ಸದಾ ಕಟ್ಟೆಚ್ಚರದಿಂದ ಇರಬೇಕಾದ ದಕ್ಷಿಣ ಕನ್ನಡ, ಉಡುಪಿ ಜಿಲ್ಲಾ ಉಸ್ತುವಾರಿ ಯಾರಿಗೆ?
ಮುಖ್ಯಮಂತ್ರಿ ಯಾರಾಗಬೇಕು, ಸಚಿವ ಸ್ಥಾನಕ್ಕೆ ಯಾರನ್ನು ಆರಿಸಬೇಕು, ಸಚಿವರಾದವರಿಗೆ ಯಾವ ಖಾತೆ ನೀಡಬೇಕು.. ಈ ರೀತಿಯ ಆರಂಭಿಕ ಗೊಂದಲಗಳನ್ನು ಸರಿಪಡಿಸಿಕೊಂಡು ಸಿದ್ದರಾಮಯ್ಯ ಸರ್ಕಾರ ಟೇಕ್ ಆಫ್ ಆಗಿದೆ. ಈಗ, ರಾಜ್ಯದ ಮನೆಮನೆಯಲ್ಲೂ ಸುದ್ದಿಯಲ್ಲಿರುವ ಗ್ಯಾರಂಟಿ ಬಗ್ಗೆ ಇನ್ನಷ್ಟು ಸವಿವರವಾಗಿ ಜನರಿಗೆ ತಲುಪಿಸುವುದು ಸರ್ಕಾರದ ಮುಂದಿನ ಗುರಿ.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎರಡು ವಿಚಾರದಲ್ಲಿ ಇನ್ನೂ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಬೇಕಷ್ಟೇ.. ಒಂದು ನಿಗಮ ಮಂಡಳಿ ಅಧ್ಯಕ್ಷ, ಪದಾಧಿಕಾರಿಗಳ ಆಯ್ಕೆ, ಇನ್ನೊಂದು ಜಿಲ್ಲಾ ಉಸ್ತುವಾರಿಯನ್ನು ನೇಮಿಸುವುದು. ಸಾಮಾನ್ಯವಾಗಿ ಸರ್ಕಾರ ಬದಲಾದಾಗ ಇವೆರಡೂ ಬದಲಾಗುವುದು ರಾಜ್ಯ ರಾಜಕೀಯದ ವಾಡಿಕೆ. ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ನಿಗಮ ಮಂಡಳಿಯಲ್ಲಿ ಸ್ಥಾನ ಕಲ್ಪಿಸುವುದಾಗಿ ಚುನಾವಣೆಯ ವೇಳೆ ಪಕ್ಷದ ಮುಖಂಡರು ಕಮಿಟ್ ಆಗಿರುತ್ತಾರೆ.

ಇದರ ಜೊತೆಗೆ ಜಿಲ್ಲಾ ಉಸ್ತುವಾರಿಯನ್ನಾಗಿ ಯಾವ ಸಚಿವರನ್ನು ನೇಮಿಸಬೇಕು ಎನ್ನುವ ವಿಚಾರದಲ್ಲಿ ಮುಖ್ಯಮಂತ್ರಿಗಳಿಗೆ ಇರುವ ದೊಡ್ಡ ತಲೆನೋವು ಅಂದರೆ ಕರಾವಳಿಯ ಎರಡು ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ. ಒಂದು ಈ ಎರಡೂ ಜಿಲ್ಲೆಗಳು ಕೋಮು ಸೂಕ್ಷ್ಮತೆಯಿಂದ ಕೂಡಿರುವುದು ಇನ್ನೊಂದು ಈ ಭಾಗದಿಂದ ಯಾರೂ ಸಂಪುಟದಲ್ಲಿ ಸಚಿವರಲ್ಲದೇ ಇರುವುದು.
ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಉಡುಪಿ ಜಿಲ್ಲೆಯ ಎಲ್ಲಾ ಐದು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಜಯ ಸಾಧಿಸಿತ್ತು. ಹಾಗಾಗಿ, ಇಲ್ಲಿಗೆ ಬೇರೊಬ್ಬರನ್ನು ನೇಮಿಸಬೇಕಿದೆ. ಇನ್ನು, ದಕ್ಷಿಣ ಕನ್ನಡ ಜಿಲ್ಲೆಯ ಎಂಟು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಎರಡು (ಮಂಗಳೂರು, ಪುತ್ತೂರು) ಕ್ಷೇತ್ರದಲ್ಲಿ ಜಯ ಸಾಧಿಸಿತ್ತು. ಅದರಲ್ಲಿ, ಯು.ಟಿ.ಖಾದರ್ ಸ್ಪೀಕರ್ ಆಗಿ ನೇಮಕಗೊಂಡಿದ್ದಾರೆ. ಇನ್ನೊಬ್ಬರಾದ ಅಶೋಕ್ ಕುಮಾರ್ ರೈ ಮೊದಲ ಬಾರಿ ಶಾಸಕರಾದವರು. ಹಾಗಾಗಿ, ಎರಡೂ ಜಿಲ್ಲೆಗೆ ಜಿಲ್ಲೆಯ ಮೂಲದವರಲ್ಲದವರನ್ನು ಸಿದ್ದರಾಮಯ್ಯ ನೇಮಿಸಬೇಕಿದೆ.
ಕೋಮು ಸೂಕ್ಷ್ಮ ಪ್ರದೇಶವಾದ ಅವಳಿ ಜಿಲ್ಲೆ
ಕೋಮು ಸೂಕ್ಷ್ಮ ಪ್ರದೇಶವಾದ ಅವಳಿ ಜಿಲ್ಲೆಗಳಲ್ಲಿ ಅಶಾಂತಿ ಕದಡಬಾರದೆಂದು ಉಡುಪಿ, ಶಿವಮೊಗ್ಗ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಮತ್ತು ಉತ್ತರ ಕನ್ನಡ ಜಿಲ್ಲೆಯ ಪೊಲೀಸ್ ಅಧೀಕ್ಷರು ಸಾಲುಸಾಲು ಸಭೆಯನ್ನು ನಡೆಸಿದ್ದಾರೆ. "ಕರಾವಳಿ ಭಾಗದಲ್ಲಿ ನಡೆಯುವ ನೈತಿಕ ಪೊಲೀಸ್ಗಿರಿ ತಡೆಯಲು ಆ್ಯಂಟಿ ಕಮ್ಯುನಲ್ ವಿಂಗ್ (Anti Communal Wing) ಸ್ಥಾಪನೆ ಮಾಡುತ್ತೇವೆ. ಕರಾವಳಿ ಭಾಗದಲ್ಲಿ ಭಯದ ವಾತಾವರಣವಿದೆ, ನೈತಿಕ ಪೊಲೀಸ್ ಗಿರಿ ಸಹಿಸುವುದಿಲ್ಲ" ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.

ಸಾಕಷ್ಟು ಅಹಿತಕರ ಘಟನೆಗಳು ನಡೆದಿದ್ದವು
ಕಳೆದ ಸಿದ್ದರಾಮಯ್ಯನವರ ಸರ್ಕಾರದ ಅವಧಿಯಲ್ಲಿ ಸಾಕಷ್ಟು ಅಹಿತಕರ ಘಟನೆಗಳು ನಡೆದಿದ್ದವು. ಹಾಗಾಗಿ, ಅಲರ್ಟ್ ಆಗಿರುವ ರಾಜ್ಯ ಗೃಹ ಸಚಿವಾಲಯ, ಪೊಲೀಸ್ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದೆ. ಉಡುಪಿ ಜಿಲ್ಲೆಯ ಉಸ್ತುವಾರಿ ಗೃಹ ಸಚಿವರೂ ಆಗಿರುವ ಡಾ. ಪರಮೇಶ್ವರ್ ಅವರಿಗೆ ಸಿಗುವ ಸಾಧ್ಯತೆಯಿದೆ. ಈ ಹಿಂದೆ ಯಡಿಯೂರಪ್ಪನವರು ಸಿಎಂ ಆಗಿದ್ದ ವೇಳೆ ಗೃಹ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿಯವರೂ ಉಡುಪಿ ಜಿಲ್ಲಾ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದರು.
ಕಂದಾಯ ಸಚಿವರಾಗಿರುವ ಕೃಷ್ಣ ಭೈರೇಗೌಡ
ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿಯು, ಕಂದಾಯ ಸಚಿವರಾಗಿರುವ ಕೃಷ್ಣ ಭೈರೇಗೌಡ್ರಿಗೆ ಸಿಗುವ ಸಾಧ್ಯತೆ ದಟ್ಟವಾಗಿದೆ. ಈ ಎರಡು ಜಿಲ್ಲೆಗಳ ಉಸ್ತುವಾರಿ ನೋಡಿಕೊಳ್ಳಲು ಸಾಕಷ್ಟು ಮನವೊಲಿಕೆ ಮಾಡುವ ಅವಶ್ಯಕತೆ ಇರುವುದರಿಂದ, ಅಧಿಕೃತವಾಗಿ ಜಿಲ್ಲಾ ಉಸ್ತುವಾರಿಯನ್ನು ನೇಮಿಸಲು ವಿಳಂಬವಾಗುತ್ತಿದೆ ಎಂದು ಹೇಳಲಾಗುತ್ತಿದೆ. ಆದರೂ, ಇಬ್ಬರು ಈ ಜವಾಬ್ದಾರಿಗೆ ಒಪ್ಪಿಗೆ ಸೂಚಿಸಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಬೆಂಗಳೂರು ನಗರ ವ್ಯಾಪ್ತಿಯ ಆರು ಜನ ಶಾಸಕರು
ಬೆಂಗಳೂರು ನಗರ ವ್ಯಾಪ್ತಿಯ ಆರು ಜನ ಶಾಸಕರು ಸಚಿವರಾಗಿರುವ ಹಿನ್ನಲೆಯಲ್ಲಿ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಹೊರತು ಪಡಿಸಿ, ಉಳಿದ ನಾಲ್ಕು ಸಚಿವರುಗಳಿಗೆ ಬೇರೆ ಜಿಲ್ಲೆಯ ಉಸ್ತುವಾರಿಯನ್ನು ಹಂಚಲೇ ಬೇಕಾಗಿದೆ. ಹಾಗಾಗಿ, ಬ್ಯಾಟರಾಯನಪುರ ಕ್ಷೇತ್ರದ ಶಾಸಕರಾಗಿರುವ ಕೃಷ್ಣ ಭೈರೇಗೌಡರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಜವಾಬ್ದಾರಿ, ತುಮಕೂರು ಜಿಲ್ಲೆ ಕೊರಟಗೆರೆಯ ಶಾಸಕರಾಗಿರುವ ಪರಮೇಶ್ವರ್ ಅವರಿಗೆ ಉಡುಪಿ ಜಿಲ್ಲಾ ಉಸ್ತುವಾರಿ ಸಿಗಬಹುದು.












Click it and Unblock the Notifications