ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರುವ ಎದೆಗಾರಿಕೆ ಯಾರಿಗಾದರೂ ಇದೆಯಾ?: ಬಿ.ವೈ ವಿಜಯೇಂದ್ರ ಹೇಳಿದ್ಯಾರಿಗೆ?
ರಾಜ್ಯ ಬಿಜೆಪಿಯಲ್ಲಿ ಬಿಎಸ್ ಯಡಿಯೂರಪ್ಪ ಅವರ ವಿರದ್ದವಾಗಿ ಮಾತನಾಡುತ್ತಿರುವವರ ಕುರಿತು ಬಿ.ವೈ ವಿಜಯೇಂದ್ರ ಗುಡುಗಿದ್ದಾರೆ.
ಹಾವೇರಿ,ಮಾರ್ಚ್16: ರಾಜ್ಯ ಬಿಜೆಪಿಯಲ್ಲಿ ಬಿ.ವೈ ವಿಜಯೇಂದ್ರ ಅವರಿಗೆ ಟಿಕೆಟ್ ನೀಡುವ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿದು, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನವರ ಕಿಚನ್ ನಲ್ಲಿ ಟಿಕೆಟ್ ನೀಡುವ ನಿರ್ಧಾರ ಆಗಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದು, ಇದಕ್ಕೆ ಬಿ ವೈ ವಿಜಯೇಂದ್ರ ರಾಜಕಾರಣಲ್ಲಿ ಶತ್ರುಗಳು ಹೆಚ್ಚದಾಗ ಬೆಳೆಯಲು ಸಾಧ್ಯ ಎಂದು ತಿರುಗೇಟು ನೀಡಿದ್ದರು.
ಇದೀಗ ರಾಜ್ಯದಲ್ಲಿ ಬಿಜೆಪಿಯನ್ನ ಅಧಿಕಾರಕ್ಕೆ ತರುವ ಎದೆಗಾರಿಕೆ ಯಾರಿಗಾದರೂ ಇದೆಯಾ? ಎಂದು ಪರೋಕ್ಷವಾಗಿ ಸಿ.ಟಿ ರವಿ ಅವರಿಗೆ ಬಿ.ವೈ ವಿಜಯೇಂದ್ರ ಪ್ರಶ್ನೆ ಮಾಡಿದ್ದಾರೆ. ಯಡಿಯೂರಪ್ಪ ಅವರ ನಾಯಕತ್ವದ ಬಗ್ಗೆ ಪ್ರಶ್ನೆ ಮಾಡುತಿದ್ದಾರೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಗುಡುಗಿದ್ದಾರೆ.

ಈಗ ಯಾರು ಬಿಜೆಪಿ ನೋಡುತ್ತಿದ್ದಾರೋ ಅವರು ಭವ್ಯ ಭವನವನ್ನಷ್ಟೇ ನೋಡುತ್ತಿದ್ದಾರೆ. ಆ ಭವನದ ಅಡಿಪಾಯ ಯಾರಿಗೂ ಕಾಣುವುದಿಲ್ಲ. ಬಿಜೆಪಿ ರಾಜ್ಯದಲ್ಲಿ ಇಷ್ಟುಸುಭದ್ರವಾಗಿ ನಿಂತಿದೆ ಎಂದರೆ ಅದಕ್ಕೆ ಅಡಿಪಾಯ ಹಾಕಿದವರು ಯಡಿಯೂರಪ್ಪ. ಯಡಿಯೂರಪ್ಪನವರು ರಾಜ್ಯದಲ್ಲಿ 30-40 ವರ್ಷಗಳ ಕಾಲ ನಿರಂತರ ಹೋರಾಟ ಮಾಡಿಕೊಂಡು ನಾಡಿನಲ್ಲಿರುವ ರೈತರು, ಬಡವರು, ದೀನದಲಿತರ ಬಗ್ಗೆ ಕಾಳಜಿ ಇಟ್ಟುಕೊಂಡು ಸೈಕಲ್ ಜಾಥಾ, ಪಾದಯಾತ್ರೆ ಮಾಡಿದರು.
ರಾಜ್ಯದ ರಾಜಕೀಯ ಇತಿಹಾಸದಲ್ಲಿ ಯಡಿಯೂರಪ್ಪ ಮಾಡಿದಷ್ಟುಹೋರಾಟವನ್ನು ಮತ್ತೊಬ್ಬ ಯಾವ ರಾಜಕಾರಣಿಯೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ ಅವರು, ಅವರ ಬಗ್ಗೆ ಟೀಕೆ ಮಾಡುವವರು ಹುಷಾರಾಗಿರಿ. ನೇರವಾಗಿ ಹೇಳುತ್ತಿದ್ದೇನೆ. ಹಿಂದೆ ಮುಂದೆ ನೋಡುವ ಪ್ರಶ್ನೆಯೇ ಇಲ್ಲ ಎಂದು ಎಚ್ಚರಿಕೆ ನೀಡಿದರು.

ಪಕ್ಷದ ಅನೇಕ ನಾಯಕರೊಂದಿಗೆ ಹೋರಾಟ ಮಾಡಿ, ಸಂಘಟನೆ ಮಾಡಿದ್ದರಿಂದ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಆದರೆ, ಯಡಿಯೂರಪ್ಪ ಬಗ್ಗೆ ಟೀಕೆ ಮಾಡುವವರನ್ನು ನೋಡುತ್ತಿದ್ದೇವೆ. ಆದರೂ ಯಡಿಯೂರಪ್ಪ ಸುಮ್ಮನಿದ್ದಾರೆ ಎಂದರೆ ವೀಕ್‌ನೆಸ್ ಅಲ್ಲ. ರಾಜ್ಯದಲ್ಲಿ ಯಡಿಯೂರಪ್ಪ ಮೌನವಾಗಿದ್ದಾರೆ ಎಂದರೆ ಉದ್ದೇಶವಿದೆ. ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡುವ ದಿನ ಕೂಡ ನಾನು ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ತರುತ್ತೇನೆ ಎಂದು ಅವರು ಹೇಳಿದ್ದರು.
ಯಡಿಯೂರಪ್ಪ ಅವರಿಗೆ ನಾಳೆ ಸಿಎಂ ಆಗಬೇಕೆಂಬ ಕನಸಿಲ್ಲ. ಮಕ್ಕಳನ್ನು ಎಂಎಲ್‌ಎ ಮಾಡಿ ಮಂತ್ರಿಯಾಗಿಸುವ ಗುರಿಯೂ ಇಲ್ಲ. ಮತ್ತೊಮ್ಮೆ ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ತಂದು ಪ್ರಧಾನಿ ಮೋದಿ ಅವರ ಕೈ ಬಲಪಡಿಸುವುದಷ್ಟೇ ಅವರ ಉದ್ದೇಶ ಎಂದು ಬಿ.ವೈ ವಿಜಯೇಂದ್ರ ತಿಳಿಸಿದ್ದಾರೆ.












Click it and Unblock the Notifications