ದೇವಾಲಯಕ್ಕೂ ತೆರಳುವ ಮುನ್ನ ನೀವು ತಿಂದ ಮಾಂಸ ಯಾವುದು? ಬಿಜೆಪಿ ಶಾಸಕ ಸಿಟಿ ರವಿಗೆ ಜೆಡಿಎಸ್ ಪ್ರಶ್ನೆ
ಬೆಂಗಳೂರು, ಫೆಬ್ರವರಿ 22: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಶಾಸಕ ಸಿಟಿ ರವಿಯವರು ಬಾಡೂಟ ಸೇವಿಸಿ ಭಟ್ಕಳದ ನಾಗಬನ ಹಾಗೂ ಕರಿಬಂಟ ಹನುಮನ ದೇವಸ್ಥಾನಕ್ಕೆ ಹೋಗಿದ್ದಾರೆ ಎಂಬ ಸುದ್ದಿ ವರದಿಯಾಗಿದೆ. ಬಾಡೂಟ ಸೇವಿಸುವಾಗ ತೆಗೆದ ಫೋಟೋವೂ ಪ್ರಕಟವಾಗಿದೆ. ಸಿ.ಟಿ.ರವಿಯವರೆ, ಸತ್ಯ ಬಹಿರಂಗಪಡಿಸುವಿರೆ ಎಂದು ಜೆಡಿಎಸ್ ಟ್ವೀಟ್ ಮಾಡಿದೆ.
ಈ ವಿಚಾರವಾಗಿ ಸರಣಿ ಟ್ವೀಟ್ ಮಾಡಿರುವ ಸಿಟಿ ರವಿ, 'ತಲೆಗೆ ಸುರಿದ ನೀರು ಕಾಲಿಗೆ ಬರಲೇಬೇಕಲ್ಲ, ರವಿಯವರೆ! ಬರೀ ಇಂತಹ ಭಾವನಾತ್ಮಕ ವಿಷಯಗಳನ್ನು ಇಟ್ಟುಕೊಂಡು ಮುಖ್ಯ ಸಂಗತಿಗಳಿಂದ ಜನರನ್ನು ವಿಮುಖರನ್ನಾಗಿಸುತ್ತಿದ್ದ ಬಿಜೆಪಿಯ 'ಹುರಿಯಾಳು' ಈ ಪರಿಸ್ಥಿತಿಯಲ್ಲಿ ಸಿಕ್ಕಿ ಹಾಕಿಕೊಂಡಿರುವುದು ಏನು ಹೇಳುತ್ತಿದೆ? 'ಆಚಾರ ಹೇಳೋಕೆ, ಬದನೆಕಾಯಿ ತಿನ್ನೋಕೆ', ಎಂಬಂತಾಗಲಿಲ್ಲವೆ?' ಎಂದು ಜೆಡಿಎಸ್ ಕೇಳಿದೆ.

'ಅಂದಹಾಗೆ, ನೀವು ತಿಂದ ಮಾಂಸ ಯಾವುದು ಎಂದು ಹೇಳುತ್ತೀರಾ, ರವಿಯವರೆ? ಆಹಾರ ಸೇವನೆ ವೈಯಕ್ತಿಕ ವಿಷಯ. ನಂಬಿಕೆಗಳು ಅಷ್ಟೆ. ಆದರೆ, ಎಲ್ಲದರ ಕಲಸುಮೇಲೋಗರ ಮಾಡಿ, ಜನರನ್ನು ದಿಕ್ಕು ತಪ್ಪಿಸುವ ಹೇಸಿಗೆ ರಾಜಕಾರಣ ಮಾಡುವವರಿಗೆ ಅನಿವಾರ್ಯವಾಗಿ ಈ ಪ್ರಶ್ನೆ ಕೇಳಬೇಕಿದೆ' ಎಂದು ಜೆಡಿಎಸ್ ಟ್ವೀಟಿಸಿದೆ.
'ಆಹಾರ ಸಂಸ್ಕ್ರತಿ, ದೈವ ನಂಬಿಕೆಗಳನ್ನು ರಾಜಕಾರಣಕ್ಕೆ ಬಳಸುವ, ಆ ಮೂಲಕ ಜನರ ಭಾವನೆಗಳನ್ನು ಕೆರಳಿಸಿ ಅಧಿಕಾರ ಪಡೆಯುವ ಕೊಳಕು ರಾಜಕಾರಣ ಬಿಜೆಪಿಯವರ ಕಾರ್ಯವೈಖರಿ. ತಾವೇ ತೋಡಿದ ಹಳ್ಳದಲ್ಲಿ ಇಂಥವರು ಬಿದ್ದಾಗ, ಅಯ್ಯೋ ಪಾಪ ಎಂದೆನಿಸುತ್ತಷ್ಟೆ' ಎಂದು ಹೇಳಿದೆ.
ಸಿಟಿ ರವಿ ವಿರುದ್ಧ ಕಾಂಗ್ರೆಸ್ ಟ್ವೀಟ್
'ಬಿಜೆಪಿ ನಾಯಕರು ಹೇಳುವ ಸುಳ್ಳಿಗೆ ಸತ್ಯ ಅನ್ನೋದು ಸೂಸೈಡ್ ಮಾಡಿಕೊಂಡು ಸಮಾಧಿಯಾಗುತ್ತದೆ. ಮಾಂಸ ತಿಂದಿದ್ದು ನಿಜ, ಆದರೆ ದೇವಸ್ಥಾನಕ್ಕೆ ಹೋಗಿಲ್ಲ, ರೊಡಲ್ಲೇ ನಿಂತಿದ್ದೇನೆ ಎನ್ನುವ ಸುಳ್ಳು ಏಕೆ ಸಿಟಿ ರವಿಯವರೇ? ರೋಡಲ್ಲಿ ಘಂಟೆಗಳು ನೇತಾಡುತ್ತಿರುತ್ತವೆಯೇ? ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕುತ್ತಿರುವುದು ಸುಳ್ಳೇ?' ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

'ಸಿಟಿ ರವಿ ಅವರೇ, ದೇವಸ್ಥಾನಕ್ಕೆ ಹೋಗುವ ಮುನ್ನ ತಾವು ತಿಂದ ಮಾಂಸ ಜಟ್ಕಾ ಕಟ್‌ನದ್ದೋ? ಹಲಾಲ್ ಕಟ್‌ನದ್ದೋ? ಮಾಂಸ ತಿಂದು ದೇವಸ್ಥಾನಕ್ಕೆ ಬರಬೇಡ ಎಂದು ಯಾವ ದೇವರೂ ಹೇಳಿಲ್ಲ, ಆದರೆ ಬಿಜೆಪಿಗರು ಹೇಳುತ್ತಿದ್ದರು. ಅದೇ ಬಿಜೆಪಿ ನಾಯಕರ ಬಾಯಿಗೆ ಹೊಲಿಗೆ ಹಾಕಿ ಬಂದ್ ಮಾಡಿದ ಟೈಲರ್ ಯಾರು?' ಎಂದು ಕೇಳಿದೆ.

'ಬಿಜೆಪಿ ಅಂದರೆ ಸಿದ್ದಾಂತವಿಲ್ಲದ ಆತ್ಮವಂಚಕರ ಕೂಟ. ಗೋಮಾತೆ ಎನ್ನುವ ಇದೇ ಬಿಜೆಪಿ ಕೇರಳ, ಗೋವಾ, ಮೇಘಾಲಯದ ಅವರದೇ ಪಕ್ಷದವರ ಗೋಮಾಂಸ ಸೇವನೆ ಬಗ್ಗೆ ಮಾತಿಲ್ಲ. ಮಾಂಸ ತಿಂದು ದೇವಾಲಯಕ್ಕೆ ಹೋಗುವುದು ಅಪರಾಧ ಎನ್ನುವ ಬಿಜೆಪಿ ಸಿಟಿ ಬಗ್ಗೆ ತುಟಿ ಬಿಚ್ಚುವುದಿಲ್ಲ. ಈ ಡಬಲ್ ಸ್ಟ್ಯಾಂಡರ್ಡ್ ಬಿಜೆಪಿಗೆ ಮಾತ್ರ ಸಾಧ್ಯ' ಎಂದು ಕೆಪಿಸಿಸಿ ಹರಿಹಾಯ್ದಿದೆ.












Click it and Unblock the Notifications