ಶಾಸಕರ ಜೊತೆ ಮಾತನಾಡಿ ನನಗೂ ಸಾಕಾಗಿ ಹೋಗಿದೆ. ಏನಾದರೂ ಮಾಡಿಕೊಳ್ಳಲಿ. ನನಗೂ ಸಾಕಾಗಿ ಹೋಗಿದೆ, ಈಗ ಪರಿಸ್ಥಿತಿಯೂ ಕೈ ಮೀರಿ ಹೋಗಿದೆ' ಎಂದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದು, ಹೈಕಮಾಂಡ್‌ಗೂ ಇದೇ ಸಂದೇಶವನ್ನು ರವಾನಿಸಿದ್ದಾರೆ.












Click it and Unblock the Notifications