ಗೋಸಂಪತ್ತು ಅಭಿವೃದ್ಧಿಗೆ ಕಾಂಗ್ರೆಸ್ ಕೊಡುಗೆ ಏನು?: ಸಚಿವ ಪ್ರಭು ಚವ್ಹಾಣ್ ಪ್ರಶ್ನೆ
ಹೈನುಗಾರಿಕೆಯನ್ನೇ ಅವಲಂಭಿಸಿರುವ ರೈತರಿಗೆ ಬಿಜೆಪಿ ಸರ್ಕಾರವು ಹೈನುಗಾರಿಕೋದ್ಯಮದಲ್ಲಿ ಕ್ರಾಂತಿ ಮಾಡಿದೆ. ಗೋಸಂಪತ್ತು ಅಭಿವೃದ್ಧಿಗೆ ಕಾಂಗ್ರೆಸ್ ಕೊಡುಗೆ ಏನು ಎಂದು ಪಶುಸಂಗೋಪನೆ ಸಚಿವ ಪ್ರಭು ಬಿ.ಚವ್ಹಾಣ್ ಪ್ರಶ್ನಿಸಿದ್ದಾರೆ.
ಬೆಂಗಳೂರು,ಮಾರ್ಚ್ 1: ಹೈನುಗಾರಿಕೆಯನ್ನೇ ಅವಲಂಭಿಸಿರುವ ರೈತರಿಗೆ ಬಿಜೆಪಿ ಸರ್ಕಾರವು ಹೈನುಗಾರಿಕೋದ್ಯಮದಲ್ಲಿ ಕ್ರಾಂತಿ ಮಾಡಿದೆ. ಗೋಸಂಪತ್ತು ಅಭಿವೃದ್ಧಿಗೆ ಕಾಂಗ್ರೆಸ್ ಕೊಡುಗೆ ಏನು ಎಂದು ಪಶುಸಂಗೋಪನೆ ಸಚಿವ ಪ್ರಭು ಬಿ.ಚವ್ಹಾಣ್ ಪ್ರಶ್ನಿಸಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಕಸಾಯಿಖಾನೆಗಳನ್ನು ನಡೆಸಿಕೊಂಡು ಬಂದಿದ್ದೇ ಕಾಂಗ್ರೆಸ್ ಸಾಧನೆ. ಜನ ನಮ್ಮನ್ನು ಮರೆತುಬಿಡುತ್ತಾರೆ ಎಂದು ಗೋಹತ್ಯೆ ನಿಷೇಧ ಕಾಯ್ದೆಯನ್ನು ವಾಪಸ್ ಪಡೆಯುತ್ತೇವೆ ಎಂದು ಕಾಂಗ್ರೆಸ್ ನಾಯಕರು ತಿರುಗಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಜಾನುವಾರುಗಳ ಆರೋಗ್ಯಕ್ಕಾಗಿ ಪಶುಸಂಜೀವಿನಿ ಆ್ಯಂಬುಲೆನ್ಸ್, 100 ಗೋಶಾಲೆಗಳಲ್ಲಿ 25 ಗೋಶಾಲೆಗಳಲ್ಲಿ ಜಾನುವಾರುಗಳ ರಕ್ಷಣೆ, ಪ್ರಾಣಿ ಸಹಾಯವಾಣಿ ಕೇಂದ್ರ, ಪ್ರಾಣಿ ಕಲ್ಯಾಣ ಮಂಡಳಿ ಸ್ಥಾಪನೆ, 400 ಪಶುವೈದ್ಯರು ಮತ್ತು 250 ಪಶು ವೈದ್ಯಕೀಯ ಪರೀಕ್ಷಕರ ನೇಮಕಾತಿ, ಪುಣ್ಯಕೋಟಿ ದತ್ತು ಯೋಜನೆ, ಗೋಮಾತಾ ಸಹಕಾರ ಸಂಘ ಸ್ಥಾಪನೆ, ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ಸ್ಥಾಪನೆಯು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಕಳೆದ ಮೂರು ವರ್ಷಗಳಲ್ಲಿ ಪಶುಸಂಗೋಪನೆ ಇಲಾಖೆಯಲ್ಲಿ ಮಹತ್ತರ ಬದಲಾವಣೆ ತಂದಿದೆ ಎಂದು ಪ್ರಭು ಚವ್ಹಾಣ್ ವಿವರಿಸಿದರು.
ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಗೋಹತ್ಯೆ ನಿಷೇಧ ಕಾಯ್ದೆಯನ್ನು ರದ್ಧುಪಡಿಸುವುದಾಗಿ ಕಾಂಗ್ರೆಸ್ ಹೇಳುತ್ತಿದೆ. ಕಾಂಗ್ರೆಸ್ ಬೇಕೋ ಅಥವಾ ಅಭಿವೃದ್ಧಿ ಮಾಡುವ ಬಿಜೆಪಿ ಸರ್ಕಾರ ಬೇಕೋ ಎನ್ನುವುದನ್ನು ಜನತೆ ನಿರ್ಧಾರ ಮಾಡುತ್ತಾರೆ ಎಂದು ಪ್ರಭು ಚವ್ಹಾಣ್ ಹೇಳಿದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ 47 ಪಶು ವೈದ್ಯಾಧಿಕಾರಿಗಳು, 83 ಪಶು ವೈದ್ಯಕೀಯ ಸಹಾಯಕರ ನೇಮಕಾತಿ, ಪುಣ್ಯಕೋಟಿ ದತ್ತು ಯೋಜನೆಗೆ ಸರ್ಕಾರಿ ನೌಕರರು ಸ್ವ-ಇಚ್ಛೆಯಿಂದ ರೂ.27 ಕೋಟಿ ದೇಣಿಗೆ ನೀಡಿದ್ದಾರೆ. ಹಾವೇರಿಯಲ್ಲಿ ಮೇಗಾ ಡೇರಿ ಸ್ಥಾಪನೆ, ಬಳ್ಳಾರಿಯಲ್ಲಿ ಮೇಗಾ ಡೈರಿ ಸ್ಥಾಪನೆಗೆ ಕ್ರಮ ಸೇರಿದಂತೆ ಹತ್ತು ಹಲವು ಜನಪರ ಯೋಜನೆಗಳ ಅನುಷ್ಠಾನದಿಂದ ಗೋಸಂರಕ್ಷಣೆಯಾಗುತ್ತಿದೆ. ಹೈನುಗಾರಿಕೋದ್ಯಮದಲ್ಲಿ ಕ್ರಾಂತಿಯಾಗುತ್ತಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಇಂತಹ ಒಂದೇ ಒಂದು ಜನಪರ ಮತ್ತು ಗೋವು ಪರ ಯೋಜನೆ ಜಾರಿಗೊಳಿಸಲಿಲ್ಲ ಎಂದು ಪ್ರಭು ಚವ್ಹಾಣ್ ವಾಗ್ಧಾಳಿ ನಡೆಸಿದರು.

ಚರ್ಮಗಂಟು ರೋಗವನ್ನು ಹಗಲು-ಇರುಳಿ ಎನ್ನದೇ ಹತೋಟಿ ತರುವಲ್ಲಿ ನಮ್ಮ ಇಲಾಖಾ ಅಧಿಕಾರಿ ಮತ್ತು ಸಿಬ್ಬಂದಿ ಶ್ರಮಿಸಿದ ಪರಿಣಾಮ, ಇಂದು ಚರ್ಮಗಂಟು ರೋಗ ರಾಜ್ಯದಲ್ಲಿ ನಿರ್ಮೂಲನೆಯಾಗಿದೆ. ರೈತರಿಗೆ ಪರಿಹಾರ ನೀಡಿ ನಿಮ್ಮೊಂದಿಗೆ ನಾವಿದ್ದೇವೆ ಎನ್ನುವ ಆತ್ಮಸ್ಥೈರ್ಯ ತುಂಬಿದ್ದೇವೆ. ಪಶು ಸಂಪತ್ತು ದೇಶದ ಸಂಪತ್ತು ಎನ್ನುವುದನ್ನು ಕಾರ್ಯಗತಗೊಳಿಸುತ್ತಿದ್ದೇವೆ ಎಂದು ಪ್ರಭು ಚವ್ಹಾಣ್ ವಿವರಿಸಿದರು.
ಗೋಶಾಲೆಗಳಲ್ಲಿ ಮೇವು ಕೊರತೆ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದ ಗೋಶಾಲೆಗಳಲ್ಲಿ ಯಾವುದೇ ರೀತಿಯಲ್ಲಿ ಮೇವು ಕೊರತೆಯಾಗಿಲ್ಲ. ಮೇವು ಕೊರತೆಯಾಗದಂತೆ ಕ್ರಮ ವಹಿಸಲಾಗಿದೆ. ಪ್ರತಿ ಗೋಶಾಲೆಯಲ್ಲಿ ಮೇವು ಗೋದಾಮು, ಬೋರ್ ವೆಲ್, ಅಗತ್ಯ ತುರ್ತು ಚಿಕಿತ್ಸಾ ಕೊಠಡಿ, ಮೇವು ಉತ್ಪಾದನೆ, ಪಾಲನೆ, ಪೋಷಣೆ ಮತ್ತು ಆರೈಕೆಗೆ ಕ್ರಮ ವಹಿಸಲಾಗಿದೆ. ಗೋವುಗಳ ಸಂರಕ್ಷಣೆಯೇ ನಮ್ಮ ಸಂಕಲ್ಪ ಎಂದರು.
ಮೇವು ಖರೀದಿಯಲ್ಲಿ ಅವ್ಯವಹಾರವಾಗಿದೆ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ಸರ್ಕಾರಿ ಗೋಶಾಲೆಗಳಲ್ಲಿ ಯಾವುದೇ ರೀತಿಯ ಅವ್ಯವಹಾರವಾಗಿಲ್ಲ. ಬರಗಾಲದ ಗೋಶಾಲೆಗಳ ನಿರ್ವಹಣೆ ಜಿಲ್ಲಾಡಳಿತದ ಜವಾಬ್ದಾರಿಯಾಗಿರುತ್ತದೆ. ಜಿಲ್ಲಾಧಿಕಾರಿಗಳ ಅಡಿಯಲ್ಲಿರುತ್ತದೆ. ಇದಕ್ಕೂ ನಮಗೂ ಸಂಬಂಧವಿಲ್ಲ. ಈ ಬಗ್ಗೆ ಮೇವು ಪೂರೈಕೆದಾರರಿಗೆ ಹಣ ಪಾವತಿ ಮಾಡುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿರುವುದಾಗಿ ಪ್ರಭು ಚವ್ಹಾಣ್ ಸ್ಪಷ್ಟಪಡಿಸಿದರು.












Click it and Unblock the Notifications